Advertisement
ಅದರಲ್ಲೂ ಮಾನಸಿಕ ಸಮಸ್ಯೆಗಳ ವಿಚಾರದಲ್ಲಿ ಅಷ್ಟಾಗಿ ಗಮನಹರಿಸದ ಭಾರತದಲ್ಲಿ ಪರಿಸ್ಥಿತಿ ಉಲ್ಬಣಿಸುತ್ತಿದೆ.
Related Articles
Advertisement
ದುರಂತವೆಂದರೆ, ದೇಶದಲ್ಲಿ ಒಂದು ಚಿಕ್ಕ ಜನ ಸಂಖ್ಯೆಯನ್ನು ಹೊರತುಪಡಿಸಿ ಬಹುತೇಕರು ಮಾನಸಿಕ ಸಮಸ್ಯೆಗಳನ್ನು ಕಡೆಗಣಿಸುವುದೇ ಅಧಿಕ. ಮನೋಚಿಕಿತ್ಸಾ ಕೇಂದ್ರಗಳನ್ನು- ಆಸ್ಪತ್ರೆಗಳನ್ನು ‘ಹುಚ್ಚಾಸ್ಪತ್ರೆ’ ಎಂದೇ ಅಣಕಿಸುವ ಮನಸ್ಥಿತಿ ವ್ಯಾಪಕವಾಗಿ ಇರುವಾಗ, ಮಾನಸಿಕ ಸಮಸ್ಯೆಗಳಿಗೆ ಪರಿಣಾಮಕಾರಿ ಸಮಾಧಾನ ಸಿಗುವುದು ಸಾಧ್ಯವೇ ಎನ್ನುವ ಪ್ರಶ್ನೆ ಎದುರಾಗುತ್ತದೆ. 2018ರಲ್ಲಿ ಪ್ರಕಟವಾದ ಗ್ಲೋಬಲ್ ಬರ್ಡನ್ ಆಫ್ ಡಿಸೀಸಸ್ ಸ್ಟಡೀಸ್ ಎಂಬ ಅಧ್ಯಯನ ವರದಿಯು ಭಾರತದಲ್ಲಿ ಪ್ರತಿ ವರ್ಷ 2.2 ಲಕ್ಷ ಜನ ವಿವಿಧ ಕಾರಣಗಳಿಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎನ್ನುತ್ತದೆ.
ಅದರಲ್ಲೂ, ಹೀಗೆ ಬದುಕನ್ನು ಹಠಾತ್ತನೆ ಕೊನೆಗೊಳಿಸಿಕೊಳ್ಳುವವರಲ್ಲಿ 15-39 ವರ್ಷದವರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶವು, ಭಾರತದಲ್ಲಿ ಪ್ರತಿ ಲಕ್ಷ ಜನರಲ್ಲಿ ಆತ್ಮಹತ್ಯೆ ಪ್ರಮಾಣ 16.5 ಪ್ರತಿಶತವಿದೆ ಎನ್ನುತ್ತದೆ. ಈ ಪ್ರಮಾಣ ಆಗ್ನೇಯ ಏಷ್ಯಾದಲ್ಲೇ ಅತ್ಯಧಿಕವಾದದ್ದು.
ಈ ವರ್ಷವಂತೂ ಜನರಲ್ಲಿ ಅಪಾರ ಪ್ರಮಾಣದ ಮಾನಸಿಕ ಒತಡ ಸೃಷ್ಟಿಯಾಗಿಬಿಟ್ಟಿದೆ. ಮಕ್ಕಳಿಂದ ಹಿಡಿದು ವೃದ್ಧರಾದಿಯಾಗಿ ಬಹುತೇಕರು ಒಂದಲ್ಲ ಒಂದು ಮಾನಸಿಕ ಸಮಸ್ಯೆಯಿಂದ ಬಳಲುವಂತಾಗಿದೆ.
ಆದರೆ, ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದ್ದೇ ಇರುತ್ತದೆ. ಮನಬಿಚ್ಚಿ ಮಾತನಾಡುವ ಮೂಲಕ, ಮನಸ್ಸಿನ ತಳಮಳಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವ ಮೂಲಕ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.
ಮುಖ್ಯವಾಗಿ, ಒಂಟಿತನದ ಭಾವನೆ ಮನುಷ್ಯನನ್ನು ಹೆಚ್ಚು ಹೈರಾಣಾಗಿಸುತ್ತದೆ ಎನ್ನುತ್ತದೆ ಮನಶ್ಯಾಸ್ತ್ರ. ಈ ಕಾರಣಕ್ಕಾಗಿಯೇ, ಈ ಕ್ಲಿಷ್ಟ ಸಮಯದಲ್ಲಿ ನಾವು ಮನೆಯವರ ಹಾಗೂ ಸ್ವತಃ ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಆದ್ಯತೆ ಕೊಡೋಣ. ಮನಸ್ಸು ಖಿನ್ನತೆಯೆಡೆಗೆ ಜಾರುತ್ತಿದೆ ಎಂದೆನಿಸಿದರೆ ತಜ್ಞರ ಸಲಹೆ ಪಡೆಯಲು ಹಿಂಜರಿಯದಿರೋಣ.