ಉಳ್ಳಾಲ: ದೈಹಿಕವಾಗಿ ಆರೋಗ್ಯವಾಗಿದ್ದರೆ ಮಾನಸಿಕ ನೆಮ್ಮದಿಯೂ ಲಭಿಸುತ್ತದೆ. ಪ್ರತೀನಿತ್ಯ ವ್ಯಾಯಾಮಗಳು, ಯೋಗ ಪ್ರಾಣಾಯಾಮ, ದೈಹಿಕ ಚಟುವಟಿಕೆಗಳಿಂದ ಮಾತ್ರ ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಉಳ್ಳಾಲ ತಾಲೂಕು ಘಟಕದ ಕೋಶಾಧಿಕಾರಿ ಚಂದ್ರಹಾಸ ಶೆಟ್ಟಿ ಅಭಿಪ್ರಾಯಪಟ್ಟರು.
ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಮತ್ತು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಪಾವೂರು ಹರೇಕಳ ಇವುಗಳ ಜಂಟಿ ಆಶಯದಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟ “ಕ್ರೀಡಾ ಸಂಭ್ರಮ’ವನ್ನು ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಕಡೆಂಜ ಸೋಮಶೇಖರ್ ಚೌಟ ವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಬಹುಮಾನಗಳನ್ನು ಪಡೆದ ಕ್ರೀಡಾಪಟುಗಳನ್ನು, ರಾಜ್ಯ ಮಟ್ಟದ ರಾಜ್ಯ ಪುರಸ್ಕಾರ ಪ್ರಶಸ್ತಿ ಪಡೆದ ಸ್ಕೌಟ್ಸ್ ಮತ್ತು ಗೈಡ್ಸ್ ಗಳನ್ನು, ಜಿಲ್ಲಾ ಮಟ್ಟದ ಆಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಕ್ರೀಡಾಪಟುಗಳನ್ನು, ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳನ್ನು, ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರನ್ನು, ಜಿಲ್ಲಾ ಮಟ್ಟದ ತೃತೀಯ ಸೋಪಾನ ಪರೀಕ್ಷೆಯಲ್ಲಿ ಪಾಸಾಗಿರುವ ಗೈಡ್ಸ್ ವಿದ್ಯಾರ್ಥಿಗಳನ್ನು, ವಿಶ್ವ ಸಾಂಸ್ಕೃತಿಕ ಜಾಂಬುರಿಯಲ್ಲಿ ಭಾಗವಹಿಸಿದ ಸ್ಕೌಟ್ಸ್ ಗೈಡ್ಸ್ ಗಳನ್ನು ಸಮ್ಮಾನಿಸಲಾಯಿತು.
ಪ್ರೌಢಶಾಲಾ ಮುಖ್ಯ ಶಿಕ್ಷಕಿ ಉಷಾಲತಾ ಸ್ವಾಗತಿಸಿದರು.
ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರಾಧಾಕೃಷ್ಣ ರೈ ವಂದಿಸಿದರು. ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು.