Advertisement

ಒತ್ತಡದ ಬದುಕಿನಿಂದ ಹೆಚ್ಚುತ್ತಿದೆ ಮಾನಸಿಕ ಕಾಯಿಲೆ

10:42 AM Oct 10, 2018 | |

‘ಬದಲಾಗುತ್ತಿರುವ ಜಗತ್ತಿನಲ್ಲಿ ಯುವಜನರು ಮತ್ತು ಮಾನಸಿಕ ಆರೋಗ್ಯ’ ಘೋಷವಾಕ್ಯದಡಿ ಇಂದು ವಿಶ್ವಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತಿದೆ. ಮನೋರೋಗಕ್ಕೆ ಕಾರಣಗಳು ಹಲವಾರಿದ್ದರೂ ನಿರ್ಲಕ್ಷ್ಯ, ಮೂಢನಂಬಿಕೆಯಿಂದಾಗಿಯೇ ಈ ರೋಗ ಉಲ್ಬಣಗೊಳ್ಳುತ್ತಿರುವುದು ಸತ್ಯ. ವಿಶ್ವ ಮಾನಸಿಕ ಆರೋಗ್ಯ ದಿನದ ಈ ಸಂದರ್ಭದಲ್ಲಿ ಮನೋರೋಗದ ಬಗ್ಗೆ ಎಲ್ಲರೂ ಜಾಗೃತರಾಗುವುದು ಬಹುಮುಖ್ಯ. ಒತ್ತಡದ ಬದುಕಿನಲ್ಲಿ ಮಾನಸಿಕ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸೋಣ ಎಂಬ ಆಶಯದೊಂದಿಗೆ ಸುದಿನ ಸಾಂದರ್ಭಿಕ ಲೇಖನ.

Advertisement

ಮಹಾನಗರ: ಎರಡು ವರ್ಷಗಳ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 6,575 ಮಂದಿ ಮನೋರೋಗಕ್ಕಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಪೈಕಿ 4,467 ಮಂದಿ ಅಲ್ಪ ಪ್ರಮಾಣದ ಮಾನಸಿಕ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರೆ, 2,108 ಮಂದಿ ತೀವ್ರ ಮನೋರೋಗದಿಂದ ಬಳಲುತ್ತಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಮಾಹಿತಿ ಪ್ರಕಾರ, ಅಲ್ಪಪ್ರಮಾಣದ ಕಾಯಿಲೆಗೆ ಚಿಕಿತ್ಸೆ ಪಡೆದವರ ಪೈಕಿ ಬಹುತೇಕರು ಒತ್ತಡದಿಂದ ಮಾನಸಿಕ ಕಾಯಿಲೆಗೆ ಒಳಗಾದವರು! ಪ್ರೇಮ ವೈಫಲ್ಯ, ಸಂಬಂಧಗಳಲ್ಲಿ ಬಿರುಕು, ಸಂಶಯ ಮುಂತಾದವುಗಳೂ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತಿವೆ. ಇದರಿಂದ ಖನ್ನತೆ, ಆತ್ಮಹತ್ಯೆ, ಮಾದಕದ್ರವ್ಯ ಸೇವನೆಗೆ ಒಳಗಾಗುತ್ತಿರುವುದು ಹೆಚ್ಚುತ್ತಿದೆ ಎನ್ನುತ್ತಾರೆ ವೈದ್ಯರು.

ಅಲ್ಲದೆ ಆನುವಂಶೀಯತೆ ಮತ್ತುಪರಿಸರ ಸಂಬಂಧಿ ಒತ್ತಡವೂ ಮನೋರೋಗಕ್ಕೆ ಕಾರಣವಾಗಿದೆ. ಆದರೆ ಚಿಕಿತ್ಸೆ ಪಡೆದುಕೊಳ್ಳದೆ, ಮಾನಸಿಕ ರೋಗಗಳಿಂದ ಬಳಲುತ್ತಿರುವವರ ಸಂಖ್ಯೆಯೂ ಹೆಚ್ಚಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಉಳಿದಿರುವ ಮೂಢನಂಬಿಕೆಗಳಿಂದಾಗಿ ಮಾನಸಿಕ ರೋಗಿಗಳ ಸರಿಯಾದ ಸಂಖ್ಯೆ ಸಿಗುತ್ತಿಲ್ಲ ಎನ್ನುತ್ತಾರೆ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಪ್ರಮುಖರು.

5 ತಿಂಗಳಲ್ಲಿ 943 ಮಂದಿಗೆ ತೀವ್ರ ಮನೋರೋಗ
2017 ಎಪ್ರಿಲ್‌ನಿಂದ 2018ರ ಮಾರ್ಚ್‌ ತನಕ ಜಿಲ್ಲೆಯಲ್ಲಿ 3,090 ಮಂದಿ ಅಲ್ಪಪ್ರಮಾಣದ ಮನೋ ರೋಗ ಹಾಗೂ 1,645 ಮಂದಿ ತೀವ್ರ ಮನೋರೋಗದಿಂದ ಬಳಲು ತ್ತಿರುವವರು ಚಿಕಿತ್ಸೆ ಪಡೆದಿದ್ದಾರೆ. 2018ರ ಎಪ್ರಿಲ್‌ನಿಂದ ಆಗಸ್ಟ್‌ ತನಕ 1377 ಮಂದಿ ಅಲ್ಪ ಪ್ರಮಾಣದ ಕಾಯಿಲೆ ಮತ್ತು 943 ಮಂದಿ ತೀವ್ರ ಪ್ರಮಾಣದ ಮನೋರೋಗದಿಂದ ಬಳಲುತ್ತಿರುವವರು ಚಿಕಿತ್ಸಾನಿರತರಾಗಿದ್ದಾರೆ. ಪ್ರಾಥಮಿಕ ಹಂತದಲ್ಲಿಯೇ ಮನೋರೋಗವನ್ನು ಪತ್ತೆಹಚ್ಚಿ ಚಿಕಿತ್ಸೆ ಪಡೆದರೆ ಶೇ. 100ರಷ್ಟು ಗುಣಮುಖರಾಗಲು ಸಾಧ್ಯವಿದೆ. ತೀವ್ರ ಪ್ರಮಾಣದ ರೋಗದಿಂದ ಬಳಲುವವರನ್ನೂ ಮೊದಲಿನಂತಾಗಿಸುವುದು ಸಾಧ್ಯವಾಗಿದ್ದು, ಶೇ. 60ಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಡಾ| ವಿಜಯ್‌ ತಿಳಿಸಿದ್ದಾರೆ.

Advertisement

ಒತ್ತಡದಿಂದ ಮನೋರೋಗ ಹೆಚ್ಚು
ಅಲ್ಪ ಪ್ರಮಾಣದ ಮನೋರೋಗ ಸಮಸ್ಯೆ ಜೀವನದ ಪ್ರತಿಸ್ತರದಲ್ಲಿ ಪ್ರತಿಯೊಬ್ಬರನ್ನೂ ಬಾಧಿಸುತ್ತದೆ. ಮುಖ್ಯವಾಗಿ ಅತಿಯಾದ ಸಿಟ್ಟು, ಒತ್ತಡ, ತಲೆಬಿಸಿ, ಕೀಳರಿಮೆ, ಒಂದೇ ಕೆಲಸವನ್ನು ಪದೇಪದೆ ಮಾಡುವುದು ಮುಂತಾದವು ಇದರ ಲಕ್ಷಣಗಳು. ಕಾಡುವ ಒಬ್ಬಂಟಿತನ, ಅತಿಯಾದ ಕೆಲಸ, ಪ್ರೇಮ ವೈಫಲ್ಯ, ಮನೆಯವರ ಪ್ರೀತಿ ಸಿಗದಿರುವುದು, ಪ್ರೀತಿಪಾತ್ರರ ಮರಣ, ಉದ್ಯಮದಲ್ಲಿ ವಿಫಲವಾಗುವುದು ಮುಂತಾದವು ಅಲ್ಪಪ್ರಮಾಣದ ಮನೋರೋಗಕ್ಕೆ ಕಾರಣವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೆಲಸದೊತ್ತಡದಿಂದ ಮನೋರೋಗಕ್ಕೊಳಗಾಗುವವರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿರುವುದು ಆತಂಕಕಾರಿ ಎನ್ನುತ್ತಾರೆ ಇಲಾಖೆ ಪ್ರಮುಖರು. ಈ ಸಮಸ್ಯೆಯಿಂದ ಬಳಲುತ್ತಿರುವವರನ್ನು ಆಪ್ತ ಸಮಾಲೋಚನೆಯಿಂದ ಗುಣಪಡಿಸುವುದು ಸಾಧ್ಯವಿದೆ.

ಕೆಲವೊಂದು ದುರಂತಗಳು ಪದೇ ಪದೇ ನಡೆದಾಗ ಮತ್ತು ಅದರಿಂದ ಹೊರ ಬರಲು ಸಾಧ್ಯವಾಗದೇ ಇದ್ದಾಗ ಅಂತಹವರು ತೀವ್ರ ಮನೋರೋಗಿಗಳಾಗಿ ಬದಲಾಗುತ್ತಾರೆ. ಇಂತಹ ವರು ಆತ್ಮಹತ್ಯೆಯಂತಹ ಭಯಾನಕ ಘಟ್ಟಕ್ಕೂ ತಲುಪಿಬಿಡುತ್ತಾರೆ. ಏಕಾಗ್ರತೆ ಕಳೆದುಕೊಂಡು ಒಟ್ಟಾರೆಯಾಗಿ ವರ್ತನೆ ಇವೇ ಮುಂತಾದ ಚಟುವಟಿಕೆಗಳನ್ನು ತೋರ್ಪಡಿಸುತ್ತಾರೆ. 

3,945 ಮಂದಿಗೆ ಮೂರ್ಛೆರೋಗ
ಮಾನಸಿಕ ಆರೋಗ್ಯ ಹದಗೆಡುವುದರಲ್ಲಿ ಮೂರ್ಛೆರೋಗವೂ ಒಂದಾಗಿದೆ. 2017ರ ಎಪ್ರಿಲ್‌ನಿಂದ ಈ ವರ್ಷದ ಮಾರ್ಚ್‌ ತನಕ 2,449 ಮಂದಿಗೆ ಹಾಗೂ 2018ರ ಎಪ್ರಿಲ್‌ನಿಂದ ಆಗಸ್ಟ್‌ವರೆಗೆ 1,496 ಮಂದಿಗೆ ಮೂರ್ಛರೋಗದಂತಹ ಕಾಯಿಲೆಗಳು ಕಂಡು ಬಂದಿವೆ. ತಲೆಯೊಳಗಡೆ ಲವಣಾಂಶ ಏರುಪೇರು, ತಲೆಗೆ ಉಂಟಾಗುವ ಗಾಯಗಳು, ರಕ್ತದೊತ್ತಡದಲ್ಲಿನ ಏರುಪೇರು, ಆನುವಂಶಿಕ ಫಿಟ್ಸ್‌ ಕಾಯಿಲೆಯಿಂದ ಬಳಲುವವರು ಮುಂತಾದವರು ಇದರಲ್ಲಿ ಸೇರಿದ್ದಾರೆ.

ಗುಣಪಡಿಸುವ ರೋಗ
ಒತ್ತಡದಿಂದಾಗಿ ಮನೋರೋಗಕ್ಕೊಳಗಾಗುವವರು ಹೆಚ್ಚುತ್ತಿದ್ದಾರೆ. ಜತೆಗೆ ಆನುವಂಶೀಯತೆ, ಪರಿಸರ ಸಂಬಂಧಿ ಒತ್ತಡವೂ ಕಾರಣವಾಗುತ್ತಿದೆ. ಮಾನಸಿಕ ರೋಗವು ಗುಣಪಡಿಸಲಾಗದಂಥದ್ದಲ್ಲ. ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪಡೆದರೆ ವ್ಯಕ್ತಿ ಮತ್ತೆ ಮೊದಲಿನಂತಾಗುವುದು ಸಾಧ್ಯವಿದೆ.
– ಡಾ| ರತ್ನಾಕರ್‌, 
ಜಿಲ್ಲಾ ಮಾನಸಿಕ ಆರೋಗ್ಯ
ಕಾರ್ಯಕ್ರಮಾಧಿಕಾರಿ

‡ ಧನ್ಯಾ ಬಾಳೆಕಜೆ 

Advertisement

Udayavani is now on Telegram. Click here to join our channel and stay updated with the latest news.

Next