Advertisement

“ಎಲ್ಲರಿಗೂ ಮಾನಸಿಕ ಆರೋಗ್ಯ’

01:06 PM Nov 01, 2020 | Suhan S |

ನಮ್ಮ ದೇಶದಲ್ಲಿ ಸರಿಸುಮಾರು 19.73 ಲಕ್ಷ ಜನರು ಮಾನಸಿಕ ಆರೋಗ್ಯದ ಸಮಸ್ಯೆಯನ್ನು ಹೊಂದಿರುತ್ತಾರೆ. 2017ರ ಒಂದು ವರದಿಯ ಪ್ರಕಾರ. ನಮ್ಮ ದೇಶದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಶೇ.3.3 ಜನರು ಖನ್ನತೆಯಿಂದ, ಶೇ.3.3 ಜನರು ಆತಂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗೆಯೇ ಶೇ.0.3 ಜನರು ತೀವ್ರ ತರನಾದ ಮಾನಸಿಕ ತೊಂದರೆಯಾದ ಚಿತ್ತ ವೈಕಲ್ಯ (ಸ್ಕಿಜೋಫ್ರೆàನಿಯಾ) ಸಮಸ್ಯೆಯನ್ನು ಹೊಂದಿರುತ್ತಾರೆ.

Advertisement

ಇಲ್ಲಿ ಒಂದು ವಿಷಯವನ್ನು ಗಮನಿಸಬೇಕೆಂದರೆ, ಒಂದು ವೇಳೆ ನಮಗೆ ಕೈ ಕಾಲಿಗೆ ಏಟಾದರೆ ಅಥವಾ ಜ್ವರ ಬಂದರೆ ನಾವು ತತ್‌ಕ್ಷಣ ನಮ್ಮ ಹತ್ತಿರದ ವೈದ್ಯರನ್ನು ಭೇಟಿಯಾಗಿ ನಮ್ಮ ನೋವಿಗೆ ಸರಿಯಾದ ಚಿಕಿತ್ಸೆಯನ್ನು ಪಡೆದು ಆ ಸಮಸ್ಯೆಯಿಂದ ಹೊರಬರಲು ನೋಡುತ್ತೇವೆ. ಆದರೆ ಒಂದು ವೇಳೆ ನಮಗೆ ಮಾನಸಿಕ ಆರೋಗ್ಯದ ಸಮಸ್ಯೆ ಬಂದರೆ ನಾವು ಅದಕ್ಕೆ ಸರಿಯಾದ ಚಿಕಿತ್ಸೆಯನ್ನು ಪಡೆಯುವಲ್ಲಿ ಅಥವಾ ನಮ್ಮವರಿಗೆ ಚಿಕಿತ್ಸೆಯನ್ನು ಕೊಡಿಸುವಲ್ಲಿ ತೀರಾ ವಿಳಂಬವನ್ನು ಮಾಡುತ್ತೇವೆ.

ಹಾಗಾದರೆ, ಈ ಎರಡು ಭಿನ್ನವಾದ ನಿಲುವುಗಳು ಯಾಕೆ ನಮ್ಮಲ್ಲಿ ಇವೆ? ದೈಹಿಕ ಆರೋಗ್ಯಕ್ಕೆ ಸಿಗುವ ಪ್ರಾಶಸ್ತ್ಯ ನಮ್ಮ ಮನಸ್ಸಿನ ಆರೋಗ್ಯಕ್ಕೆ ಯಾಕೆ ಸಿಗುತ್ತಿಲ್ಲ? ಅಥವಾ ಯಾಕೆ ನಮ್ಮ ಜನರು ಮಾನಸಿಕ ಸಮಸ್ಯೆಗೆ ಒಳಗಾದಾಗ ಅದಕ್ಕೆ ಸರಿಯಾದ ಚಿಕಿತ್ಸೆಯನ್ನು ಪಡೆಯುವಲ್ಲಿ ಹಿಂದೇಟು ಹಾಕುತ್ತಾರೆ ಎಂದು ಪ್ರಶ್ನಿಸಿಕೊಂಡರೆ ನಮ್ಮ ಗಮನಕ್ಕೆ ಈ ಕೆಳಗಿನ ಕೆಲವು ಕಾರಣಗಳು ಮುಖ್ಯವಾಗಿ ಕಾಣಿಸಿಕೊಳ್ಳುತ್ತವೆ.

  • ಮಾನಸಿಕ ಆರೋಗ್ಯ ಅಥವಾ ಸಮಸ್ಯೆಯ ಬಗ್ಗೆ ಸಾಕಷ್ಟು ಮಾಹಿತಿ ಜನರಲ್ಲಿ ಇಲ್ಲದೆ ಇರುವುದು.
  • ಮಾನಸಿಕ ಸಮಸ್ಯೆಯನ್ನು ಹೊಂದಿರುವವರ ಬಗ್ಗೆ ನಮ್ಮ ಜನರಲ್ಲಿ ಇರುವ ಸಾಮಾಜಿಕ ಕಳಂಕದ ಭಾವನೆ ಮತ್ತು ಸಾಮಾಜಿಕ ಅಪನಂಬಿಕೆ.
  • ಮಾನಸಿಕ ಸಮಸ್ಯೆಗೆ ಸರಿಯಾದ ಚಿಕಿತ್ಸೆ ಸರಿಯಾಗಿ ದೊರೆಯದೇ ಇರುವುದು.
  • ಹಣಕಾಸಿನ ಸಮಸ್ಯೆ.
  • ಸಾಮಾಜಿಕ ನಂಬಿಕೆಗಳು (ಯಾರೋ ಮಾಟ ಮಂತ್ರ ಮಾಡಿಸಿರಬೇಕು, ಹೊಟ್ಟೆಗೆ ಮದ್ದು ಹಾಕಿರಬೇಕು ಅಥವಾ ಯಾವುದಾದರೂ ದೆವ್ವ -ಪಿಶಾಚಿಯ ತೊಂದರೆ ಇರಬೇಕೆಂಬ ನಂಬಿಕೆ).

ಈ ಮೇಲೆ ಹೇಳಿರುವಂತೆ ಮಾನಸಿಕ ಆರೋಗ್ಯ ಅಥವಾ ಸಮಸ್ಯೆಯ ಬಗ್ಗೆ ಸಾಕಷ್ಟು ಮಾಹಿತಿ ಜನರಲ್ಲಿ ಇಲ್ಲದೆ ಇರುವುದಕ್ಕೆ ಕಾರಣಗಳು ಹಲವು: ಉದಾಹರಣೆಗೆ, ಒಬ್ಬ ವ್ಯಕ್ತಿ ಎರಡು ವಾರಗಳಿಗಿಂತಲೂ ಹೆಚ್ಚು ದಿನಗಳಿಂದ ದುಃಖದ ಭಾವನೆಯನ್ನು ಹೊಂದಿರುತ್ತಾನೆ ಎಂದುಕೊಳ್ಳಿ. ಆತನಿಗೆ ಯಾವುದೇ ಕೆಲಸದಲ್ಲಿಯೂ ತೊಡಗಿಸಿಕೊಂಡರೂ ಖುಷಿ ದೊರೆಯದೆ ಇರುವುದು, ನಿಶ್ಶಕ್ತಿಯೆನಿಸುವುದು, ಮನಸಿನ ಏಕಾಗ್ರತೆಯಿಂದ ಕೆಲಸ ಮಾಡಲಾಗದೆ, ಕಡಿಮೆ ಆತ್ಮವಿಶ್ವಾಸ ಮತ್ತು  ಕ್ಷೀಣಿಸಿದ ಆತ್ಮ ಗೌರವ, ತಾನೇನೋ ತಪ್ಪು ಮಾಡಿದ್ದೇನೆ, ನನಗೆ ಯಾವುದೇ ಬೆಲೆಯಿಲ್ಲ, ನನ್ನಿಂದ ಯಾವ ಕೆಲಸವನ್ನು ಮಾಡಲಾಗುವುದಿಲ್ಲ, ನಿರಾಶೆಯ ಭಾವನೆ, ಸಾಯುವ ವಿಚಾರಗಳನ್ನು ಯೋಚನೆ ಮಾಡುವುದು, ನಿದ್ರೆ ಬರದೇ, ಸರಿಯಾಗಿ ಹಸಿವೆಯಾಗದೆ ಇರುವುದು ಇತ್ಯಾದಿ ಸಮಸ್ಯೆಗಳಿರುತ್ತವೆ. ಆದರೆ ಆತ ಮತ್ತು ಆತನ ಮನೆಯವರು ಈ ಮೇಲೆ ಹೇಳಿದ ಖನ್ನತೆಯ ರೋಗದ ಲಕ್ಷಣಗಳನ್ನು ಗುರುತಿಸುವುದಿಲ್ಲ. “ಓ ಅದಾ, ಅದೇನೂ ದೊಡ್ಡ ಸಮಸ್ಯೆ ಅಲ್ಲ, ಆತನಿಗೆ ಸ್ವಲ್ಪ ಚಿಂತೆ ಇರಬೇಕು ಅಷ್ಟೇ ಬೇರೇನೂ ಇಲ್ಲ’ ಅನ್ನುತ್ತಾರೆ. ಇನ್ನೊಂದು ಉದಾಹರಣೆ ತೆಗೆದುಕೊಳ್ಳುವುದಾದರೆ, ಒಬ್ಬ ವ್ಯಕ್ತಿ ಇತ್ತೀಚೆಗೆ ಒಂದು ವಾರದಿಂದ ಅಥವಾ ತಿಂಗಳಿನಿಂದ ಬಹಳಷ್ಟು ಸಂಶಯಗಳನ್ನು ವ್ಯಕ್ತಪಡಿಸುತ್ತಿದ್ದರು. ಆತ ಇನ್ನೊಬ್ಬರನ್ನು ನೋಡಿ ಅವರು ತನ್ನ ಬಗ್ಗೆ ಮಾತನಾಡುತ್ತಿದ್ದಾರೆ ಅಥವಾ ತೊಂದರೆ ಕೊಡುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ ಅಂದುಕೊಳ್ಳುತ್ತಿದ್ದರು.  ಅಥವಾ ತನ್ನ ಮನೆಯವರೇ ತನಗೆ ಊಟದಲ್ಲಿ  ವಿಷ ಹಾಕುತ್ತಿದ್ದಾರೆ ಎಂದು ಯಾವುದೇ ಕಾರಣವಿಲ್ಲದೆ ಹೇಳತೊಡಗಿದರು. ಅದನ್ನು ನಿರ್ಲಕ್ಷಿಸಿ ಇದು ಕೇವಲ ಆತನ ಸಂಶಯವಿರಬೇಕು ಬೇರೇನೂ ಅಲ್ಲ ಎನ್ನುವುದು ಅಥವಾ ಒಬ್ಬ ವ್ಯಕ್ತಿ ಸಾಮಾಜಿಕ ಒಡನಾಟದಲ್ಲಿ ಇನ್ನೊಬ್ಬರ ಜತೆ ಮಾತನಾಡುವಾಗ ತುಂಬಾ ಸಂಕೋಚ ಪಡುವುದು. ಈ ಸಮಸ್ಯೆಯನ್ನು ಆತಂಕದ ಸಮಸ್ಯೆಯೆಂದು ಗುರುತಿಸುವಲ್ಲಿ ವಿಫಲರಾಗಿ ಇದನ್ನು ಕೇವಲ ಆ ವ್ಯಕ್ತಿಯ ನಾಚಿಕೆಯ ಸ್ವಭಾವವೆಂದು ಆತನ ನಿಜ ಸಮಸ್ಯೆಯನ್ನು ಅಲ್ಲಗಳೆಯುವುದು ಸರ್ವೇಸಾಮಾನ್ಯವಾಗಿ ನಮ್ಮ ಸುತ್ತಮುತ್ತ ಕಂಡು ಬರುತ್ತದೆ.

ಮಾನಸಿಕ ರೋಗಿಗಳ ಬಗ್ಗೆ ನಮ್ಮ ಜನರಲ್ಲಿರುವ ಅನಗತ್ಯ ಭಯ :

Advertisement

ಈ ಮೇಲೆ ವಿವರಿಸಿರುವಂತೆ ಸಾಮಾಜಿಕ ಕಳಂಕದ ಒಳಾರ್ಥವನ್ನು ಗಮನಿಸಿದರೆ, ಮಾನಸಿಕ ರೋಗಿಗಳ ಬಗ್ಗೆ ನಮ್ಮ ಜನರಲ್ಲಿರುವ ಅನಗತ್ಯ ಭಯವೇ ಮುಖ್ಯ ಕಾರಣವಾಗಿರುತ್ತದೆ. ಮಾನಸಿಕ ಸಮಸ್ಯೆ ಇರುವ ಪ್ರತಿಯೊಬ್ಬ ವ್ಯಕ್ತಿಯು ಕ್ರೂರನಾಗಿರುತ್ತಾನೆ, ಸುಮ್ಮನೆ ಬಂದು ಜನರ ಮೇಲೆ ದಾಳಿ ಮಾಡುತ್ತಾನೆ ಎನ್ನುವ ಭಾವನೆ ಜನರಲ್ಲಿ ಇರುತ್ತದೆ. ನಿಜವೇನೆಂದರೆ, ಬಹಳಷ್ಟು ಮಾನಸಿಕ ಸಮಸ್ಯೆಗಳಿಗೆ ಒಳಗಾದ ವ್ಯಕ್ತಿಗಳು ತಮ್ಮಷ್ಟಕ್ಕೆ ತಾವಿದ್ದು, ಜನರ ಸಂಪರ್ಕದಿಂದ ದೂರ ಉಳಿಯುತ್ತಾರೆ. ಆದರೂ ಜನರು ಅವರ ಬಗ್ಗೆ ಇಲ್ಲ ಸಲ್ಲದ ಭಯವನ್ನು ಹೊಂದಿರುತ್ತಾರೆ. ಅದು ಸಾಲದೆಂಬಂತೆ, ಮಾನಸಿಕ ರೋಗಿಗಳಿಂದ ಯಾವುದೇ ಕೆಲಸ ಕಾರ್ಯಗಳನ್ನು ಮಾಡಲಾಗುವುದಿಲ್ಲ, ಅವರ ಸಮಸ್ಯೆ ಶಾಶ್ವತವಾಗಿ ಉಳಿದು ಬಿಡುತ್ತದೆ ಎನ್ನುವ ಭಾವನೆ ನಮ್ಮ ಜನರಲ್ಲಿ  ಇರುತ್ತದೆ. ಇದು ಅವರನ್ನು ಮಾನಸಿಕ ರೋಗಿಗಳಿಂದ ದೂರ ಸರಿಯಲು ಕಾರಣವಾಗುತ್ತದೆ.

ಮಾನಸಿಕ ಸಮಸ್ಯೆಗೆ ಸರಿಯಾದ  ಚಿಕಿತ್ಸೆ  ಸರಿಯಾದ ಸಮಯದಲ್ಲಿ ದೊರೆಯದೇ ಇರುವುದು :

ಮಾನಸಿಕ ಆರೋಗ್ಯದ ಆರೈಕೆಯನ್ನು ಪಡೆಯಲು ಅಡೆತಡೆಯಾಗಿರುವ ಇನ್ನೊಂದು ಕಾರಣ ಎಂದರೆ, ಮಾನಸಿಕ ಸಮಸ್ಯೆಗೆ ಸರಿಯಾದ ಚಿಕಿತ್ಸೆ ಸರಿಯಾದ ಸಮಯದಲ್ಲಿ ದೊರೆಯದೇ ಇರುವುದು.

ಒಂದು ಸಮೀಕ್ಷೆಯ ಪ್ರಕಾರ ಜಗತ್ತಿನ ಶೇ.30 ಜನರು ಒಂದಿಲ್ಲವೊಂದು ಮಾನಸಿಕ ಮತ್ತು ನಡವಳಿಕೆ ಸಮಸ್ಯೆಯನ್ನು ಹೊಂದಿರುತ್ತಾರೆ. ಆದರೆ ಇವರಲ್ಲಿ ಸರಿಸುಮಾರು ಶೇ.70ರಷ್ಟು ಜನರು ಸರಿಯಾದ ಚಿಕಿತ್ಸೆಯನ್ನು ಪಡೆಯುವುದಿಲ್ಲ. ಬಹುಶಃ ಇದಕ್ಕೆ ನಮ್ಮ ದೇಶದಲ್ಲಿ ಮನಸ್ಸಿನ ಆರೋಗ್ಯ ತಜ್ಞರ ಸಂಖ್ಯೆ ಆವಶ್ಯಕತೆಗಿಂತ ಕಡಿಮೆ ಇರುವುದು ಒಂದು ಕಾರಣವಾಗಿರಬಹುದೇನೋ. ನಮ್ಮಲ್ಲಿ ಸುಮಾರು ಒಂದು ಲಕ್ಷ ಜನರಿಗೆ ಕೇವಲ 0.75ರಷ್ಟು ಮನೋವೈದ್ಯರು ಲಭ್ಯವಿದ್ದರೆ, ಕೇವಲ 1,080ರಷ್ಟು ಮನೋ ಸಾಮಾಜಿಕ ತಜ್ಞರು, 1,267ರಷ್ಟು ಮನಃಶಾಸ್ತ್ರಜ್ಞರು ಇರುತ್ತಾರೆ. ಇದು ನಮ್ಮ ದೇಶದ ಜನಸಂಖ್ಯೆಗೆ ಹೋಲಿಸಿದರೆ ಬಹಳ  ಕಡಿಮೆ. ಅದೇ ರೀತಿ ಬಹಳಷ್ಟು ಮನೋವೈದ್ಯಕೀಯ ಆಸ್ಪತ್ರೆಗಳು ಪಟ್ಟಣ ಪ್ರದೇಶದಲ್ಲಿ ಇರುತ್ತವೆ. ಹಾಗಾಗಿ ಗ್ರಾಮೀಣ ಭಾಗದ ಜನರು ಬಹಳಷ್ಟು ದೂರದಲ್ಲಿರುವ ಪಟ್ಟಣ ಪ್ರದೇಶಗಳಿಗೆ ಪ್ರಯಾಣಿಸಬೇಕಿರುವುದು ಮತ್ತು ಸಾಕಷ್ಟು ಪ್ರಯಾಣ ವೆಚ್ಚವನ್ನು ವಿನಿಯೋಗಿಸಬೇಕಾಗಿರುವುದು ಕೂಡ ಮಾನಸಿಕ ಆರೋಗ್ಯ ಆರೈಕೆಯನ್ನು ಪಡೆಯುವಲ್ಲಿ ಒಂದು ಪ್ರಮುಖ ಅಡೆತಡೆಯಾಗಿರುತ್ತದೆ.

ಆದರೆ ಪ್ರಸ್ತುತ ನಮ್ಮ ದೇಶದಲ್ಲಿ ಪ್ರಾಥಮಿಕ ಹಂತದ ಮಾನಸಿಕ ಆರೋಗ್ಯದ ಚಿಕಿತ್ಸೆಯ ಸೇವೆಯನ್ನು ಒದಗಿಸುವ ಸಲುವಾಗಿ ಸರಿಸುಮಾರಾಗಿ 241 ಜಿಲ್ಲೆಗಳಲ್ಲಿ ಜಿಲ್ಲಾ ಮಾನಸಿಕ ಆರೋಗ್ಯದ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ. ಹಾಗೆಯೇ ರಾಜ್ಯ ಬಸ್ಸು ಸಾರಿಗೆ ವ್ಯವಸ್ಥೆಗಳಲ್ಲಿ, ರೈಲ್ವೇ ಸಾರಿಗೆಯಲ್ಲಿ ಪ್ರಯಾಣ ವೆಚ್ಚವನ್ನು ಕಡಿತ ಮಾಡಲಾಗಿದೆ.

ಆದರೂ ಜನರು ಮಾನಸಿಕ ಸಮಸ್ಯೆಗಳಿಗೆ ಸರಿಯಾದ ಚಿಕಿತ್ಸೆಯನ್ನು ಪಡೆಯುವುದಕ್ಕೆ ಹಿಂದೇಟು ಹಾಕುತ್ತಾರೆ. ಅದಕ್ಕೆ ಕಾರಣವಿಷ್ಟೆ, ನನ್ನ ಸಮಸ್ಯೆ ಬೇರೆ ಯಾರಿಗೂ ಗೊತ್ತಾಗಬಾರದು, ನನ್ನ ಸಮಸ್ಯೆಯನ್ನು ನಾನೇ ನಿಭಾಯಿಸುತ್ತೇನೆ, ನನಗೆ ಬಂದಿರುವ ಸಮಸ್ಯೆಗೆ ಮಾತ್ರೆಗಳ ಆವಶ್ಯಕತೆ ಇಲ್ಲ ಅಥವಾ ನನ್ನ ಸಮಸ್ಯೆಯನ್ನು ನನ್ನ ಸ್ನೇಹಿತರೊಂದಿಗೆ ಹಂಚಿಕೊಂಡರೆ ಸರಿಯಾಗುತ್ತದೆ ಎನ್ನುವ ಭಾವನೆ.

ಕೆಲವೊಮ್ಮೆ ತನ್ನ ಸಮಸ್ಯೆಯ ಬಗ್ಗೆ ಅರಿವು ಇದ್ದರೂ ಯಾವ ವೈದ್ಯರನ್ನು ಭೇಟಿಯಾಗಬೇಕು, ಎಲ್ಲಿ ಯಾವ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ  ದೊರೆಯುತ್ತದೆ ಎಂಬ ಮಾಹಿತಿ ಇಲ್ಲದೆ ಇರುವುದು ಇನ್ನೊಂದು ಅಡಚಣೆಯಾಗಿರುತ್ತದೆ.  ಸಾಮಾನ್ಯವಾಗಿ ಕಾಲೇಜು ವಿದ್ಯಾರ್ಥಿ ಗಳಲ್ಲಿ ಮಾನಸಿಕ ಸಮಸ್ಯೆಯ ಬಗ್ಗೆ ಅರಿವು, ಯಾವ ಮಾನಸಿಕ ಆಸ್ಪತ್ರೆಗೆ  ಹೋಗಬೇಕೆಂಬ ಅರಿವು ಇದ್ದರೂ ಅವರು ಸಲಹೆ ಅಥವಾ ಚಿಕಿತ್ಸೆಗೆ ಹೋಗುವುದಿಲ್ಲ. ಅವರ ಬಹು ಮುಖ್ಯವಾದ ಅಡಚಣೆಯೆಂದರೆ, ಸ್ನೇಹಿತರು ಅಪಹಾಸ್ಯ ಮಾಡಬಹುದು ಅಥವಾ ತಲೆ ಸರಿಯಿಲ್ಲದವನು, ಹುಚ್ಚನೆಂದು ಕರೆಯಬಹುದೆಂಬ ಭಯ.

ಸಾಮಾಜಿಕ ಕಳಂಕದ ಭಾವನೆ  ಮತ್ತು ಸಾಮಾಜಿಕ ಅಪನಂಬಿಕೆ :  ಮಾನಸಿಕ ಅನಾರೋಗ್ಯಕ್ಕೆ ಆರೈಕೆಯನ್ನು ಪಡೆಯುವಲ್ಲಿ ಅಡೆತಡೆಗಳಲ್ಲಿ ಇನ್ನೊಂದು ಕಾರಣವೆಂದರೆ, ಮಾನಸಿಕ ಸಮಸ್ಯೆಯನ್ನು ಹೊಂದಿರುವವರ ಬಗ್ಗೆ ನಮ್ಮ ಜನರಲ್ಲಿ ಇರುವ ಸಾಮಾಜಿಕ ಕಳಂಕದ ಭಾವನೆ. ಈ ಸಾಮಾಜಿಕ ಕಳಂಕದ ಭಾವನೆಗೆ ಜನರಲ್ಲಿ ಇರುವ ತಪ್ಪು ಕಲ್ಪನೆಗಳು ಕೂಡ ಕಾರಣವಾಗಿರುತ್ತವೆ. ನೀವು ಯಾರಾದರೂ ಜನಸಾಮಾನ್ಯರನ್ನು ಮಾನಸಿಕ ಸಮಸ್ಯೆಗೆ ಕಾರಣವೇನು ಎಂದು ಕೇಳಿದರೆ, ಸಾಮಾನ್ಯವಾಗಿ ಸಿಗುವ ಉತ್ತರವೇನೆಂದರೆ, ಯಾರೋ ಮಾಟ ಮಂತ್ರ ಮಾಡಿಸಿರಬೇಕು, ಹೊಟ್ಟೆಗೆ ಮದ್ದು ಹಾಕಿರಬೇಕು ಅಥವಾ ಯಾವುದಾದರೂ ದೆವ್ವ -ಪಿಶಾಚಿಯ ತೊಂದರೆ ಇರಬೇಕು ಎನ್ನುವುದು. ಪ್ರೀತಿ ಪ್ರೇಮದ ವೈಫಲ್ಯವು ಮಾನಸಿಕ ರೋಗಕ್ಕೆ ಕಾರಣವೆಂದು ಹೇಳುತ್ತಾರೆ. ಆದರೆ ಇದೆಲ್ಲವೂ ಸರಿಯಾದ ಕಾರಣಗಳಲ್ಲ ಎಂದು ತಿಳಿಹೇಳಿದರೂ ಜನರು ಅದನ್ನು ನಂಬುವುದಿಲ್ಲ.

ಎಷ್ಟೋ ಬಾರಿ, ನೀವು ಮಾನಸಿಕ ಕಾಯಿಲೆಗಳಿಗೆ ವಂಶಪಾರಂಪರ್ಯ ಅಥವಾ ನಮ್ಮ ಮೆದುಳಿನಲ್ಲಿರುವ ರಾಸಾಯನಿಕ ಅಂಶಗಳ ಏರುಪೇರು ಕಾರಣ ಎಂದು ವಿವರಿಸಿದರೂ ಅದನ್ನು ಒಪ್ಪಿಕೊಳ್ಳಲು ಜನಸಾಮಾನ್ಯರಿಗೆ ಕಷ್ಟವಾಗಬಹುದು.

ಒಂದು ವೇಳೆ ವಿದ್ಯಾರ್ಥಿಯು ಮನೆಯವರಲ್ಲಿ ತನ್ನ ಸಮಸ್ಯೆ ಹೇಳಿಕೊಂಡರೂ ಹೆತ್ತವರು ಮಗ ಅಥವಾ ಮಗಳನ್ನು ಚಿಕಿತ್ಸೆಗೆ ಕಳುಹಿಸುವುದಿಲ್ಲ. ಬದಲಾಗಿ, “ನಿನಗೆ ಯಾವ ಸಮಸ್ಯೆಯೂ ಇಲ್ಲ, ಸ್ವಲ್ಪ ಚಿಂತೆ ಆಗಿರಬಹುದು ಅಷ್ಟೇ’ ಎಂದು ತಡೆಹಿಡಿಯುತ್ತಾರೆ. ಒಂದು ವೇಳೆ ನೆರೆಮನೆ ಯವರಿಗೆ, ಸಂಬಂಧಿಗಳಿಗೆ ತಿಳಿದರೆ ಮುಂದೆ ಮಗಳಿಗೆ/ಮಗನಿಗೆ ಮದುವೆ ಸಂಬಂಧ ಬರದೇ ಹೋದೀತು ಅಥವಾ ಸಮಾಜ ಅವರನ್ನು ಕೀಳಾಗಿ ನೋಡುಬಹುದೆಂಬ ಭಯ ಇದಕ್ಕೆ ಕಾರಣ.

ಚಿಕಿತ್ಸೆ ಪಡೆಯದ ಮದ್ಯಪಾನಿಗಳು  :  ಮದ್ಯಪಾನಿಗಳು ಅಥವಾ ಮನೆಯವರ ಭಯವೇನೆಂದರೆ, ಒಂದು ವೇಳೆ ಮದ್ಯಪಾನ ವನ್ನು ಒಮ್ಮೆಗೇ ತ್ಯಜಿಸಿದರೆ ವ್ಯಕ್ತಿ ಮಂಕು ಬಡಿದ ವರಂತೆ ಇರಬಹುದು ಅಥವಾ ಸಾಯಬಹುದು ಅಥವಾ ಕುಡಿತ ನಿಲ್ಲಿಸುವ ಮಾತ್ರೆ ಕೊಟ್ಟರೆ ಪ್ರಾಣಕ್ಕೆ ಅಪಾಯ ಆಗಬಹುದೆಂಬ ಭಯ.

ಹಲವು ಬಾರಿ ಮದ್ಯಪಾನಿಯೇ ತನ್ನ ಸಮಸ್ಯೆಗೆ  ಚಿಕಿತ್ಸೆ ಇಲ್ಲ ಅಥವಾ ತನ್ನ ಮನೆಯವರು/ ಮಿತ್ರರು ನನ್ನನ್ನು ಸೋತು ಹೋದ ವ್ಯಕ್ತಿಯೆಂದು ನೋಡಬಹುದೆಂದು ಭಾವಿಸಿ ಮದ್ಯಪಾನ ವಿಮುಕ್ತಿಗಾಗಿ ಆಸ್ಪತ್ರೆಗೆ ಬರದೇ ಇರುತ್ತಾನೆ. ಇನ್ನು ಕೆಲವು ಬಾರಿ, ಕುಡಿತ ನಿಲ್ಲಿಸಿದಾಗ ಉಂಟಾಗುವ ಕೈ ನಡುಕ, ನಿದ್ರೆ ಬರದೇ ಇರುವುದು, ಮನಸ್ಸಿಗೆ ಏನೋ ಕಳೆದುಕೊಂಡಂತೆ ಆಗುವುದು ಇತ್ಯಾದಿ  ಭಯದಿಂದ ಮನಸ್ಸು ಮಾಡದೆ ಇರಬಹುದು.

ತಾನೇ ಕುಡಿತ ಬಿಡುತ್ತೇನೆಂಬ ಹುಂಬ ಧೈರ್ಯ ಅಥವಾ ಮದ್ಯಪಾನ ಮುಕ್ತಿಯ ಔಷಧಗಳು ಫಲಕಾರಿಯಲ್ಲ, ಕುಡಿತ ನಿಲ್ಲಿಸಿದರೆ ಸ್ನೇಹಿತ ರನ್ನು ಭೇಟಿಯಾಗುವುದು ಹೇಗೆ ಎಂಬ ಭಯ, ಮನೆಯವರು ತನ್ನನ್ನು ಮನೆಯಿಂದ ಹೊರ ಹಾಕಲು ಮದ್ಯಪಾನ ವಿಮುಕ್ತಿ ಕೇಂದ್ರಕ್ಕೆ ದಾಖಲು ಮಾಡುತ್ತಿದ್ದಾರೆ ಎನ್ನುವ ಭಯ, ಸಿಟ್ಟು ಅವರನ್ನು ಚಿಕಿತ್ಸೆಯಿಂದ ದೂರವಿಡುತ್ತದೆ. ವಿಪರೀತ ಕುಡಿತ ಮಾನಸಿಕ ಕಾಯಿಲೆ ಎಂದು ಗುರುತಿಸದೆ ಇರು ವುದೂ ಚಿಕಿತ್ಸೆಗೆ ಬಾರದಂತೆ ತಡೆಹಿಡಿಯುತ್ತದೆ.

ಆದರೆ ಕೊನೆಗೊಮ್ಮೆ, ಅವರ ಮನೆಯವರು, ಹೆಂಡತಿ ಮಕ್ಕಳು ಅವರನ್ನು ದೂರ ಮಾಡಿದಾಗ, ಬಹಳಷ್ಟು ಹಣದ ಸಮಸ್ಸೆಯನ್ನು ಅನುಭವಿಸಿ ದಾಗ, ತೀವ್ರ ತರನಾದ ಆರೋಗ್ಯ ಸಮಸ್ಸೆಯನ್ನು ಹೊಂದಿದಾಗ, ಕೆಲಸದಿಂದ ಹೊರ ಹಾಕಿದಾಗ ಚಿಕಿತ್ಸೆ ಪಡೆಯಲು ಮನಸ್ಸು ಮಾಡುತ್ತಾರೆ.

ವ್ಯಕ್ತಿಗೆ ತನ್ನ ಮಾನಸಿಕ ಸಮಸ್ಯೆಯ  ಅರಿವು ಇಲ್ಲದೆ ಇರುವುದು:

ತೀವ್ರತರಹದ ಮಾನಸಿಕ ಸಮಸ್ಯೆಯಾದ ಚಿತ್ತ ವೈಕಲ್ಯ(ಸ್ಕಿಜೋಫ್ರೆàನಿಯಾ)ದಲ್ಲಿ ವ್ಯಕ್ತಿಗೆ ತನ್ನ ಭಾವನೆ ಮತ್ತು ಆಲೋಚನೆಗಳು ಭಿನ್ನವಾಗಿದ್ದು, ಅವುಗಳಿಗೆ ಯಾವುದೇ ರೀತಿಯಾದ ವಾಸ್ತವಗಳಿಲ್ಲ ಅನ್ನುವ ಪರಿಜ್ಞಾನವೇ ಇರುವುದಿಲ್ಲ. ಇನ್ನೊಂದು ಸರಳ ರೀತಿಯಲ್ಲಿ ಹೇಳಬೇಕೆಂದರೆ, ಈ ವ್ಯಕ್ತಿಗಳಿಗೆ ತನಗೆ ಮಾನಸಿಕ ಸಮಸ್ಯೆ ಉಂಟಾಗಿದೆ ಎಂಬ ಅರಿವೆ ಇರುವುದಿಲ್ಲ. ಹಾಗಾಗಿ ಅವರು ಚಿಕಿತ್ಸೆಗೆ ಬಾರದೇ ವೈಯಕ್ತಿಕ, ಕೌಟುಂಬಿಕ, ಔದ್ಯೋಗಿಕ, ಸಾಮಾಜಿಕ ಜೀವನದಲ್ಲಿ ತೊಂದರೆ ಅನುಭವಿಸುತ್ತಾರೆ. ಅವರ ಮನೆಯವರು ಕೂಡ ಈತ/ಈಕೆ ಸುಮ್ಮನೆ ನಮ್ಮೊಂದಿಗೆ ನಾಟಕ ಮಾಡುತ್ತಿದ್ದಾನೆ/ಳೆ, ಅವನಿ/ಗೆ ಏನೂ ಸಮಸ್ಯೆ ಇಲ್ಲ, ಅವನಿಗೆ ಉದಾಸೀನ -ಹಾಗಾಗಿ ಎಲ್ಲಿಗೂ ಹೋಗದೆ ಮನೆಯಲ್ಲಿ ಬಿದ್ದಿರುತ್ತಾನೆ, ಯಾವಾಗ ನೋಡಿದರೂ ಮಲಗಿರುತ್ತಾನೆ ಎಂಬ ಧೋರಣೆ ಹೊಂದಿ ಅವರ‌ನ್ನು ಆಸ್ಪತ್ರೆಗೆ ಕರೆದುಕೊಂಡು ಬರುವಲ್ಲಿ ವಿಳಂಬ ಮಾಡುತ್ತಾರೆ.

ಹಣಕಾಸಿನ ಸಮಸ್ಯೆ :

ಈ ತೀವ್ರ ತರನಾದ ಮಾನಸಿಕ ಸಮಸ್ಯೆಗಳು ಸ್ವಲ್ಪ ದೀರ್ಘ‌ ಸಮಯದ ಚಿಕಿತ್ಸೆಯನ್ನು ಬಯಸುವುದರಿಂದ ವ್ಯಕ್ತಿಯ ಕುಟುಂಬ ಹಣಕಾಸಿನ ನಷ್ಟವನ್ನು ಅನುಭವಿಸಬಹುದು. 2016ರ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆಯ ವರದಿ ಹೇಳುವಂತೆ, ಮಾನಸಿಕ ರೋಗಿಗಳ ಮನೆಯವರು ಸರಿಸುಮಾರು 1,000-1,500 ರೂ.ಗಳಷ್ಟು ಹಣವನ್ನು ಪ್ರತೀ ತಿಂಗಳು ಚಿಕಿತ್ಸೆ ಮತ್ತು ಆಸ್ಪತ್ರೆ ಭೇಟಿಗಾಗಿ ವಿನಿಯೋಗಿಸುತ್ತಾರೆ. ಹೀಗಾಗಿ ಮಾನಸಿಕ ರೋಗಿಗಳಿಗೆ ಅವಶ್ಯ ಇರುವ ಮಾತ್ರೆಗಳ ವೆಚ್ಚವನ್ನು ಭರಿಸಲಾಗದೆ ಅಥವಾ ಸರಕಾರಿ ಆಸ್ಪತ್ರೆಗಳಲ್ಲಿ ದೊರೆಯುವ ಮಾತ್ರೆಗಳ ಅರಿವು ಇಲ್ಲದೆ ಸರಿಯಾದ ಸಮಯಕ್ಕೆ ಚಿಕಿತ್ಸೆಯನ್ನು ಕೊಡಿಸುವಲ್ಲಿ ವಿಫಲರಾಗುತ್ತಾರೆ.

ಒಬ್ಬ ವ್ಯಕ್ತಿ ಎಷ್ಟು ಬೇಗ ತನ್ನ ಮನಸ್ಸಿನ ಆರೋಗ್ಯದ ಸಮಸ್ಯೆಗೆ ಪರಿಹಾರ ಹುಡುಕುವುದಕ್ಕಾಗಿ ಚಿಕಿತ್ಸೆ ಪಡೆಯಲು ಮುಂದೆ ಬರುತ್ತಾನೋ ಅಷ್ಟು ಬೇಗ ಆತನ ಸಮಸ್ಯೆಯನ್ನು ಕಡಿಮೆಗೊಳಿಸಿ ಅದರಿಂದ ಉಂಟಾಗಬಹುದಾದ ವೈಯಕ್ತಿಕ, ಕೌಟುಂಬಿಕ ಹಾಗೂ ಕೆಲಸ ಅಥವಾ ವಿದ್ಯಾಭ್ಯಾಸದ ಮೇಲಾಗುವ ದುಷ್ಪರಿಣಾಮವನ್ನು ಹಿಡಿತದಲ್ಲಿ ತರಬಹುದು. ಇದಕ್ಕೆ ಆತನ/ಆಕೆಯ ಮನೆಯವರ ಸಹಕಾರವು ಬಹು ಮುಖ್ಯವಾಗಿರುತ್ತದೆ ಎನ್ನುವ ವಿಚಾರವನ್ನು ಮರೆಯಬಾರದು.

ಡಾ| ಉಮೇಶ್‌ ತೋನ್ಸೆ

ಸಹಾಯಕ ಪ್ರಾಧ್ಯಾಪಕರು,

ಮನೋಸಾಮಾಜಿಕ ತಜ್ಞರು, ಮನಶಾಸ್ತ್ರ ವಿಭಾಗ

ಕೆಎಂಸಿ, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next