ಪಂಚವಟಿಯ ಕುಟೀರದಲ್ಲಿದ್ದ ಒಂಟಿಯಾದ ನಿನ್ನನ್ನು ಬಲವಂತವಾಗಿ ಎಳೆದೊಯ್ಯಲು ಕಪಟಿ ರಾವಣ ತೊಟ್ಟಿದ್ದು ಸನ್ಯಾಸಿಯ ವೇಷವನ್ನು. ನಂತರದ ಆ ಹತ್ತು ತಿಂಗಳು ನಿನ್ನನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿ ನಿನ್ನ ಕುರಿತು ಅವನು ನಿಜದ ಸನ್ಯಾಸಿಯಾಗಿಯೇ ಉಳಿಯಬೇಕಾದದ್ದು ದೊಡ್ಡ ವಿಪರ್ಯಾಸ, ಆಶ್ಚರ್ಯ! ದುಂಬಿಗಾಗಿ ಕಾಯುವ ಪರಾಗ ಮೌನದ ಅರಿವಿತ್ತೇ ಅವನಿಗೆ? ಅಥವಾ ನಿನ್ನ ಕಾಠಿಣ್ಯದ ತೀವ್ರತೆಗೆ ಹೆದರಿದನೆ? ರಾಮನ ಸೇನೆ ತನ್ನವರನ್ನೆಲ್ಲ ಮಣ್ಣು ಮುಕ್ಕಿಸುತ್ತಿದ್ದ ಆ ಕೊನೆಯ ಕ್ಷಣಗಳಲ್ಲೂ ನಿನ್ನ ಮೈ ಮುಟ್ಟಲಿಲ್ಲ ಅವನು!
Advertisement
ಆದರೆ, ಪ್ರತಿ ಗಳಿಗೆಯೂ ನಿನ್ನ ಅಂತರಾತ್ಮ ಅತ್ಯಾಚಾರಕ್ಕೆ ಒಳಗಾಗುತ್ತಲೇ ಇತ್ತು. ನೀನು ನಿನ್ನೊಲವಿನಿಂದ ದೂರಾಗಿ, ರಾವಣನನ್ನೊಪ್ಪಲೇಬೇಕೆಂಬ ರಾಕ್ಷಸರ ಅಪರಿಮಿತ ಒತ್ತಡಕ್ಕೆ ನಲುಗಿ, ಅನುಭವಿಸಿದ ನೋವು, ಆತಂಕಕ್ಕೆ ಎಣೆಯುಂಟೇ? ನಿನ್ನೊಂದಿಗೆ ಹೃದಯ ಕಲ್ಲಾಗಿಸಿಕೊಂಡ ಇನ್ನೊಂದು ಹೆಣ್ಣುಜೀವವೂ ಅಲ್ಲಿತ್ತಲ್ಲವೇ ಸೀತೆ? ತನ್ನೆದುರಲ್ಲೇ ಗಂಡ ಇನ್ನೊಬ್ಬಳನ್ನು ಕಾಮಕೇಳಿಗೆ ಒತ್ತಾಯಿಸುವ ಆ ವಿಷ ಗಳಿಗೆಗಳು ರಾವಣನ ಮಡದಿ ಮಂಡೋದರಿಗೆ ಅದೆಷ್ಟು ಚುಚ್ಚಿರಬಹುದು?
Related Articles
Advertisement
ಹೆಣ್ಣುಗಳ ರಕ್ಷಣೆಯ ಹೊಣೆ ಹೊತ್ತ ಈ ಲೋಕ ಅವಳನ್ನು “ಮುಚ್ಚಿಟ್ಟು ಕಾಪಾಡುವ’ ಒಳ ದಾರಿ ಕಂಡುಕೊಂಡಿದೆ. ಅವಳ ಮೇಲೆ ವಸ್ತ್ರಸಂಹಿತೆ, ನೀತಿಸಂಹಿತೆಯ ಕಟು ನಿಷ್ಠುರತೆಯ ಕಾವಲು ನೇಮಿಸಿಬಿಡುತ್ತದೆ. ಆದರೆ ಈ ಮುಚ್ಚುಗೆಯೊಳಗಾದರೂ ಅವಳು ಸುರಕ್ಷಿತಳೇ? ತನ್ನವರೆಂದು ನಂಬಿರುವ ಬಂಧು-ಬಾಂಧವರೇ ಆಕೆಯ ದೇಹಕ್ಕೆ ಹಸಿದಿರುತ್ತಾರೆ. ಈ ಹಿಂಸೆಯನ್ನು ಹೊರ ಪ್ರಪಂಚಕ್ಕೆ ತಿಳಿಸಲೂ ಆಗದ ತಬ್ಬಲಿ ಮೌನವನ್ನೂ ಅವಳು ಧರಿಸಬೇಕು!
ಇಲ್ಲಿ ದಿನನಿತ್ಯ ಸೀತಾಪಹರಣ, ವಸ್ತ್ರಾಪಹರಣದ ಭಯದ ನೆರಳಲ್ಲೇ ಹೆಣ್ಣುಗಳು ಬದುಕಬೇಕು. ಇದರಿಂದ ಹೇಗೆಲ್ಲಾ ತಪ್ಪಿಸಿಕೊಳ್ಳಬಹುದು ಎಂಬುದಕ್ಕೆ ನಮ್ಮ ಸ್ತ್ರೀವರ್ಗವನ್ನು ಸಿದ್ಧಪಡಿಸುವ ಈ ಲೋಕ ಇದಕ್ಕೆ ಹೇತುವಾದ ಕೆಟ್ಟ ಮನಸ್ಸುಗಳನ್ನು ತಿದ್ದುವ ಜವಾಬ್ದಾರಿಯನ್ನೂ ಹೊರಬೇಕಲ್ಲವೆ? ತನ್ನ ಮೇಲಾಗುವ ದೈಹಿಕ ಆಕ್ರಮಣವನ್ನು ಧಿಕ್ಕರಿಸುವ ದಿಟ್ಟತನ, ಮಾನಸಿಕ ಸ್ಥೈರ್ಯವನ್ನು ಹೆಣ್ಣಿಗೆ ತುಂಬಿದರೆ ಶಕ್ತಿಶಾಲಿ ಕಾಮುಕ ಗಂಡನನ್ನೂ ಅವಳು ದೈಹಿಕವಾಗಿ ಮಣಿಸಬಹುದೇನೋ!
ದೇಹ-ಆತ್ಮಗಳೆಂದು ಅವಳ ವ್ಯಕ್ತಿತ್ವವನ್ನು ಹೋಳಾಗಿಸದೇ ಇಡಿಯಾಗಿ ಕಂಡರೆ, ಅವಳ ಬೇಕು-ಬೇಡಗಳನ್ನು ಗೌರವಿಸುವ ಗಂಡುಕುಲ ವೃದ್ಧಿಯಾದೀತು. ಆಗ ಯಾರ ಭಯವಿಲ್ಲದೇ, ತನ್ನ ಯಾವ ಆಕಾಂಕ್ಷೆಯನ್ನೂ ಬೂದಿಗೊಳಿಸದೇ ಅವಳು ಸ್ವತ್ಛಂದವಾಗಿ ಇಲ್ಲಿರುವುದು ಸಾಧ್ಯ. ಹೇಳು ಸೀತೆ, ಅಂತಹ ರಾಮರಾಜ್ಯವನ್ನು ನಾವು ಎಂದಾದರೂ ಕಂಡೇವೇ?
ಅಭಿಲಾಷಾ ಎಸ್.