Advertisement
ಶಿವರಾತ್ರಿ ಹಿನ್ನೆಲೆ ಗುರುವಾರ ಅನೇಕ ದೇವಸ್ಥಾನಗಳಲ್ಲಿ ದೇವಾಲಯವನ್ನು ಸ್ವತ್ಛ ಗೊಳಿಸಿ, ಸಿಂಗರಿಸುವ ಕಾರ್ಯಗಳನ್ನು ಪೂರ್ಣ ಗೊಳಿಸಲಾಗಿದೆ. ಮಹಾಶಿವರಾತ್ರಿ ಅಂಗವಾಗಿ ಶುಕ್ರವಾರ ಬೆಳಗ್ಗಿನಿಂದಲೇ ಅಪಾರ ಸಂಖ್ಯೆಯ ಭಕ್ತರು ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಲಿದ್ದು, ಅನೇಕ ದೇವಸ್ಥಾನಗಳಲ್ಲಿ ಶಿವಗಣ ಹೋಮ, ಸಂಕಲ್ಪ, ಪುಷ್ಪಾರ್ಚನೆ, ಅಭಿಷೇಕ, ಭಜನೆ, ನವಗ್ರಹ ಪೂಜೆ, ಮಹಾ ಮಂಗಳಾರತಿ ಹಾಗೂ ರಾತ್ರಿ ಜಾಗರಣೆ ಸೇರಿದಂತೆ ಇನ್ನಿತರ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
Related Articles
ಅರಮನೆ ಆವರಣದಲ್ಲಿರುವ ಶ್ರೀ ತ್ರಿನೇಶ್ವರ ಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಶಿವ ಲಿಂಗಕ್ಕೆ ಚಿನ್ನದ ಕೊಳಗವನ್ನು ಧಾರಣೆ ಮಾಡಲಾಗುವುದು. ಹಬ್ಬದ ಮುನ್ನಾದಿನವಾದ ಗುರುವಾರ ಶ್ರೀ ತ್ರಿನೇಶ್ವರಸ್ವಾಮಿ ದೇವಾಲಯದಲ್ಲಿರುವ ಶಿವನಮೂರ್ತಿಗೆ ಚಿನ್ನದ ಕೊಳಗವನ್ನು ಧರಿಸಲಾಯಿತು.
Advertisement
ಶಿವರಾತ್ರಿ ಸಂದರ್ಭದಲ್ಲಿ ಮಾತ್ರವೇ ಅಳವಡಿಸಲಾಗುವ ಚಿನ್ನದ ಕೊಳಗ, ಉಳಿದ ಸಂದರ್ಭದಲ್ಲಿ ಜಿಲ್ಲಾಡಳಿತದ ಖಜಾನೆಯಲ್ಲಿರಲಿದೆ. ಹೀಗಾಗಿ ಜಿಲ್ಲಾಡಳಿತದ ಖಜಾನೆಯಲ್ಲಿದ್ದ ಅಂದಾಜು 11 ಕೆ.ಜಿ. ತೂಕದ ಚಿನ್ನದ ಕೊಳಗವನ್ನು ಮುಜಾರಾಯಿ ಇಲಾಖೆ ಸುಪರ್ದಿನಲ್ಲಿರುವ ತ್ರಿನೇಶ್ವರ ದೇವಾಲಯಕ್ಕೆ ಹಸ್ತಾಂತರಿಸಲಾಯಿತು.
ಈ ಚಿನ್ನದ ಕೊಳಗವನ್ನು ಜಯ ಚಾಮರಾಜೇಂದ್ರ ಒಡೆಯರ್ ಅವರು ತಮ್ಮ ಪುತ್ರ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಜನ್ಮದಿನದ ನೆನಪಿಗಾಗಿ ಶ್ರೀ ತ್ರಿನೇಶ್ವರಸ್ವಾಮಿ ದೇವಸ್ಥಾನಕ್ಕೆ ನೀಡಿದ್ದಾರೆ. ಹೀಗಾಗಿ ಈ ಚಿನ್ನದ ಕೊಳಗವನ್ನು ಅಂದಿನಿಂದ ಇಂದಿನವರೆಗೂ ಶಿವರಾತ್ರಿ ಹಬ್ಬದ ದಿನದಂದು ಮಾತ್ರವೇ ಧಾರಣೆ ಮಾಡಲಾಗುತ್ತದೆ.
ಪೊಲೀಸರ ಸೂಚನೆ…ಮೈಸೂರು: ಶಿವರಾತ್ರಿ ಜಾಗರಣೆ ವೇಳೆ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಪೊಲೀಸರ ಸೂಚನೆಗಳನ್ನು ಪಾಲಿಸುವಂತೆ ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಕೋರಿದ್ದಾರೆ. ಶಿವರಾತ್ರಿ ಪ್ರಯುಕ್ತ ಶುಕ್ರವಾರ ರಾತ್ರಿ ಸಾರ್ವಜನಿಕರು ಶಿವನ ದೇವಸ್ಥಾನಗಳಿಗೆ ದರ್ಶನಕ್ಕೆ ತೆರಳುವುದು ಹಾಗೂ ರಾತ್ರಿ ಪೂರ ಜಾಗರಣೆ ಮಾಡುವುದು ಸಾಮಾನ್ಯವಾಗಿದೆ. ಈ ವೇಳೆ ಮಹಿಳೆಯರು ತಮ್ಮ ಆಭರಣ ಮತ್ತು ಬೆಲೆಬಾಳುವ ವಸ್ತುಗಳ ಬಗ್ಗೆ ಜಾಗ್ರತೆಯಿಂದ ಇರುವುದು ಹಾಗೂ ಅವೇಳೆಯಲ್ಲಿ ಚಿನ್ನಾಭರಣ ಧರಿಸಿಕೊಂಡು ಒಂಟಿಯಾಗಿ ಓಡಾಡಬಾರದು. ರಸ್ತೆಯಲ್ಲಿ ವಾಹನಗಳ ವ್ಹೀಲಿಂಗ್ ಮಾಡುವುದು, ಅಜಾಗರೂಕತೆ ಮತ್ತು ಅತಿಯಾದ ವೇಗವಾಗಿ ವಾಹನ ಚಾಲನೆ ಮಾಡುವುದನ್ನು ನಿಷೇಧಿಸಿದೆ. ಆಟೋ ಮತ್ತು ಕ್ಯಾಬ್ ವಾಹನದವರು ಸಾರ್ವಜನಿಕರು ಕರೆದ ಕಡೆ ಬರಲು ನಿರಾಕರಿಸುವುದು, ಹೆಚ್ಚಿನ ಹಣಕ್ಕಾಗಿ ಪೀಡಿಸುವುದು ಮಾಡಬಾರದು. ಮಹಿಳೆಯರು ಮತ್ತು ಹೆಣ್ಣು ಮಕ್ಕಳೊಂದಿಗೆ ಅಸ¸Âವಾಗಿ ವರ್ತಿಸಬಾರದು. ಸಾರ್ವಜನಿಕರ ಆಸ್ತಿ-ಪಾಸ್ತಿಗೆ ನಷ್ಟ ಉಂಟು ಮಾಡಬಾರದು. ರಸ್ತೆಗೆ ಅಡ್ಡಲಾಗಿ ಚಲನಚಿತ್ರಗಳನ್ನು ಪ್ರದರ್ಶಿಸುವುದು, ಅನುಮತಿ ಇಲ್ಲದೇ ಮತ್ತು ಹೆಚ್ಚಿನ ಧ್ವನಿಯಲ್ಲಿ ಧ್ವನಿವರ್ಧಕಗಳನ್ನು ಬಳಸುವುದನ್ನು ಹಾಗೂ ಜಾಗರಣೆ ಆಚರಿಸುವ ನೆಪದಲ್ಲಿ ಜೂಜಾಟಗಳಲ್ಲಿ ತೊಡಗುವುದನ್ನು ನಿಷೇಧಿಸಿದೆ. ಮಹಾ ಶಿವರಾತ್ರಿ ಆಚರಣೆ ಹಿನ್ನೆಲೆಯಲ್ಲಿ ಮೈಸೂರು ನಗರ ಪೊಲೀಸ್ ವತಿಯಿಂದ ಎಲ್ಲಾ ರೀತಿಯ ಪೊಲೀಸ್ ಬಂದೋಬಸ್ತ್ ಮತ್ತು ಗಸ್ತು ವ್ಯವಸ್ಥೆಯನ್ನು ಮಾಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವ ಕೃತ್ಯಗಳು ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಅಥವಾ ಪೊಲೀಸ್ ಕಂಟ್ರೋಲ್ ರೂಂ ದೂ. 100, 2418139, 2418339 ಸಂಖ್ಯೆಗೆ ಮಾಹಿತಿ ನೀಡಿ ನಗರದ ಶಾಂತಿ ಕಾಪಾಡುವಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕೆಂದು ಕೋರಿದ್ದಾರೆ.