Advertisement
ಆ ದಿನ ಬಹಳ ಮಹತ್ವದ ದಿನವಾಗಿತ್ತು. ಕಾರಣ, ಆ ಇಡೀ ದಿವಸ ಚಿತ್ರೀಕರಣ ನಡೆಯಬೇಕಾಗಿದ್ದದ್ದು ಪೂರ್ಣಚಂದ್ರ ತೇಜಸ್ವಿಯವರ ಮೂಡಿಗೆರೆಯ ತೋಟದಲ್ಲಿ ಮತ್ತು ಮಾತನಾಡಿಸಬೇಕಾದದ್ದು ತೇಜಸ್ವಿಯವರ ನೆರಳಂತೆ ಸುಮಾರು ನಲವತ್ತು ವರುಷ ಅವರ ಕಷ್ಟ-ಸುಖಗಳನ್ನು ಸಮಾನವಾಗಿ ಉಂಡ ಅವರ ಬಾಳಸಂಗಾತಿ ರಾಜೇಶ್ವರಿ ತೇಜಸ್ವಿಯವರನ್ನು. ಬೆಳಿಗ್ಗೆ 7 ಗಂಟೆಗೆ ಸರಿಯಾಗಿ “ನಿರುತ್ತರ’ ತಲುಪಿ ಚಿತ್ರೀಕರಣ ಪ್ರಾರಂಭಿಸಿದೆವು. ಅಂದು ಸಹ ಯಥಾಪ್ರಕಾರ ಬೆಳಿಗ್ಗೆ ಬೆಳಿಗ್ಗೆಯೇ ಮಳೆ. ಆದರೆ ಅಷ್ಟೊತ್ತಿಗಾಗಲೇ ಚಿತ್ರೀಕರಣ ಪ್ರಾರಂಭವಾಗಿ ಐದಾರು ದಿನಗಳಾಗಿದ್ದರಿಂದ ನಿರಂತರವಾಗಿ ಸುರಿಯುವ ಮಲೆನಾಡಿನ ಮಳೆಗೆ ಎಲ್ಲರೂ ಹೊಂದಿಕೊಂಡುಬಿಟ್ಟಿದ್ದೆವು. ಪ್ರಾರಂಭದಲ್ಲಿ ನಾನು, ನಮ್ಮ ತಂಡ ತೋಟವಿಡೀ ಸುತ್ತಾಡಿ ತೋಟದ ಮೂಲೆ ಮೂಲೆಯನ್ನೂ ಬಿಡದೇ ಅಲ್ಲಿನ ಪ್ರತಿಯೊಂದು ಹೂವು, ಹಣ್ಣು, ಕೆರೆ, ಕಂಗೊಳಿಸುತ್ತಿದ್ದ ಕಾಫಿ ತೋಟ- ಹೀಗೆ ಎಲ್ಲವನ್ನೂ ಚಿತ್ರೀಕರಿಸಿಕೊಂಡೆವು. 9 ಗಂಟೆಯ ಹೊತ್ತಿಗೆ ಈ ಕೆಲಸ ಮುಗಿಯುತ್ತ ಬಂದಿತ್ತು. ಕಡೆಯದು ಎಂಬಂತೆ ಮನೆಯ ಪಕ್ಕದ ಶೆಡ್‌ನಲ್ಲಿ ಕವರ್ ಹೊದ್ದುಕೊಂಡು ನಿಂತಿದ್ದ ತೇಜಸ್ವಿಯವರ ದೀರ್ಘಕಾಲದ ಸಾಥಿ MEN 6625 ಸ್ಕೂಟರ್‌ನ ಕೆಲ ಚಿತ್ರಿಕೆಗಳನ್ನು ತೆಗೆದುಕೊಳ್ಳುತ್ತಿದ್ದೆವು. ರಾಜೇಶ್ವರಿ ಮೇಡಂ ಅಡುಗೆ ಮನೆಯ ಕಿಟಕಿಯಿಂದಲೇ ನಮ್ಮನ್ನು ಕಾಫಿ ಕುಡಿಯಲು ಬರುವಂತೆ ಕೂಗಿ ಕರೆದರು. ಮೇಡಂ ಕೊಟ್ಟ ಬಿಸಿಬಿಸಿ ಕಾಫಿ ಕುಡಿಯುತ್ತಲೇ ಮತ್ತೂಮ್ಮೆ ಅವರಿಗೆ ವಿಷಯಗಳನ್ನು ಜ್ಞಾಪಿಸಿದೆ. “”ನೀವು ಕೊಟ್ಟು ಹೋದ ಸ್ಕ್ರಿಸ್ಟ್ ಓದಿದೆ. ನಾನು ಸಿದ್ಧವಾಗಿದ್ದೀನಿ. ನೀವು ಒಂದೊಂದಾಗಿ ಕೇಳ್ತಾ ಹೋಗಿ…” ಎಂದು ಅಲ್ಲಿದ್ದ ಕುರ್ಚಿಯ ಮೇಲೆ ಕುಳಿತರು. ನಾವೂ ಸರ್ವಸನ್ನದ್ಧರಾಗಿಯೇ ಇದ್ದುದ್ದರಿಂದ ಸಾಕ್ಷ್ಯಚಿತ್ರದ ಅಂದಿನ ಚಿತ್ರೀಕರಣ ಪ್ರಾರಂಭವಾಯಿತು. “”ತೇಜಸ್ವಿಯವರನ್ನು ಮೊದಲು ನೋಡಿದ್ದು ಎಲ್ಲಿ?” ಎಂಬ ಮೊದಲ ಪ್ರಶ್ನೆಯನ್ನು ಅವರಿಗೆ ಕೇಳಿದೆ. ಮೇಡಂ ಪ್ರಾರಂಭದಲ್ಲಿ ತುಸು ಸಂಕೋಚದಿಂದಲೇ ಆ ದಿನಗಳ ನೆನಪುಗಳನ್ನು ಬಿಡಿಸಿಡಲು ಪ್ರಾರಂಭಿಸಿದರು.
Related Articles
Advertisement
“”ರಾಜೇಶ್, ಇಲ್ಲಿ ಬಂದು ನನಗೆ ರೇಗಿ ಹೋಗಿದೆ, ಹಾಳಾದವಳೆ ಯಾವುದೋ ದರಿದ್ರ ಫೋನ್ ನಂಬರ್ ಕೊಟ್ಟು ಫೋನ್ ಮಾಡಿ ಮಾಡಿ ಸತ್ತೆ. ಆಮೇಲೆ ನಿನ್ನೆಯೆಲ್ಲ ಅದನ್ನೇ ಹುಡುಕಿ ಹುಡುಕಿ ಸತ್ತೆ. ಈಗ ಬೆಳಿಗ್ಗೆಯೆಲ್ಲ ಮತ್ತೆ ಹುಡುಕಿ ಹುಡುಕಿ ಸತ್ತೆ. ಹಾಳಾದವ್ರಿಗೆ ಕ್ರಾಸ್ ನಂಬರ್ ಆದ್ರೂ ಕೊಡ್ಲಿಕ್ಕೆ ಏನಾಗಿತ್ತು. ತರ್ಲೆ ಅಂದ್ರೆ ತರ್ಲೆ ಮಾಡಿಟ್ಟಿದ್ದಿ. ನಿನ್ನೆ 3 ಗಂಟೆಗೆ ಬಂದೆ. ಅಂದರೆ ನಿನ್ನೆ ರಾತ್ರಿಯ ರೈಲಿಗೆ ಹೋಗಬೇಕೆಂದು ಬಂದೆ. ನಿನ್ನ ಹುಡುಕಿ ಸತ್ತು ಇವತ್ತಾದರೂ ಸಿಗುತ್ತಾಳೆ ಎಂದರೆ ಇವತ್ತೂ ಬೇರೆ ತರಲೆ… ಥೂತ್ತೇರಿ. ಅಲ್ಲೇ ಇವತ್ತು ರಾತ್ರಿ ರೈಲಿಗೆ ಹೋಗುತ್ತೇನೆ. ತಮ್ಮ ಘನ ವ್ಯಕ್ತಿತ್ವಕ್ಕೆ ಸಾಧ್ಯವಾದರೆ ಟೌನ್‌ಹಾಲಿನ ಹತ್ತಿರ 4 ಗಂಟೆಗೆ ಬನ್ನಿ ಸಿಗುತ್ತೇನೆ. ನನಗೆ ರೇಗಂದ್ರೆ ರೇಗು. ನಿನ್ನನ್ನು ಮಾತಾಡಿಸಲೇ ಬಾರದು ಅನ್ನೊ ಅಷ್ಟು ರೇಗು ತರಲೆ ಥತ್. 16ಠಿಜ 4ಕ್ಕೆ ಟೌನ್ ಹಾಲಿನ ಹತ್ತಿರ ವಕ್ಕರಿಸಿರಿ. -ಪೂಚಂತೇ.” ತೇಜಸ್ವಿಯವರು ರಾಜೇಶ್ವರಿಯವರನ್ನು “ರಾಜೇಶ್’ ಎಂದು ಸಂಬೋಧಿಸುತ್ತಿದ್ದರು. “”ಹೀಗೇನೊ ಕಾಗದ ಬರ್ದಿದ್ರು. ಸರಿ, ಆದರೆ, ಅವರೇ ನಮ್ಮನೆ ಹುಡ್ಕೊಂಡ್ ಬಂದ್ರು. ಹ್ಯಾಗೆ ಗೊತ್ತಾಯ್ತು ಅಂದ್ರೆ ಇವರು ಪೋಸ್ಟ್ ಮ್ಯಾನ್ ಹತ್ರ ಹೋಗಿ ಅಡ್ರೆಸ್ ಕೇಳ್ಕೊಂಡು ಹುಡುಕ್ಕೊಂಡ್‌ಬಂದಿದ್ರು…” ಎಂದು ಹೇಳಿ ರಾಜೇಶ್ವರಿ ಮುಗುಳ್ನಕ್ಕರು.
ಪೂರ್ಣಚಂದ್ರ ತೇಜಸ್ವಿ ಅವರ ಬಗ್ಗೆ ಇನ್ನಷ್ಟು, ಮತ್ತಷ್ಟು ತಿಳಿಯುವ ಆಸಕ್ತಿ ಯಾರಿಗೂ ಕುಗ್ಗಿಲ್ಲ. ಹೀಗಾಗಿ ಬೆಂಗಳೂರಿನ ಬಹುರೂಪಿ ಪ್ರಕಾಶನವು “ತೇಜಸ್ವಿ ಸಿಕ್ಕರು’ ಎಂಬ ಹೊಸ ಕೃತಿಯನ್ನು ಪ್ರಕಟಿಸಿದೆ. ತೇಜಸ್ವಿ ಆಪ್ತರ ಮೂಲಕ ತೇಜಸ್ವಿಯವರನ್ನು ಕಟ್ಟಿಕೊಡುವ ಪ್ರಯತ್ನ ಇದು.
ಕೆ. ಎಸ್. ಪರಮೇಶ್ವರ