Advertisement

ಪಾಲಿಕೆ ಸದಸ್ಯರ ಡೇ ಕೇರ್‌ ಗದ್ದಲ

11:05 AM Jun 30, 2018 | |

ಬೆಂಗಳೂರು: ದಯಾನಂದನಗರ ವಾರ್ಡ್‌ನ ಶ್ರೀರಾಮಪುರದಲ್ಲಿ ಪಾಲಿಕೆಯಿಂದ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಡೇ ಕೇರ್‌ ಸೆಂಟರ್‌ನಲ್ಲಿ ಪಾಲಿಕೆ ವತಿಯಿಂದಲೇ ಉಚಿತವಾಗಿ ಡಯಾಲಿಸಿಸ್‌ ಕೇಂದ್ರ ಆರಂಭಿಸುವ ವಿಚಾರ ಪಾಲಿಕೆ ಸದಸ್ಯರ ನಡುವೆಯೇ ಕಿತ್ತಾಟಕ್ಕೆ ಕಾರಣವಾಯಿತು.

Advertisement

ಶ್ರೀರಾಮಪುರದಲ್ಲಿ ಪಾಲಿಕೆಯಿಂದ ನಿರ್ಮಿಸಿರುವ ಅಂಬೇಡ್ಕರ್‌ ಡೇ ಕೇರ್‌ ಸೆಂಟರ್‌ ಅನ್ನು ಕೇವಲ 7 ಸಾವಿರ ರೂ.ಗಳಿಗೆ ಖಾಸಗಿಯವರಿಗೆ ಬಾಡಿಗೆ ನೀಡಲಾಗಿದೆ. ಆದರೆ, ಬಾಡಿಗೆಗೆ ಪಡೆದವರು ಎಲ್ಲ ನಿಯಮ ಉಲ್ಲಂಘನೆ ಮಾಡಿರುವ ಕಾರಣ ಕಟ್ಟಡ ವನ್ನು ಪಾಲಿಕೆ ವಶಕ್ಕೆ ಪಡೆದು ಉಚಿತ ಡಿಯಾಲಿಸಿಸ್‌ ಕೇಂದ್ರ ಆರಂಭಿಸಲು ಅನುಮೋದನೆ ಕೋರಿ ಸ್ಥಳೀಯ ಸದಸ್ಯೆ ಕುಮಾರಿ ಪಳನೀಕಾಂತ್‌ ನಿಯಮ 51ರ ಪ್ರಕಾರ ಕೌನ್ಸಿಲ್‌ ಮುಂದೆ ವಿಷಯ ಮಂಡಿಸಿದ್ದರು. 

ಇದಕ್ಕೆ ಬೆಂಬಲ ವ್ಯಕ್ತಪಡಿಸಿದ ಮಾಜಿ ಮೇಯರ್‌ ಪದ್ಮಾವತಿ, ಶ್ರೀರಾಮಪುರದಲ್ಲಿ ಪಾಲಿಕೆಯ ರೆಫೆರಲ್‌ ಆಸ್ಪತ್ರೆ ಹಾಗೂ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ ಕಾರ್ಯ ನಿರ್ವಹಿಸುತ್ತಿರುವ ಆಸ್ಪತ್ರೆಗಳು ದುಸ್ಥಿತಿಯಲ್ಲಿವೆ. ಆದರೆ, ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡವನ್ನು ಕೇವಲ 7 ಸಾವಿರ ರೂ.ಗೆ ಬಾಡಿಗೆಗೆ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಈ ವೇಳೆ ಮಾತನಾಡಿದ ಕುಮಾರಿ ಪಳಿನಿಕಾಂತ್‌, ಪಾಲಿಕೆಯ ರೆಫ‌ರಲ್‌ ಆಸ್ಪತ್ರೆಯಲ್ಲಿ ಏಡ್ಸ್‌ ಸೋಂಕಿತರು, ನವಜಾತು ಶಿಶು, ನಾಯಿ ಕಚ್ಚಿದವರಿಗೆ ಒಂದೇ ಕಡೆ ಚುಚ್ಚುಮದ್ದು ನೀಡುವ ದುಸ್ಥಿತಿಯಿದೆ. ನೂತನವಾಗಿ ನಿರ್ಮಿಸಿರುವ ಕಟ್ಟಡಕ್ಕೆ ಪಾಲಿಕೆ ಆಸ್ಪತ್ರೆ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಬಿಜೆಪಿ ಸದಸ್ಯೆ ದೀಪಾ ನಾಗೇಶ್‌ ಅವರು ವಿರೋಧ ವ್ಯಕ್ತಪಡಿಸಿದಾಗ, ಇದು ನಮ್ಮ ವಾರ್ಡ್‌ ವಿಚಾರ ನೀವೇಕೆ ತಲೆ ಹಾಕುತ್ತೀರಾ ಎಂದು ಕುಮಾರಿ ಪಳನಿಕಾಂತ್‌ ಪ್ರಶ್ನಿಸಿದರು. ಈ ವೇಳೆ ಇಬ್ಬರ
ನಡುವೆ ವಾಕ್ಸಮರ ನಡೆಯಿತು.

ಕ್ರಿಯಾಲೋಪ ಎತ್ತಿದ ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ, ವಿಪ್‌ ಜಾರಿ ಮಾಡಿದರೆ ಕುಮಾರಿ ಪಳನಿಕಾಂತ್‌ ಸದಸ್ಯತ್ವ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಿರುವ ಮುಖಂಡರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದ್ದು, ತಾಕತ್ತಿದ್ದರೆ ವಿಷಯವನ್ನು ಮತಕ್ಕೆ ಹಾಕಿ ಗೆಲ್ಲಿ ನೋಡೋಣ ಎಂದು ಸವಾಲು ಹಾಕಿದರು.

ಮಧ್ಯ ಪ್ರವೇಶಿಸಿದ ಮೇಯರ್‌, ಸ್ಥಳ ಪರಿಶೀಲನೆ ನಡೆಸಿದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು. ಹೀಗಾಗಿ ವಿಷಯ ಮುಂದೂಡಲಾಗಿದೆ ಎಂದು ಹೇಳಿದರು. ಬಳಿಕ ಹಲವಾರು ವಿಷಯಗಳಿಗೆ ಪಾಲಿಕೆಯಿಂದ ಅನುಮೋದನೆ ಪಡೆಯಲಾಯಿತು. 

Advertisement

ಕೆರೆಯಲ್ಲಿ ಕಟ್ಟಡ ನಿರ್ಮಾಣ: ಬೊಮ್ಮನಹಳ್ಳಿಯ ಮಂಗಮ್ಮನಪಾಳ್ಯ ಕೆರೆಯ 8 ಗುಂಟೆ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಪಾಲಿಕೆ ಸದಸ್ಯ ಮೋಹನ್‌ ರಾಜ್‌ ಆರೋಪಿಸಿದರು. ಈ ಕುರಿತು ಅಧಿಕಾರಿಗಳನ್ನು ಮೇಯರ್‌ ಪ್ರಶ್ನಿಸಿದಾಗ, ನೋಟಿಸ್‌ ನೀಡಿರುವುದಾಗಿ ಅಧಿಕಾರಿಗಳು ಹೇಳಿದರು. ಅದಕ್ಕೆ ಗರಂ ಆದ ಮೇಯರ್‌, ಕೆರೆಯಲ್ಲಿ ಕಟ್ಟಡ ನಿರ್ಮಿಸುತ್ತಿದ್ದರೆ ತಡೆಯುವುದನ್ನು ಬಿಟ್ಟು ನೋಟಿಸ್‌ ಕೊಟ್ಟಿದ್ದೇವೆ ಎಂದು ಹೇಳುವುದಕ್ಕೆ ನಾಚಿಕೆ ಯಾಗುವುದಿಲ್ಲವೇ? ನಕ್ಷೆ ಪಡೆಯದೆ ನಿರ್ಮಿಸುತ್ತಿ ರುವ ಕಟ್ಟಡಕ್ಕೆ ನೋಟಿಸ್‌ ಕೊಟ್ಟಿದ್ದೀವಿ ಎನ್ನುತ್ತೀರಲ್ಲಾ? ಕೂಡಲೇ ಸಂಬಂಧಿಸಿದ ಸಹಾಯಕ ಎಂಜಿನಿಯರ್‌ನ್ನು ಅಮಾನತುಗೊಳಿಸಿ ಎಂದು ಸೂಚಿಸಿದರು.

ಕ್ರಿಮಿನಲ್‌ ಕೇಸ್‌ ಹಾಕಿ: ಫ್ಲೆಕ್ಸ್‌, ಬ್ಯಾನರ್‌, ಕಟೌಟ್‌ಗಳನ್ನು ಹಾಕಿದರೆ ತೆರವುಗೊಳಿಸ ಬಹುದು. ಆದರೆ, ಗೋಡೆಗಳ ಮೇಲೆ ಅಂಟಿಸುವ ಭಿತ್ತಿಪತ್ರಗಳನ್ನು ತೆಗೆಯುವುದು ಕಷ್ಟ. ಜತೆಗೆ,ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಡಾ.ರಾಜು ಆರೋಪಿಸಿ ದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್‌, ಎಂಟು ವಲಯಗಳ ಅಧಿಕಾರಿಗಳು ಭಿತ್ತಿಪತ್ರ ಅಂಟಿಸುವವರು ಹಾಗೂ ಆ ಪತ್ರಗಳಲ್ಲಿರುವ ಸಂಸ್ಥೆಗಳ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಲು ಮುಂದಾಗಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next