ಧಾರವಾಡ: ಅವಳಿ ನಗರದಲ್ಲಿ ಉಂಟಾಗಿರುವ ಕುಡಿಯುವ ನೀರಿನ ತೊಂದರೆ ಕುರಿತು ಚರ್ಚಿಸಿ ಸಮಸ್ಯೆ ಬಗೆಹರಿಸಲು ಮುಂದಿನ ವಾರ ಮಹಾನಗರ ಪಾಲಿಕೆ ವಿಶೇಷ ಸಾಮಾನ್ಯ ಸಭೆ ನಡೆಸುವುದಾಗಿ ಮೇಯರ್ ಮಂಜುಳಾ ಅಕ್ಕೂರ್ ಠರಾವು ಪಾಸ್ ಮಾಡಿದರು.
ಬುಧವಾರ ಇಲ್ಲಿ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಪಕ್ಷಬೇಧ ಮರೆತ ಪಾಲಿಕೆ ಎಲ್ಲ ಸದಸ್ಯರು ಜಲಮಂಡಳಿ ಅಧಿಕಾರಿಗಳ ಬೆವರಿಳಿಸಿದರು. ಅವಳಿ ನಗರ ಮಾತ್ರವಲ್ಲ ಇದಕ್ಕೆ ಹೊಂದಿಕೊಂಡಂತೆ ಇರುವ ಹಳ್ಳಿಗಳಲ್ಲೂ ಕುಡಿಯುವ ನೀರಿನ ಸಮಸ್ಯೆಯಾಗಿದ್ದು, ಜನ-ಜಾನುವಾರುಗಳು ತೊಂದರೆಯಲ್ಲಿವೆ.
ಹೀಗಾಗಿ ಪ್ರತ್ಯೇಕವಾಗಿ ಸಭೆ ನಡೆಸಬೇಕು ಎಂದು ಸರ್ವಪಕ್ಷಗಳ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು. ಜಲಮಂಡಳಿಯ ವ್ಯವಸ್ಥಾಪಕ ನಿರ್ದೇಶಕರೇ ಖುದ್ದು ಸಭೆಗೆ ಹಾಜರಾಗುವಂತೆ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿಕೊಂಡರು. ಈ ಕುರಿತು ಸುದೀರ್ಘ ಚರ್ಚೆ ವೇಳೆ, ಸದಸ್ಯರಾದ ಯಾಸೀನ್ ಹಾವೇರ್‌ಪೇಟ್, ಸುಧೀರ್ ಸರಾಫ್, ಅಲ್ತಾಫ್ ಕಿತ್ತೂರ್, ಡಾ|ಪಾಂಡುರಂಗ ಪಾಟೀಲ ಸೇರಿದಂತೆ ಅನೇಕ ಸದಸ್ಯರು ಬೆಳಕು ಚೆಲ್ಲಿ 67 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ.
ಇಲ್ಲಸಲ್ಲದ ನೆಪ ಹೇಳಿ ಅಧಿಕಾರಿಗಳು ಜನಪ್ರತಿನಿಧಿಗಳ ದಿಕ್ಕು ತಪ್ಪಿಸುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಲು ಈ ಕುರಿತು ತುರ್ತು ಕ್ರಮದ ಅಗತ್ಯವಿದೆ. ಹೀಗಾಗಿ ವಿಶೇಷ ಸಭೆ ಕರೆಯಬೇಕು ಎಂದಾಗ, ಒತ್ತಡಕ್ಕೆ ಮಣಿದ ಮೇಯರ್ ಮಂಜುಳಾ ಅಕ್ಕೂರ್, ಮುಂದಿನ ಸೋಮವಾರ ಅಥವಾ ಮಂಗಳವಾರ ಮಹಾನಗರದಲ್ಲಿನ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚಿಸುವುದಕ್ಕೆ ವಿಶೇಷ ಸಾಮಾನ್ಯ ಸಭೆ ಕರೆಯುವುದಾಗಿ ಠರಾವು ತೆಗೆದುಕೊಂಡರು.
ಈ ಕುರಿತು ಸಭೆಯ ಗಮನ ಸೆಳೆದ ಕಾಂಗ್ರೆಸ್ ಸದಸ್ಯ ಯಾಸೀನ್ ಹಾವೇರ್‌ಪೇಟ್, ಕುಡಿಯುವ ನೀರು ಎಲ್ಲರಿಗೂ ಮುಖ್ಯ ಆದರೆ ಅಧಿಕಾರಿಗಳು ನೆಪ ಹೇಳುತ್ತಿದ್ದಾರೆ. ಹೀಗಾಗಿ ಕುಡಿಯುವ ನೀರು ಶೀಘ್ರ ಪೂರೈಕೆಗೆ ಇನ್ನಷ್ಟು ಹಣ ಖರ್ಚು ಮಾಡಿ ಚಾಕ್‌ವೆಲ್, ಓವರ್‌ಹೆಡ್ ಟ್ಯಾಂಕ್, ಉತ್ತಮ ಪೈಪ್ ಲೈನ್ ಹಾಕಬೇಕು ಎಂದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಡಾ|ಪಾಂಡುರಂಗ ಪಾಟೀಲ, ಜಲಮಂಡಳಿ ಅಧಿಕಾರಿಗಳು ಎಲ್ಲರಿಗೂ ಪಂಗನಾಮ ಹಾಕುತ್ತಿದ್ದಾರೆ.
ಕಳೆದ 15 ವರ್ಷದಲ್ಲಿ 800 ಕೋಟಿ ರೂ.ಗಳಿಗೂ ಅಧಿಕ ಹಣ ಖರ್ಚು ಮಾಡಿದರೂ ಅವಳಿ ನಗರಕ್ಕೆ ಸಮರ್ಪಕ ನೀರು ಲಭಿಸುತ್ತಿಲ್ಲ.ಇದಕ್ಕೆ ಅಧಿಕಾರಿಗಳು ಜನಪ್ರತಿನಿಧಿಗಳ ದಿಕ್ಕು ತಪ್ಪಿಸಿರುವುದು ಕಾರಣ. ಇದನ್ನು ಮೊದಲು ಸರಿಪಡಿಸೋಣ ಎಂದು ಆಗ್ರಹಿಸಿದರು. ಈ ವೇಳೆ ಬಿಜೆಪಿ, ಕಾಂಗ್ರೆಸ್ ಸದಸ್ಯರ ನಡುವೆ ಕೊಂಚ ಮಾತಿನ ಚಕಮಕಿ ನಡೆಯಿತು.