Advertisement

ಕುಡಿವ ನೀರು-ಮೇವು ಸಮಸ್ಯೆ ಬಗೆಹರಿಸಲು ಸದಸ್ಯರ ಒಕ್ಕೊರಲ ಆಗ್ರಹ

11:11 AM Jan 30, 2019 | |

ಇಂಡಿ: ಪಟ್ಟಣದ ತಾಪಂ ಸಭಾ ಭವನದಲ್ಲಿ ತಾಪಂ ಅಧ್ಯಕ್ಷ ಶೇಖರ ನಾಯಕ ಅಧ್ಯಕ್ಷತೆಯಲ್ಲಿ ಮಂಗಳವಾರ 11ನೇ ಸಾಮಾನ್ಯ ಸಭೆ ಜರುಗಿತು. ಸಭೆ ಆರಂಭವಾಗುತ್ತಿದ್ದಂತೆ ತಾಪಂ ಯೋಜನಾಧಿಕಾರಿ ವಿಠಲ ಹಳ್ಳಿಕರ ಹಿಂದಿನ ಸಭೆ ನಡಾವಳಿ ಓದಿದರು.

Advertisement

ನಂತರ ಸಭೆಯಲ್ಲಿ ತಾಪಂ ಸದಸ್ಯ ರವಿ ಜಾಧವ ಮಾತನಾಡಿ, ಭೀಕರ ಬರಗಾಲ ಎದುರಾಗಿರುವುದರಿಂದ ತಾಲೂಕಿನಾದ್ಯಂತ ಕುಡಿಯುವ ನೀರಿಲ್ಲ. ಜಾನುವಾರಗಳಿಗೆ ಮೇವಿನ ಸಮಸ್ಯೆ ಇರುವುದರಿಂದ ಮೂಕ ಪ್ರಾಣಿಗಳ ರೋಧನೆ ಕೇಳದಂತಾಗಿದೆ. ಕೂಡಲೆ ಬರದ ಸಮಸ್ಯೆಗಳನ್ನ ಮಾತ್ರ ಸಭೆಯಲ್ಲಿ ಚರ್ಚಿಸಿ ಪರಿಹಾರ ಕುರಿತು ನಿರ್ಣಯ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಕುಡಿಯುವ ನೀರು ನಿರ್ವಹಣೆ ಇಲಾಖೆ ಕಿರಿಯ ಅಭಿಯಂತರ ನಾಯಕ ಮಾತನಾಡಿ, ತಾಲೂಕಿನ ಅನೇಕ ಗ್ರಾಮೀಣ ಭಾಗಗಳಲ್ಲಿ ಸುಮಾರು 700 ಅಡಿವರೆಗೆ ಬೋರ್‌ವೆಲ್‌ ಕೊರೆಸಿದರೂ ಸಹಿತ ನೀರು ಬೀಳುತ್ತಿಲ್ಲ. ಸುಮಾರು 28 ಬೋರ್‌ವೆಲ್‌ ಹಾಕಲಾಗಿದೆ. ಇದರಿಂದ ಶಾಶ್ವತ ಪರಿಹಾರ ಆಗಿಲ್ಲ. ಸದ್ಯ ಬೋರ್‌ವೆಲ್‌ ಕೊರೆಸುವುದು ಬಿಟ್ಟು ಟ್ಯಾಂಕರ್‌ ಮೂಲಕ ನೀರು ಹಾಕಲಾಗುತ್ತಿದೆ ಎಂದರು.

ಈ ವೇಳೆ ಸದಸ್ಯ ಸಿದ್ದಪ್ಪ ತಳವಾರ ಮಾತನಾಡಿ, ಟ್ಯಾಂಕರ್‌ ಮೂಲಕ ನೀರು ಹಾಕುತ್ತಿರುವುದು ಸರಿಯಾಗಿದೆ. ಆದರೆ ಟ್ರ್ಯಾಕ್ಟರ್‌ನವರು ವಿನಾಕಾರಣ ಸುಳ್ಳು ಹೇಳಿ ಹೆಚ್ಚುವರಿಯಾಗಿ ಬಿಲ್ಲು ಪಡೆಯುತ್ತಿದ್ದಾರೆ ಎಂದು ಆರೋಪಿಸಿದಾಗ ಮಧ್ಯ ಪ್ರವೇಶಿಸಿದ ಇಒ, ಸರಕಾರ ಈಗ ಜಿಪಿಎಸ್‌ ಕೂಡಿಸಿದೆ. ಯಾವುದೇ ಪ್ರಮಾದ ಆಗುವುದಿಲ್ಲ ಎಂದು ಹೇಳಿದರು.

ಅಂಗವಿಕಲರಿಗಾಗಿ ಸರಕಾರ ನೀಡಿರುವ ಅನುದಾನ ಎಷ್ಟು ಹಾಗೂ ತಾಪಂ ಸದಸ್ಯರ ಗಮನಕ್ಕೆ ತಾರದೆ ಏಕಾ ಏಕಿ ಫಲಾನುಭವಿಗಳ ಆಯ್ಕೆ ಯಾವುದೇ ಕಾರಣಕ್ಕೂ ಮಾಡಬಾರದು. ಸದಸ್ಯರ ಕ್ಷೇತ್ರಗಳಲ್ಲಿದ್ದ ಅಂಗವಿಕಲರು ನಮಗೆ ತ್ರಿಚಕ್ರ ವಾಹನ ಕೊಡಿ ಎಂದು ಅಂಗಲಾಚುತ್ತಿದ್ದಾರೆ. ಇನ್ನು ಮುಂದೆ ಪ್ರತಿ ಸದಸ್ಯರಿಗೆ ಅನುದಾನ ಒಡೆದು ಹಂಚಿಕೆ ಮಾಡಬೇಕು ಎಂದು ಅಗರಖೇಡ ತಾಪಂ ಸದಸ್ಯ ಅಣ್ಣಪ್ಪ ಬಿದರಕೋಟಿ ತಿಳಿಸಿದರು.

Advertisement

ರೇಷ್ಮೆ ಇಲಾಖೆಯಲ್ಲಿ ನಡೆದ ಅವ್ಯವಹಾರ ಕುರಿತು ಶೀಘ್ರ ತನಿಖೆಯಾಗಬೇಕು ಎಂದು ಸದಸ್ಯ ಗಣಪತಿ ಬಾಣಿಕೋಲ ಹಾಗೂ ರವಿ ಜಾಧವ ಸಭೆಯಲ್ಲಿ ಪಟ್ಟು ಹಿಡಿದರು. ಈ ಹಿಂದೆ ರೇಷ್ಮೆ ಇಲಾಖೆಗೆ ಹೋಗಿ ರೇಷ್ಮೆ ಶೆಡ್‌ ನಿರ್ಮಾಣ ಮಾಡುವುದಾಗಿ ನಾವು ಹೇಳಿದಾಗ ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಶೆಡ್‌ ನಿರ್ಮಿಸಬೇಕು ಎಂದು ಹೇಳಿರುವ ಅಧಿಕಾರಿ ಈಗ ಉತ್ತರ -ದಕ್ಷಿಣಕ್ಕೆ ಶೆಡ್ಡು ನಿರ್ಮಾಣ ಮಾಡಿದವರಿಗೆ ಅನುದಾನ ನೀಡಿದ್ದಾರೆ. ಹೀಗಾಗಿ ರೇಷ್ಮೆ ಇಲಾಖೆಯಲ್ಲಿ ಸಾವಿರಾರು ಕೋಟಿ ಅವ್ಯವಹಾರ ಆಗಿದೆ. 2013-14ನೇ ಸಾಲಿನಿಂದ ಇಲ್ಲಿವರೆಗೆ ತನಿಖೆ ಮಾಡಿ ಎಂದು ಒತ್ತಾಯಿಸಿದಾಗ ಹೀಗೇನಾದರೂ ನಡೆದಿದ್ದರೆ ಸೂಕ್ತ ಕ್ರಮ ಜರುಗಿಸುವದಾಗಿ ತಾಪಂ ಅಧಿಕಾರಿ ಹೇಳಿದರು.

ಪಶು ವೈದ್ಯಾಧಿಕಾರಿ ಸಿ.ಬಿ. ಕುಂಬಾರ ಸಭೆಯಲ್ಲಿ ತಮ್ಮ ಇಲಾಖೆ ಪ್ರಗತಿ ಹೇಳುತ್ತಿದಂತೆ ನೋಡಿ, ಕೂಡಲೇ ಮೇವು ಬ್ಯಾಂಕ್‌ ಪ್ರಾರಂಭಿಸಿ ಪುಣ್ಯ ಕಟ್ಟಿಕೊಳ್ಳಿ. ನಮಗೆ ಯಾವುದೇ ಅನುದಾನ ಬೇಕಾಗಿಲ್ಲ. ಜನ ಜಾನುವಾರಗಳಿಗೆ ಕುಡಿಯಲು ನೀರು ಜಾನುವಾರಗಳಿಗೆ ಮೇವು ವಿತರಿಸಿದರೆ ಸಾಕು ಎಂದು ತಾಪಂ ಸದಸ್ಯರಾದ ರಾಜು ಝಳಕಿ ಹಾಗೂ ರವಿ ಜಾಧವ ಅವಲತ್ತುಕೊಂಡರು.

ತಾಪಂ ಇಒ ಡಾ| ವಿಜಯಕುಮಾರ ಅಜೂರ, ತಾಪಂ ಯೋಜನಾಧಿಕಾರಿ ವಿಠuಲ ಹಳ್ಳಿಕರ, ಪಶು ವೈದ್ಯಾಧಿಕಾರಿ ಸಿ.ಬಿ. ಕುಂಬಾರ, ಹೆಸ್ಕಾಂ ಅಧಿಕಾರಿ ಮೇಡೆದಾರ, ಜಿಪಂ ಇಇ ರಾಜಕುಮಾರ ತೊರವಿ, ತೋಟಗಾರಿಕೆ ಅಧಿಕಾರಿ ಹಿರೇಮಠ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶರಣಬಸಪ್ಪ ಮ್ಯಾಗೇರಿ ಸೇರಿದಂತೆ ವಿವಿಧ ಇಲಾಖೆ ತಾಲೂಕು ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next