Advertisement

ಸದಸ್ಯರಿಗೆ ಅಧಿಕಾರವಿಲ್ಲ, ಜನರ ಸಮಸ್ಯೆ ಕೇಳ್ಳೋರಿಲ್ಲ

08:43 PM Dec 11, 2019 | Lakshmi GovindaRaj |

ಪಿರಿಯಾಪಟ್ಟಣ: ಪುರಸಭೆ ಸಿಬ್ಬಂದಿ ಕೊರತೆ, ಆಡಳಿತ ಮಂಡಳಿ ರಚನೆಯಾಗದಿರುವುದು ಹಾಗೂ ಲಂಚದ ಹಾವಳಿಯಿಂದ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗಿ ಪ್ರತಿದಿನ ಪರದಾಡುವಂತಾಗಿದೆ. ಪುರಸಭೆ ಸದಸ್ಯರು ಆಯ್ಕೆಯಾಗಿ ಒಂದೂವರೆ ವರ್ಷ ಕಳೆದರೂ ಮೀಸಲಾತಿ ವಿವಾದದಿಂದ ಆಡಳಿತ ಮಂಡಳಿ ರಚನೆಯಾಗಿಲ್ಲ. ಹೀಗಾಗಿ ಜನಪ್ರತಿನಿಧಿಗಳಿಗೆ ಅಧಿಕಾರವಿಲ್ಲದಂತಾಗಿದೆ.

Advertisement

ಪುರಸಭೆ ಈ ಹಿಂದೆ ಪಟ್ಟಣ ಪಂಚಾಯಿತಿಯಾಗಿತ್ತು. ಇದು 2016ರಲ್ಲಿ ಪುರಸಭೆಯಾಗಿ ಮೇಲ್ದರ್ಜೆಗೇರಿ, ಅಬ್ಬೂರು, ರಾಜಾಪುರ, ಹರವೆ ಮಲ್ಲರಾಜಪಟ್ಟಣ, ಕಂಠಾಪುರ ಹಾಗೂ ಮೆಲ್ಲಹಳ್ಳಿ ಗ್ರಾಮಗಳ ಸೇರ್ಪಡೆಯಾಗಿ ಪುರಸಭೆಯಾಗಿ ಮಾರ್ಪಟ್ಟಿದೆ. ಪಟ್ಟಣ ಪಂಚಾಯಿತಿಯಾಗಿ¨ªಾಗ 15 ವಾರ್ಡ್‌ಗಳಿದ್ದ ಈ ಪ್ರದೇಶ, ಇಂದು 23 ವಾರ್ಡ್‌ಗಳನ್ನು ಹೊಂದಿರುವುದರೊಂದಿಗೆ ವಿಸ್ತೀರ್ಣದಲ್ಲಿಯೂ ದೊಡ್ಡದಾಗಿ ತನ್ನ ಕಾರ್ಯಕ್ಷೇತ್ರವನ್ನು ಹೆಚ್ಚಾಗಿಸಿಕೊಂಡಿದೆ. ಇಂದು ಪಿರಿಯಾಪಟ್ಟಣ ನಗರ ಜನಸಂಖ್ಯೆ 20,926 ಹೊಂದಿದೆ.

ಅಭಿವೃದ್ಧಿ ಕುಂಠಿತ: ಪುರಸಭೆಗೆ ಕಳೆದ 2018 ಆಗಸ್ಟ್‌ 31ರಲ್ಲಿ ಚುನಾವಣೆ ನಡೆದು ನೂತನ ಸದಸ್ಯರು ಆಯ್ಕೆಯಾದರೂ ಮೀಸಲಾತಿ ವಿವಾದ ನ್ಯಾಯಾಲಯದ ಮೆಟ್ಟಿಲೇರಿ ಹೊಸ ಆಡಳಿತ ಮಂಡಳಿ ಆಯ್ಕೆಯಾಗದೆ ತೊಡಕಾಗಿತ್ತು. ಸಾರ್ವಜನಿಕರ ಕೆಲಸಗಳು ವಿಳಂಬವಾಗಲು ಹಾಗೂ ಅಭಿವೃದ್ಧಿ ಕಾರ್ಯಗಳು ಹಿನ್ನಡೆಯಾಗಲು ಇದು ಪ್ರಮುಖ ಕಾರಣವಾಗಿದೆ.

ಲಂಚ ಕೊಟ್ಟರೆ ಕೆಲಸ: ಮತ್ತೂಂದೆಡೆ ಪಟ್ಟಣದ ನಾಗರಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಪುರಸಭೆಗೆ ಬರುತ್ತಾರೆ. ಆದರೆ, ಇಲ್ಲಿ ಸಮರ್ಪಕ ಸಿಬ್ಬಂದಿ ಕೊರತೆ ಹಾಗೂ ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ನೌಕರರು ಸಾರ್ವಜನಿಕರಿಗೆ ಇಲ್ಲದ ಸಬಾಬು ಹೇಳಿಕೊಂಡು ವಿಳಂಬ ಧೋರಣೆ ತೋರುತ್ತ ಹಣ ನೀಡಿದವರಿಗೆ ಮಾತ್ರ ಕೆಲಸಕಾರ್ಯಗಳನ್ನು ಮಾಡಿಕೊಡುತ್ತಾರೆ. ಇಲ್ಲದಿದ್ದರೆ ಅಲೆದಾಡಿಸುವಂತೆ ಮಾಡುತ್ತಾರೆ.

95 ಸಿಬ್ಬಂದಿ ಪೈಕಿ 25 ಮಂದಿ ಮಾತ್ರ: ಇಲ್ಲಿನ ಪುರಸಭೆಗೆ ಜನ ಸಾಮಾನ್ಯರ ಹಾಗೂ ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸಲು ಅಗತ್ಯವಿರುವ ಸಿಬ್ಬಂದಿ ಸಂಖ್ಯೆ 95. ಆದರೆ, ಇಲ್ಲಿ ಇರುವ ಸಿಬ್ಬಂದಿ 25 ಮಂದಿ ಮಾತ್ರ. ಪುರಸಭಾ ಮುಖ್ಯಾಧಿಕಾರಿ, ಪರಿಸರ ಅಭಿಯಂತರ, ಸಮುದಾಯ ಸಂಘಟನಾಧಿಕಾರಿ, ವ್ಯವಸ್ಥಾಪಕ, ಕಿರಿಯ ಅಭಿಯಂತರ, ಕಂದಾಯಾಧಿಕಾರಿ ಬಿಟ್ಟರೆ ಇನ್ಯಾರು ಕಾಯಂ ನೌಕರರಲ್ಲ. ಇಲ್ಲಿ 70 ಸಿಬ್ಬಂದಿ ಕೊರತೆ ಇದ್ದು, ಪುರಸಭೆಗೆ ಸಮರ್ಪಕವಾಗಿ ನಿರ್ವಹಿಸಲು 95 ಹುದ್ದೆಗಳ ಅವಶ್ಯಕತೆ ಇದೆ. ಆದರೆ, ಇಲ್ಲಿ ಸರ್ಕಾರದಿಂದ ಮತ್ತು ಜಿಲ್ಲಾಧಿಕಾರಿಗಳಿಂದ ನೇಮಕವಾಗಿರುವುದು ಕೇವಲ 25 ಮಾತ್ರ. ಇನ್ನು 70 ಹುದ್ದೆಗಳು ಕಾಲಿ ಇವೆ. ಇದನ್ನು ತುಂಬಲು ಸರ್ಕಾರ ಮೀನಮೇಷ ಎಣಿಸುತ್ತಿದೆ. ಹೀಗಾಗಿ ಕೆಲಸ ಕಾರ್ಯಗಳ ಸಕಾಲದಲ್ಲಿ ಆಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ನಡೆಯದ ಸಾಮಾನ್ಯ ಸಭೆ: ಪುರಸಭೆಯಲ್ಲಿ ಪ್ರಮುಖವಾಗಿ ಹಿರಿಯ ಮತ್ತು ಕಿರಿಯ ಅಭಿಯಂತರರು ಇಲ್ಲದ ಕಾರಣ ನೀರು ಸರಬರಾಜು, ಬೀದಿದೀಪಗಳ ನಿರ್ವಹಣೆ, ಚರಂಡಿ ಮತ್ತು ರಸ್ತೆ ನಿರ್ಮಾಣ. ಪಟ್ಟಣದ ಅಭಿವೃದ್ಧಿ, ಅನುದಾನ ಬಳಕೆ, ಸರ್ಕಾರದಿಂದ ಮಂಜೂರಾಗುವ ಕಾಮಗಾರಿ ತೆಗೆದುಕೊಳ್ಳುವಲ್ಲಿ ಎದುರಾದ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಪ್ರತಿ ತಿಂಗಳು ಸಾಮಾನ್ಯ ಸಭೆ ನಡೆಸಬೇಕು ಎನ್ನುವ ನಿಯಮವಿದ್ದರೂ ಅದರ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ.

ಕಸ ವಿಲೇವಾರಿ ಸಮಸ್ಯೆ: ಪಿರಿಯಾಪಟ್ಟಣದ ನಗರ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರ ಸಮಸ್ಯೆಯಿದ್ದು, ಪ್ರತಿದಿನ ಪಟ್ಟವನ್ನು ಸ್ವಚ್ಛ ಮಾಡಲು 33 ಪೌರ ಕಾರ್ಮಿಕರ ಅಗತ್ಯವಿದೆ. ಆದರೆ, ಇಲ್ಲಿರುವುದು ಕೇವಲ 13 ಮಾತ್ರ. ಇದರಲ್ಲಿ 6 ಮಂದಿ ಕಾಯಂ ನೌಕರರಾದರೆ, 7 ಪೌರ ಕಾರ್ಮಿಕರನನು ಜಿಲ್ಲಾಧಿಕಾರಿಗಳು ಹೊರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿದ್ದಾರೆ. ಪಟ್ಟಣದಲ್ಲಿ ಪ್ರತಿದಿನ ಕಸ ವಿಲೇವಾರಿ, ಕುಡಿಯುವ ನೀರು, ಬೀದಿ ದೀಪಗಳ ಅಳವಡಿಕೆ, ಶೌಚಾಲಯ ವ್ಯವಸ್ಥೆ ಸೇರಿದಂತೆ ಮತ್ತಿತರ ಕೆಲಸ ಸಮರ್ಪಕವಾಗಿ ನಡೆಯಬೇಕಾದರೆ 700 ಜನಸಂಖ್ಯೆಗೆ ಒಬ್ಬ ಪೌರ ಕಾರ್ಮಿರಂತೆ ಯೋಚಿಸಿದರೂ ಇನ್ನೂ 20 ಪೌರ ಕಾರ್ಮಿಕರ ಕೊರತೆ ಇದೆ.

ನೀರಿನ ಸಮಸ್ಯೆ: ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿರುವುದುರಿಂದ ಅನೇಕ ಬಡಾವಣೆಗಳಲ್ಲಿ ಪೈಪ್‌ಗ್ಳು ಒಡೆದು ಹೋಗಿ ನೀರಿಗಾಗಿ ಜನತೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿಷೇಧಿತ ಪ್ಲಾಸ್ಟಿಕ್‌ಗಳ ಬಳಕೆಮಿತಿ ಮೀರಿದ್ದು, ಅಂಗಡಿಗಳು, ಹೋಟೆಲ್‌, ಫ‌ುಟ್‌ಪಾತ್‌ಗಳಲ್ಲಿ ಎಲ್ಲೆಂದರಲ್ಲಿ ರಾಶಿ ರಾಶಿ ಪ್ಲಾಸ್ಟಿಕ್‌ ತ್ಯಾಜ್ಯ ಬಿದ್ದಿರುತ್ತದೆ. ಹೀಗಾಗಿ ಪಟ್ಟಣವು ಸಮಸ್ಯೆಗಳ ಆಗರವಾಗಿದ್ದು, ಜನರು ಪರದಾಡುವುದು ಸಾಮಾನ್ಯವಾಗಿದೆ. ಹೀಗಾಗಿ ಕೂಡಲೇ ಸಂಬಂಧಪಟ್ಟ ಇಲಾಖೆಗಳ ಮೇಲಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ರಮ ಕೈಗೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸ್ಥಳೀಯ ನಿವಾಸಿ ಎನ್‌.ರವಿಕುಮಾರ್‌ ಸೇರಿದಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಜನಪ್ರತಿನಿಧಿಗಳ ನಿರ್ಲಕ್ಷ್ಯ: ಪುರಸಭೆ ಚುನಾವಣೆ ನಡೆದು ಒಂದೂವರೆ ವರ್ಷ ಕಳೆಯುತ್ತಿದ್ದರೂ ಮೀಸಲಾತಿ ವಿವಾದದಿಂದ ಇಲ್ಲಿನ ಪುರಸಭಾ ಸದಸ್ಯರಿಗೆ ಅಧಿಕಾರ ಸಿಕ್ಕಿಲ್ಲ, ಹೊಸ ಆಡಳಿತ ಮಂಡಳಿ ರಚನೆಯಾಗಿಲ್ಲ ಎಂಬ ನೆಪದಲ್ಲಿ ಕೆಲವು ಜನಪ್ರತಿನಿಧಿಗಳು ಪುರಸಭೆಯತ್ತ ಸುಳಿಯುತ್ತಿಲ್ಲ. ಇದರಿಂದ ಬಹುತೇಕ ವಾರ್ಡ್‌ ಗಳಲ್ಲಿ ಕಸ, ವಿದ್ಯುತ್‌ ದೀಪ, ನೀರಿನ ಸಮಸ್ಯೆಗಳು ಕಂಡುಬರುತ್ತಿವೆ. ನಮ್ಮ ಸಮಸ್ಯೆಯನ್ನು ಆಲಿಸಿ ಪುರಸಭೆ ಸಿಬ್ಬಂದಿಗಳಿಗೆ ಚುರುಕು ಮುಟ್ಟಿಸಬೇಕಾದ ಜನಪ್ರತಿನಿಧಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಪೌರಕಾರ್ಮಿಕರ ನಿಯೋಜಿಸಿದರೆ ಹಲವು ಸಮಸ್ಯೆಗಳಿಗೆ ಪರಿಹಾರ: ಪುರಸಭೆಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯ ಮಾಡಿಕೊಡಲು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇವೆ. ನಮಗೆ ಸಾರ್ವಜನಿಕರ ಸಮಸ್ಯೆ ಆಲಿಸಲು ಹಾಗೂ ಪಟ್ಟಣದಲ್ಲಿ ಅಭಿವೃದ್ಧಿ ಕೆಲಸ ಮಾಡಲು 95 ಸಿಬ್ಬಂದಿ ಅಗತ್ಯವಿದೆ. ಆದರೆ, ನಮ್ಮಿಲ್ಲಿರುವುದು 25 ಸಿಬ್ಬಂದಿ ಮಾತ್ರ. ಇದರಲ್ಲಿ ಪೌರ ಕಾರ್ಮಿಕರು ಹಾಗೂ ಎಂಜಿನಿಯರ್‌ಗಳ ಕೊರತೆ ಹೆಚ್ಚಾಗಿರುವುದರಿಂದ ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗುತ್ತಿದೆ. ಜಿಲ್ಲಾಧಿಕಾರಿಗಳಿಗೆ ಪೌರ ಕಾರ್ಮಿಕರನ್ನು ನೇಮಕ ಮಾಡುವ ಅಧಿಕಾರವಿದ್ದು ಅವರು ಹೆಚ್ಚಿನ ಪೌರಕಾರ್ಮಿಕರನ್ನು ನಿಯೋಜಿಸಿದರೆ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್‌ ತಿಳಿಸಿದ್ದಾರೆ.

ಪುರಸಭಾ ಸದಸ್ಯರಾಗಿ ನಾವು ಆಯ್ಕೆಯಾಗಿ ಒಂದೂವರೆ ವರ್ಷ ಕಳೆದರೂ ಮೀಸಲಾತಿ ಗೊಂದಲದಿಂದ ಆಡಳಿತ ಮಂಡಳಿ ರಚನೆಯಾಗಿಲ್ಲ. ಇದರಿಂದ ವಾರ್ಡ್‌ಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಮತ್ತು ಪುರಸಭೆಯಲ್ಲಿ ಪೌರಕಾರಮಿಕರ ಸಮಸ್ಯೆಯಿಂದ ಸ್ವಚ್ಛತೆ ಕಾರ್ಯ ನಡೆಸಲು ಸಾಧ್ಯವಾಗುತ್ತಿಲ್ಲ.
-ಅಬ್ದುಲ್‌ ಹರ್ಷಾದ್‌, ಪುರಸಭಾ ಸದಸ್ಯ

ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕ ಮಾಡಲು ಸರ್ಕಾರಕ್ಕೆ ಇಚ್ಛಾಶಕ್ತಿಯ ಕೊರತೆಯಿದ್ದು, ಸ್ಥಳೀಯ ಸಂಘ ಸಂಸ್ಥೆಗಳನ್ನು ಕಡೆಗಣಿಸಲಾಗುತ್ತಿದೆ. ಕ್ಷೇತ್ರದ ಶಾಸಕರು ಪುರಸಭೆಗೆ ಅಗತ್ಯ ಸಿಬ್ಬಂದಿ ನೇಮಕ ಮಾಡಲು ಗಮನ ಹರಿಸಬೇಕು.
-ಮಂಜುನಾಥ್‌ ಸಿಂಗ್‌, ಪುರಸಭಾ ಸದಸ್ಯ

* ಪಿ.ಎನ್‌.ದೇವೇಗೌಡ

Advertisement

Udayavani is now on Telegram. Click here to join our channel and stay updated with the latest news.

Next