Advertisement

ಬುಮ್ರಾ ಬಿರುಗಾಳಿ: ಕಾಂಗರೂ ಕಂಗಾಲು

12:30 AM Dec 29, 2018 | Team Udayavani |

ಮೆಲ್ಬರ್ನ್: ಪೇಸ್‌ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಬೌಲಿಂಗ್‌ ದಾಳಿಗೆ ತತ್ತರಿಸಿದ ಆತಿಥೇಯ ಆಸ್ಟ್ರೇಲಿಯ ಮೆಲ್ಬರ್ನ್ ಟೆಸ್ಟ್‌ ಪಂದ್ಯದ 3ನೇ ದಿನದಾಟದಲ್ಲಿ ಬುಡ ಸಮೇತ ಉರುಳಿ ಬಿದ್ದಿದೆ. ಬಳಿಕ ಭಾರತ ಕೂಡ ಕುಸಿದರೂ ಆತಂಕಪಡಬೇಕಾದ ಸ್ಥಿತಿಯಲ್ಲೇನೂ ಇಲ್ಲ. ಒಟ್ಟು 346 ರನ್ನುಗಳ ಮುನ್ನಡೆಯಲ್ಲಿರುವುದರಿಂದ ಕೊಹ್ಲಿ ಪಡೆ ಗೆಲುವಿನ ಹಾದಿಯಲ್ಲಿ ಸಾಗುತ್ತಿರುವುದು ನಿಚ್ಚಳಗೊಂಡಿದೆ.

Advertisement

ಫಾಲೋಆನ್‌ ರಿಯಾಯಿತಿ
ಭಾರತದ 443 ರನ್ನುಗಳ ಭಾರೀ ಮೊತ್ತಕ್ಕೆ ಜವಾಬಾಗಿ ವಿಕೆಟ್‌ ನಷ್ಟವಿಲ್ಲದೆ 8 ರನ್‌ ಮಾಡಿದ್ದ ಆಸ್ಟ್ರೇಲಿಯ, ಶುಕ್ರವಾರ ಬುಮ್ರಾ ಬೌಲಿಂಗಿಗೆ ಉತ್ತರಿಸಲು ವಿಫ‌ಲವಾಗಿ 151 ರನ್ನುಗಳಿಗೆ ಕುಸಿಯಿತು. 292 ರನ್ನುಗಳ ಬೃಹತ್‌ ಮುನ್ನಡೆ ಪಡೆದರೂ ಟಿಮ್‌ ಪೇನ್‌ ಪಡೆಗೆ ಫಾಲೋಆನ್‌ ರಿಯಾಯಿತಿ ನೀಡಿದ ಭಾರತ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿತು. ಆಗ ವೇಗಿ ಪ್ಯಾಟ್‌ ಕಮಿನ್ಸ್‌ ಪ್ರವಾಸಿಗರಿಗೆ ಕಂಟಕವಾಗಿ ಕಾಡಿದರು. ಕೊಹ್ಲಿ ಬಳಗ 3ನೇ ದಿನದಾಟದ ಅಂತ್ಯಕ್ಕೆ 54 ರನ್ನಿಗೆ 5 ವಿಕೆಟ್‌ ಉದುರಿಸಿಕೊಂಡಿದೆ. ಹೀಗೆ 15 ವಿಕೆಟ್‌ಗಳ ಪತನಕ್ಕೆ 3ನೇ ದಿನದಾಟ ಸಾಕ್ಷಿಯಾಯಿತು. ಬುಮ್ರಾ 33ಕ್ಕೆ 6 ವಿಕೆಟ್‌ ಉಡಾಯಿಸಿ ಮಿಂಚಿದರೆ, ಆತಿಥೇಯ ತಂಡದ ಕಮಿನ್ಸ್‌ 10 ರನ್ನಿಗೆ 4 ವಿಕೆಟ್‌ ಕಿತ್ತರು. ಪೂಜಾರ, ಕೊಹ್ಲಿ ಮತ್ತು ರಹಾನೆ ವಿಕೆಟ್‌ಗಳನ್ನು ಕೇವಲ 6 ಎಸೆತಗಳ ಅಂತರದಲ್ಲಿ ಕಿತ್ತದ್ದು ಕಮಿನ್ಸ್‌ ಸಾಹಸವೆನಿಸಿತು.

ಅಗರ್ವಾಲ್‌ ಅಚಲ
ಭಾರತದ ದ್ವಿತೀಯ ಸರದಿಯಲ್ಲಿ ಪಟಪಟನೆ ವಿಕೆಟ್‌ಗಳು ಬೀಳುತ್ತಿದ್ದರೂ ಚೊಚ್ಚಲ ಟೆಸ್ಟ್‌ ಆಡುತ್ತಿರುವ ಆರಂಭಕಾರ ಮಾಯಾಂಕ್‌ ಅಗರ್ವಾಲ್‌ ಮಾತ್ರ ಬಂಡೆಯಂತೆ ನಿಂತಿದ್ದಾರೆ. 79 ಎಸೆತಗಳನ್ನು ಅಮೋಘ ರೀತಿಯಲ್ಲಿ ನಿಭಾಯಿಸಿರುವ ಅವರು 4 ಬೌಂಡರಿ ನೆರವಿನಿಂದ 28 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇವರೊಂದಿಗೆ 6 ರನ್‌ ಗಳಿಸಿರುವ ರಿಷಬ್‌ ಪಂತ್‌ ಇದ್ದಾರೆ. ವಿಹಾರಿ (45 ಎಸೆತಗಳಿಂದ 13 ರನ್‌), ಪೂಜಾರ (0), ಕೊಹ್ಲಿ (0), ರಹಾನೆ (1) ಮತ್ತು ರೋಹಿತ್‌ ಶರ್ಮ (5) ಈಗಾಗಲೇ ಆಟ ಮುಗಿಸಿ ತೆರಳಿದ್ದಾರೆ. ಉಳಿದ 5 ವಿಕೆಟ್‌ಗಳಿಂದ ಶನಿವಾರದ ಮೊದಲ ಅವಧಿಯನ್ನು ಯಶಸ್ವಿಯಾಗಿ ನಿಭಾಯಿಸಿ 60ರಿಂದ 70 ರನ್‌ ಮಾಡಿದರೂ ಭಾರತಕ್ಕೆ ಅದು ಬಂಪರ್‌ ಆಗಿ ಪರಿಣಮಿಸಲಿದೆ. ಆಗ ಲೀಡ್‌ 400ರ ಗಡಿ ದಾಟುವುದರಿಂದ, ಅಂತಿಮ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ಮತ್ತಷ್ಟು ಕಠಿನವಾಗಿ ಪರಿಣಮಿಸುವುದರಿಂದ ಭಾರತದ ಜಯಭೇರಿ ಮೊಳಗುವುದನ್ನು ಧಾರಾಳವಾಗಿ ನಿರೀಕ್ಷಿಸಬಹುದು. 

ಬೂಂ ಬೂಂ ಬುಮ್ರಾ
ಸ್ಕೋರ್‌ 24 ರನ್‌ ಆದಾಗ ಫಿಂಚ್‌ ವಿಕೆಟ್‌ ಕಿತ್ತ ಇಶಾಂತ್‌ ಶರ್ಮ ಕಾಂಗರೂ ಕುಸಿತಕ್ಕೆ ಮುಹೂರ್ತವಿರಿಸಿದರು. ಮತ್ತೂಬ್ಬ ಓಪನರ್‌ ಹ್ಯಾರಿಸ್‌ ಅವರನ್ನು ಪೆವಿಲಿಯನ್ನಿಗೆ ಅಟ್ಟಿದ ಬುಮ್ರಾ ವಿಕೆಟ್‌ ಬೇಟೆ ಆರಂಭಿಸಿದರು. ಸ್ಕೋರ್‌ 53ಕ್ಕೆ ಏರಿದಾಗ ಖ್ವಾಜಾ ಅವರನ್ನು ಜಡೇಜ ಪೆವಿಲಿಯನ್ನಿಗೆ ಅಟ್ಟಿದರು. ಶಾನ್‌ ಮಾರ್ಷ್‌ ಮತ್ತು ಹೆಡ್‌ ಅವರನ್ನು 3 ರನ್‌ ಅಂತರದಲ್ಲಿ ಉರುಳಿಸಿದ ಬುಮ್ರಾ ಭಾರೀ ಅಪಾಯಕಾರಿಯಾಗಿ ಗೋಚರಿಸಿದರು. ಚಹಾ ವಿರಾಮದ ವೇಳೆ 145ಕ್ಕೆ 7 ವಿಕೆಟ್‌ ಉರುಳಿಸಿಕೊಂಡ ಆಸೀಸ್‌ ತೀವ್ರ ಸಂಕಟದಲ್ಲಿತ್ತು. 

ಟೀ ಕಳೆದು ನಾಲ್ಕೇ ಓವರ್‌ಗಳಲ್ಲಿ ಆಸ್ಟ್ರೇಲಿಯದ ಉಳಿದ ಮೂರೂ ವಿಕೆಟ್‌ಗಳನ್ನು ಕಿತ್ತ ಬುಮ್ರಾ ಭಾರತವನ್ನು ಹೋರಾಟಕ್ಕೆ ಅಣಿಗೊಳಿಸಿದರು. ಬುಮ್ರಾ ಸಾಧನೆ 33ಕ್ಕೆ 6 ವಿಕೆಟ್‌. ಇದು ಮೆಲ್ಬರ್ನ್ ಅಂಗಳದಲ್ಲಿ ಭಾರತೀಯನ ಅತ್ಯುತ್ತಮ ಬೌಲಿಂಗ್‌ ಸಾಧನೆಯಾಗಿದೆ. 1978ರ ಟೆಸ್ಟ್‌ನಲ್ಲಿ ಬಿ.ಎಸ್‌. ಚಂದ್ರಶೇಖರ್‌ ಎರಡೂ ಇನ್ನಿಂಗ್ಸ್‌ಗಳಲ್ಲಿ 52ಕ್ಕೆ 6 ವಿಕೆಟ್‌ ಉರುಳಿಸಿದ್ದು ಈವರೆಗಿನ ದಾಖಲೆಯಾಗಿತ್ತು.

Advertisement

ಮಾಯಾಂಕ್‌ಗೆ ಅಪಹಾಸ್ಯ;ಕೀಫ್ ಕ್ಷಮೆ
ಮೆಲ್ಬರ್ನ್ ಟೆಸ್ಟ್‌ ಪಂದ್ಯದ ವೇಳೆ ಮಾಯಾಂಕ್‌ ಅಗರ್ವಾಲ್‌ ಅವರನ್ನು ಆಸ್ಟ್ರೇಲಿಯದ ಕ್ರಿಕೆಟ್‌ ಕಮೆಂಟೇಟರ್‌ ಕೆರ್ರಿ ಓ’ಕೀಫ್ ಬಹಿರಂಗವಾಗಿ ಅಪಹಾಸ್ಯ ಮಾಡಿದ್ದರು. ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಕೀಫ್ ಕ್ಷಮೆ ಯಾಚಿಸಿದ್ದಾರೆ. ರಣಜಿ ಕ್ರಿಕೆಟ್‌ನಲ್ಲಿ ತ್ರಿಶತಕ ಹೊಡೆದಿದ್ದ ಮಾಯಾಂಕ್‌ ಯಾವುದೋ ಹೊಟೇಲ್‌ನ ವೇಟರ್‌ಗಳ ಎದುರು ಹೊಡೆದಿರಬೇಕು ಎಂದು ಟಿವಿ ವಿಶ್ಲೇಷಣೆಯ ನೇರ ಪ್ರಸಾರದಲ್ಲಿ ಜರೆದಿದ್ದರು. ಕೀಫ್ ಅವರ ಈ ಟೀಕೆಯನ್ನು ಅನೇಕರು ಖಂಡಿಸಿದ್ದರು. ಬೆನ್ನಲ್ಲೇ ಮಾಯಾಂಕ್‌ ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧ ಶತಕ ಸಿಡಿಸಿದ್ದರಿಂದ ಕೀಫ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕಾಕಾರರ ಸಂಖ್ಯೆಯೂ ಹೆಚ್ಚಾಯಿತು. “ನನ್ನ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮಾಯಾಂಕ್‌ ಗಳಿಸಿದ ರನ್‌ ಬಗ್ಗೆ ಮಾತನಾಡಿದಾಗ ತಪ್ಪಾಗಿದೆ. ರಣಜಿ ಕ್ರಿಕೆಟ್‌ ಗುಣಮಟ್ಟ ಕಳಪೆ ಎನ್ನುವ ಉದ್ದೇಶ ನನ್ನದಾಗಿರಲಿಲ್ಲ. ಮಾಯಾಂಕ್‌ ಸಾಕಷ್ಟು ರನ್‌ ಗಳಿಸಿದ್ದಾರೆ…’ ಎಂದು ಕೀಫ್ ಟ್ವೀಟ್‌ ಮಾಡಿದ್ದಾರೆ.

ರಿವರ್ಸ್‌ ಸ್ವಿಂಗ್‌ ಯೋಜನೆ  
ಮೆಲ್ಬರ್ನ್ ಟ್ರ್ಯಾಕ್‌  ರಿವರ್ಸ್‌ ಸ್ವಿಂಗ್‌ಗೆ ಹೆಚ್ಚಿನ ನೆರವು ನೀಡುತ್ತಿತ್ತು. ರಣಜಿ ಟ್ರೋಫಿಯಂಥ ಪ್ರಥಮ ದರ್ಜೆ ಪಂದ್ಯಗಳ ವೇಳೆ ನಿಧಾನ ಗತಿಯ ಪಿಚ್‌ಗಳಲ್ಲಿ ರಿವರ್ಸ್‌ ಸ್ವಿಂಗ್‌ ನಡೆಸುತ್ತಿದ್ದುರಿಂದ ಇಲ್ಲಿಯೂ ಈ ಯೋಜನೆ ಫ‌ಲ ಕೊಟ್ಟಿತು.
ಜಸ್‌ಪ್ರೀತ್‌ ಬುಮ್ರಾ

ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌ 7ಕ್ಕೆ 443 ಡಿಕ್ಲೇರ್‌
ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್‌

ಮಾರ್ಕಸ್‌ ಹ್ಯಾರಿಸ್‌    ಸಿ ಇಶಾಂತ್‌ ಬಿ ಬುಮ್ರಾ    22
ಆರನ್‌ ಫಿಂಚ್‌    ಸಿ ಅಗರ್ವಾಲ್‌ ಬಿ ಇಶಾಂತ್‌    8
ಉಸ್ಮಾನ್‌ ಖ್ವಾಜಾ    ಸಿ ಅಗರ್ವಾಲ್‌ ಬಿ ಜಡೇಜ    21
ಶಾನ್‌ ಮಾರ್ಷ್‌    ಎಲ್‌ಬಿಡಬ್ಲ್ಯು ಬುಮ್ರಾ    19
ಟ್ರ್ಯಾವಿಸ್‌ ಹೆಡ್‌    ಬಿ ಬುಮ್ರಾ    20
ಮಿಚೆಲ್‌ ಮಾರ್ಷ್‌    ಸಿ ರಹಾನೆ ಬಿ ಜಡೇಜ    9
ಟಿಮ್‌ ಪೇನ್‌    ಸಿ ಪಂತ್‌ ಬಿ ಬುಮ್ರಾ    22
ಪ್ಯಾಟ್‌ ಕಮಿನ್ಸ್‌    ಬಿ ಶಮಿ    17
ಮಿಚೆಲ್‌ ಸ್ಟಾರ್ಕ್‌    ಔಟಾಗದೆ    7
ನಥನ್‌ ಲಿಯೋನ್‌    ಎಲ್‌ಬಿಡಬ್ಲ್ಯು ಬುಮ್ರಾ    0
ಜೋಶ್‌ ಹ್ಯಾಝಲ್‌ವುಡ್‌    ಬಿ ಬುಮ್ರಾ    0

ಇತರ        6
ಒಟ್ಟು  (ಆಲೌಟ್‌)        151
ವಿಕೆಟ್‌ ಪತನ: 1-24, 2-36, 3-53, 4-89, 5-92, 6-102, 7-138, 8-147, 9-151.

ಬೌಲಿಂಗ್‌:
ಇಶಾಂತ್‌ ಶರ್ಮ        13-2-41-1
ಜಸ್‌ಪ್ರೀತ್‌ ಬುಮ್ರಾ        15.5-4-33-6
ರವೀಂದ್ರ ಜಡೇಜ        25-8-45-2
ಮೊಹಮ್ಮದ್‌ ಶಮಿ        10-2-27-1
ಹನುಮ ವಿಹಾರಿ        3-2-1-0

ಭಾರತ ದ್ವಿತೀಯ ಇನ್ನಿಂಗ್ಸ್‌
ಹನುಮ ವಿಹಾರಿ    ಸಿ ಖ್ವಾಜಾ ಬಿ ಕಮಿನ್ಸ್‌    13
ಮಾಯಾಂಕ್‌ ಅಗರ್ವಾಲ್‌    ಬ್ಯಾಟಿಂಗ್‌    28
ಚೇತೇಶ್ವರ್‌ ಪೂಜಾರ    ಸಿ ಹ್ಯಾರಿಸ್‌ ಬಿ ಕಮಿನ್ಸ್‌    0
ವಿರಾಟ್‌ ಕೊಹ್ಲಿ    ಸಿ ಹ್ಯಾರಿಸ್‌ ಬಿ ಕಮಿನ್ಸ್‌    0
ಅಜಿಂಕ್ಯ ರಹಾನೆ    ಸಿ ಪೇನ್‌ ಬಿ ಕಮಿನ್ಸ್‌    1
ರೋಹಿತ್‌ ಶರ್ಮ    ಸಿ ಎಸ್‌.ಮಾರ್ಷ್‌ ಬಿ ಹ್ಯಾಝಲ್‌ವುಡ್‌    5
ರಿಷಬ್‌ ಪಂತ್‌    ಬ್ಯಾಟಿಂಗ್‌    6

ಇತರ        1
ಒಟ್ಟು  (5 ವಿಕೆಟಿಗೆ)        54
ವಿಕೆಟ್‌ ಪತನ: 1-28, 2-28, 3-28, 4-32, 5-44.

ಬೌಲಿಂಗ್‌:
ಮಿಚೆಲ್‌ ಸ್ಟಾರ್ಕ್‌        3-1-11-0
ಜೋಶ್‌ ಹ್ಯಾಝಲ್‌ವುಡ್‌        8-3-13-1
ನಥನ್‌ ಲಿಯೋನ್‌        10-1-19-0
ಪ್ಯಾಟ್‌ ಕಮಿನ್ಸ್‌        6-2-10-4

ಎಕ್ಸ್‌ಟ್ರಾ ಇನ್ನಿಂಗ್ಸ್‌
 ಬುಮ್ರಾ 3 ಸಲ ಇನ್ನಿಂಗ್ಸ್‌ ಒಂದರಲ್ಲಿ 5 ಪ್ಲಸ್‌ ವಿಕೆಟ್‌ ಕಿತ್ತರು. ಇದೆಲ್ಲವೂ ಈ ವರ್ಷದ ಸಾಧನೆಯಾಗಿದ್ದು, 3 ವಿವಿಧ ದೇಶಗಳಲ್ಲಿ ಈ ಬೌಲಿಂಗ್‌ ಪ್ರದರ್ಶನವಿತ್ತರು (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯ).

  ಬುಮ್ರಾ ಮೇಲಿನ 3 ದೇಶಗಳಲ್ಲಿ, ಕ್ಯಾಲೆಂಡರ್‌ ವರ್ಷವೊಂದರಲ್ಲಿ 5 ಪ್ಲಸ್‌ ವಿಕೆಟ್‌ ಕಿತ್ತ ಮೊದಲ ವಿದೇಶಿ ಬೌಲರ್‌.

  ಬುಮ್ರಾ ಆಸ್ಟ್ರೇಲಿಯದಲ್ಲಿ ನಡೆದ ಟೆಸ್ಟ್‌ ಇನ್ನಿಂಗ್ಸ್‌ ಒಂದರಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶಿಸಿದ ಭಾರತದ 2ನೇ ಪೇಸ್‌ ಬೌಲರ್‌ (33ಕ್ಕೆ 6). 1985ರ ಅಡಿಲೇಡ್‌ ಟೆಸ್ಟ್‌ನಲ್ಲಿ ಕಪಿಲ್‌ದೇವ್‌ 106ಕ್ಕೆ 8 ವಿಕೆಟ್‌ ಕಿತ್ತದ್ದು ದಾಖಲೆ.

  ಬುಮ್ರಾ ಟೆಸ್ಟ್‌ ಪದಾರ್ಪಣ ವರ್ಷದಲ್ಲೇ ಸರ್ವಾಧಿಕ 45 ವಿಕೆಟ್‌ ಕಿತ್ತು ಭಾರತೀಯ ದಾಖಲೆ ಬರೆದರು. 1979ರಲ್ಲಿ ಸ್ಪಿನ್ನರ್‌ ದೊಲೀಪ್‌ ದೋಶಿ 40 ವಿಕೆಟ್‌ ಉರುಳಿಸಿದ ದಾಖಲೆ ಪತನಗೊಂಡಿತು.

  ಭಾರತದ ಬೌಲರ್‌ಗಳು ಈ ವರ್ಷದ ಟೆಸ್ಟ್‌ ಪಂದ್ಯಗಳಲ್ಲಿ 247 ವಿಕೆಟ್‌ ಉರುಳಿಸಿದರು. ಇದೊಂದು ದಾಖಲೆ. 1979ರಲ್ಲಿ 245 ವಿಕೆಟ್‌ ಉರುಳಿಸಿದ ದಾಖಲೆ ಪತನಗೊಂಡಿತು.

 ಬುಮ್ರಾ ಈ ವರ್ಷ ಒಟ್ಟು 45 ವಿಕೆಟ್‌ ಕಿತ್ತು ಭಾರತದ ಸರ್ವಶ್ರೇಷ್ಠ ಬೌಲರ್‌ ಆಗಿ ಮೂಡಿಬಂದರು. ಮೊಹಮ್ಮದ್‌ ಶಮಿ ದ್ವಿತೀಯ ಸ್ಥಾನಕ್ಕೆ ಇಳಿದರು (43 ವಿಕೆಟ್‌). ಇವರಿಬ್ಬರೂ ಅನಿಲ್‌ ಕುಂಬ್ಳೆ ದಾಖಲೆ ಮುರಿದರು. ಕುಂಬ್ಳೆ 2006ರಲ್ಲಿ ತವರಿನಾಚೆ 41 ವಿಕೆಟ್‌ ಉರುಳಿಸಿದ್ದರು. 

  ಬುಮ್ರಾ ಮತ್ತು ಶಮಿ ಅವರ ಈ ವರ್ಷದ ಅಷ್ಟೂ ವಿಕೆಟ್‌ಗಳು ತವರಿನಾಚೆಯ ಟೆಸ್ಟ್‌ಗಳಲ್ಲಿ ಒಲಿದಿದ್ದು, ಇದೊಂದು ದಾಖಲೆಯಾಗಿದೆ. 1977ರಲ್ಲಿ ಇಮ್ರಾನ್‌ ಖಾನ್‌ ವಿದೇಶಗಳಲ್ಲಿ 42 ವಿಕೆಟ್‌ ಕೆಡವಿದ ದಾಖಲೆ ಪತನಗೊಂಡಿತು.

  ಪೂಜಾರ 2ನೇ ಸಲ ಒಂದೇ ಟೆಸ್ಟ್‌ ಪಂದ್ಯದಲ್ಲಿ ಶತಕ ಹಾಗೂ ಸೊನ್ನೆಗೆ ಔಟಾದರು. 2015ರ ಕೊಲಂಬೊ ಟೆಸ್ಟ್‌ ಪಂದ್ಯದ ಮೊದಲ ಸರದಿ ಯಲ್ಲಿ “ಗೋಲ್ಡನ್‌ ಡಕ್‌’ಗೆ ಔಟಾಗಿದ್ದ ಪೂಜಾರ, ಬಳಿಕ ಅಜೇಯ 145 ರನ್‌ ಹೊಡೆದಿದ್ದರು.

  ಪೂಜಾರ ಟೆಸ್ಟ್‌ ಪಂದ್ಯವೊಂದರಲ್ಲಿ ಶತಕದ ಜತೆಗೆ ಸೊನ್ನೆಗೆ ಔಟಾದ ಭಾರತದ 4ನೇ ಕ್ರಿಕೆಟಿಗ. ಉಳಿದ ಮೂವರೆಂದರೆ ವಿಜಯ್‌ ಮಾಂಜ್ರೆàಕರ್‌, ಸಚಿನ್‌ ತೆಂಡುಲ್ಕರ್‌ ಮತ್ತು ವೀರೇಂದ್ರ ಸೆಹವಾಗ್‌.

  ರಿಷಬ್‌ ಪಂತ್‌ ಈ ಸರಣಿಯಲ್ಲಿ 18 ಕ್ಯಾಚ್‌ ಮಾಡಿದರು. ಇದು ಭಾರತೀಯ ದಾಖಲೆಯಾಗಿದೆ. 1979-80ರಲ್ಲಿ ಪಾಕಿಸ್ಥಾನ ವಿರುದ್ಧ ಸಯ್ಯದ್‌ ಕಿರ್ಮಾನಿ, 2014ರಲ್ಲಿ ಇಂಗ್ಲೆಂಡ್‌ ವಿರುದ್ಧ ಎಂ.ಎಸ್‌. ಧೋನಿ 17 ಕ್ಯಾಚ್‌ ಪಡೆದ ದಾಖಲೆ ಪತನಗೊಂಡಿತು.

  ಭಾರತದ 2ನೇ ಇನ್ನಿಂಗ್ಸ್‌ನ 3, 4 ಮತ್ತು 5ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಒಟ್ಟು ಸೇರಿ ಕನಿಷ್ಠ ರನ್ನಿನ ಜಂಟಿ ದಾಖಲೆ ಸ್ಥಾಪಿಸಿದರು (ಒಂದು ರನ್‌). ವೆಸ್ಟ್‌ ಇಂಡೀಸ್‌ ಎದುರಿನ 1953ರ ಜಾರ್ಜ್‌ಟೌನ್‌ ಟೆಸ್ಟ್‌ ಪಂದ್ಯದಲ್ಲೂ ಈ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಂದ ಒಟ್ಟು ಒಂದೇ ರನ್‌ ದಾಖಲಾಗಿತ್ತು.

  ಪೂಜಾರ ಮತ್ತು ಕೊಹ್ಲಿ 3ನೇ ಸಲ ಒಂದೇ ಇನ್ನಿಂಗ್ಸ್‌ನಲ್ಲಿ ಸೊನ್ನೆಗೆ ಔಟಾದರು. ಇದಕ್ಕೂ ಮುನ್ನ ಇಂಗ್ಲೆಂಡ್‌ ಎದುರಿನ 2014ರ ಮ್ಯಾಂಚೆಸ್ಟರ್‌ ಟೆಸ್ಟ್‌ನ ಪ್ರಥಮ ಇನ್ನಿಂಗ್ಸ್‌

ನಲ್ಲಿ ಹಾಗೂ ಅದೇ ಸರಣಿಯ ಓವಲ್‌ ಟೆಸ್ಟ್‌ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಇಬ್ಬರೂ ಖಾತೆ ತೆರೆಯಲು ವಿಫ‌ಲರಾಗಿದ್ದರು.

  ಭಾರತದ 3ರಿಂದ 6ನೇ ಕ್ರಮಾಂಕದ ವರೆಗಿನ ಬ್ಯಾಟ್ಸ್‌ಮನ್‌ಗಳು ಕನಿಷ್ಠ 6 ರನ್‌ ಒಟ್ಟುಗೂಡಿಸಿದ ದಾಖಲೆಯನ್ನು ಸರಿದೂಗಿಸಿದರು. ಮೊದಲ ನಿದರ್ಶನ 1946ರ ಇಂಗ್ಲೆಂಡ್‌ ಎದುರಿನ ಮ್ಯಾಂಚೆಸ್ಟರ್‌ ಟೆಸ್ಟ್‌ನಲ್ಲಿ ಕಂಡುಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next