ಶ್ರೀನಗರ : ದೇಶ ಮೊದಲು, ಪಕ್ಷ ಅನಂತರ, ನಾವು ಕೊನೆಗೆ’ ಎಂಬ ಶೀರ್ಷಿಕೆಯಡಿ ಬಿಜೆಪಿ ಹಿರಿಯ ನಾಯಕ ಎಲ್ ಕೆ ಆಡ್ವಾಣಿ ಬರೆದಿರುವ ಬ್ಲಾಗ್ ಗೆ ಪ್ರತಿಕ್ರಿಯಿಸಿರುವ ಪಿಡಿಪಿ ಮುಖ್ಯಸ್ಥೆ ಮತ್ತು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು, “ಆಡ್ವಾಣಿ ಈ ಮಾತನ್ನು ಕಳೆದ ಐದು ವರ್ಷಗಳಲ್ಲಿ ಒಮ್ಮೆಯಾದರೂ ಹೇಳಬೇಕಿತ್ತು” ಎಂದು ಪ್ರತಿಕ್ರಿಯಿಸಿದ್ದಾರೆ.
ಆಡ್ವಾಣಿ ಅವರ ಮನದಾಳದ ಮಾತಿಗೆ ಆಶ್ಚರ್ಯ ವ್ಯಕ್ತಪಡಿಸಿರುವ ಮೆಹಬೂಬ, “ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಈ ವರೆಗೂ ಆಡ್ವಾಣಿ ಒಂದೇ ಒಂದು ಶಬ್ದ ಉಚ್ಚರಿಸಿದಿರುವುದು ಅತ್ಯಂತ ಅಚ್ಚರಿಯ ಸಂಗತಿ’ ಎಂದು ಹೇಳಿದ್ದಾರೆ.
‘ಬಿಜೆಪಿ ಸ್ಥಾಪನೆಗೊಂಡಂದಿನಿಂದಲೂ ಎಂದೂ ಕೂಡ ನಮ್ಮನ್ನು ರಾಜಕೀಯವಾಗಿ ಒಪ್ಪದವರನ್ನು ನಾವು ಶತ್ರುಗಳೆಂದು ಕಂಡದ್ದಿಲ್ಲ; ಅಂಥವರನ್ನು ಪಕ್ಷ ಕೇವಲ ರಾಜಕೀಯ ವಿರೋಧಿಗಳು,ಟೀಕಾಕಾರರು ಎಂದು ಪರಿಗಣಿಸಿಕೊಂಡು ಬಂದಿದೆ’ ಎಂದು ಆಡ್ವಾಣಿ ಅವರು ತಮ್ಮ ಬ್ಲಾಗ್‌ನಲ್ಲಿ ರಾಜಕೀಯ ಸಹಿಷ್ಣುತೆ ಕುರಿತಾದ ಪಕ್ಷದ ನೀತಿಯನ್ನು ಸ್ಪಷ್ಟಪಡಿಸಿದ್ದಾರೆ.
ವಿಶೇಷವೆಂದರೆ ಆಡ್ವಾಣಿ ಅವರು ತಮ್ಮ ಬ್ಲಾಗನ್ನು ಬಿಜೆಪಿಯ ಸ್ಥಾಪನಾ ದಿನಾಚರಣೆಗೆ ಕೇವಲ ಎರಡು ದಿನಗಳಿರುವಾಗ ಮತ್ತು high voltage ಲೋಕಸಭಾ ಚುನಾವಣೆಗೆ ಒಂದು ವಾರ ಇರುವಾಗ ಬರೆದಿರುವುದು ಗಮನಾರ್ಹವಾಗಿದೆ.
ಆಡ್ವಾಣಿ ಬ್ಲಾಗ್ ಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಮೆಹಬೂಬ ಹೀಗೆ ಬರೆದಿದ್ದಾರೆ :
ಬಿಜೆಪಿಯ ಪ್ರಕೃತ ವರಿಷ್ಠ ನಾಯಕತ್ವ ಇಡಿಯ ವಿರೋಧ ಪಕ್ಷವನ್ನು ರಾಷ್ಟ್ರ ವಿರೋಧಿ ಎಂದು ಕರೆಯುವುದರ ಬಗ್ಗೆ ಆಡ್ವಾಣಿ ಅಚ್ಚರಿ ವ್ಯಕ್ತಪಡಿಸಿರುವುದು ಆಶ್ಚರ್ಯಕರ. 2014ರಿಂದ ಈ ತನಕವೂ ಆಡ್ವಾಣಿ ಒಂದೇ ಒಂದು ಶಬ್ದವನ್ನು ಉಚ್ಚರಿಸಿಲ್ಲ. ಆದರೆ ಈಗ ಬಿಜೆಪಿ ಅದಿಕಾರಾವಧಿ ಕೇಂದ್ರದಲ್ಲಿ ಮುಗಿಯುತ್ತ ಬಂದಿರುವ ಈ ಸಂದರ್ಭದಲ್ಲಿ ಅವರು ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮಾತುಗಳನ್ನು ಕಳೆದ ಐದು ವರ್ಷಗಳಲ್ಲಿ ಹೇಳಬಹುದಿತ್ತು ಎಂದು ನಾನು ಭಾವಿಸುತ್ತೇನೆ; ಬಡೀ ದೇರ್ ಕರ್ ದೀ ಮೆಹರ್‌ಬಾನ್ ಆತೇ ಆತೇ’.