Advertisement

ಯಕ್ಷರಂಗದ ಹೊಸ ಬೆಳಕು; ಮೇಘನಾ-ಭೂಮಿಕಾ ಸೋದರಿಯರು

10:26 PM Jan 08, 2020 | mahesh |

ಯಕ್ಷಗಾನ ಕೇವಲ ಗಂಡು ಕಲೆ. ಅವರಿಗಷ್ಟೇ ಸೀಮಿತ ಎಂಬುದನ್ನು ಸುಳ್ಳು ಮಾಡಿದವರು ಕುಂದಾಪುರದ ಮೇಘನಾ ಮತ್ತು ಭೂಮಿಕಾ ಸೋದರಿಯರು. ಕೋಡಿಯ ಪದ್ಮನಾಭ ಐತಾಳ್‌ ಮತ್ತು ರಾಧಿಕಾ ದಂಪತಿಯ ಮಕ್ಕಳಾದ ಇವರು ಚಿಕ್ಕ ವಯಸ್ಸಿನಿಂದಲೇ ಯಕ್ಷಗಾನದ ಕಡೆ ವಾಲಿದವರು. ಈಗ ಗೆಜ್ಜೆ ಕಟ್ಟಿ ರಂಗಸ್ಥಳಕ್ಕೆ ಬಂದರೇ ಎದುರಿಗಿರುವ ಪಾತ್ರಧಾರಿಗಳಿಗೂ ಅಚ್ಚರಿ ಹುಟ್ಟಿಸುತ್ತಾರೆ.ಯಕ್ಷಗಾನಕ್ಕೆ ಒಪ್ಪುವ ಸರ್ವಾಂಗೀಣ ಸುಂದರ ಭಾವಾಭಿವ್ಯಕ್ತಿ ಈ ಸೋದರಿಯರಿಗೆ ಸಿದ್ಧಿಸಿದೆ.

Advertisement

ಯಕ್ಷಗುರು ರಾಮಚಂದ್ರ ಭಟ್‌ ಹೆಮ್ಮಾಡಿ ಅವರಲ್ಲಿ ಪ್ರಾಥಮಿಕ ಹೆಜ್ಜೆಗಳನ್ನು ಅಭ್ಯಸಿಸಿ, ಭಾಗವತ ರವಿ ಕುಮಾರ್‌ ಸೂರಾಲ್‌ ಅವರಲ್ಲಿ ಪೂರ್ಣ ಹೆಜ್ಜೆಗಾರಿಕೆ ಕಲಿತರು ಈಗಾಗಲೇ ಹಲವು ಪೌರಾಣಿಕ ಪ್ರಸಂಗಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ.

ಪ್ರಸ್ತುತ, ಸರಕಾರಿ ಪ್ರಥಮ ದರ್ಜೆ ಪದವಿ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಮೇಘನಾ ಎಂಕಾಂ ಅಭ್ಯಸಿಸುತ್ತಿದ್ದರೆ, ಭೂಮಿಕಾ, ಶ್ರೀ ಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ಆ್ಯಂಡ್‌ ಮ್ಯಾನೇಜ್‌ಮೆಂಟ್‌ನಲ್ಲಿ ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ ಕಲಿಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗುವ ಇಂದಿನ ಯುವಜನರ ಮಧ್ಯೆ ಇವರು ವಿಶಿಷ್ಟವಾಗಿ ತೋರುತ್ತಾರೆ.

ಯಕ್ಷಗಾನದ ಪ್ರಮುಖ ಪೌರಾಣಿಕ ಪ್ರಸಂಗಗಳಾದ ಲವಕುಶ ಕಾಳಗದ ಲವ-ಕುಶ ಜೋಡಿವೇಷ, ಜಾಂಬವತಿ ಕಲ್ಯಾಣದ ಕೃಷ್ಣ, ಕಂಸ ದಿಗ್ವಿಜಯದ ಕಂಸ, ಸುಧನ್ವಾರ್ಜುನ ಕಾಳಗದ ಅರ್ಜುನ, ಶಶಿಪ್ರಭಾ ಪರಿಣಯದ ಮಾರ್ತಾಂಡತೇಜ, ಭ್ರಮರಕುಂತಳೆ, ಅಭಿಮನ್ಯು ಕಾಳಗದ ದ್ರೋಣ, ಅಭಿಮನ್ಯು ಪಾತ್ರಗಳೂ ಸೇರಿದಂತೆ ಹಲವಾರು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಎಲ್ಲ ಮುಖ್ಯ ಪಾತ್ರಗಳನ್ನೇ ನಿಭಾಯಿಸಿದ್ದಲ್ಲದೇ, ಪುಂಡು ವೇಷಕ್ಕೂ, ಸ್ತ್ರೀ ವೇಷಕ್ಕೂ ಹಾಗೂ ಖಳನಾಯಕನ ಪಾತ್ರಕ್ಕೂ ಸೈ ಎನ್ನಿಸಿಕೊಂಡಿರುವುದು ವಿಶೇಷ.

ಬಡಗುತಿಟ್ಟು ಯಕ್ಷರಂಗದ ಪ್ರಸಿದ್ಧ ಡೇರೆ ಮೇಳಗಳಾದ ಪೆರ್ಡೂರು, ಸಾಲಿಗ್ರಾಮ ಹಾಗೂ ನೀಲಾವರ, ಸೌಕೂರು ಮೇಳದ ರಂಗಸ್ಥಳದಲ್ಲಿ ಗೆಜ್ಜೆ ಕಟ್ಟಿ ಕುಣಿದು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದ್ದಾರೆ. ಅಗ್ರಮಾನ್ಯ ಕಲಾವಿದರಾದ ಕೊಂಡದಕುಳಿ ರಾಮಚಂದ್ರ ಹೆಗಡೆ, ವಾಸುದೇವ ಸಾಮಗ, ಮೋಹನದಾಸ ಶೆಣೈ, ಶಶಿಕಾಂತ್‌ ಶೆಟ್ಟಿಯವರ ಜೊತೆಗೆ ಪಾತ್ರವಹಿಸಿದ್ದಲ್ಲದೇ, ಪ್ರಸಿದ್ಧ ಭಾಗವತರಾದ ಜನ್ಸಾಲೆ ರಾಘವೇಂದ್ರ ಆಚಾರ್ಯ, ರಾಘವೇಂದ್ರ ಮಯ್ಯ, ಹಿಲ್ಲೂರು ರಾಮಚಂದ್ರ ಹೆಗಡೆಯವರ ಪದ್ಯಗಳಿಗೆ ಹೆಜ್ಜೆಹಾಕಿರುವುದು ಇವರ ಹೆಚ್ಚುಗಾರಿಕೆ.

Advertisement

ಅನೇಕ ಸ್ಥಳಿಯ ಸಂಸ್ಥೆಗಳ ಸಮಾರಂಭಗಳಲ್ಲಿಯೂ ವೇಷ ಕಟ್ಟಿದ್ದಾರೆ. ಪಾತ್ರ ನಿರ್ವಹಿಸುವುದಲ್ಲದೇ ಹೆಜ್ಜೆ ಕಲಿಸಿಕೊಡುವುದರಲ್ಲಿಯೂ ಇವರು ಮುಂದು. ಕಾಲೇಜು ವಾರ್ಷಿಕೋತ್ಸವಕ್ಕೆ ಸಹಪಾಠಿಗಳಿಗೆ ಹೆಜ್ಜೆ ಕಲಿಸಿಕೊಟ್ಟು ಉಪನ್ಯಾಸಕರ ಪ್ರೀತಿ ಗಳಿಸಿದವರು. ಕೊಮೆ ತೆಕ್ಕಟ್ಟೆಯ ಯಶಸ್ವಿ ಕಲಾವೃಂದ 2015 ರಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಯಕ್ಷಗಾನ ಜೋಡಿವೇಷ ಸ್ಪರ್ಧೆಯ ಸೀನಿಯರ್‌ ಭಾಗದಲ್ಲಿ ಬಹುಮಾನ ಗಳಿಸಿದವರು. ಹಲವು ಸಂಘ ಸಂಸ್ಥೆಗಳ ಗೌರವಕ್ಕೆ ಪಾತ್ರರಾದವರು. ಯಕ್ಷಗಾನದಲ್ಲಿ ಮಹತ್ತರವಾದ ಕನಸುಗಳನ್ನು ಹೊತ್ತಿರುವ ಈ ಸೋದರಿಯರು ಯಕ್ಷ ರಂಗದ ಹೊಸ ಬೆಳಕಾಗಿ ಭರವಸೆ ಮೂಡಿಸಿದ್ದಾರೆನ್ನುವುದು ಅತಿಶಯೋಕ್ತಿಯಲ್ಲ.

ನಮ್ಮ ಕಲಾಸೇವೆ
ಅನೇಕ ಸಂಘ ಸಂಸ್ಥೆಗಳು ನಮ್ಮನ್ನು ಪಾತ್ರಗಳಿಗಾಗಿ ಕರೆಯುತ್ತಾರೆ. ಕೊಟ್ಟ ಪಾತ್ರಗಳಿಗೆ ಜೀವ ತುಂಬುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಕಲಿಯುವುದು ಇನ್ನೂ ಸಾಕಷ್ಟಿದೆ. ಇದು ನಮ್ಮ ಸಣ್ಣ ಸೇವೆ ಅಷ್ಟೇ. ನಮಗೆ ಸಿಗುವ ಪ್ರತಿ ಅವಕಾಶವೂ ದೊಡ್ಡದು. ಕಲಾಸೇವೆ ಮಾಡುವುದರಲ್ಲಿಯೇ ತುಂಬಾ ತೃಪ್ತಿ ಇದೆ.
-ಮೇಘನಾ, ಭೂಮಿಕಾ(ಯಕ್ಷ ಸಹೋದರಿಯರು)

- ಶ್ರೀರಾಜ್‌ ಎಸ್‌ ಆಚಾರ್ಯ, ವಕ್ವಾಡಿ

Advertisement

Udayavani is now on Telegram. Click here to join our channel and stay updated with the latest news.

Next