ಮೇಘನಾ ರಾಜ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ “ತತ್ಸಮ ತದ್ಭವ’ ಚಿತ್ರ ಸೆ.15ರಂದು ತೆರೆಕಾಣುತ್ತಿದೆ. ವಿಶೇಷವೆಂದರೆ ಇದು ಕೇವಲ ಕನ್ನಡದಲ್ಲಷ್ಟೇ ಅಲ್ಲ, ಮಲಯಾಳಂನಲ್ಲೂ ಬಿಡುಗಡೆಯಾಗುತ್ತಿದೆ. ಅದಕ್ಕೆ ಕಾರಣ ಮೇಘನಾ ರಾಜ್.
ಹೌದು, ಮೇಘನಾ ರಾಜ್ ತಮ್ಮ ಸಿನಿಕೆರಿಯರ್ ಆರಂಭಿಸಿದ್ದು ಮಲಯಾಳಂನಿಂದ. ಅಲ್ಲಿ ಅವರದ್ದೇ ಆದ ಅಭಿಮಾನಿ ವರ್ಗವಿದೆ. ಹಾಗಾಗಿ, “ತತ್ಸಮ ತದ್ಭವ’ ಚಿತ್ರವನ್ನು ಮಲಯಾಳಂನಲ್ಲೂ ಬಿಡುಗಡೆ ಮಾಡುತ್ತಿದೆ ತಂಡ.
ಈ ಚಿತ್ರವನ್ನು ವಿಶಾಲ್ ಆತ್ರೇಯ ನಿರ್ದೇಶಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಅವರು, “ಇದೊಂದು ಇನ್ವೆಸಿಗೇಟಿವ್ ಕ್ರೈಂ-ಥ್ರಿಲ್ಲರ್ ಸಿನಿಮಾ. ಒಂದು ಪೊಲೀಸ್ ಸ್ಟೇಷನ್‌ನಲ್ಲಿ ನಡೆಯುವ ತನಿಖೆಯ ಸುತ್ತ ಇಡೀ ಸಿನಿಮಾದ ಕಥೆ ಸಾಗುತ್ತದೆ. ಈ ತನಿಖೆಯಲ್ಲಿ ಒಂದಷ್ಟು ಪಾತ್ರಗಳು ಬರುತ್ತವೆ. ಆ ಪಾತ್ರಗಳು ಕಥೆಗೆ ತಿರುವು ಕೊಡುತ್ತ ಹೋಗುತ್ತವೆ. ಹೀಗೆ ಬರುವ ಪ್ರತಿ ತಿರುವುಗಳು ಕೂಡ ಪ್ರೇಕ್ಷಕರಿಗೆ ಥ್ರಿಲ್ಲಿಂಗ್ ಅನುಭವ ಕೊಡುತ್ತವೆ. ಅಲ್ಲಲ್ಲಿ ಸುಳಿವುಗಳನ್ನು ಬಿಟ್ಟುಕೊಡುತ್ತಾ ಸಿನಿಮಾದ ಕಥೆ ಸಾಗುತ್ತದೆ. ಆಡಿಯನ್ಸ್‌ಗೆ ಕೂಡ ಸಿನಿಮಾ ಯೋಚಿಸುವಂತೆ ಮಾಡುತ್ತದೆ. ಸಿನಿಮಾದಲ್ಲಿ ಒಂದೇ ಕಥೆ ಎರಡು ಕಾಲಘಟ್ಟದಲ್ಲಿ ನಡೆಯುತ್ತದೆ’ ಎಂಬುದು ಸಿನಿಮಾದ ಕಥಾಹಂದರದ ಬಗ್ಗೆ ನಿರ್ದೇಶಕ ವಿಶಾಲ್ ಆತ್ರೇಯ ಮಾತು.
ಇನ್ನು “ತತ್ಸಮ ತದ್ಭವ’ ಸಿನಿಮಾದಲ್ಲಿ ಮೇಘನಾ ಕಳೆದುಕೊಂಡಿರುವ ತನ್ನ ಮಗಳ ಹುಡುಕಾಟದಲ್ಲಿರುವ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. “ತತ್ಸಮ ತದ್ಭವ’ ಸಿನಿಮಾದ ಪ್ರತಿ ಪಾತ್ರದಲ್ಲೂ ಅನುಭವಿ ಮತ್ತು ನುರಿತ ಕಲಾವಿದರು ಬಣ್ಣ ಹಚ್ಚಿದ್ದಾರೆ. ಮೇಘನಾ ರಾಜ್, ಬಾಲಾಜಿ ಮನೋಹರ್, ಶ್ರುತಿ, ಅರವಿಂದ್ ಅಯ್ಯರ್, ಮಹತಿ, ಟಿ. ಎಸ್ ನಾಗಾಭರಣ ಹೀಗೆ ಹಲವು ಕಲಾವಿದರು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.