ಶಿಲ್ಲಾಂಗ್: ಕೋಳಿ, ಕುರಿ ಮತ್ತು ಮೀನುಗಳಿಗಿಂತ ಹೆಚ್ಚು ಗೋಮಾಂಸವನ್ನು ಜನರು ತಿನ್ನಬೇಕು ಎಂದು ಮೇಘಾಲಯ ಸರ್ಕಾರದಲ್ಲಿ ಬಿಜೆಪಿ ಸಚಿವರಾದ ಸಾನ್ಬೋರ್ ಶುಲ್ಲೈ ಹೇಳಿದ್ದಾರೆ. ಬಿಜೆಪಿ ಸಿದ್ದಾಂತಕ್ಕೆ ವಿರುದ್ಧ ನಿಲುವನ್ನು ತೆಗೆದುಕೊಂಡಿರುವ ಮೇಘಾಲಯ ಸಚಿವರು ಹೇಳಿಕೆ ಇದೀಗ ಭಾರಿ ಸುದ್ದಿಯಾಗಿದೆ.
ಕಳೆದ ವಾರ ಕ್ಯಾಬಿನೆಟ್ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿಜೆಪಿಯ ಹಿರಿಯ ನಾಯಕ ಸಾನ್ಬೋರ್ ಶುಲ್ಲೈ, ಪ್ರಜಾಪ್ರಭುತ್ವ ದೇಶದಲ್ಲಿ ಪ್ರತಿಯೊಬ್ಬರೂ ತಮಗೆ ಬೇಕಾದುದನ್ನು ತಿನ್ನಲು ಸ್ವತಂತ್ರರು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಉದ್ಯಮಿಗೆ ವಂಚನೆ ಪ್ರಕರಣ : ಕನ್ನಡ ನಿರ್ಮಾಪಕನಿಗೆ ಒಂದು ವರ್ಷ ಶಿಕ್ಷೆ
“ನಾನು ಜನರನ್ನು ಚಿಕನ್, ಮಟನ್ ಅಥವಾ ಮೀನಿಗಿಂತ ಹೆಚ್ಚು ಗೋಮಾಂಸ ತಿನ್ನಲು ಪ್ರೋತ್ಸಾಹಿಸುತ್ತೇನೆ. ಜನರನ್ನು ಹೆಚ್ಚು ಗೋಮಾಂಸ ತಿನ್ನಲು ಪ್ರೋತ್ಸಾಹಿಸುವ ಮೂಲಕ, ಬಿಜೆಪಿ ಗೋಹತ್ಯೆಯ ಮೇಲೆ ನಿಷೇಧ ಹೇರುತ್ತದೆ ಎಂಬ ಗ್ರಹಿಕೆಯನ್ನು ಹೋಗಲಾಡಿಸಲಾಗುತ್ತದೆ” ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಪಶು ಸಂಗೋಪನೆ ಮತ್ತು ಪಶುವೈದ್ಯ ಸಚಿವರಾಗಿರುವ ಸಾನ್ಬೋರ್ ಶುಲ್ಲೈ ಅವರು ನೆರೆಯ ಅಸ್ಸಾಂ ರಾಜ್ಯದ ಹೊಸ ಪಶು ನೀತಿಯಿಂದ ಮೇಘಾಲಯಕ್ಕೆ ಜಾನುವಾರು ಸಾಗಾಣಿಕೆಯ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಲು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು.