ಕೊಪ್ಪಳ: ಉದ್ದಿಮೆಗಳ ಸರಕು ಸಾಗಾಣಿಕೆಗಾಗಿ ತಮ್ಮ ವ್ಯಾಪ್ತಿಯಲ್ಲಿ ಓಡಾಡುವ ವಾಹನಗಳು ಅಗತ್ಯಕ್ಕಿಂತ ಹೆಚ್ಚು ಭಾರದ ವಸ್ತುಗಳನ್ನು ಸಾಗಿಸುತ್ತಿರುವುದರಿಂದ ರಸ್ತೆಗಳು ಹಾಳಾಗಿದ್ದು, ಅವುಗಳನ್ನು ತಾವೇ ನಿರ್ಮಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿ ಮತ್ತು ಜಿಲ್ಲೆಯ ಉದ್ದಿಮೆದಾರರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಾಲವರ್ತಿ ಮತ್ತು ಹೊಸಳ್ಳಿ ರಸ್ತೆ ತೀರಾ ಹದಗೆಟ್ಟಿದ್ದು, ಇದರಿಂದ ಆ ಹಳ್ಳಿಗಳ ಜನರಿಗೆ ಮತ್ತು ಸಾರ್ವಜನಿಕ ಸಂಚಾರಕ್ಕೆ ತೊಂದರೆ, ರೈತರ ಬೆಳೆಗಳಿಗೆ ಹಾನಿ, ಪರಿಸರ ಮಾಲಿನ್ಯದಿಂದ ಅಲ್ಲಿಯ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾಗಿ ಹಾಲವರ್ತಿ ಮತ್ತು ಹೊಸಳ್ಳಿ ರಸ್ತೆಯನ್ನು ಸುಸಜ್ಜಿತವಾಗಿ ನಿರ್ಮಿಸಿಕೊಳ್ಳಿ. ನಮ್ಮ ಸರ್ಕಾರದಿಂದ ಕೂಡ ತಮಗೆ ಸಹಾಯ ಮಾಡಲಾಗುವುದು ಎಂದು ಉದ್ದಿಮೆದಾರರಿಗೆ ಸೂಚನೆ ನೀಡಿದರು.
ಈ ಹಿಂದಿನ ಕೆಡಿಪಿ ಸಭೆಯಲ್ಲಿ ಆರ್‌ಟಿಒಗೆ ಅಗತ್ಯಕ್ಕಿಂತ ಹೆಚ್ಚು ಭಾರ ಹೊಂದಿದ ವಾಹನಗಳ ಸಂಚಾರದ ತಪಾಸಣೆ ಮತ್ತು ಎಷ್ಟು ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂಬ ಕುರಿತು ಮಾಹಿತಿ ನೀಡುವಂತೆ ತಿಳಿಸಲಾಗಿತ್ತು. ಆದರೆ ಇದುವರೆಗೂ ಸರಿಯಾದ ಮಾಹಿತಿ ನೀಡದ ಆರ್‌ಟಿಒ ಅವರಿಗೆ ತರಾಟೆಗೆ ತೆಗೆದುಕೊಂಡು, ಇನ್ನು ಮುಂದೆ ಕಟ್ಟುನಿಟ್ಟಾಗಿ ತಪಾಸಣೆ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.
ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ಉದ್ದಿಮೆಗಳಿಂದ ನಮ್ಮ ರೈತರ ಬೆಳೆ ಹಾನಿ, ಪರಿಸರ ಮಾಲಿನ್ಯ ಮತ್ತು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದರೂ ನಾವೇಕೆ ಸುಮ್ಮನೆ ಕೂತಿದ್ದೇವೆ ಎಂದರೆ, ನಮ್ಮ ಭಾಗದ ಹಲವಾರು ಜನರಿಗೆ ತಾವು ಉದ್ಯೋಗ ಕೊಟ್ಟಿದ್ದೀರಿ ಎಂಬ ಕಾರಣದಿಂದ. ಹಾಗಾಗಿ ಈ ರಸ್ತೆಯನ್ನು ಸಂಪೂರ್ಣವಾಗಿ ನೀವೇ ನಿರ್ಮಿಸಿ ಎಂದು ಹೇಳುತ್ತಿಲ್ಲ. ಸರ್ಕಾರದಿಂದ ತಮಗೆ ಶೇ.50ರಷ್ಟು ಸಹಾಯ ಮಾಡಲಾಗುತ್ತದೆ. ಈಗಾಗಲೇ ಈ ರಸ್ತೆಯ ಮೇಲೆ ಕಳಪೆ ರಸ್ತೆಯ ಕಾರಣದಿಂದ ಹಲವಾರು ಅಪಘಾತಗಳು ಸಂಭವಿಸಿವೆ. ಆದ್ದರಿಂದ ತಾವು ಯಾವುದೇ ನೆಪ ಹೇಳದೆ ಆದಷ್ಟು ಬೇಗನೆ ರಸ್ತೆ ನಿರ್ಮಿಸಬೇಕು ಎಂದರು.
ಡಿಸಿ ಪಿ. ಸುನೀಲ್ ಕುಮಾರ್ ಮಾತನಾಡಿ, ನಾವು ಕೇಳಿದಾಗೊಮ್ಮೆ ಟ್ರಾನ್ಸಪೋರ್ಟ್ ಸಮಸ್ಯೆ, ಕಾರ್ಮಿಕರ ಸಮಸ್ಯೆ ಹೇಳುತ್ತೀರಿ. ಈ ರಸ್ತೆಯಲ್ಲಿ ತಮ್ಮ ವಾಹನಗಳು ಓಡಾಡಲು ಅನುಕೂಲವಾಗುವುದಕ್ಕಾಗಿ ತಮಗೆ ಹೇಳುತ್ತಿದ್ದೇವೆ. ತಾವು ಶೇ.50ರಷ್ಟು ಹಣ ನೀಡಿ. ನಾವು ಸಚಿವರೊಂದಿಗೆ ಚರ್ಚಿಸಿ ಸರ್ಕಾರದಿಂದ ಶೇ.50ರಷ್ಟು ಹಣವನ್ನು ಸರ್ಕಾರದಿಂದ ಕೊಡುತ್ತೇವೆ ಎಂದರು.
ಸಭೆಯಲ್ಲಿ ಸಂಸದ ಸಂಗಣ್ಣ ಕರಡಿ, ಜಿಪಂ ಸಿಇಒ ರಘುನಂದನ್ ಮೂರ್ತಿ, ಎಡಿಸಿ ಎಂ.ಪಿ. ಮಾರುತಿ, ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಪ್ರಶಾಂತ, ಜಿಲ್ಲೆಯ ವಿವಿಧ ಉದ್ದಿಮೆಗಳ ಪ್ರತಿನಿ ಧಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.