Advertisement

ಸಭೆ, ಸಮಾರಂಭದ ಮೇಲೆ ಹದ್ದಿನ ಕಣ್ಣಿಡಿ

12:52 PM Apr 02, 2018 | Team Udayavani |

ಹುಣಸೂರು: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ತಾಲೂಕಿನಲ್ಲಿ ಯಾವುದೇ ಸಮಾರಂಭ ನಡೆಸಬೇಕಿದ್ದಲ್ಲಿ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯ. ತಪ್ಪಿದಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರಕರಣ ದಾಖಲಿಸಬೇಕು ಎಂದು ಸೆಕ್ಟರ್‌ ಮ್ಯಾಜಿಸ್ಟೇಟ್‌ಗಳಿಗೆ ಚುನಾವಣಾಧಿಕಾರಿಯಾದ ಉಪ ವಿಭಾಗಾಧಿಕಾರಿ ಕೆ.ನಿತೀನ್‌ ಸೂಚಿಸಿದರು.

Advertisement

ನಗರದ ಉಪ ವಿಭಾಗಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸೆಕ್ಟರ್‌ ಮ್ಯಾಜಿಸ್ಟೇಟ್‌ಗಳ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ಚುನಾವಣೆಯನ್ನು ಕಟ್ಟುನಿಟ್ಟಾಗಿ ನಡೆಸುವ ಸಲುವಾಗಿ ಚುನಾವಣಾ ಆಯೋಗದ ನಿರ್ದೇಶನದಂತೆ ಹಲವಾರು ಮಾರ್ಗಸೂಚಿಗಳ ಬಗ್ಗೆ ಮಾಹಿತಿ ನೀಡಿದರು.

ಪಕ್ಷದ ಪ್ರಚಾರಕ್ಕೆ ವಾಹನ ಬಳಸಲು ಚುನಾವಣಾಧಿಕಾರಿಗಳಿಂದ ಅನುಮತಿ ಪಡೆದ ಹಳದಿ ಬಣ್ಣದ ಅನುಮತಿ ಪತ್ರವನ್ನು ಕಾಣುವಂತೆ ಪ್ರದರ್ಶಿಸಿರಬೇಕು. ಮೈಕ್‌ ಬಳಸಲು ಪ್ರತ್ಯೇಕ ಅನುಮತಿ ಪಡೆದಿರಬೇಕು. ಇಲ್ಲದಿದ್ದಲ್ಲಿ ಸ್ಥಳದಲ್ಲೇ ವಶಕ್ಕೆಪಡೆದು ಪ್ರಕರಣ ದಾಖಲಿಸಬೇಕು.

ಕರಪತ್ರ, ಬ್ಯಾನರ್‌, ಬಂಟಿಂಗ್ಸ್‌, ಪ್ಲೆಕ್ಸ್‌ಗಳನ್ನು ಬಳಸಲು ಕಡ್ಡಾಯವಾಗಿ ಸಂಬಂಧಿಸಿದವರಿಂದ ಅನುಮತಿ ಪಡೆಯಬೇಕು. ಜೊತೆಗೆ ಪ್ರಿಂಟಿಂಗ್‌ ಪ್ರಸ್‌ನ ವಿಳಾಸ ಹಾಗೂ ಮುದ್ರಿಸಿದ ಪ್ರತಿಗಳ ವಿವರವನ್ನೊಳಗೊಂಡಿರಬೇಕು. ಇಲ್ಲದಿದ್ದಲ್ಲಿ ವಶಕ್ಕೆ ಪಡೆದು ಕೇಸ್‌ ದಾಖಲಿಸಬೇಕು ಎಂದರು.

ಸಮಾರಂಭಗಳ ಮೇಲೆ ಕಣ್ಗಾವಲಿಡಿ: ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ, ಕಾಯ್ದೆಗಳ ಬಗ್ಗೆ ವೃತ್ತ ನಿರೀಕ್ಷಕ ಗಂಗಾಧರಪ್ಪ ಮಾಹಿತಿ ನೀಡಿದರು. ಯಾವುದೇ ಮದುವೆ, ತಿಥಿ, ಹುಟ್ಟುಹಬ್ಬ ಸೇರಿದಂತೆ ಯಾವುದೇ ಹಬ್ಬ, ಜಾತ್ರೆ ಆಚರಿಸಬೇಕಿದ್ದರೂ ಅನುಮತಿ ಕಡ್ಡಾಯ.

Advertisement

ಒಂದು ವೇಳೆ ಪಡೆದುಕೊಳ್ಳದಿದ್ದಲ್ಲಿ ಸೆಕ್ಟರ್‌ ಮ್ಯಾಜಿಸ್ಟೇಟರ್‌ಗಳು ದಿಢೀರ್‌ ಭೇಟಿ ಇತ್ತು ಪರಿಶೀಲಿಸಿ,ಅಲ್ಲಿ ಚುನಾವಣೆ ಪ್ರಚಾರ ನಡೆಯುತ್ತಿದ್ದಲ್ಲಿ ಕ್ರಮವಹಿಸಬೇಕು. ಜಾತಿ-ಧರ್ಮದ ಆಧಾರದ ಮೇಲೆ ಮತ ಕೇಳುವಂತಿಲ್ಲ. ರಾತ್ರಿ 10ರಿಂದ ಬೆಳಗಿನ ಜಾವ 6ರ ವರೆಗೆ ಮೈಕ್‌ ಬಳಸುವಂತಿಲ್ಲ.

ತಾಲೂಕಿನಲ್ಲಿ 46 ಅತೀ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿದ್ದು ಇಲ್ಲಿ ಹೆಚ್ಚಿನ ನಿಗಾವಹಿಸಬೇಕು. ಲಾಂಗ್‌, ಮಚ್ಚು ದೊಣ್ಣೆ ಹಿಡಿದು ಓಡಾಡುವಂತಿಲ್ಲ. ಯಾವುದೇ ಸಮಸ್ಯೆಗಳ ಬಗ್ಗೆ ಮಾಹಿತಿ ಸಿಕ್ಕಲ್ಲಿ ನಿರ್ಲಕ್ಷವಹಿಸದೆ ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲಿಸಿ. ಅವಶ್ಯವಿದ್ದಲ್ಲಿ ಪೊಲೀಸ್‌ ಅಧಿಕಾರಿಗಳನ್ನು ಸಂಪರ್ಕಿಸಿರಿ ಎಂದರು.

ವಸ್ತುಗಳ ಸಾಗಾಟ-ದಾಸ್ತಾನಿನ ಬಗ್ಗೆ ಎಚ್ಚರವಿರಲಿ: ಮತದಾರರಿಗೆ ಹಂಚಲು ಸೀರೆ, ಕುಕ್ಕರ್‌ ಸೇರಿದಂತೆ ಚಿನ್ನಾಭರಣಗಳನ್ನು ಸಾಗಾಟ, ದಾಸ್ತಾನು ಬಗ್ಗೆ ಎಚ್ಚರವಿರಲಿ, ಒಂದೇ ಮಾದರಿಯ ಹೆಚ್ಚಿನ ದಾಸ್ತಾನು ಕಂಡುಬಂದಲ್ಲಿ ಮುಲಾಜಿಲ್ಲದೆ ವಶಪಡಿಸಿಕೊಳ್ಳಿ.

ಮದ್ಯದಂಗಡಿಗಳಲ್ಲಿ ಅನುಮತಿ ಇಲ್ಲದಿದ್ದರೂ ಚಿಲ್ಲರೆ ಬಿಕರಿ ಮಾಡುವಂತಿಲ್ಲ, ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸುವಂತಿಲ್ಲ. ಕಂಡುಬಂದಲ್ಲಿ ಪ್ರಕರಣ ದಾಖಲಿಸುವಂತೆ ತಿಳಿಸಿ, ಅಧಿಕಾರಿಗಳು ಯಾವುದೇ ಮುಲಾಜಿಗೊಳಗಾಗದೆ ಮೈ ಎಲ್ಲಾ ಕಣ್ಣಾಗಿ ಕೆಲಸ ನಿರ್ವಹಿಸಿದಲ್ಲಿ ನಿಸ್ಪಕ್ಷಪಾತವಾಗಿ ಚುನಾವಣೆ ನಡೆಸಬಹುದು ಎಂದರು. ಸಭೆಯಲ್ಲಿ ತಾಲೂಕು ನೋಡೆಲ್‌ ಅಧಿಕಾರಿ ಜಿ.ಎಚ್‌.ಮಂಜುನಾಥ್‌, ತಹಶೀಲ್ದಾರ್‌ ಮಹೇಶ್‌ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next