ತಿ.ನರಸೀಪುರ: ಮಾಧ್ಯಮದವರಿಗೆ ಆಹ್ವಾನ ನೀಡದೇ ತಾಲೂಕು ಪಂಚಾಯಿತಿ ಸಭಾಂಗಣ ದಲ್ಲಿ ತಾಪಂ ಅಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷ, ಕಾರ್ಯ ನಿರ್ವಾಹಣಾಧಿಕಾರಿ ನೇತೃತ್ವದಲ್ಲಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.
ತಾಪಂ ಸಭಾಂಗಣದಲ್ಲಿ ಸಭೆ ನಡೆಸ ಲಾಗಿದ್ದು, ಕುಡಿಯುವ ನೀರು, ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳ ಬಗ್ಗೆ ಚರ್ಚಿಸ ಲಾಗಿದೆ. ವಾಟಾಳು, ಮಲಿಯೂರು, ಕೇತು ಪುರ, ಬೀಡನಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ನೀರಿಗೆ ಹಾಹಕಾರವಿದ್ದು, ಇದರ ಬಗ್ಗೆ ಕ್ರಮ ವಹಿಸುವಂತೆ ಸಂಬಂಧಪಟ್ಟ ಇಒ ಅವರಿಗೆ ದೂರು ಸಲ್ಲಿಸಿದರು. ಅಧಿಕಾರಿ ಕುಡಿಯುವ ನೀರಿನ ಸಮಸ್ಯೆ ಕುರಿತು ಯಾವುದೇ ಕ್ರಮವಹಿಸಿಲ್ಲ ಎಂದು ಕೆಲ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸಭೆಯಲ್ಲಿ ದೂರಿದ್ದಾರೆ ಎಂದು ತಿಳಿದು ಬಂದಿದೆ.
ಒಟ್ಟಾರೆ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುವ ಸಲುವಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ಮಾಧ್ಯಮದವರನ್ನು ಆಹ್ವಾನಿಸದೇ ಸಭೆ ನಡೆಸಿದ್ದಾರೆಯೇ ಎಂಬ ಯಕ್ಷ ಪ್ರಶ್ನೆ ಸಾರ್ವಜನಿಕರನ್ನು ಕಾಡತೊಡಗಿದೆ. ಸಭೆಯಲ್ಲಿ ತಾಪಂ ಅಧ್ಯಕ್ಷ ಸಿ.ಚಾಮೇಗೌಡ, ಕಾರ್ಯ ನಿರ್ವಾಹಣಾಧಿಕಾರಿ ಬಿ.ಎಸ್.ರಾಜು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಲಿಂಗೂ, ತಾಲೂಕು ಪಂಚಾಯಿತಿ ಎಡಿ ಪ್ರೇಮ್‌ಕುಮಾರ್ ಅಧಿಕಾರಿಗಳು ಹಾಜರಿದ್ದರು.
ಅಧ್ಯಕ್ಷರ ಆರೋಪ
ಕಳೆದ ಎರಡು ತಿಂಗಳಿನಿಂದ ಹ್ಯಾಕನೂರು, ಸುಜ್ಜಲೂರು ವಾಟಾಳು ಗ್ರಾಮದಲ್ಲಿ ನೀರಿನ ಸಮಸ್ಯೆ ತಲೆ ದೂರಿದೆ. ಇದರ ಬಗ್ಗೆ ಇಒ ಅವರಿಗೆ ದೂರು ನೀಡಿದ್ದರೂ ಅಗತ್ಯ ಕ್ರಮ ವಹಿಸುವಲ್ಲಿ ಅಧಿಕಾರಿ ವಿಫಲರಾಗಿ ದ್ದಾರೆ ಎಂದು ವಾಟಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಮರಿನಂಜಪ್ಪ ದೂರಿದ್ದಾರೆ.
ಸಭೆಗೆ ಅಧಿಕಾರಿಗಳು ಮಾಧ್ಯಮ ದವರನ್ನು ಆಹ್ವಾನಿಸಿದ್ದಾರೆ ಎಂದು ತಿಳಿದಿದ್ದೆ. ಯಾರೂ ಬಾರದಿದ್ದ ಕಾರಣ ಮಾಧ್ಯಮದವರಿಗೆ ಆಹ್ವಾನ ನೀಡಿಲ್ಲ ಎಂದು ತಿಳಿಯಿತು. ಮುಂದಿನ ಸ್ಥಾಯಿ ಸಮಿತಿ ಸಭೆಗೆ ಮಾಧ್ಯಮ ದವರಿಗೆ ಆಹ್ವಾನ ನೀಡುವಂತೆ ಅಧಿಕಾರಿಗೆ ತಿಳಿಸುತ್ತೇನೆ.
-ಸಿ.ಚಾಮೇಗೌಡ, ತಾಪಂ ಅಧ್ಯಕ್ಷ