Advertisement

ಸಾಧನಾ ಸಮಾವೇಶಕ್ಕೆ ಕೊಲ್ಲೂರು ದೇಗುಲದ ಊಟ: ಚರ್ಚೆಗೆ ಗ್ರಾಸ

09:22 AM Jan 09, 2018 | Team Udayavani |

ಕೊಲ್ಲೂರು: ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜ.8ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಸಾಧನಾ ಸಮಾವೇಶ, 490.97 ಕೋ.ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನ ಸಮಾರಂಭದಲ್ಲಿ ಸೇರಿದ್ದ ಕಾರ್ಯಕರ್ತರಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಿಂದ ಮಧ್ಯಾಹ್ನದ ಊಟ ಒದಗಿಸಿರುವುದು ಈಗ ಪರ ಹಾಗೂ ವಿರೋಧ ಚರ್ಚೆಗೆ ಗ್ರಾಸವಾಗಿದೆ.

Advertisement

ಸಾಧನಾ ಸಮಾವೇಶದಲ್ಲಿ ಕೊಲ್ಲೂರು ದೇವಸ್ಥಾನದಿಂದ ಮಧ್ಯಾಹ್ನದ ಊಟ ಒದಗಿಸಿರುವುದನ್ನು ಅನೇಕರು ಪ್ರಶ್ನಿಸಿದ್ದಾರೆ. ಶಾಲೆಯೊಂದರ ಮಧ್ಯಾಹ್ನದ ಬಿಸಿಯೂಟಕ್ಕೆ ಕೊಲ್ಲೂರು ದೇವಸ್ಥಾನದಿಂದ ನೀಡಲಾಗುತ್ತಿದ್ದ ಅನುದಾನವನ್ನು ಸ್ಥಗಿತಗೊಳಿಸಿದವರು ಅದೇ ದೇವಸ್ಥಾನದ ಅನ್ನಪ್ರಸಾದವನ್ನು ಸಾಧನಾ ಸಮಾವೇಶದಲ್ಲಿ ಹೇಗೆ ಉಂಡರು ಎನ್ನುವುದು ಅವರ ತಕರಾರು. ಖಾಸಗಿ ಶಾಲೆಯ ಮಕ್ಕಳ ಬಿಸಿಯೂಟಕ್ಕೆ ಮುಜರಾಯಿ ಇಲಾಖೆಯ ಅಧೀನಕ್ಕೊಳಪಟ್ಟ ದೇವಸ್ಥಾನದ ಅನುದಾನ ಸಲ್ಲುವುದು ತಪ್ಪಾದರೆ ಸಾಧನಾ ಸಮಾವೇಶದಲ್ಲಿ ಸೇರಿದ ಒಂದು ಪಕ್ಷದ
ಕಾರ್ಯಕರ್ತರಿಗೆ ಅಲ್ಲಿಂದ ಊಟ ಒದಗಿಸುವುದೂ ತಪ್ಪಲ್ಲವೇ ಎಂಬುದು ಅವರ ವಾದ. ಈ ಬಗ್ಗೆ ಪರ-ವಿರೋಧ ಚರ್ಚೆ ಸಾಮಾಜಿಕ ಜಾಲ ತಾಣಗಳಲ್ಲಿಯೂ ಕೊಲ್ಲೂರು ದೇವಸ್ಥಾನದಿಂದ ಲಾರಿಯಲ್ಲಿ ಊಟ ಸಾಗಿಸುತ್ತಿರುವ ಚಿತ್ರಗಳ ಸಹಿತ ಚಾಲ್ತಿಯಲ್ಲಿದೆ.

ಕಾರ್ಯನಿರ್ವಹಣಾಧಿಕಾರಿ ಸ್ಪಷ್ಟನೆ: ಈ ಬಗ್ಗೆ ಕೊಲ್ಲೂರು ದೇಗುಲದ ಕಾರ್ಯನಿರ್ವಹಣಾಧಿ ಕಾರಿ ಜನಾರ್ದನ್‌ ಅವರನ್ನು ಸಂಪರ್ಕಿಸಿದಾಗ ಇದರಲ್ಲಿ ಯಾವುದೇ ಲೋಪ ಉಂಟಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸರಕಾರದ ಕಾರ್ಯ ಕ್ರಮವಾಗಿರುವುದರಿಂದ ದೇವಸ್ಥಾನದಿಂದ ಮಧ್ಯಾಹ್ನದ ಊಟ ನೀಡುವ ಅವಕಾಶವಿದೆ. ತಹಶೀಲ್ದಾರರು ಪತ್ರ ಮುಖೇನ ಊಟದ ವ್ಯವಸ್ಥೆಗೆ ಅನುವು ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದು, ಈ ಬಗ್ಗೆ ವ್ಯವಸ್ಥಾಪನ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ವ್ಯವಸ್ಥೆ ಮಾಡಲಾಗಿದೆ. ಈ ನಡುವೆ ಬಿಸಿಯೂಟ ಒದಗಿಸುವ ವಿಚಾರದಲ್ಲಿ ಅಪಸ್ವರ ಏಳುವ ಸಾಧ್ಯತೆಯನ್ನು ಮನಗಂಡಿದ್ದ ಕೊಲ್ಲೂರು ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ತಮ್ಮ ವತಿಯಿಂದ 1 ಲಕ್ಷ ರೂ.ಗಳ ಚೆಕ್ಕನ್ನು ಜ.6ರಂದು ಊಟದ ವ್ಯವಸ್ಥೆಗಾಗಿ ನೀಡಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ವ್ಯವಸ್ಥಾಪನ ಸಮಿತಿ ಅಧ್ಯಕ್ಷರ ಸ್ಪಷ್ಟನೆ:  ಕೊಲ್ಲೂರು ದೇಗುಲದಿಂದ ಸರಕಾರಿ ಕಾರ್ಯ ಕ್ರಮಕ್ಕೆ ಊಟ ನೀಡುವುದಕ್ಕೆ ಅವಕಾಶವಿದೆ. ಹೀಗಾಗಿ ಅನ್ನಪ್ರಸಾದವನ್ನು ಕಳುಹಿಸಿ ಕೊಡಲಾಗಿದೆ. ಈ ಬಗ್ಗೆ ತಪ್ಪು ಅಭಿಪ್ರಾಯ ಮೂಡಬಹುದು ಎಂಬುದನ್ನು ಮನಗಂಡು 1 ಲಕ್ಷ ರೂ.ಗಳ ಚೆಕ್ಕನ್ನು ಸಮಾವೇಶದಲ್ಲಿ ಮಧ್ಯಾಹ್ನದ ಊಟಕ್ಕಾಗಿ ತಾನು ವೈಯಕ್ತಿಕ ನೆಲೆಯಲ್ಲಿ ನೀಡಿರುವುದಾಗಿ ಕೊಲ್ಲೂರು ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ್‌ ಕುಮಾರ್‌ ಶೆಟ್ಟಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next