Advertisement

ವೀರಶೈವ ಜಂಗಮರೇ ಬೇಡ ಜಂಗಮರು: ಪಾಟೀಲ

05:14 PM Aug 05, 2018 | Team Udayavani |

ಬನಹಟ್ಟಿ: ಈಗಿನ ಎಲ್ಲ ವೀರಶೈವ ಜಂಗಮರೇ ಕಾನೂನಿನ ಪ್ರಕಾರ ಬೇಡ ಜಂಗಮರು ಎಂದು ಅಖಿಲ ಕರ್ನಾಟಕ ಬೇಡ ಜಂಗಮದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೀರೇಂದ್ರ ಪಾಟೀಲ ತಿಳಿಸಿದರು.

Advertisement

ಶನಿವಾರ ಬನಹಟ್ಟಿ ಡಾ. ನಾಗಲೋಟಿಮಠ ಸಾಹಿತ್ತಿಕ ಹಾಗೂ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಂಡ ನಗರಸಭೆ ವ್ಯಾಪ್ತಿಯ ಎಲ್ಲ ನಗರ ಮತ್ತು ಗ್ರಾಮಗಳ ಜಂಗಮ ಸಮಾಜದ ಸಮುದಾಯವರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಜಂಗಮ ಸಮಾಜ ಸಂಘಟನೆ ಇಲ್ಲದ ಕಾರಣ ಇಂದು ಸರ್ಕಾರದ ಅನೇಕ ಸೌಲಭ್ಯಗಳಿಂದ ವಂಚಿತವಾಗುತ್ತಿದೆ. ಸಂವಿಧಾನ ನಮಗೆ ಕರ್ತವ್ಯ ಮತ್ತು ಹಕ್ಕುಗಳನ್ನು ನೀಡಿದೆ. ಆದರೆ ಸಮಾಜಕ್ಕೆ ಸಾಂವಿಧಾನಿಕವಾಗಿ ಜಂಗಮರೆಲ್ಲ ಬೇಡ ಜಂಗಮರೆ ಎಂದರು.

ಆದರೆ ಕೆಲವೇ ಕೆಲವು ಜನಪ್ರತಿನಿಧಿಗಳಿಂದ ನಮ್ಮ ಸಮುದಾಯಕ್ಕೆ ತೊಂದರೆಯಾಗುತ್ತಿದೆ ಎಂದರು. ಬ್ರಿಟಿಷರ ಕಾಲದ 1901ರಲ್ಲಿ ಬೇಡುವ ಜಂಗಮರೆಲ್ಲರನ್ನು ಹಿಂದುಳಿದ ಜನಾಂಗಕ್ಕೆ ಸೇರಿಸಲು ಒಪ್ಪಿಗೆ ದೊರಕಿತ್ತು. ಆದರೆ 1921ರಲ್ಲಿ ಅದು ಅನುಷ್ಠಾನಕ್ಕೆ ತರಲು ಕಾರಣವಾಯಿತು. ನಂತರ 1931ರಲ್ಲಿ ಜಂಗಮರನ್ನು ಪ.ಜಾತಿ ಮತ್ತು ಪ.ಪಂಗಡದ ಗುಂಪಿಗೆ ಸೇರಿಸಿ ಕೇಂದ್ರ ಸರ್ಕಾರ ಕಾನೂನಿನಡಿಯಲ್ಲಿ ಅಧಿಸೂಚನೆ ಹೊರಡಿಸಿತು. ವೀರಶೈವ ಜಂಗಮರೆಲ್ಲರೂ ಸುಮಾರು 90 ವರ್ಷಗಳ ಹಿಂದೆಯೇ ಮೀಸಲಾತಿ ದೊರಕಿದೆ. ಆದರೆ ಇಂದಿನವರೆಗೂ ನಾವ್ಯಾರೂ ಅರ್ಜಿ ಸಲ್ಲಿಸಿ ಜಾತಿ ಪ್ರಮಾಣ ಪತ್ರ ಪಡೆದು ಅದರ ಸದುಪಯೋಗ ಪಡೆದಿಲ್ಲ. ಆದ್ದರಿಂದ ನಾವೆಲ್ಲರೂ ಅರ್ಜಿ ಸಲ್ಲಿಸಿ ಸಮಾಜದ ಅಸ್ತಿತ್ವಕ್ಕಾಗಿ ಹೋರಾಡಬೇಕಿದೆ ಎಂದರು.

1947 ರಿಂದ ಜಂಗಮರೆಲ್ಲರೂ ಮೀಸಲಾತಿಗೆ ಅರ್ಹರಾಗಿದ್ದು, ಇಂದು ಎಲ್ಲರೂ ಸಂಘಟಿತರಾಗಿ ಸರ್ಕಾರ ನಮಗೆ ನೀಡುವ ಹಕ್ಕಿನ ಸೌಲಭ್ಯಗಳನ್ನು ಪಡೆದುಕೊಳ್ಳೋಣ ಎಂದರು. ನಂತರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಮಖಂಡಿಯ ಸಿದ್ದಲಿಂಗಯ್ಯ ಕಂಬಿ ಮಾತನಾಡಿ, ನಾನು ಬೇಡ ಜಂಗಮನೆಂದು ಅನೇಕ ವರ್ಷಗಳ ಹಿಂದೆಯೇ ಸರ್ಕಾರದಿಂದ ಕಾನೂನಿನಡಿಯಲ್ಲಿ ಜಾತಿ ಪ್ರಮಾಣ ಪತ್ರ ಪಡೆದು ಕಳೆದ 10 ವರ್ಷದ ಹಿಂದೆ ಮುಧೋಳ ಮೀಸಲು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದೆ. ಆದ ಕಾರಣ ನಾವೆಲ್ಲರೂ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಈ ದೇಶದಲ್ಲಿರುವರಾಗಿದ್ದು, ನಮ್ಮ ಹಕ್ಕಿಗಾಗಿ ಹೋರಾಟ ಮಾಡಿ ಅದರ ಸದುಪಯೋಗ ಪಡೆದುಕೊಳ್ಳೋಣ ಎಂದರು.

ಮುಧೋಳ ನಗರಸಭೆ ಅಧ್ಯಕ್ಷೆ ದಾಕ್ಷಾಯಣಿ ಹಲಸಂಗಿಮಠ, ಸೋಮಯ್ಯ ಮಠದ, ಬಸಯ್ಯ ಹಿರೇಮಠ, ಈರಯ್ಯ ವಿಭೂತಿ, ಈರಯ್ಯ ಕತ್ತಿ, ಗುರುಪಾದಯ್ಯ ಹುಣಶ್ಯಾಳಮಠ, ಚಂದ್ರಶೇಖರ ಕಾಡದೇವರ, ಕಲ್ಲಯ್ಯ ಕಾಡದೇವರ, ಚನ್ನಮಲ್ಲಯ್ಯ ಹಿರೇಮಠ ಹಾಗೂ ರಬಕವಿ ಆಸಂಗಿ, ಅಸ್ಕಿ, ಹೊಸೂರ ಮತ್ತು ಬನಹಟ್ಟಿ ನಗರ ಸೇರಿದಂತೆ ಅನೇಕ ಗ್ರಾಮಗಳಿಂದ ಆಗಮಿಸಿದ ಜಂಗರು ಸೇರಿದಂತೆ ಅನೇಕರಿದ್ದರು. ಬಸಯ್ಯ ವಸ್ತ್ರದ ಸ್ವಾಗತಿಸಿದರು. ಶಿವರುದ್ರಯ್ಯ ಕಾಡದೇವರ ನಿರೂಪಿಸಿದರು. ಗುರುಬಸಯ್ಯ ಜಮಖಂಡಿಮಠ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next