Advertisement

ಗಾಂಧಿ ಭವನ ನಿರ್ಮಾಣಕ್ಕಾಗಿ ಸಭೆ

04:37 PM Aug 31, 2017 | |

ಯಾದಗಿರಿ: ಜಿಲ್ಲಾ ಕೇಂದ್ರದಲ್ಲಿ ಗಾಂಧಿ ಭವನ ನಿರ್ಮಾಣಕ್ಕಾಗಿ ಒಂದು ಎಕರೆ ಭೂಮಿಯನ್ನು
ತುರ್ತಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ ಜೆ. ಮಂಜುನಾಥ ಅವರು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ಜಿಲ್ಲಾ ಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕಂದಾಯ ಇಲಾಖೆ ಅಧಿಕಾರಿಗಳ
ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಗಾಂಧಿಭವನ ನಿರ್ಮಾಣ ಮಾಡಬೇಕೆಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆಯಾಗಿದ್ದು, ಬರುವ ಅಕ್ಟೋಬರ್‌ 2ರಂದು ಮಹಾತ್ಮಗಾಂಧಿ ಜಯಂತಿಯಂದು ಯಾದಗಿರಿ ಜಿಲ್ಲಾ ಕೇಂದ್ರದಲ್ಲೂ ಶಂಕುಸ್ಥಾಪನೆ ನೆರವೇರಿಸಬೇಕಿದೆ. ಹಾಗಾಗಿ ಶೀಘ್ರ ಜಾಗ ನೀಡುವಂತೆ ಅವರು ನಿರ್ದೇಶಿಸಿದ್ದಾರೆ.

ಸಭೆಯಲ್ಲಿ ಅಪರ ಜಿಲ್ಲಾ ಧಿಕಾರಿ ಡಾ| ಬಿ.ಸಿ ಸತೀಶ್‌ ಮಾತನಾಡಿ, ಈಗಾಗಲೇ ಚಿತ್ತಾಪುರ
ರಸ್ತೆಯಲ್ಲಿ ಒಂದು ಎಕರೆ ನಿವೇಶನ ನೀಡಲು ಪ್ರಕ್ರಿಯೆ ನಡೆದಿದೆ. ಅಲ್ಲಿ ಮಿನಿ ವಿಧಾನಸೌಧ
(ತಹಸೀಲ್ದಾರ್‌ ಕಚೇರಿ)ಕ್ಕೆಂದು ಗುರುತಿಸಲಾಗಿರುವ 5 ಎಕರೆ ಭೂಮಿಯಲ್ಲಿ ಒಂದು ಎಕರೆ ವಾರ್ತಾ
ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಭೂಮಿ ಮಂಜೂರು ಮಾಡಿ, ದಾಖಲೆಗಳನ್ನು
ಹಸ್ತಾಂತರಿಸಬಹುದು ಎಂದು ಸಭೆಗೆ ಮಾಹಿತಿ ನೀಡಿದರು.

ಈ ಹಿಂದೆ ಜಿಲ್ಲಾ ಧಿಕಾರಿಗಳು ತಹಶೀಲ್ದಾರ್‌ ಕಚೇರಿಗೆಂದು 5 ಎಕರೆ ಭೂಸ್ವಾಧೀನ
ಪಡಿಸಿಕೊಂಡಿದ್ದರು. ಆದರೆ ಕಂದಾಯ ಇಲಾಖೆ ದಾಖಲೆ (ಪಹಣಿ)ಯಲ್ಲಿ 7 ಎಕರೆ ಎಂದು
ನಮೂದಾಗಿದೆ. ಈ ದೋಷವನ್ನು ಸರಿಪಡಿಸಿ ನಿವೇಶನ ನೀಡಬಹುದಾಗಿದೆ ಎಂದು ಅವರು ಜಿಲ್ಲಾ 
ಧಿಕಾರಿಗಳ ಗಮನಕ್ಕೆ ತಂದರು. ನಗರದ ಇನ್ನಿತರೆಡೆ ಸ್ಥಳ ಲಭ್ಯವಿರುವ ಬಗ್ಗೆ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಂದ ವಿವರ ಕೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸಿದ್ದೇಶ್ವರಪ್ಪ ಜಿ.ಬಿ. ಅವರು ಮಾತನಾಡಿ, ಬೇರೆ ಎರಡು ಕಡೆ ನಿವೇಶನಗಳನ್ನು ವೀಕ್ಷಿಸಿದ್ದು, ಎರಡೂ ಕೂಡ ಗಾಂಧಿ ಭವನ ನಿರ್ಮಾಣಕ್ಕೆ ಪ್ರಶಸ್ತವಾಗಿಲ್ಲ. ಒಂದು ಜಾಗದ ಬಗ್ಗೆ ನ್ಯಾಯಾಲಯದಲ್ಲಿ ವ್ಯಾಜ್ಯ ಇದ್ದರೆ, ಮತ್ತೂಂದು ಭೂಮಿಗೆ ಸರಿಯಾದ ರಸ್ತೆ ಸಂಪರ್ಕವಿಲ್ಲ. ಹಾಗಾಗಿ ಚಿತ್ತಾಪುರ ರಸ್ತೆಯಲ್ಲಿ ತಹಶೀಲ್ದಾರ್‌ ಕಚೇರಿಗೆ ಸೇರಿದ ಒಂದು ಎಕರೆ ಭೂಮಿಯನ್ನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

Advertisement

ಸಭೆಯಲ್ಲಿ ಚರ್ಚಿಸಿದ ಬಳಿಕ ಚಿತ್ತಾಪೂರ ರಸ್ತೆಯಲ್ಲಿರುವ ಒಂದು ಎಕರೆ ನಿವೇಶನವನ್ನೇ ವಾರ್ತಾ ಇಲಾಖೆಗೆ ಮಂಜೂರು ಮಾಡಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಹಿಂದುಳಿದ ವರ್ಗಗಳ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ,
ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಕ್‌ ಹಾಗೂ ಸೈದಾಪುರ, ಶಹಾಪುರ, ಸುರಪುರ ಹಾಗೂ ಯಾದಗಿರಿಯಲ್ಲಿ ಐಟಿಐ ಕಾಲೇಜಿಗಾಗಿ ನಿವೇಶನಗಳನ್ನು ಮಂಜೂರು ಮಾಡುವ ಕುರಿತು ಚರ್ಚಿಸಲಾಯಿತು.

ಸಹಾಯಕ ಆಯುಕ್ತ ಡಾ| ಜಗದೀಶ್‌ ಕೆ.ನಾಯಕ್‌, ತಹಶೀಲ್ದಾರ ಚನ್ನಮಲ್ಲಪ್ಪ ಘಂಟಿ ಸೇರಿದಂತೆ ಕಂದಾಯ ಹಾಗೂ ಇನ್ನಿತರ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next