Advertisement

ಮೂರು ತಿಂಗಳಲ್ಲಿ ಶೇ.100 ಕಸ ವಿಂಗಡಿಸುವ ಗುರಿ

12:05 PM Sep 18, 2020 | Suhan S |

ಬೆಂಗಳೂರು: ಪಾಲಿಕೆ ವ್ಯಾಪ್ತಿಯ 78 ವಾರ್ಡ್‌ಗಳಲ್ಲೂ ಪ್ರತ್ಯೇಕ ಹಸಿಕಸ ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ತಿಳಿಸಿದರು.

Advertisement

ಗುರುವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆಡಳಿತಾಧಿಕಾರಿ ಗೌರವ್‌ ಗುಪ್ತಾ ಅವರ ಅಧ್ಯಕ್ಷತೆಯಲ್ಲಿ ಘನತ್ಯಾಜ್ಯ ವಿಭಾಗದ ಅಧಿಕಾರಿಗಳ ಸಭೆ ನಡೆಸಿ ಪ್ರತ್ಯೇಕ ಕಸ ಸಂಗ್ರಹ ಯೋಜನೆ ಜಾರಿ ಸಂಬಂಧ ಸಭೆ ನಡೆಸಲಾಯಿತು.ಈ ವೇಳೆ ಮಾತನಾಡಿದ ಆಯುಕ್ತರು, ನಗರದಲ್ಲಿ ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರತ್ಯೇಕ ಕಸ ಸಂಗ್ರಹ ಯೋಜನೆಗೆ 38 ವಾರ್ಡ್‌ಗಳಲ್ಲಿ ಕಾರ್ಯಾದೇಶ ನೀಡಲಾಗಿದ್ದು, ಉಳಿದ 78 ವಾರ್ಡ್‌ಗಳಲ್ಲಿ ಪ್ರತ್ಯೇಕ ಕಸ ಸಂಗ್ರಹಿಸುವ ಜಾರಿ ಕುರಿತು ಗುತ್ತಿಗೆದಾರರಿಗೆ ಕೆಲಸ ಆರಂಭಕ್ಕೆ ಸ್ವೀಕೃತಿ ಪತ್ರ ನೀಡಲಾಗಿದೆ. ಶೀಘ್ರವಾಗಿ ಕೆಲಸ ಆರಂಭಿಸಲು ಸೂಚಿಸಲಾಗಿದೆ ಎಂದರು.

ಪಾಲಿಕೆಯ ಹಸಿಕಸ ಸಂಸ್ಕರಣಾ ಘಟಕಗಳಲ್ಲಿ ವಾಸನೆ ಬರದಂತೆ ಹಾಗೂ ವೇಸ್ಟ್‌ ಟು ಎನರ್ಜಿ ಘಟಕಗಳನ್ನು ಶೀಘ್ರ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಬೆಸ್ಕಾಂ ಹಾಗೂ ಕೆಪಿಸಿಎಲ್‌ ಜತೆ ಸೇರಿ ಅನುಷ್ಟಾನ ಮಾಡಲಾಗುವುದು. ಇದ ಕ್ಕಾಗಿ ಬಿಡದಿ ಬಳಿ ಜಮೀನು ಗುರುತಿಸಲಾಗಿದ್ದು, ಈಗಾಗಲೇ ಟೆಂಡರ್‌ ಅಂತಿಮವಾಗಿದೆ. ಕನ್ನಹಳ್ಳಿ, ಸೀಗೇಹಳ್ಳಿಯಲ್ಲಿ ವೇಸ್ಟ್‌ ಟು ಎನರ್ಜಿ ಘಟಕ ಸ್ಥಾಪಿಸಲು ಕ್ರಮವಹಿಸಲಾಗುತ್ತಿದೆ. ಮಾವಳ್ಳಿಪುರ ದಲ್ಲಿ ಎರಡು ಹಾಗೂ ದೊಡ್ಡಬಿದರೆಕಲ್ಲಿ ಘಟಕ ಸ್ಥಾಪನೆ ಮಾಡುವ ಪ್ರಸ್ತಾವನೆ ಇದೆ. ಕಾರ್ಯಾದೇಶ ನೀಡಿದರೆ ಕೆಲಸ ಪ್ರಾರಂಭವಾಗಲಿದ್ದು, ಇದಕ್ಕೆ ಆಡಳಿತಾಧಿಕಾರಿಗಳು ಅನುಮತಿ ನೀಡಿದ್ದಾರೆ ಎಂದರು.

ವಿಶೇಷ ಆಯುಕ್ತ (ಘನತ್ಯಾಜ್ಯ) ಡಿ.ರಂದೀಪ್‌, ಜಂಟಿ ಆಯುಕ್ತ ಸರ್ಫರಾಜ್‌ ಖಾನ್‌, ಅಧೀಕ್ಷಕ ಎಂಜಿನಿಯರ್‌ ಬಸವರಾಜ್‌ ಕಬಾಡೆ, ಘನತ್ಯಾಜ್ಯ ನಿರ್ವಹಣೆ ಮುಖ್ಯ ಎಂಜಿನಿಯರ್‌ ವಿಶ್ವನಾಥ್‌ ಇತರರಿದ್ದರು.

3 ತಿಂಗಳಲ್ಲಿ ಶೇ.100 ಕಸ ವಿಂಗಡನೆ ಗುರಿ: ನಗರದಲ್ಲಿ ಕಸ ಸಂಗ್ರಹ ಮಾಡುವುದಕ್ಕೆ ಚಾಲನೆ ನೀಡುತ್ತಿರುವ ಬೆನ್ನಲ್ಲೇ ನಗರದಲ್ಲಿ ಶೇ.100 ಕಸ ವಿಂಗಡಣೆಗೆ ಪಾಲಿಕೆ ಗಡುವು ನೀಡಲು ಮುಂದಾಗಿದೆ. ಈಗಾಗಲೇ ನೂತನ ಯೋಜನೆ ಜಾರಿಯಾಗುತ್ತಿರುವ ವಾರ್ಡ್‌ಗಳಲ್ಲಿ ಗುತ್ತಿಗೆದಾರರಿಗೆ ನಿರ್ದೇಶನ ನೀಡಲಾಗುತ್ತಿದ್ದು, ಇದೇ ಮಾದರಿ ನಗರದ ಎಲ್ಲೆಡೆ ಅಳವಡಿಸಿಕೊಳ್ಳಲು ಪಾಲಿಕೆ ನಿರ್ಧರಿಸಿದೆ.

Advertisement

ಕಸ ವಿಲೇವಾರಿ ಮಾಹಿತಿಗೆ ನೂತನ ಆ್ಯಪ್‌:ಒಣ-ಹಸಿ ಕಸ ವಿಂಗಡಣೆ ಸಂಬಂಧ ನೂತನ ಬಿಬಿಎಂಪಿ ಆ್ಯಪ್‌ ಬಿಡುಗಡೆ ಮಾಡಲಾಗುವುದು ಆ್ಯಪ್‌ ಮೂಲಕ ಸಾರ್ವಜನಿಕರು ಕಸದ ವಾಹನದ ಲೈವ್‌ ಲೊಕೇಷನ್‌ (ಆಟೋ ಇರುವ ಸ್ಥಳ)ಮಾಹಿತಿ ಪಡೆಯಬಹುದು. ಕಸದ ವಾಹನ ಮನೆ ಬಳಿಗೆ ಎಷ್ಟು ಹೊತ್ತಿಗೆ ಬರಬಹುದು ಎಂದು ತಿಳಿಬಹುದು. ಒಂದು ವೇಳೆ ಬರದಿದ್ದರೆ ದೂರು ನೀಡಬಹುದು. ಹಸಿ ಕಸವನ್ನು ಸ್ಥಳೀಯವಾಗಿ ‘ನಮ್ಮ ಕಸ ನಮ್ಮ ಜವಾಬ್ದಾರಿ’ಘೋಷಣೆಯ ಮೂಲಕ ಸಂಸ್ಕರಿಸಲು ಕ್ರಮ ಕೈಗೊಳ್ಳಬೇಕು. ಕಸದ ಬಗ್ಗೆ ಸಾರ್ವಜನಿಕರು ಹಾಗೂ ಮಕ್ಕಳಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಮಗ್ರ ಮಾಹಿತಿಯ ಕೈಪಿಡಿ ಬಿಡುಗಡೆ ಮಾಡಲಾಗುವುದು ಎಂದು ಆಯುಕ್ತರು ತಿಳಿಸಿದರು.

ಆದಾಯ ಸಂಪನ್ಮೂಲ ಹೆಚ್ಚಳಕ್ಕೆ ಕ್ರಮ: ಪಾಲಿಕೆಯ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕಂದಾಯ ವಿಭಾಗದ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿದೆ. ಪಾಲಿಕೆಯ ಆದಾಯಕ್ಕಿಂತ ಹೆಚ್ಚು ವೆಚ್ಚ ಭರಿಸಬೇಕಾಗಿರುವ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ಪರಿಷ್ಕರಿಸಿ ಮಂಡನೆಮಾಡಲಿದ್ದಾರೆ. ವರದಿ ಮಂಡನೆಯಾದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಡಳಿತಾಧಿಕಾರಿ ಗೌರವ್‌ ಗುಪ್ತಾ ತಿಳಿಸಿದರು.

ನಗರದಲ್ಲಿ ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕಸ ಸಂಗ್ರಹಣೆ, ಸಾಗಾಣಿಕೆ, ವಿಲೇವಾರಿ ಬಗ್ಗೆ ಘನತ್ಯಾಜ್ಯ ವಿಭಾಗದ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿದೆ. ಸಮಸ್ಯೆ ಪರಿಹಾರಕ್ಕೆ ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಿದ್ದೇವೆ. ಗೌರವ್‌ ಗುಪ್ತಾ, ಬಿಬಿಎಂಪಿ ಆಡಳಿತಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next