ಜೇವರ್ಗಿ: ಹೈದರಾಬಾದ-ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ಕೇವಲ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿದೆ. ಆದರೆ, ರಾಜ್ಯ ಬಿಜೆಪಿ ಸರ್ಕಾರ ಈ ಭಾಗದ ಅಭಿವೃದ್ಧಿಗೆ ನಯಾಪೈಸೆ ಅನುದಾನ ನೀಡದೇ ನಿರ್ಲಕ್ಷ್ಯ ವಹಿಸಿದೆ. ಕಲ್ಯಾಣ ಕರ್ನಾಟಕಕ್ಕೆ ಬಿಜೆಪಿ ಕೊಡುಗೆ ಶೂನ್ಯ ಎಂದು ಶಾಸಕ ಡಾ| ಅಜಯಸಿಂಗ್ ಆರೋಪಿಸಿದರು.
ಪಟ್ಟಣದ ಮಿನಿ ವಿಧಾನಸೌಧ ಕಚೇರಿಯಲ್ಲಿ ಬೆಳೆಹಾನಿ ಕುರಿತು ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಕೇವಲ ಹೆಸರು ಬದಲಿಸಿದರೇ ಸಾಲದು ಅದರ ಜೊತೆ ಪ್ರತಿ ವರ್ಷ 2500 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಹಿಂದುಳಿದ ಭಾಗದ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು. ಕಳೆದ 2013ರಲ್ಲಿ ಯುಪಿಎಸರ್ಕಾರ ಈ ಭಾಗದ ಅಭಿವೃದ್ಧಿಗಾಗಿ 371 (ಜೆ) ಕಲಂ ಜಾರಿಗೆ ತಂದಿದ್ದು ಅಲ್ಲದೇ ಅಂದಿನ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹೈದರಾಬಾದ-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 1,000 ಕೋಟಿ ರೂ. ಇದ್ದ ಅನುದಾನವನ್ನು 1,500 ಕೋಟಿಗೆ ಹೆಚ್ಚಿಸಿತ್ತು. ರಾಜ್ಯ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಈ ಭಾಗದ ಸರ್ವ ಪಕ್ಷದ ಮುಖಂಡರು, ಶಾಸಕರು, ಸಂಸದರು, ಜನಪ್ರತಿನಿಧಿ ಗಳು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ಕೆಕೆಆರ್‌ಡಿಬಿಗೆ 2,500 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿತ್ತು. ಆದರೆ ಇಲ್ಲಿಯವರೆಗೂ ಈ ಭಾಗಕ್ಕೆ ನಯಾಪೈಸೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.
ಈ ಭಾರಿ ತಾಲೂಕಿನಲ್ಲಿ ತೊಗರಿ 51,000 ಹೆಕ್ಟೇರ್, ಹತ್ತಿ-56,000, ಭತ್ತ-4,238, ಮೆಕ್ಕೆಜೋಳ-135, ಸಜ್ಜೆ-140, ಹೆಸರು-310ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ಅತೀವೃಷ್ಟಿಯಿಂದ ಜೇವರ್ಗಿ ತಾಲೂಕನ್ನು ಪ್ರವಾಹ ಪೀಡಿತ ಎಂದು ಘೋಷಣೆ ಮಾಡಲಾಗಿದ್ದು, ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಈ ಹಿಂದೆ ಮಾಡಿದ ಸಮೀಕ್ಷೆ ಪ್ರಕಾರ ನೇದಲಗಿ ಹಾಗೂ ಹರವಾಳ ಭಾಗದಲ್ಲಿ 210 ಹೆಕ್ಟೇರ್ ಬೆಳೆಹಾನಿಯಾಗಿದೆ. ತಾಲೂಕಿನಲ್ಲಿ ಪ್ರತಿಶತ ವಾಡಿಕೆಗಿಂತ ಶೇ.24 ಹೆಚ್ಚು ಮಳೆಯಾಗಿದ್ದು, ಬೆಳೆಹಾನಿಯಾದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರಕ್ಕಾಗಿ ಒತ್ತಾಯ ಮಾಡಲಾಗುವುದು ಎಂದು ಹೇಳಿದರು.
ತಾಲೂಕಿನ ಯಾಳವಾರ ಬಳಿ ಜಿಲ್ಲಾಡಳಿತ ಹಾಗೂ ಧರ್ಮಸಿಂಗ್ ಫೌಂಡೇಶನ್ ವತಿಯಿಂದ ಸ್ಥಾಪಿಸಲಾಗಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ಇಲ್ಲಿವರೆಗೆ ಒಟ್ಟು 103 ಜನ ಸೋಂಕಿತರು ದಾಖಲಾಗಿದ್ದು, ಅದರಲ್ಲಿ ಒಟ್ಟು 83 ಜನ ಗುಣಮುಖರಾಗಿದ್ದಾರೆ. ಉಳಿದ 20 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸಿದರಾಯ ಭೋಸಗಿ, ತಾಲೂಕು ಆರೋಗ್ಯಾಧಿ ಕಾರಿ ಡಾ| ಸಿದ್ದು ಪಾಟೀಲ ಸೇರಿದಂತೆ ಮತ್ತಿತರರು ಇದ್ದರು.