Advertisement

Vittal Mallya:ದಾರಿ ತಪ್ಪಿದ…ವಿಜಯ್‌ ಮಲ್ಯ!ಇದು ಚಾಣಾಕ್ಷ ಉದ್ಯಮಿ ವಿಠಲ್‌ ಮಲ್ಯ ಯಶೋಗಾಥೆ

04:13 PM Dec 20, 2023 | ನಾಗೇಂದ್ರ ತ್ರಾಸಿ |

ಯಾವುದೇ ಉದ್ಯಮ ಇರಲಿ ಅದರಲ್ಲಿ ಯಶಸ್ವಿಯಾಗಿ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ಉಳಿಯುವುದು ಅದೊಂದು ಯಶೋಗಾಥೆಯೇ. ಅದೇ ರೀತಿ ಯಶಸ್ವಿ ಉದ್ಯಮಿಯಾಗಲು ಹೊರಟು ನೇಪಥ್ಯಕ್ಕೆ ಸರಿದವರ ಸಂಖ್ಯೆಯೂ ಕಡಿಮೆ ಇಲ್ಲ. ಇವೆಲ್ಲದರ ನಡುವೆ ಬಂಟ್ವಾಳದ ವಿಠಲ್‌ ಮಲ್ಯ ಅವರು ಆ ಕಾಲದಲ್ಲಿ ವಿವಿಧ ಕ್ಷೇತ್ರಗಳ ವಹಿವಾಟಿನಲ್ಲಿ ತೊಡಗಿಕೊಂಡು ಉದ್ಯಮ ಸಾಮ್ರಾಜ್ಯವನ್ನೇ ಕಟ್ಟಿದ ಯಶೋಗಾಥೆ ರೋಚಕವಾದದ್ದು…

Advertisement

ಇದನ್ನೂ ಓದಿ:Bigg Boss ಗೆದ್ದ ಪಲ್ಲವಿ ಪ್ರಶಾಂತ್‌ ವಿರುದ್ದ ಜಾಮೀನು ರಹಿತ ಕ್ರಿಮಿನಲ್‌ ಕೇಸ್‌ ದಾಖಲು

1924ರ ಫೆಬ್ರವರಿ 8ರಂದು ಅಂದಿನ ಮದ್ರಾಸ್‌ ಪ್ರೆಸಿಡೆನ್ಸಿಯ ಬಂಟ್ವಾಳದಲ್ಲಿ ವಿಠಲ್‌ ಮಲ್ಯ ಜನಿಸಿದ್ದರು. ಅವರು ಲೆಫ್ಟಿನೆಂಟ್‌ ಕರ್ನಲ್‌ ಬಂಟ್ವಾಳ ಗಣಪತಿ ಮಲ್ಯ, ದೇವಿ ಮಲ್ಯ ಅವರ ಮೂವರು ಮಕ್ಕಳಲ್ಲಿ ಕಿರಿಯವರಾಗಿದ್ದರು. ಇವರ ತಂದೆ ಸೇನೆಯಲ್ಲಿದ್ದಿದ್ದರಿಂದ ವಿವಿಧ ರಾಜ್ಯಗಳಲ್ಲಿ ಕಾರ್ಯನಿರ್ವಹಿಸಬೇಕಾಗಿತ್ತು. ಹೀಗಾಗಿ ವಿಠಲ್‌ ಮಲ್ಯ ಅವರು ಭಾರತದ ಅನೇಕ ಪಟ್ಟಣಗಳಲ್ಲಿ ಬೆಳೆಯುವಂತಾಗಿತ್ತು. ಹೀಗಾಗಿ ಮಲ್ಯ ಅವರು 12ನೇ ವರ್ಷದಲ್ಲಿ ಕೋಲ್ಕತಾದ ಡೂನ್‌ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದು, ನಂತರ ಪದವಿ ಶಿಕ್ಷಣ ಪಡೆದಿದ್ದರು.

ವಿಠಲ್‌ ಮಲ್ಯ ಅವರು ಶಾಲಾ ದಿನಗಳಲ್ಲಿಯೇ ಅತ್ಯಂತ ಚುರುಕಿನ ವಿದ್ಯಾರ್ಥಿಯಾಗಿದ್ದರು. ಶೈಕ್ಷಣಿಕ ಜೀವನದಲ್ಲಿ ಅವರು ಹಲವಾರು ಗೌರವಗಳಿಗೆ ಪಾತ್ರರಾಗಿದ್ದರು. ಕಾಲೇಜು ದಿನಗಳಲ್ಲಿ ಮಲ್ಯ ಅವರು ಶೇರು ಪೇಟೆಯಲ್ಲಿ ಹೂಡಿಕೆ ಮಾಡುವ ಮೂಲಕ ಹಣ ದ್ವಿಗುಣಗೊಳಿಸುವ ಕಲೆ ಕರಗತ ಮಾಡಿಕೊಂಡಿದ್ದರು. ಪದವಿ ಶಿಕ್ಷಣದ ನಂತರ ಮಲ್ಯ ಅವರು 2 ವರ್ಷಗಳ ಕಾಲ ವಿದೇಶ ಪ್ರವಾಸ ಕೈಗೊಂಡಿದ್ದು, ಈ ವೇಳೆ ಪ್ರಾಯೋಗಿಕ ಜ್ಞಾನ ಪಡೆಯುವಂತಾಯ್ತು. ಅಷ್ಟೇ ಅಲ್ಲ ಅಲ್ಲಿ ಅವರು ಸ್ಪ್ಯಾನಿಷ್‌ ಭಾಷೆಯನ್ನೂ ಕಲಿತಿದ್ದರು.

Advertisement

ಮದ್ಯದ ದೊರೆ ವಿಠಲ್‌ ಮಲ್ಯ!

ಹೌದು ಇದು ದೇಶ ಬಿಟ್ಟು ಪರಾರಿಯಾಗಿರುವ ಉದ್ಯಮಿ ವಿಜಯ್‌ ಮಲ್ಯ ಅವರ ತಂದೆಯ ಉದ್ಯಮದ ಯಶೋಗಾಥೆ. ವಿಠಲ್‌ ಮಲ್ಯ ಅವರು ಕೇವಲ ಯೂನೈಟೆಡ್‌ ಬ್ರೂವರೀಸ್‌, ಮ್ಯಾಕ್‌ ಡೊವೆಲ್ಲ, ಕ್ಯಾಡ್‌ ಬರಿ, ಕಿಸ್ಸಾನ್‌ ಜಾಮ್‌ ನಂತಹ ಬ್ರ್ಯಾಂಡ್‌ ಗಳ ಮುಖ್ಯಸ್ಥರಾಗಿದ್ದರು.

ಮದ್ಯವನ್ನು ಹೊರತುಪಡಿಸಿ ವಿಠಲ್‌ ಮಲ್ಯ ಅವರು ಖಾದ್ಯ ಉದ್ಯಮ ಸೇರಿದಂತೆ ಫಿನಿಟ್‌ ಮೂಲಕ ದೇಶೀಯ ಕೀಟನಾಶಕ ಮಾರುಕಟ್ಟೆಯ ಶೇ.75 ಪ್ರತಿಶತ ಸ್ವಾಧೀನಕ್ಕೆ ತೆಗೆದುಕೊಂಡಿದ್ದರು. ಅಲ್ಲದೇ ಮಲ್ಯ ಅವರು ಸಿಂಗರ್‌ ಹೊಲಿಗೆ ಯಂತ್ರ, ಕ್ಯಾಡ್ಬರಿ ಚಾಕೋಲೇಟ್ಸ್‌ ಉತ್ಪಾದನೆ ಮೇಲೂ ಪ್ರಭಾವ ಬೀರಿದ್ದಲ್ಲದೇ, ಹೋಚ್ಸೈ ಮತ್ತು ರೌಸೆಲ್‌ ನಂತಹ ಕಂಪನಿಗಳಂತಹ ಅಗತ್ಯ ಔಷಧಗಳನ್ನು ಉತ್ಪಾದಿಸುವ ಉದ್ಯಮಗಳನ್ನು ಸ್ಥಾಪಿಸಿದ್ದರು.

1946-47ರಲ್ಲಿ ಮಲ್ಯ ಅವರು ಯುನೈಟೆಡ್‌ ಬ್ಯೂವರೀಸ್‌ ಲಿಮಿಟೆಡ್‌ ನ ಷೇರುಗಳನ್ನು ಖರೀದಿಸತೊಡಗಿದ್ದರು. ಅದರ ಪರಿಣಾಮ 1947ರಲ್ಲಿ ಯುನೈಟೆಡ್‌ ಬ್ಯೂವರೀಸ್‌ ನ ಮೊದಲ ಭಾರತೀಯ ನಿರ್ದೇಶಕರಾಗಿ ವಿಠಲ್‌ ಮಲ್ಯ ಆಯ್ಕೆಯಾಗಿದ್ದರು. 1948ರಲ್ಲಿ ಆರ್‌ ಜಿಎನ್‌ ಪ್ರೈಸ್‌ ಕಂಪನಿಯ ಅಧ್ಯಕ್ಷರಾದರು. 1951ರಲ್ಲಿ ಮೆಕ್ಡೊವೆಲ್‌ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದರು.

1952ರಲ್ಲಿ ಬೆಂಗಳೂರಿಗೆ ಮರಳಿದ ವಿಠಲ್‌ ಮಲ್ಯ ಅವರು ಸಣ್ಣ ಬ್ರೂವರೀಸ್‌ ಮತ್ತು ಡಿಸ್ಟಿಲರಿಗಳನ್ನು ಪ್ರಾರಂಭಿಸಿದರು. ಬಳಿಕ ಕೇರಳ, ಆಂಧ್ರಪ್ರದೇಶ, ಗೋವಾ ಮತ್ತು ಬಿಹಾರದಲ್ಲಿ ಹೊಸ ಬ್ರೂವರೀಸ್‌ ಗಳನ್ನು ಸ್ಥಾಪಿಸುವ ಮೂಲಕ ಮದ್ಯದ ಉದ್ಯಮದಲ್ಲಿ ದಾಪುಗಾಲಿಟ್ಟಿದ್ದರು.

ಹೀಗೆ ಒಂದೊಂದು ಉದ್ಯಮದಲ್ಲಿ ಚಾಣಾಕ್ಷತನದಿಂದ ಸ್ವಾಧೀನ ಮತ್ತು ಹೂಡಿಕೆ ಮಾಡುವ ಮೂಲಕ ಬರೋಬ್ಬರಿ 300 ಕೋಟಿ ರೂಪಾಯಿ ವಹಿವಾಟನ್ನು ಹೊಂದುವಂತಾಗಿತ್ತು. ಮಹತ್ವಾಕಾಂಕ್ಷೆಯ ಉದ್ಯಮ ವಿಸ್ತರಣೆಯಲ್ಲಿ ತೊಡಗಿದ ಮಲ್ಯ ಅವರು 30ಕ್ಕೂ ಅಧಿಕ ಸಂಸ್ಥೆಗಳನ್ನು ಕಟ್ಟಿದ್ದರು. ಬ್ಯಾಟರಿಗಳಿಂದ ಹಿಡಿದು ಪಾಲಿಮರ್‌ ವರೆಗೆ, ತೋಟ, ಪೇಂಟ್ಸ್‌ ಉದ್ಯಮಕ್ಕೂ ಕಾಲಿರಿಸಿದ್ದರು. 1981ರ ಹೊತ್ತಿಗೆ ಮಲ್ಯ ಅವರು 10 ಬ್ರೂವರೀಸ್‌, 14 ಡಿಸ್ಟಿಲರೀಸ್‌, ಸಂಸ್ಕರಿಸಿದ ಆಹಾರ ಉದ್ಯಮಗಳು, ಹೂಡಿಕೆ ಸಂಸ್ಥೆಗಳು, ಪ್ಯಾಕೇಜಿಂಗ್‌ ಘಟಕಗಳು, ಔಷಧ ತಯಾರಿಕೆ, ತಂಪು ಪಾನೀಯ ಬಾಟಲಿಂಗ್‌ ಘಟಕ ಹಾಗೂ ಸ್ಟೈರೀನ್‌ ಕಂಪನಿಗಳನ್ನು ಹೊಂದಿದ್ದರು.

1962ರಲ್ಲಿ ಮಲ್ಯ ಅವರು ಕಿಸ್ಸಾನ್‌ ಉತ್ಪನ್ನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಆಹಾರ ಉದ್ಯಮದಲ್ಲಿ ತೊಡಗಿಕೊಂಡಿದ್ದರು. ಸುಮಾರು ಒಂದು ದಶಕದ ನಂತರ ಹರ್ಬಟ್ಸ್‌ ಅನ್ಸ್‌ ಅನ್ನು ಸ್ವಾಧೀನಕ್ಕೆ ತೆಗೆದುಕೊಂಡ ನಂತರ ವಿವಿಧ ಸಂಸ್ಕರಿಸಿದ ಆಹಾರ ಉತ್ಪನ್ನಗಳ ಮೇಲಿನ ಹಿಡಿತವನ್ನು ಬಲಪಡಿಸಿಕೊಂಡಿದ್ದರು.

ಆಲ್ಕೋಹಾಲ್‌, ಆಹಾರ, ಪೇಂಟ್ಸ್‌, ಬ್ಯಾಟರೀಸ್‌, ಹೊಲಿಗೆ ಯಂತ್ರ, ಔಷಧ ಕ್ಷೇತ್ರಗಳಲ್ಲದೇ, ಕಿಸ್ಸಾನ್‌ ಉತ್ಪನ್ನದತ್ತ ಹೊರಳಿದ ವಿಠಲ ಮಲ್ಯ ಅವರು ಕ್ಯಾಡ್ಬರಿ ಇಂಡಿಯಾದ ಮಂಡಳಿಯಲ್ಲಿ ಸ್ಥಾನ ಪಡೆದಿದ್ದು, ನಂತರ ಅದರ ಅಧ್ಯಕ್ಷಗಾದಿಗೆ ಏರುವಂತಾಗಿತ್ತು. ಇವರ ಅಪ್ರತಿಮ ಉದ್ಯಮ ಚಾಣಾಕ್ಷತೆಗೆ ಬ್ರಿಟಿಸ್‌ ಪೇಂಟ್ಸ್‌ ನ ಅಧ್ಯಕ್ಷ ಹುದ್ದೆ ಲಭಿಸಿತ್ತು.

ವೈಯಕ್ತಿಕ ಜೀವನ:

ವಿಠಲ್‌ ಮಲ್ಯ ಅವರು ಖ್ಯಾತ ಉದ್ಯಮಿಯಾಗಿದ್ದರು ಅವರೊಬ್ಬ ಮಿತವ್ಯಯದ ಅಭ್ಯಾಸ ಮತ್ತು ಸರಳ ಮೌಲ್ಯದ ವ್ಯಕ್ತಿತ್ವ ಹೊಂದಿದ್ದರು. ಮಲ್ಯ ಅವರು ಮೂರು ವಿವಾಹವಾಗಿದ್ದರು. ಮೊದಲು ಮಲ್ಯ ಅವರು ಲಲಿತಾ ರಾಮ್ಯ ಜತೆ ವಿವಾಹವಾಗಿದ್ದರು. ಈ ದಂಪತಿಯ ಪುತ್ರ ವಿಜಯ್‌ ಮಲ್ಯ. ನಂತರ ವಿಠಲ್‌ ಮಲ್ಯ ಅವರು ವಿಚ್ಛೇದಿತ ಮಹಿಳೆ ಜತೆ ವಾಸವಾಗಿದ್ದರು. ಮೂರನೇ ವಿವಾಹ ಮುಂಬೈ ಮೂಲದ ಸಿಂಧಿ ಮಹಿಳೆ ಕೈಲಾಶ್‌ ಅಡ್ವಾಣಿ ಜತೆ ನಡೆದಿತ್ತು.( ಇವರಿಗೆ ಮಕ್ಕಳಿರಲಿಲ್ಲ). 1983ರ ಅಕ್ಟೋಬರ್‌ 13ರಂದು ವಿಠಲ್‌ ಮಲ್ಯ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದು, ಉದ್ಯಮ ಜಗತ್ತಿಗೆ ನಷ್ಟ ತಂದಿತ್ತು. ಆದರೆ ವಿಠಲ್‌ ಮಲ್ಯ ಅವರು ಉದ್ಯಮ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದರೆ, ಪುತ್ರ ವಿಜಯ್‌ ಮಲ್ಯ ಅದಕ್ಕೆ ತದ್ವಿರುದ್ಧವಾಗಿದ್ದು ವಿಪರ್ಯಾಸ!

Advertisement

Udayavani is now on Telegram. Click here to join our channel and stay updated with the latest news.

Next