Advertisement

ನಾಳೆ ಬೆಂಗಳೂರಲ್ಲಿ ಟಿಇಟಿ ಅಭ್ಯರ್ಥಿಗಳ ಸಭೆ: ಅಂಬಲಗಿ

04:17 PM Apr 08, 2019 | Team Udayavani |

ಕಲಬುರಗಿ: ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಯಲ್ಲಿ ಕೇಳಲಾದ ಅಸ್ಪಷ್ಟ 16 ಪ್ರಶ್ನೆಗಳಿಗೆ ಮತ್ತು ಹೈದ್ರಾಬಾದ ಕರ್ನಾಟಕ
ಭಾಗದ 371(ಜೆ)ನೇ ಕಲಂ ಮೀಸಲಾತಿಯಡಿ ಶೇ.15ರಷ್ಟು ಕೃಪಾಂಕ ಪಡೆಯುವ ವಿಷಯಕ್ಕೆ ಸಂಬಂಧಿಸಿದಂತೆ ಏ.9ರಂದು ಮಧ್ಯಾಹ್ನ 12ಗಂಟೆಗೆ ಬೆಂಗಳೂರಿನ ಶಿಕ್ಷಕರ ಭವನದಲ್ಲಿ ಟಿಇಟಿ ಅಭ್ಯರ್ಥಿಗಳ ಸಭೆ ಕರೆಯಲಾಗಿದೆ ಎಂದು ಈಶಾನ್ಯ ವಲಯ ಶಿಕ್ಷಕರ ವೇದಿಕೆ ಅಧ್ಯಕ್ಷ ಎಂ.ಬಿ. ಅಂಬಲಗಿ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ 10 ಸಾವಿರ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆದರೆ, ಅರ್ಹತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಗೊಂದಲದಿಂದಾಗಿ ವಿದ್ಯಾವಂತ ಅಭ್ಯರ್ಥಿಗಳು ಅಲ್ಪ ಅಂಕಗಳಿಂದ ಸಿಟಿಇ ಬರೆಯುವಲ್ಲಿ ವಂಚಿತರಾಗುತ್ತಿದ್ದಾರೆ
ಎಂದರು.

ಟಿಇಟಿ ಪ್ರಶ್ನೆ ಪತ್ರಿಕೆಯಲ್ಲಿ ವಿವಿಧ ವಿಷಯಗಳ 16 ಪ್ರಶ್ನೆಗಳು ಅಸ್ಪಷ್ಟವಾಗಿವೆ. ಪರಿಕ್ಷಾರ್ಥಿಗಳು ವಿವಿಧ ಪುಸ್ತಕಗಳ ಆಧಾರದ ಮೇಲೆ ಬೇರೆ  -ಬೇರೆ ಉತ್ತರಗಳಿಗೆ ಗುರುತು ಹಾಕಿದ್ದಾರೆ. ಆದ್ದರಿಂದ ಈ ಅಸ್ಪಷ್ಟ ಪ್ರಶ್ನೆಗಳಿಗೆ 16 ಅಂಕಗಳ ಕೃಪಾಂಕ ನೀಡಬೇಕು. ಅದೇ ರೀತಿ 371ನೇ (ಜೆ) ಕಲಂ ಮೀಸಲಾತಿಯಡಿ ಹೈ.ಕ ಭಾಗದ
ಆರು ಜಿಲ್ಲೆಗಳ ವ್ಯಾಪ್ತಿಯ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಶೇ.15ರಷ್ಟು ಕೃಪಾಂಕ ನೀಡಲು ಅವಕಾಶವಿದೆ. ಆದರೆ, ಈ ಭಾಗದ ಅಭ್ಯರ್ಥಿಗಳಿಗೆ ಕೃಪಾಂಕವನ್ನೇ ನೀಡುತ್ತಿಲ್ಲ ಎಂದು ಕಿಡಿಕಾರಿದರು.

ವಿಜ್ಞಾನ ಮತ್ತು ಸಮಾಜ ಶಿಕ್ಷಕರ ಹುದ್ದೆಗಳಿಗೆ ಕಂಪ್ಯೂಟರ್‌, ಎಲೆಕ್ಟ್ರಾನಿಕ್ಸ್‌, ಸಂಖ್ಯಾಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ಸಮಾಜ ಶಾಸ್ತ್ರ, ಶಿಕ್ಷಣ ಐಚ್ಛಿಕ ವಿಷಯಯಲ್ಲಿ ಪದವಿ ಪಡೆದವರಿಗೆ ಅವಕಾಶ ನೀಡಿಲ್ಲ. ಹೀಗಾಗಿ ಟಿಇಟಿ ಅಭ್ಯರ್ಥಿಗಳ ಸಮಸ್ಯೆಗಳನ್ನು
ಮುಂದಿಟ್ಟುಕೊಂಡು ಸಭೆ ಕರೆಯಲಾಗಿದೆ ಎಂದರು.

ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ಟಿಇಟಿ ಅಭ್ಯರ್ಥಿಗಳಿಗಾದ ಅನ್ಯಾಯವನ್ನು ಸರಿಪಡಿಸುವಂತೆ ಏ.10ರಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದರು.

Advertisement

ಟಿಇಟಿ ಅಭ್ಯರ್ಥಿಗಳಾದ ಕನ್ಯಾಕುಮಾರಿ, ರೇಣುಕಾ, ರಾಚಮ್ಮ, ಶ್ವೇತಾ, ಶಿವಲಿಂಗಪ್ಪ, ರವಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next