ನವದೆಹಲಿ: ಆಗ್ನೇಯ ರೈಲ್ವೆಯ ಹೌರಾ-ಖರಗ್ ಪುರ್ ಶಾಖೆಯ ಟಿಕೆಟ್ ಪರೀಕ್ಷಕ ಪಿಂಟು ದಾಸ್ ಎಂಬವರು ಪ್ರಸಕ್ತ ಹಣಕಾಸು ವರ್ಷದಲ್ಲಿ ಒಂದು ಕೋಟಿಗೂ ಅಧಿಕ ದಂಡ ವಸೂಲಿ ಮಾಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಇಬ್ಬರು ಶಾಸಕರ ರಾಜೀನಾಮೆ? ಶಿರಸಿಯತ್ತ ಎಲ್ಲರ ಚಿತ್ತ!
ಆಗ್ನೇಯ ರೈಲ್ವೆಯ ಪ್ರಕಟನೆ ಪ್ರಕಾರ, ಹೌರಾ ಖರಗ್ ಪುರ್ ಶಾಖೆಯ ಸಂತಾರಾಗಾಚಿ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ದಾಸ್ ಅವರು 2023ರ ಮಾರ್ಚ್ 26ರವರೆಗೆ ಒಟ್ಟು 1,00,53,400 ರೂ. ದಂಡ ಸಂಗ್ರಹಿಸಿದ್ದಾರೆ.
ರೈಲ್ವೆ ಇಲಾಖೆ ಪ್ರಕಾರ, ಆಗ್ನೇಯ ರೈಲ್ವೆ ಶಾಖೆಯಲ್ಲಿ ದಾಸ್ ಅವರು ಅತೀ ಹೆಚ್ಚು ದಂಡ ಸಂಗ್ರಹಿಸಿದ ಟಿಕೆಟ್ ಪರೀಕ್ಷಕರಾಗಿದ್ದಾರೆ. ದಕ್ಷಿಣ ಸೆಂಟ್ರಲ್ ರೈಲ್ವೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವೈಯಕ್ತಿಕ ಟಿಕೆಟ್ ತಪಾಸಣೆ ಪರೀಕ್ಷಕರೊಬ್ಬರು 1 ಕೋಟಿಗೂ ಅಧಿಕ ದಂಡ ವಿಧಿಸಿರುವುದು ದಾಖಲೆಯಾಗಿದೆ ಎಂದು ತಿಳಿಸಿದೆ.
ಪಿಂಟು ದಾಸ್ ಅವರು ದೂರ ಪ್ರಯಾಣದ ಪ್ರಯಾಣಿಕರ ಟಿಕೆಟ್ ಗಳನ್ನು ಪರಿಶೀಲಿಸುತ್ತಿದ್ದು, ಅದೇ ರೀತಿ ಸ್ಥಳೀಯ ಹೌರಾದಿಂದ ಖರಗ್ ಪುರ್, ಖರಗ್ ಪುರದಿಂದ ಬಲೇಶ್ವರ್, ಹೌರಾದಿಂದ ದಿಘಾ ಮತ್ತು ಶಾಲಿಮಾರ್ ನಿಂದ ಟಾಟಾ ವಿಭಾಗಗಳ ನಡುವೆ ಓಡಾಡುವ ರೈಲು ಪ್ರಯಾಣಿಕರ ಟಿಕೆಟ್ ಗಳನ್ನು ಪರಿಶೀಲಿಸಿರುವುದಾಗಿ ತಿಳಿಸಿದ್ದಾರೆ.
ಸುಮಾರು 1.16 ಲಕ್ಷ ಪ್ರಯಾಣಿಕರು ಟಿಕೆಟ್ ಇಲ್ಲದೇ ಪ್ರಯಾಣಿಸಿದ್ದನ್ನು ರೈಲ್ವೆ ಸಿಬಂದಿಗಳು ಪತ್ತೆ ಹಚ್ಚಿದ್ದು, ಒಟ್ಟು 9.62 ಕೋಟಿ ರೂಪಾಯಿ ದಂಡ ಸಂಗ್ರಹಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.