ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ್ದ ಎಚ್.ವಿಶ್ವನಾಥ್, ಬುಧವಾರ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಇತ್ತೀಚೆಗಷ್ಟೇ ಕಾಂಗ್ರೆಸ್ ತ್ಯಜಿಸಿ ಬಿಜೆಪಿಗೆ ಸೇರ್ಪಡೆಯಾಗಿ ಸಂಸದರಾಗಿರುವ ವಿ.ಶ್ರೀನಿವಾಸ ಪ್ರಸಾದ್‌ರನ್ನು ಭೇಟಿ ಮಾಡಿದ್ದ ವಿಶ್ವನಾಥ್, ರಾಮಲಿಂಗಾ ರೆಡ್ಡಿಯವರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ವಿರುದ್ಧ ಧ್ವನಿ ಎತ್ತಿದವರು ಪಕ್ಷ ಬಿಡಬೇಕು, ಇಲ್ಲವೇ ಪಕ್ಷದಲ್ಲಿದ್ದರೂ ನಿರ್ಲಕ್ಷ್ಯಕ್ಕೊಳಗಾಗಬೇಕು ಎಂಬ ಸ್ಥಿತಿ ನಿರ್ಮಾಣವಾಗಿರುವ ಬಗ್ಗೆ ಇಬ್ಬರೂ ನಾಯಕರು ಚರ್ಚಿಸಿದರು ಎಂದು ಹೇಳಲಾಗಿದೆ.
ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದ ರಾಮಲಿಂಗಾ ರೆಡ್ಡಿ ಬೇಸರಗೊಂಡಿದ್ದು, ಅವರ ಜತೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ವಿಶ್ವನಾಥ್ ಚರ್ಚಿಸಿದರು. ಈ ಸಂದರ್ಭ ಶಾಸಕಿ, ರಾಮಲಿಂಗಾ ರೆಡ್ಡಿಯವರ ಪುತ್ರಿ, ಸೌಮ್ಯಾ ರೆಡ್ಡಿ ಉಪಸ್ಥಿತರಿದ್ದರು ಎಂದು ತಿಳಿದು ಬಂದಿದೆ. ಹಳೆಯ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಚರ್ಚಿಸುತ್ತಿರುವ ವಿಶ್ವನಾಥ್ ನಡೆಯ ಬಗ್ಗೆ ನಾನಾ ರೀತಿಯ ವ್ಯಾಖ್ಯಾನಗಳು ಕೇಳಿ ಬರುತ್ತಿವೆ.
ಸೌಹಾರ್ದಯುತ ಭೇಟಿ: ನಂತರ ಸುದ್ದಿಗಾರರ ಜತೆ ಮಾತನಾಡಿದ ವಿಶ್ವನಾಥ್, “ರಾಮಲಿಂಗಾ ರೆಡ್ಡಿ ಹಾಗೂ ನಾನು ಹಳೆಯ ಸ್ನೇಹಿತರು. ಒಟ್ಟಿಗೆ ಸಚಿವರಾಗಿ ಕೆಲಸ ಮಾಡಿದವರು. ಮ್ಹಾನ್ಸ್‌ನಲ್ಲಿ ಸ್ನೇಹಿತರೊಬ್ಬರು ದಾಖಲಾಗಿದ್ದು. ಅವರನ್ನು ನೋಡಲು ಈ ಮಾರ್ಗದಲ್ಲಿ ಹೋಗುತ್ತಿದ್ದೆ. ಹಾಗೇ ರಾಮಲಿಂಗಾ ರೆಡ್ಡಿ ಅವರನ್ನು ಮಾತನಾಡಿ ಹೋಗೋಣ ಎಂದು ಬಂದೆ.
ರಾಜಕೀಯ ವಿಚಾರಗಳೇನೂ ಚರ್ಚೆಯಾಗಿಲ್ಲ’ ಎಂದು ಹೇಳಿದರು. ರೋಷನ್ ಬೇಗ್ ಅಮಾನತು ಕುರಿತು ಪ್ರತಿಕ್ರಿಯಿಸಿ, “ಅದು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟ ವಿಚಾರ. ರೋಷನ್ ಬೇಗ್ ಸಹ ನಮ್ಮ ಸ್ನೇಹಿತರೇ, ನಾವ್ಯಾರೂ ಸಿದ್ದರಾಮಯ್ಯ ವಿರೋಧಿಗಳಲ್ಲ’ ಎಂದು ಸೂಕ್ಷ್ಮವಾಗಿ ನುಡಿದರು.
ವಿಶ್ವನಾಥ್ ನಮ್ಮ ಸ್ನೇಹಿತರು ಅಷ್ಟೇ, ಭೇಟಿಯಾಗಿರೋದು ರಾಜಕೀಯ ವಿಚಾರಕ್ಕಲ್ಲ. ರೋಷನ್ ಬೇಗ್ ಅಮಾನತು ಬಗ್ಗೆ ನಾನು ಮಾತನಾಡಲ್ಲ. ಪಕ್ಷದಲ್ಲಿ ನನ್ನ ಬಣ ಎಂಬುದು ಇಲ್ಲ. ನಾನು ಯಾರ ಬಣವೂ ಅಲ್ಲ. ಜಿಂದಾಲ್ ಭೂಮಿ ಪರಭಾರೆ ವಿಚಾರದಲ್ಲಿ ಎಚ್.ಕೆ.ಪಾಟೀಲ್ ಮಾತನಾಡಿದ್ದಾರೆ. ಸಂಪುಟ ಉಪ ಸಮಿತಿ ರಚನೆಯಾಗಿದೆ. ಸಮಿತಿ ನೀಡುವ ವರದಿ ಮೇಲೆ ಸರ್ಕಾರ ನಿರ್ಧಾರ ಕೈಗೊಳ್ಳಬಹುದು.
-ರಾಮಲಿಂಗಾರೆಡ್ಡಿ, ಮಾಜಿ ಸಚಿವ