Advertisement

ಪ್ರೊ ಕಬಡ್ಡಿ ತಾರೆಯರ ಯಶದ ಹಿಂದೆ ಪೋಲೆಂಡ್‌ ಸುಂದರಿ!

06:30 AM Sep 05, 2017 | Team Udayavani |

ಕೋಲ್ಕತ್ತಾ: “ಕಬಡ್ಡಿ ಆಟ ಇದೊಂದು 3ನೇ ವಿಶ್ವಯುದ್ಧ! ಆ ಯುದ್ಧವನ್ನು ಗೆದ್ದು ಬರಲು ನಾನು ನಿಮ್ಮನ್ನು ಹುರಿಗೊಳಿಸುವೆ. ನಾನು ದೇವರಲ್ಲ. ಆದರೂ, ನೀವು ಕ್ರಿಸ್ಟಿಯಾನೋ ರೊನಾಲ್ಡೋ ಆಗಬೇಕೆಂದು ಬಯಸಿದರೆ, ಒಂದೇ ವಾರದಲ್ಲಿ ಆ ಕೆಲಸವನ್ನು ಮಾಡಬಲ್ಲೆ’.

Advertisement

ಮಾತಿನಲ್ಲೇ ಹೀಗೊಂದು ಕಿಡಿ ಹೊತ್ತಿಸುತ್ತಾರೆ, ಒಲಿವಿಯಾ ವಿಟೆಕ್‌. ಆಕೆ ಪೋಲೆಂಡ್‌ನ‌ ಸುಂದರಿ. ಒಲಿವಿಯಾ ಹೇಳಿದಂತೆ, ಕ್ರಿಸ್ಟಿಯಾನೋ ರೊನಾಲ್ಡೋ ರೂಪುಗೊಂಡಿದ್ದಾನೋ ಇಲ್ಲವೋ ಗೊತ್ತಿಲ್ಲ. ಆದರೆ, ಕಬಡ್ಡಿ ಲೋಕದಲ್ಲಿ ರೊನಾಲ್ಡೋನಂತೆಯೇ ಕನ್ನಡಿಗ, ಸ್ಟಾರ್‌ ರೈಡರ್‌ ಸುಕೇಶ್‌ ಹೆಗ್ಡೆಯನ್ನು ರೂಪಿಸುವಲ್ಲಿ ಈಕೆಯ ಶ್ರಮ ದೊಡ್ಡದು. ಪ್ರೊ ಕಬಡ್ಡಿಯಲ್ಲಿ ಗುಜರಾತ್‌ ಫಾರ್ಚೂನ್‌ ಜೈಂಟ್ಸ್‌ ಅನ್ನು ನಂ.1 ಮಾಡುವಲ್ಲಿ ಸಾರಥಿ ಸುಕೇಶ್‌ ಹೆಗ್ಡೆಯ ಹಿಂದೆ ಇರುವ ಮಹಿಳೆ ಈಕೆ! ಜೈಂಟ್ಸ್‌ ಹುಡುಗರ ಮೈಕೈ ಗಟ್ಟಿ ಮಾಡುವ ಫಿಜಿಯೋ!

“ಉದಯವಾಣಿ’ ಜತೆಗೆ ವಿಶೇಷ ಸಂದರ್ಶನ ನೀಡಿದ ಒಲಿವಿಯಾ, “ನಾನು ಕಳೆದವರ್ಷ ಕಬಡ್ಡಿ ವಿಶ್ವಕಪ್‌ಗೆ ಪೋಲೆಂಡ್‌ ತಂಡದ ಫಿಜಿಯೋ ಆಗಿ ಭಾರತಕ್ಕೆ ಬಂದಿದ್ದೆ. ಆ ವೇಳೆ ಗುಜರಾತ್‌ ತಂಡ ನನ್ನನ್ನು ಸಂಪರ್ಕಿಸಿತ್ತು. ಇಲ್ಲಿಗೆ ಬಂದಾಗ ನನಗೆ ಬಿಗ್‌ ಚಾಲೆಂಜ್‌ ಕಾದಿತ್ತು’ ಎಂಬ ಪುಟ್ಟ ಪರಿಚಯ ಮಾಡಿಕೊಟ್ಟರು.

ಒಂದೇ ವಾರದಲ್ಲಿ “ಇರಾನಿ’ ರೈಡರ್‌ ರೆಡಿ!: “ಕಬಡ್ಡಿ ಆಟಗಾರರು ಬೇರೆ ಕ್ರೀಡಾಪಟುಗಳಂತೆ ಸಪ್ಲಿಮೆಂಟ್ಸ್‌ ತೆಗೆದುಕೊಳ್ಳದ ಕಾರಣ, ಇಲ್ಲಿ ಫಿಜಿಯೋ ಜವಾಬ್ದಾರಿ ಅಧಿಕವಿರುತ್ತದೆ. ಕೂಟದ ಆರಂಭದಲ್ಲಿ ಜೈಂಟ್ಸ್‌ನ ಅತ್ಯುತ್ತಮ ಡಿಫೆಂಡರ್‌, ಫ‌ಜೆಲ್‌ನ ಬಲಗೈಯ ಮೂಳೆಗೆ ಪೆಟ್ಟುಬಿತ್ತು. 30 ದಿನದಲ್ಲಿ ರಿಕವರಿ ಆಗಬೇಕಿದ್ದ ಫ‌ಜೆಲ್‌ನನ್ನು ಒಂದೇ ವಾರದಲ್ಲಿ ಆಡುವಂತೆ ಸಿದ್ಧಮಾಡಿದೆ’ ಎನ್ನುವ ಒಲಿವಿಯಾ, ಆಕ್ಯುಪಂಕ್ಚರ್‌ ಮತ್ತು ಆಕ್ಯುಪ್ರಶರ್‌ನಂಥ ಚೀನೀ ಚಿಕಿತ್ಸೆ ಮೇಲೆ ನಂಬಿಕೆ ಇಟ್ಟವರು. ಅದನ್ನು ಅವರು ಪೋಲೆಂಡ್‌ನ‌ಲ್ಲಿ ಕಲಿತರಂತೆ.

ಜೈಂಟ್ಸ್‌ ಗುಟ್ಟು ರಟ್ಟು!: “ಪ್ರೊ ಕಬಡ್ಡಿ ಆರಂಭಕ್ಕೂ 1 ತಿಂಗಳ ಮುಂಚೆ ಭಾರತಕ್ಕೆ ಬಂದೆ. ಆಟಗಾರರ ದೇಹದ ಸೈನ್ಸ್‌ ಅರಿತುಕೊಂಡೆ. ಇಂಜ್ಯೂರಿಯಿಂದ ತಪ್ಪಿಸಿಕೊಳ್ಳಲು ಸೂಕ್ತ ತಂತ್ರಗಳನ್ನು ಹೇಳಿಕೊಟ್ಟೆ. ಹಾಗಾಗಿ, ಬೇರೆ ತಂಡದಂತೆ ಈ ಆಟಗಾರರು ಹೆಚ್ಚು ಇಂಜ್ಯೂರಿ ಆಗುವುದಿಲ್ಲ. ಇದರಿಂದ ಅವರಿಗೆ ಧೈರ್ಯ ಹೆಚ್ಚು’ ಎನ್ನುತ್ತಾ ಜೈಂಟ್ಸ್‌ ಹುಡುಗರ ಗುಟ್ಟು ರಟ್ಟು ಮಾಡಿದರು. ಮಹಾತ್ಮ ಗಾಂಧಿ, ಪ್ರಧಾನಿ ಮೋದಿಯ ನಾಡು ಗುಜರಾತ್‌ ಅಂತ ಹೇಳಿದರೆ, “ಗಾಂಧಿ ಗೊತ್ತು. ಈ ಮೋದಿ ಯಾರು?’ ಎಂದು ವಾಪಸು ಕೇಳುವಷ್ಟು ಅವರು ಪ್ರೊ ಕಬಡ್ಡಿಯಲ್ಲಿ ಕಳೆದುಹೋಗಿದ್ದಾರೆ.

Advertisement

ಸುಕೇಶ್‌ ಜೆಂಟಲ್‌ಮಾÂನ್‌: ಒಲಿವಿಯಾಗೆ ಕಾರ್ಕಳ ಪ್ರತಿಭೆ ಸುಕೇಶ್‌ ಅವರ ಮುಗ್ಧತೆ ತುಂಬಾ ಇಷ್ಟ. “ಎಂಥ ಒತ್ತಡದ ಸಮಯದಲ್ಲೂ ಸುಕೇಶ್‌ ಶಾಂತಚಿತ್ತರಾಗಿರುತ್ತಾರೆ. ಆಟಗಾರ ಮುಖ್ಯವಾಗಿ ಗೆಲ್ಲುವುದೇ ಈ ಗುಣದಿಂದ’ ಎಂದು ಕಬಡ್ಡಿಯ “ಕ್ಯಾಪ್ಟನ್‌ ಕೂಲ್‌’ ಅನ್ನು ಮೆಚ್ಚಿಕೊಂಡರು. ಒಲಿವಿಯಾ ಆಗಮನಕ್ಕೂ ಮುನ್ನ 100 ಮೀಟರ್‌ ಅನ್ನು 13 ಸೆಕೆಂಡಿನಲ್ಲಿ ಓಡುತ್ತಿದ್ದ ಸುಕೇಶ್‌, ಈಗ 11.3 ಸೆಕೆಂಡಿನಲ್ಲಿ ಓಡುವಷ್ಟು ಫಿಟ್‌ ಆಗಿದ್ದಾರೆ!

ಹೆಂಗಸರ ಜತೆಗೆ ಏಗೋದು ಕಷ್ಟ!: ಪ್ರೊ ಕಬಡ್ಡಿ ಪುರುಷರ ಆಟ. ಪುರುಷ ಆಟಗಾರರೊಂದಿಗೆ ಹೊಂದಿಕೊಳ್ಳುವುದು, ದೈಹಿಕವಾಗಿ ಅವರನ್ನು ಪಳಗಿಸುವುದು ಒಲಿವಿಯಾಗೆ ಕಷ್ಟ ಆಗಲಿಲ್ಲವಂತೆ. ಪುರುಷರಿಗಿಂತ ಮಹಿಳೆಯರ ಜತೆ ಹೊಂದಿಕೊಳ್ಳುವುದೇ ದೊಡ್ಡ ಕಷ್ಟ’ ಎಂದು ನಗುತ್ತಾರೆ ಪೋಲೆಂಡ್‌ ಸುಂದರಿ.

“ಕಬಡ್ಡಿಯಲ್ಲಿ ಗ್ರಾಮೀಣ ಆಟಗಾರರೇ ಹೆಚ್ಚು. ಅವರ ಭಾಷಾ ಸಮಸ್ಯೆ ನನಗೆ ಸವಾಲು ಆಗಲಿಲ್ಲ. ಈಗ ನಾನೇ ಹಿಂದಿಯ ಕೆಲ ಪದಗಳನ್ನು ಕಲಿಯುತ್ತಿದ್ದೇನೆ’ ಎನ್ನುವ ಒಲಿವಿಯಾ, ಜೈಂಟ್ಸ್‌ ಆಟಗಾರರ ಸ್ನಾಯು ಬಲವರ್ಧನೆಗೆ ಬೇಕಾದ ದೇಹದಂಡನೆ, ಡಯೆಟ್‌ ಮಾದರಿಗೆ ತಮ್ಮದೇ ರೂಪುರೇಷೆ ಸಿದ್ಧಪಡಿಸಿದ್ದಾರೆ.

ವಿಕಾ….ವಿಕಾಟ್‌ ಕೊಹ್ಲಿ ಹೆಂಡ್ತಿ ನಂಗಿಷ್ಟ!
“ಯಾವ ನಟ ನಂಗಿಷ್ಟ ಹೇಳು?’ ಅಂತ ಪಕ್ಕದಲ್ಲಿದ್ದ ಇರಾನಿ ಆಟಗಾರ ಫ‌ಜೆಲ್‌ಗೆ ಕೇಳಿದರು ಒಲಿವಿಯಾ. ಆತ “ಐಶ್ವರ್ಯಾ… ಐಶ್ವರ್ಯಾ’ ಅಂತ ಎರಡು ಸಾರಿ ಹೇಳಿ ದಾರಿ ತಪ್ಪಿಸಿದ. “ನೋ ನೋ… ಅವೊ°ಬ್ಬ ಬೆಸ್ಟ್‌ ಕ್ರಿಕೆಟರ್‌ ಇದ್ದಾನಲ್ಲ, ಅವ° ಹೆಂಡ್ತಿ’ ಅಂತ ಅಂದಾಗ, “ಸಚಿನ್ನಾ?’ ಎಂಬ ಪ್ರಶ್ನೆಗೆ ಪುನಃ ಕನ್‌ಫ್ಯೂಸ್‌ ಆದರು ಒಲಿವಿಯಾ. ನೋ, ನೋ… ವಿಕಾ… ವಿಕಾಟ್‌… ನೋ ನೋ ವಿರಾಟ್‌ ಕೊಹ್ಲಿ, ಯೆಸ್‌ ಅವ° ಹೆಂಡ್ತಿ ನಂಗಿಷ್ಟ. ಅವಳ ಸಿನಿಮಾಗಳನ್ನು ನೋಡಿರುವೆ’ ಅಂತ ನಕ್ಕರು. ಕೊಹ್ಲಿಗೆ ಗರ್ಲ್ಫ್ರೆಂಡ್‌ ಅನುಷ್ಕಾ ಶರ್ಮಾ ಜತೆ ಮಾತಿನಲ್ಲೇ ಮದುವೆ ಮಾಡಿಸಿದರು ಒಲಿವಿಯಾ!

– ಕೀರ್ತಿ ಕೋಲ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next