ಮುಂಬೈ: ಕಳೆದ ನಾಲ್ಕು ದಶಕಗಳಲ್ಲಿಯೇ ಕಂಡು ಕೇಳರಿಯದ ಧಾರಾಕಾರ ಮಳೆಗೆ ವಾಣಿಜ್ಯ ನಗರಿ ಮುಂಬೈ ಮತ್ತೆ ತತ್ತರಿಸಿ ಹೋಗಿದೆ. ಏತನ್ಮಧ್ಯೆ ರಸ್ತೆ ಮಧ್ಯೆದಲ್ಲಿದ್ದ ಮ್ಯಾನ್ ಹೋಲ್ ಮುಚ್ಚದಿರುವುದನ್ನು ಗಮನಿಸಿದ ಕಾಂತಾ ಮೂರ್ತಿ ಕಾಲಾನ್ (50ವರ್ಷ) ಎಂಬ ಮಹಿಳೆ ಹಲವು ಗಂಟೆಗಳ ಕಾಲ ಮ್ಯಾನ್ ಹೋಲ್ ಬಳಿಯೇ ನಿಂತು ಜನರು ಗುಂಡಿಗೆ ಬೀಳದಂತೆ ತಡೆದಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಧಾರಾಕಾರ ಮಳೆಯಿಂದಾಗಿ ನೀರು ತುಂಬಿ ಹರಿಯುತ್ತಿದ್ದುದರಿಂದ ಜನರು ಮ್ಯಾನ್ ಹೋಲ್ ಗೆ ಬೀಳಬಾರದು ಎಂದು ಕಾಂತಾ ಮೂರ್ತಿ ಅವರು ಮಹಾನಗರ ಪಾಲಿಕೆ ಸಿಬ್ಬಂದಿಗಳು ಆಗಮಿಸುವವರೆಗೆ ಸುಮಾರು 7 ಗಂಟೆಗಳ ಕಾಲ ರಸ್ತೆಯಲ್ಲಿ ನಿಂತಿರುವುದಾಗಿ ವರದಿ ವಿವರಿಸಿದೆ. ಕಾಂತಾ ಮೂರ್ತಿ ಹೂ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದು, ವರ್ಷಧಾರೆಗೆ ಆಕೆಯ ಮನೆಯನ್ನು ಕಳೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ಕಾಂತಾ ಮೂರ್ತಿಗೆ ಒಟ್ಟು ಎಂಟು ಮಕ್ಕಳು. ಇವರಲ್ಲಿ ಐದು ಮಕ್ಕಳಿಗೆ ಮದುವೆಯಾಗಿದ್ದು, ಇನ್ನುಳಿದ ಮೂವರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರಸ್ತೆ ಬದಿಯಲ್ಲಿ ಹೂ ಮಾರಾಟ ಮಾಡುತ್ತಿರುವುದಾಗಿ ಎಎನ್ ಐ ನ್ಯೂಸ್ ಏಜೆನ್ಸಿ ಜತೆ ಮಾತನಾಡುತ್ತ ತಿಳಿಸಿದ್ದಾರೆ. ನಾನು ಹೂ ಮಾರಾಟ ಮಾಡುವ ಮೂಲಕ ಮೂವರು ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ಕೊಡುತ್ತಿದ್ದೇನೆ. ನಾನೊಬ್ಬಳೇ ದುಡಿಯುತ್ತಿದ್ದು, ಗಂಡ ರೈಲು ಅಪಘಾತದ ನಂತರ ಪಾರ್ಶ್ವವಾಯು ಪೀಡಿತರಾಗಿ ಮನೆಯಲ್ಲಿಯೇ ಇದ್ದಿರುವುದಾಗಿ ತಿಳಿಸಿದ್ದಾರೆ.
ಮ್ಯಾನ್ ಹೋಲ್ ಬಳಿ ಸತತ ಏಳು ಗಂಟೆಗಳ ಕಾಲ ನಿಂತಿದ್ದ ಕಾಂತಾ ಮೂರ್ತಿ ವಿಡಿಯೋ ಇದೀಗ ವೈರಲ್ ಆಗಿದೆ. ಅಷ್ಟೇ ಅಲ್ಲ ತನ್ನ ಜೀವವನ್ನೇ ಪಣಕ್ಕಿಟ್ಟು ರಸ್ತೆಯಲ್ಲಿ ನಿಂತಿದ್ದಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳು ಈಕೆಗೆ ಛೀಮಾರಿ ಹಾಕಿರುವುದಾಗಿ ಕಾಂತಾ ಮೂರ್ತಿ ಹೇಳಿದ್ದಾರೆ.
ಆದರೆ ಜನರು ನನ್ನ ಬಳಿ ಬಂದು ನನ್ನ ಕೆಲಸವನ್ನು ಶ್ಲಾಘಿಸಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ನಾವು ಮಾಡಬೇಕಾದ ಕೆಲಸವನ್ನು ನಾನು ಮಾಡಿದ್ದೇನೆ. ಇಲ್ಲದಿದ್ದರೆ ಜನರು ಮ್ಯಾನ್ ಹೋಲ್ ಗೆ ಬಿದ್ದು ದುರಂತ ಸಂಭವಿಸುತ್ತಿತ್ತು ಎಂದು ತಿಳಿಸಿದ್ದಾರೆ.