ಮುಂಬೈ; 24ನೇ ವಯಸ್ಸಿನಲ್ಲಿಯೇ ವೃತ್ತಿ ಜೀವನ ಆರಂಭಿಸಿ Vu ಗ್ರೂಪ್ ಸ್ಥಾಪಿಸಿದ ದೇವಿತಾ ಸರಫ್ ಇಂದು ಒಂದು ಸಾವಿರ ಕೋಟಿ ರೂಪಾಯಿ ಆದಾಯ ಹೊಂದಿದೆ. ವಿಯು ಗ್ರೂಪ್ ಎಲ್ ಇಡಿ ಟಿಲಿವಿಷನ್ ಮಾರಾಟದ ಕಂಪನಿಯಾಗಿದೆ. ಈವರೆಗೆ ಬರೋಬ್ಬರಿ 3ಮಿಲಿಯನ್ ಟೆಲಿವಿಷನ್ ಮಾರಾಟ ಮಾಡಿದೆ. Vu ಟೆಲಿವಿಷನ್ ಪ್ರಸ್ತುತ ಜಗತ್ತಿನಲ್ಲಿಯೇ ಅತೀ ಹೆಚ್ಚು ಮಾರಾಟವಾಗುವ ಭಾರತೀಯ ಒಡೆತನದ ಟಿವಿ ಬ್ರ್ಯಾಂಡ್ ಆಗಿದೆ.
ಇದನ್ನೂ ಓದಿ:ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಜೂನಿಯರ್ ಎನ್‌ಟಿಆರ್; ಜೋಡಿಯಾಗಿ ಜಾನ್ವಿ ಕಪೂರ್
ಹ್ಯೂರುನ್ ವರದಿಯ ಪ್ರಕಾರ, ದೇವಿತಾ ಸರಫ್(41ವರ್ಷ) ಭಾರತದಲ್ಲಿ ಶ್ರೀಮಂತ ಮಹಿಳೆಯಾಗಿದ್ದಾರೆ. ಫಾರ್ಚೂನ್ಸ್ ನ ಟಾಪ್ 50 ಭಾರತದ ಅತ್ಯಂತ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಸರಫ್ ಅವರ ಹೆಸರಿದೆ. ಫೋರ್ಬ್ಸ್ ಕೂಡಾ ಸರಫ್ ಅವರನ್ನು “ಭಾರತದ ಮಾದರಿ ಸಿಇಒ” ಎಂದು ಹೆಸರಿಸಿದೆ.
2021ರಲ್ಲಿ ದೇವಿತಾ ಸರಫ್ ಅವರು “ಡೈನಾಮೈಟ್ ಬೈ ದೇವಿತಾ ಸರಫ್” ಎಂಬ ಮಹಿಳೆಯರ ಸುಗಂಧ ದ್ರವ್ಯ ವ್ಯವಹಾರವನ್ನು ಆರಂಭಿಸಿದ್ದರು. ಇದನ್ನು ಜಾಗತಿಕವಾಗಿ ವಿಸ್ತರಿಸಿದ್ದು, ಕೋವಿಡ್ 19 ಸಂದರ್ಭದಲ್ಲಿ ಸುಗಂಧ ದ್ರವ್ಯ ಮಾರಾಟದಲ್ಲಿನ ಲಾಭವನ್ನು ದೇಣಿಗೆ ನೀಡಲು ಬಳಸಿರುವುದಾಗಿ ವರದಿ ತಿಳಿಸಿದೆ.
1981ರ ಜೂನ್ 25ರಂದು ಸರಫ್ ಮುಂಬೈಯಲ್ಲಿ ಜನಿಸಿದ್ದರು. ಮುಂಬೈಯಲ್ಲಿ ಪ್ರಾಥಮಿಕ ಶಿಕ್ಷಣ ನಂತರ ಎಚ್.ಆರ್. ಕಾಲೇಜ್ ಆಫ್ ಕಾಮರ್ಸ್ ನಲ್ಲಿ ಪಿಯುಸಿ ಶಿಕ್ಷಣ ಪಡೆದ ಬಳಿಕ ದಕ್ಷಿಣ ಕ್ಯಾಲಿಫೋರ್ನಿಯಾ ಯೂನಿರ್ವಸಿಟಿಯಲ್ಲಿ ಪದವಿ ಪಡೆದಿದ್ದರು.
ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ನಲ್ಲಿ ಪದವಿ ಪಡೆದ ಬಳಿಕ ಸರಫ್ ತನ್ನ 24ನೇ ವಯಸ್ಸಿನಲ್ಲೇ Vu ಕಂಪನಿ ಸ್ಥಾಪಿಸಿದ್ದರು. ದೇವಿತಾ ಸರಫ್ ವಿಯು ಗ್ರೂಪ್ ನ ಸಿಇಒ ಮಾತ್ರವಲ್ಲ, ಇವರು ಫ್ಯಾಶನ್ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದಾರೆ. ರೂಪದರ್ಶಿಯಾಗಿ ಖ್ಯಾತಿ ಹೊಂದಿರುವ ದೇವಿತಾ ಅವರ ಆಸ್ತಿಯ ಒಟ್ಟು ಮೌಲ್ಯ 1,800 ಕೋಟಿ ರೂಪಾಯಿ ಎಂದು ವರದಿ ತಿಳಿಸಿದೆ.
Vu ಟೆಕ್ನಾಲಜೀಸ್ ನ ಸಿಇಒ ಆಗಿರುವ ದೇವಿತಾ ಸರಫ್ ಒಡಿಸಿ ನೃತ್ಯಗಾರ್ತಿಯಾಗಿದ್ದಾರೆ. ದಿ ವಾಲ್ ಸ್ಟ್ರೀಟ್ ಜರ್ನಲ್ ನ ಅಂಕಣಕಾರರಾಗಿದ್ದಾರೆ. ಕುಮಾರಿ ಸರಫ್ ಅವರು ತನ್ನ 16ನೇ ವಯಸ್ಸಿನಲ್ಲಿ ತಂದೆಯ ಮಾರ್ಗದರ್ಶನದಲ್ಲಿ ಝೆನಿತ್ ಗಣಕತಂತ್ರದಲ್ಲಿ ವೃತ್ತಿ ಬದುಕನ್ನು ಆರಂಭಿಸಿದ್ದು, ಇಂದು ಯಶಸ್ವಿ ಉದ್ಯಮಿಯಾಗಿದ್ದಾರೆ.