Advertisement

ಸೈಕಲ್‌ನಲ್ಲಿ ಜಗತ್ತನ್ನೇ ಸುತ್ತಿದ ಪುಣೆಯ ವೇದಾಂಗಿ

06:35 AM Dec 24, 2018 | Team Udayavani |

ಮುಂಬಯಿ: ನಿಜಕ್ಕೂ ಇದೊಂದು ಅಸಾಮಾನ್ಯ ಸಾಹಸ. ಸೈಕಲನ್ನು ಅಟ್ಟಕ್ಕೆ ಹಾಕಿರುವ, ಅಥವಾ ಕನಿಷ್ಠ 4-5 ಕಿ.ಮೀ. ತುಳಿಯುವಷ್ಟರಲ್ಲಿ ಏದುಸಿರು ಬಿಡುವ ಜನಸಾಮಾನ್ಯರ ನಡುವೆ ಪುಣೆಯ 20 ವರ್ಷದ ವೇದಾಂಗಿ ಕುಲಕರ್ಣಿ ಸೈಕಲ್‌ ಮೂಲಕ ಜಗತ್ತನ್ನೇ ಸುತ್ತಿ ಬಂದಿದ್ದಾರೆ. ಅಷ್ಟೇ ಅಲ್ಲ, ಅತ್ಯಂತ ಕಡಿಮೆ ಅವಧಿಯಲ್ಲಿ ಸೈಕಲ್‌ನಲ್ಲಿ ವಿಶ್ವಕ್ಕೆ ಪ್ರದಕ್ಷಿಣೆ ಹಾಕಿದ ಏಶ್ಯದ ವನಿತೆ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ!

Advertisement

159 ದಿನಗಳ ಸೈಕಲ್‌ ಯಾನ
ಪುಣೆಯ ಉಪನಗರದವರಾದ ವೇದಾಂಗಿ ಕುಲಕರ್ಣಿ ಸುಮಾರು 29 ಸಾವಿರ ಕಿ.ಮೀ. ದೂರವನ್ನು ಸೈಕಲ್‌ನಲ್ಲೇ ಕ್ರಮಿಸಿ ರವಿವಾರ ಕೋಲ್ಕತಾವನ್ನು ತಲುಪಿದರು.

ಕಳೆದ ಜುಲೈನಲ್ಲಿ ಆಸ್ಟ್ರೇಲಿಯದ ಪರ್ತ್‌ನಿಂದ ಜಗತ್ತು ಸುತ್ತುವ ಪರ್ಯಟನೆ ಆರಂಭಿಸಿದ ವೇದಾಂಗಿ, ಈ ದಾಖಲೆಯನ್ನು ಪೂರ್ಣಗೊಳಿಸಲು ಮತ್ತೆ ಆಸ್ಟ್ರೇಲಿಯಕ್ಕೆ ತೆರಳಲಿದ್ದಾರೆ. 14 ದೇಶಗಳನ್ನು 159 ದಿನಗಳ ಕಾಲ ಸೈಕಲ್‌ನಲ್ಲಿ ಸುತ್ತಿದ ವೇದಾಂಗಿ, ದಿನವೊಂದರಲ್ಲಿ ಗರಿಷ್ಠ 300 ಕಿ.ಮೀ. ದೂರವನ್ನೂ ಕ್ರಮಿಸಿದ್ದಿದೆ. ಈ 159 ದಿನಗಳ ಪಯಣದಲ್ಲಿ ತನ್ನೊಳಗಿನ ಹಾಗೂ ಜಗತ್ತಿನ ಉತ್ತಮ ಮತ್ತು ಕೆಟ್ಟ ವಿಚಾರಗಳನ್ನು ಅರಿತುಕೊಂಡಿದ್ದೇನೆ ಎನ್ನುತ್ತಾರೆ ವೇದಾಂಗಿ.ಬ್ರಿಟನ್ನಿನ 38ರ ಹರೆಯದ ಸಾಹಸಿ ಜೆನ್ನಿ ಗ್ರಹಾಂ ಇದೇ ವರ್ಷ ಸೈಕಲ್‌ ಮೂಲಕ 124 ದಿನಗಳಲ್ಲಿ ಜಗತ್ತನ್ನು ಸುತ್ತಿದ್ದರು. ಇದು ವಿಶ್ವದಾಖಲೆಯಾಗಿದೆ. ವೇದಾಂಗಿ ಏಶ್ಯನ್‌ ದಾಖಲೆ ಸ್ಥಾಪಿಸಿದರು.

ಇಂಗ್ಲೆಂಡಿನಲ್ಲಿ ಪದವಿ
ಇಂಗ್ಲೆಂಡಿನ ಬ್ರೌನ್‌ಮೌತ್‌ ವಿಶ್ವವಿದ್ಯಾನಿಲಯದಲ್ಲಿ ನ್ಪೋರ್ಟ್ಸ್ ಮ್ಯಾನೇಜ್‌ಮೆಂಟ್‌ ಪದವಿ ಓದುತ್ತಿರುವ ವೇದಾಂಗಿ ಜಗತ್ತು ಸುತ್ತುವ ಯೋಚನೆಯನ್ನು ಎರಡು ವರ್ಷಗಳ ಹಿಂದೆಯೇ ರೂಪಿಸಿದ್ದರು. ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್‌, ಕೆನಡಾ, ಪೋರ್ಚುಗಲ್‌, ಸ್ಪೇನ್‌, ಫ್ರಾನ್ಸ್‌, ಬೆಲ್ಜಿಯಂ, ಜರ್ಮನಿ, ಡೆನ್ಮಾರ್ಕ್‌, ಸ್ವಿಡನ್‌, ಫಿನ್ಲಂಡ್‌, ರಶ್ಯ ದೇಶಗಳನ್ನು ಸುತ್ತಿ ಕೊನೆಗೆ ಭಾರತಕ್ಕೆ ಬಂದಿದ್ದಾರೆ.

ಹೆತ್ತವರ ನಿರಂತರ ಪ್ರೋತ್ಸಾಹ
“20 ವರ್ಷದ ಹುಡುಗಿಯಾಗಿರುವ ನನಗೆ ಜಗತ್ತನ್ನು ಅನ್ವೇಷಿಸಲು ಮಾನಸಿಕ ಪ್ರೋತ್ಸಾಹ ಹಾಗೂ ಉತ್ಸಾಹ ತುಂಬಿರುವ ತಂದೆ-ತಾಯಿ ಉತ್ತಮ ಕಾರ್ಯ ಮಾಡಿದ್ದಾರೆ. ಕಷ್ಟದ ಸಮಯದಲ್ಲಿ ನನ್ನನ್ನು ಇನ್ನಷ್ಟು ಬಲಿಷ್ಠಗೊಳಿಸಿದ್ದಾರೆ. ಪ್ರತಿದಿನ ನನ್ನೊಂದಿಗೆ ಫೋನ್‌ ಮೂಲಕ ಸಂಪರ್ಕದಲ್ಲಿದ್ದು, ದೈರ್ಯ ತುಂಬಿದ ಕಾರಣ ನಾನು ಇಂದು ಈ ಸಾಧನೆ ಮಾಡಲು ಸಾಧ್ಯವಾಗಿದೆ. ಈ ರೇಸ್‌ನ ಬಹುಪಾಲು ವೆಚ್ಚನ್ನು ಹೆತ್ತವರೇ ಭರಿಸಿದ್ದಾರೆ. ನಮ್ಮ ಜನರಿಂದ ಇನ್ನಷ್ಟು ಪ್ರೋತ್ಸಾಹ ಲಭಿಸಿದರೆ ಇದಕ್ಕೂ ಮಿಗಿಲಾದ ಸಾಧನೆ ಮಾಡಬಹುದು’ ಎಂದು ವೇದಾಂಗಿ ಕುಲಕರ್ಣಿ ಹೇಳಿದ್ದಾರೆ.

Advertisement

ಎದುರಿಸಿದ ಸಮಸ್ಯೆ ಒಂದೆರಡಲ್ಲ…
ಈ ಪಯಣದುದ್ದಕ್ಕೂ ವೇದಾಂಗಿ ಹಲವು ತೊಡಕುಗಳನ್ನು ಎದುರಿಸಿದ್ದಾರೆ. ವೀಸಾ ಸಮಸ್ಯೆ, ಕರಡಿ ದಾಳಿ, ರಶ್ಯದಲ್ಲಿ ಹಿಮ ತುಂಬಿದ ರಸ್ತೆಯಲ್ಲಿ ರಾತ್ರಿ ಪಯಣ, ಸ್ಪೇನ್‌ನಲ್ಲಿ ದರೋಡೆಕೋರರ ಆಕ್ರಮಣ… ಹೀಗೆ ಸಾಗುತ್ತದೆ. ಆದರೂ ಸಾಧಿಸುವ ಛಲವನ್ನು ಬಿಡಲಿಲ್ಲ.

ಪಯಣದ ಶೇ. 80ರಷ್ಟು ದೂರವನ್ನು ವೇದಾಂಗಿ ಏಕಾಂಗಿಯಾಗಿಯೇ ಕ್ರಮಿಸಿದ್ದರು. ಕೆಲವು ಕಡೆ ವಿಮಾನ ಏರಿದ್ದಾರೆ. ರಶ್ಯದಿಂದ 4 ಸಾವಿರ ಕಿ.ಮೀ. ದೂರ ಸಂಚರಿಸಿ ಭಾರತಕ್ಕೆ ಬಂದಿದ್ದಾರೆ. ಇಲ್ಲಿಂದ ವಿಮಾನದಲ್ಲಿ ಪರ್ತ್‌ಗೆ ತೆರಳಿ, ಅಲ್ಲಿಂದ 15 ಕಿ.ಮೀ. ದೂರ ಕ್ರಮಿಸಿ ರೇಸ್‌ ಆರಂಭಿಸಿದಲ್ಲೇ ಇದಕ್ಕೆ ಮುಕ್ತಾಯ ಹಾಡುವುದು ವೇದಾಂಗಿ ಯೋಜನೆ.

Advertisement

Udayavani is now on Telegram. Click here to join our channel and stay updated with the latest news.

Next