ಮುಂಬಯಿ: ತುಳಸಿ ಪಾವಿತ್ರ್ಯದ ಸಂಕೇತವಾಗಿದೆ. ಭಗವಾನ್ ಶ್ರೀ ಕೃಷ್ಣನ ಪೂಜೆ ಪರಿ ಪೂರ್ಣತೆ ಹೊಂದಲು ತುಳಸಿ ದಳ ಅತ್ಯಗತ್ಯ. ತುಳಸಿ ಎಲೆಗಳಲ್ಲಿ ಔಷಧೀಯ ಗುಣಗಳಿವೆ. ವಾತಾವರಣವನ್ನು ಪರಿಶುದ್ಧಗೊಳಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಉಡುಪಿ ಪರಿಸರದಲ್ಲಿ ಸುಮಾರು ಆರು ಎಕರೆ ವಿಸ್ತೀರ್ಣದಲ್ಲಿ ಸುಮಾರು 15 ಲಕ್ಷ ತುಳಸಿ ಗಿಡ ನೆಡುವ ಯೋಜನೆ ಕಾರ್ಯಾರಂಭಗೊಂಡಿದೆ. ಮುಂದಿನ ಎರಡು ವರ್ಷಗಳಲ್ಲಿ ಪ್ರತೀ ದಿನ ತುಳಸಿ ಲಕ್ಷಾರ್ಚನೆ ಶ್ರೀ ಕೃಷ್ಣ ದೇವರಿಗೆ ಅರ್ಪಿತವಾಗಲಿದೆ.
ಅರ್ಚನೆಯಲ್ಲಿ ಉಪಯೋಗಿಸಿದ ತುಳಸಿಯನ್ನು ಸಂರಕ್ಷಿಸಿ ವೈದ್ಯಕೀಯ ಕಾಲೇಜುಗಳಿಗೆ ನೀಡಿ ಔಷಧಿಗಳಿಗೆ ಉಪಯೋಗಿಸಲಾಗುವುದು. ಪ್ರತಿ ಯೊಬ್ಬರೂ ಮನೆಯ ಮುಂದೆ ತುಳಸಿ ಕಟ್ಟೆಯನ್ನು ನಿರ್ಮಿಸಿ ತುಳಸಿ ಗಿಡ ಬೆಳೆಸಬೇಕು. ತುಳಸಿ ಗಿಡ ಬೆಲೆ ಕಟ್ಟಲಾಗದ ವಸ್ತುವಾಗಿದೆ ಎಂದು ದ್ವಿತೀಯ ಬಾರಿ ಪರ್ಯಾಯ ಪೀಠಾರೋಹಣ ಮಾಡಲಿರುವ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ನುಡಿದರು.
ಅ. 20ರಂದು ಮೀರಾರೋಡ್ ಪೂರ್ವದ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯಲ್ಲಿ ಬಲಿಪಾಡ್ಯ, ಗೋಪೂಜೆ ಮತ್ತು ತುಳಸಿ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದ ಶ್ರೀಗಳು, ಐದು ವರ್ಷಗಳಿಂದ ಮೀರಾರೋಡ್ ಪಲಿಮಾರು ಮಠದ ಶಾಖೆಯಲ್ಲಿ ಪ್ರತೀದಿನ ಸಂಧ್ಯಾ ಕಾಲದಲ್ಲಿ ನಡೆಯುವ ಭಜನೆ ಉಡುಪಿ ಶ್ರೀ ಕೃಷ್ಣನ ಮಠದಲ್ಲಿ ಮುಂದಿನ ಎರಡು ವರ್ಷಗಳ ಕಾಲ ಪ್ರತೀ ದಿನವೂ 24 ಗಂಟೆ ನಿರಂತರವಾಗಿ ಜರಗುವ ಅಖಂಡ ಭಜನೆಗೆ ಪ್ರೇರಣೆಯಾಗಿದೆ.
ಅಖಂಡ ಭಜನೆ ಮೀರಾರೋಡ್ ಪಲಿಮಾರು ಮಠದ ಭಜನ ಮಂಡಲಿಯಿಂದ ಚಾಲನೆಗೊಳ್ಳುವಂತಾಗಲಿ. ಜನವರಿ 18ರಂದು ಜರಗಲಿರುವ ಪರ್ಯಾಯೋತ್ಸವದಲ್ಲಿ ಇಲ್ಲಿನ ತುಳು-ಕನ್ನಡಿಗರು ಪರಿವಾರ ಸಮೇತರಾಗಿ ಪಾಲ್ಗೊಂಡು ಶ್ರೀ ಕೃಷ್ಣನ ಕೃಪಾ ಕಟಾಕ್ಷಕ್ಕೆ ಪಾತ್ರರಾಗಿ ಸಾರ್ಥಕತೆಯ ಬದುಕಿಗೆ ಮುನ್ನುಡಿಯಾಗಬೇಕು ಎಂದು ನುಡಿದರು.
ಇದೇ ಸಂದರ್ಭದಲ್ಲಿ ಶ್ರೀಗಳನ್ನು ಟ್ರಸ್ಟಿ ಸಚ್ಚಿದಾನಂದ ರಾವ್ ಅವರ ನೇತೃತ್ವದಲ್ಲಿ ನಾಣ್ಯದೊಂದಿಗೆ ತುಲಾ ಭಾರ ಸೇವೆಗೈಯ್ಯಲಾಯಿತು. ಸುವರ್ಣ ಗೋಪುರಕ್ಕೆ ನಿಯಮ ದಂತೆ ಉಪಯೋಗಿಸಿದ ಬಂಗಾರ ವನ್ನು ದಾನಗೈದು ಸಂಕಲ್ಪಿತ ಯೋಜನೆಗಳು ಕಾರ್ಯಗತಗೊಳ್ಳಲು ಭಕ್ತಾದಿಗಳು ಸಹಕರಿಸಿದರು.
ವಿವಿಧ ರೀತಿಯಲ್ಲಿ ಸಹಕರಿಸಿದ ಉದ್ಯಮಿಗಳು, ಸಮಾಜ ಸೇವಕರಾದ ವಿರಾರ್ ಶಂಕರ್ ಶೆಟ್ಟಿ, ಕೃಷ್ಣ ಶೆಟ್ಟಿ, ವೈ. ಟಿ. ಶೆಟ್ಟಿ ಹೆಜ್ಮಾಡಿ, ಸುಜಾತಾ ಶೆಟ್ಟಿ ದಹಿಸರ್, ವಸಂತಿ ಶಿವ ಶೆಟ್ಟಿ, ಕರಮಚಂದ್ರ ಗೌಡ, ನಂದಕುಮಾರ್ ಶೆಟ್ಟಿ, ಲೋಲಾಕ್ಷೀ ಕೃಷ್ಣ ಕೋಟ್ಯಾನ್, ಸುಜಾತಾ ಪೂಜಾರಿ, ಮಮತಾ ಶೆಟ್ಟಿ ಮೊದಲಾದವರನ್ನು ಪ್ರಸಾದವನ್ನಿತ್ತು ಗೌರವಿಸಲಾಯಿತು.
ಟ್ರಸ್ಟಿ ಸಚ್ಚಿದಾನಂದ ರಾವ್ ದಾನಿಗಳ ಹೆಸರನ್ನು ವಾಚಿಸಿ ಸ್ವಾಗತಿಸಿದರು. ಪ್ರಬಂಧಕ ರಾಧಾಕೃಷ್ಣ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಶ ಭಟ್, ಪ್ರಸನ್ನ ಭಟ್, ಗೋಪಾಲ್ ಭಟ್, ಗುರುರಾಜ ಉಪಾಧ್ಯಾಯ, ಪುಂಡಲೀಕ ಉಪಾಧ್ಯಾಯ, ದೇವಿಪ್ರಸಾದ್, ವಾಸುದೇವ ಭಟ್ ಮೊದಲಾದವರು ಪಾಲ್ಗೊಂಡಿದ್ದರು. ಮಂತ್ರಾಕ್ಷತೆಯೊಂದಿಗೆ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ಜರಗಿತು.