Advertisement

BJP ವರಿಷ್ಠರ ಮದ್ದು: ಸೋಮಣ್ಣ ನೋವು ಶಮನ

11:58 PM Jan 13, 2024 | Team Udayavani |

ಬೆಂಗಳೂರು: ಮಾಜಿ ಸಚಿವ ವಿ.ಸೋಮಣ್ಣ ಅವರ ಮುನಿಸಿಗೆ ಬಿಜೆಪಿ ವರಿಷ್ಠರು ಮದ್ದು ನೀಡಿದ್ದು, ಲೋಕಸಭೆ ಚುನಾವಣೆ ಸ್ಪರ್ಧೆ ಕುರಿತು ಪ್ರಸ್ತಾವಿಸದ ಸೋಮಣ್ಣ ರಾಜ್ಯಸಭೆ ಸದಸ್ಯತ್ವಕ್ಕೆ ಬೇಡಿಕೆ ಇಟ್ಟಿದ್ದಾರೆ.

Advertisement

ಐದು ದಿನಗಳಿಂದ ದಿಲ್ಲಿಯಲ್ಲಿ ಬೀಡುಬಿಟ್ಟದ್ದ ಸೋಮಣ್ಣ ಕೊನೆಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರನ್ನು ಶನಿವಾರ ಭೇಟಿ ಮಾಡಿ ಮಾತುಕತೆ ನಡೆಸಿದರು.

ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆ ಫ‌ಲಿತಾಂಶ ದಿಂದಾದ ನೋವನ್ನು ದೂರವಾಣಿ ಮೂಲಕ ವರಿಷ್ಠರ ಬಳಿ ಹೇಳಿಕೊಂಡಿದ್ದೆ. ದಿಲ್ಲಿಗೆ ಬರುವಂತೆ ಹೇಳಿದ್ದರು. ಆದರೆ ಬೇಸರದಲ್ಲಿದ್ದ ನಾನು ದಿಲ್ಲಿಗೆ ಹೋಗಿರಲಿಲ್ಲ. ನಾಲ್ಕೈದು ದಿನಗಳ ಹಿಂದೆ ದಿಲ್ಲಿಗೆ ಬಂದಿದ್ದೆ. ಪಕ್ಷದ ಅಧ್ಯಕ್ಷರು ಹಾಗೂ ಗೃಹ ಸಚಿವರೊಂದಿಗೆ ಮಾತುಕತೆ ನಡೆಸಿದ್ದೇನೆ. ನನಗೆ ಸಮಾಧಾನ ಆಗಿದೆ ಎಂದರು.

ಮುಖ್ಯವಾಹಿನಿಗೆ ಬರಲು ಸಲಹೆ
ಸಚಿವ ಅಮಿತ್‌ ಶಾ ಸುಮಾರು 30 ನಿಮಿಷಕ್ಕೂ ಹೆಚ್ಚು ಕಾಲ ನನ್ನೊಂದಿಗೆ ಮಾತನಾಡಿದರು. ನೀವು ನಿಮ್ಮ ಕ್ಷೇತ್ರದಲ್ಲಿ ಸುಲಭವಾಗಿ ಗೆಲ್ಲುತ್ತಿದ್ದಿರಿ. ನಮ್ಮ ಮಾತು ಕೇಳಿ ಬೇರೆಡೆ ಸ್ಪರ್ಧಿಸಿದಿರಿ, ಸ್ವಲ್ಪ ಹಿನ್ನಡೆಯಾಗಿದೆ. ಬೇಸರ ಮಾಡಿಕೊಳ್ಳಬೇಡಿ. ಇವೆಲ್ಲ ಜೀವನದಲ್ಲಿ ಬರುವಂಥದ್ದೇ. ನಾವು ನಿಮ್ಮ ಜತೆಗಿದ್ದೇವೆ. ಲೋಕಸಭೆ ಚುನಾವಣೆಯನ್ನು ಯಾವ ರೀತಿ ಎದುರಿಸಬೇಕು? ಏನು ಕೆಲಸ ಮಾಡಬೇಕು ಎಂಬುದನ್ನು ನಾವು ತಿಳಿಸುತ್ತೇವೆ. ದೇಶಕ್ಕೆ ಪ್ರಧಾನಿ ಮೋದಿಯ ಆವಶ್ಯಕತೆ ಇದೆ. ದೇಶ ಅಭಿವೃದ್ಧಿ ಆಗುತ್ತಿದೆ. ವೈಯಕ್ತಿಕವಾಗಿ ನಿಮಗಾದ ಕೆಲವು ತೊಂದರೆಗಳನ್ನು ಮರೆತು ಮುಖ್ಯವಾಹಿನಿಗೆ ಬರುವಂತೆ ಸಲಹೆ ನೀಡಿದ್ದಾರೆ. ನಾನದನ್ನು ಪಾಲಿಸುತ್ತೇನೆ ಎಂದು ಸೋಮಣ್ಣ ಹೇಳಿದರು.

ರಾಜ್ಯಸಭೆಗೆ ಅವಕಾಶ ನೀಡಿ
ಲೋಕಸಭೆಗೆ ಸ್ಪರ್ಧಿಸುವ ಬಗ್ಗೆ ಚರ್ಚಿ ಸಿಲ್ಲ. ಸಾಧ್ಯವಾದರೆ ದಯಮಾಡಿ ರಾಜ್ಯಸಭೆಗೆ ಅವಕಾಶ ಮಾಡಿಕೊಡಿ ಎಂದಿದ್ದೇನೆ. ಆದರೆ ಅವಸರ ಇಲ್ಲ. ಎಲ್ಲಿ ಗೆಲ್ಲಲಾಗುವುದಿಲ್ಲವೋ ಅಂತಹ ಯಾವುದೇ 3 ಲೋಕಸಭಾ ಕ್ಷೇತ್ರಗಳನ್ನು ನನಗೆ ಕೊಡಿ, ಯಾವ ರೀತಿ ಫ‌ಲಿತಾಂಶ ಬೇಕೋ ಅದನ್ನು ತರುವ ಪ್ರಯತ್ನ ಮಾಡುತ್ತೇನೆ ಎಂದಿದ್ದೇನೆ. ಒಬ್ಬ ರಾಜ್ಯ ನಾಯಕನಿಗೆ ಆದ ಹಿನ್ನಡೆಗೆ ಕೇಂದ್ರ ನಾಯಕರು ಸ್ಪಂದಿಸಿದ ರೀತಿ ನನಗೆ ಸಮಾಧಾನ ತಂದಿದೆ ಎಂದರು.

Advertisement

ಇನ್ನು ಮುಂದೆ ಅದೆಲ್ಲ ನಡೆಯದು!
ಹೊಸ ಅಧ್ಯಕ್ಷರಿಗೆ ಏನೇನು ಸೂಚನೆ ಕೊಡಬೇಕೋ ಕೊಟ್ಟಿದ್ದೇವೆ. ಇನ್ನು ಮುಂದೆ ಅದೆಲ್ಲ ನಡೆಯುವುದಿಲ್ಲ ಎಂದು ವರಿಷ್ಠರು ಭರವಸೆ ಕೊಟ್ಟಿರುವುದಾಗಿ ಸೋಮಣ್ಣ ಹೇಳಿದರು. ನಿಮ್ಮ ಹಿರಿತನಕ್ಕೆ ಸಮಸ್ಯೆಯಾದರೆ ನಾವಿದ್ದೇವೆ. ಮೋದಿ, ನಡ್ಡಾ ಸಹಿತ ವರಿಷ್ಠರು ನಿಮ್ಮ ಜತೆಗಿರುತ್ತಾರೆ. ನೀವು ಕೆಲಸ ಮಾಡಿ, ಒಳ್ಳೆಯದಾಗಲಿ. ಬೆಂಗಳೂರಿಗೆ ಬರುತ್ತೇನೆ. ಎರಡು-ಮೂರು ದಿನ ಅಲ್ಲೇ ಇದ್ದು, ಎಲ್ಲರೊಂದಿಗೆ ಮಾತನಾಡುತ್ತೇವೆ ಎಂದಿದ್ದಾರೆ. ಇನ್ನೂ ಅನೇಕ ವಿಷಯಗಳನ್ನು ಶಾ ಜತೆಗೆ ಚರ್ಚಿಸಿದ್ದು, ಅವರು ಎಲ್ಲಿ, ಹೇಗೆ ಚರ್ಚಿಸುತ್ತಾರೋ ಗೊತ್ತಿಲ್ಲ. ಆದರೆ ನಿಮ್ಮನ್ನಂತೂ ಮನೆಯಲ್ಲಿ ಕೂರಿಸುವುದಿಲ್ಲ. ನಿಮ್ಮ ಸೇವೆಯನ್ನು ಬಳಸಿಕೊಳ್ಳುತ್ತೇವೆ. ಯಾವ ರೀತಿ ಎಂಬುದನ್ನು ಸದ್ಯದಲ್ಲೇ ತಿಳಿಸುತ್ತೇವೆ. ಸಕ್ರಿಯವಾಗಿರಿ. ರಾಷ್ಟ್ರದ ಅಭ್ಯುದಯ ಕ್ಕಾಗಿ ಮೋದಿ ಕೈ ಬಲಪಡಿಸಿ ಎಂದಿದ್ದಾರೆಂದು ಸೋಮಣ್ಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next