Advertisement

ವೈದ್ಯಸಂಘಟನೆ, ವಿದ್ಯಾರ್ಥಿಗಳ ಪ್ರತಿಭಟನೆ

12:06 PM Mar 14, 2017 | Harsha Rao |

ಮಂಗಳೂರು: ರಾಜ್ಯದ ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ನೀಟ್‌ನಡಿ ಏಕಗವಾಕ್ಷಿ ಕೌನ್ಸಿಲಿಂಗ್‌ ನಡೆಯಬೇಕು ಹಾಗೂ ಶೇ. 50ರಷ್ಟು ಸೀಟುಗಳ ವಿತರಣೆಯಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು ಮುಂತಾದ ಬೇಡಿಕೆ ಆಗ್ರಹಿಸಿ ಇಂಡಿಯನ್‌ ಮೆಡಿಕಲ್‌ ಅಸೋಸಿಯೇಶನ್‌ ಮಂಗಳೂರು ಹಾಗೂ ಅಸೋಸಿಯೇಶನ್‌ ಆಫ್‌ ಮೆಡಿಕಲ್‌ ಕನ್ಸಲ್ಟೆಂಟ್ಸ್‌ ಮಂಗಳೂರು ನೇತೃತ್ವದಲ್ಲಿ “ಭ್ರಷ್ಟಾಚಾರದ ವಿರುದ್ಧ ವೈದ್ಯರು’ ಧ್ಯೇಯವಾಕ್ಯದೊಂದಿಗೆ ವಿವಿಧ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಸಹಯೋಗದಲ್ಲಿ ನಗರದ ಪುರಭವನ ಬಳಿಯ ಗಾಂಧಿ ಪಾರ್ಕ್‌ನಲ್ಲಿ ಸೋಮವಾರ ಪ್ರತಿಭಟನೆ ಜರಗಿತು.

Advertisement

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಡಾ| ಶ್ರೀನಿವಾಸ ಕಕ್ಕಿಲ್ಲಾಯ, ವೈದ್ಯಕೀಯ ಸೀಟು ಹಂಚಿಕೆಯಲ್ಲಿ ಯಾವುದೇ ಭ್ರಷ್ಟಾಚಾರ ನಡೆಯಬಾರದೆಂಬ ಉದ್ದೇಶದಿಂದ ಕೇಂದ್ರ ಸರಕಾರ ನೀಟ್‌ ವ್ಯವಸ್ಥೆ ಜಾರಿಗೊಳಿಸಿದೆ. ವೈದ್ಯಕೀಯ ಕೋರ್ಸ್‌ಗಳಿಗೆ ರಾಷ್ಟ್ರಮಟ್ಟದಲ್ಲಿ ಒಂದೇ ಪರೀಕ್ಷೆ ನಡೆಸುವಂತೆ ಹಲವು ಹೋರಾಟ ನಡೆಸಿದ ಬಳಿಕ 2013ರಲ್ಲಿ ನಿಂತು ಹೋಗಿದ್ದ ವಿಷಯ 2016ರ ಅನಂತರ ಘೋಷಣೆಯಾಯಿತು. ಕೇಂದ್ರ ಸರಕಾರ, ರಾಷ್ಟ್ರೀಯ ವೈದ್ಯಕೀಯ ಪರಿಷತ್‌ ಹಾಗೂ ಸುಪ್ರೀಂ ಕೋರ್ಟ್‌ ಈ ಪರೀಕ್ಷೆಯನ್ನು ರಾಜ್ಯ ಸರಕಾರದ ನಿಗಾದಲ್ಲೇ ನಡೆಸಬೇಕು ಎಂದು ಆದೇಶಿಸಿತ್ತು. ಆದರೆ, ರಾಜ್ಯ ಸರಕಾರ ಸರಕಾರಿ ಕಾಲೇಜು ಹಾಗೂ ಖಾಸಗಿ ಕಾಲೇಜಿನಲ್ಲಿ ಸರಕಾರಿ ಸೀಟ್‌ ಪಡೆದಿರುವ ವಿದ್ಯಾರ್ಥಿಗಳಿಗೆ ಹೊರತುಪಡಿಸಿ, ಖಾಸಗಿ ಕಾಲೇಜುಗಳಿಗೆ ಅವುಗಳೇ ಕೌನ್ಸಿಲಿಂಗ್‌ ನಡೆಸಲು ಅವಕಾಶ ಒದಗಿಸಿದಂತಾಗಿದೆ. ರಾಜ್ಯದಲ್ಲಿರುವ ಶೇ. 50ರಷ್ಟು ಸೀಟ್‌ಗಳ ಪೈಕಿ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ನೀಡುತ್ತಿರುವುದು ಸರಿಯಲ್ಲ. ಕನ್ನಡಿಗರಿಗೇ ಮೊದಲ ಆದ್ಯತೆ ನೀಡಬೇಕು ಎಂದರು.

ಮಕ್ಕಳ ತಜ್ಞ ಡಾ| ಸದಾಶಿವ ಮಾತನಾಡಿ, ಪಿಯುಸಿಯಲ್ಲಿ ಅಂಕಗಳ ಆಧಾರದ ಮೇಲೆ ಮೊದಲು ಸೀಟು ಹಂಚಿಕೆಯಾಗುತ್ತಿದ್ದು, ಬಳಿಕ ಆರ್ಥಿಕ ಸಬಲವಿದ್ದವರು ಅಂಕಗಳನ್ನು ಬದಲಾಯಿಸುತ್ತಿದ್ದದ್ದನ್ನು ತಡೆಯಲು ಸಿಇಟಿ ತರಲಾಯಿತು. ಅದರಲ್ಲಿ ಅವ್ಯವಸ್ಥೆ ಕಂಡಾಗ ನೀಟ್‌ ವ್ಯವಸ್ಥೆ ಜಾರಿಗೊಳಿಸಲಾಯಿತು. ಇದೀಗ ನೀಟ್‌ ವ್ಯವಸ್ಥೆ ಹಿಂಬದಿಯಿಂದ ಕಾನೂನು ಬಾಹಿರವಾಗಿ ಸಾಗಲು ಪ್ರಯತ್ನಿಸಲಾಗುತ್ತಿದೆ. ಪ್ರತಿ ವೈದ್ಯಕೀಯ ಕಾಲೇಜಿನಲ್ಲಿ ನೀಟ್‌ ವ್ಯವಸ್ಥೆ ಜಾರಿಗೆ ತಂದು ಕೇಂದ್ರಾಧಾರಿತ ಕೌನ್ಸಿಲಿಂಗ್‌ ನಡೆಸಬೇಕು. ಶೇ. 50 ಸೀಟ್‌ಗಳ ಹಂಚಿಕೆ ಕನ್ನಡಿಗರಿಗೇ ನೀಡಬೇಕಲ್ಲದೆ, ವೈದ್ಯಕೀಯ ವಿದ್ಯಾರ್ಥಿಗಳ ಸ್ಟೈಪೆಂಡ್‌ ಹೆಚ್ಚಳಗೊಳಿಸಬೇಕು ಎಂದು ಆಗ್ರಹಿಸಿದರು. 

ಡಾ| ಪ್ರಕಾಶ್‌ ಹರಿಶ್ಚಂದ್ರ, ಡಾ| ತಾಜುದ್ದೀನ್‌, ಡಾ| ಪ್ರಭಾಕರ ಮೊದಲಾದವರು ಹಾಗೂ ವಿವಿಧ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next