Advertisement

ಇಂಧನ ನಿರೀಕ್ಷಿಸಿದ್ದ ಸುಧಾಕರ್‌ಗೆ ವೈದ್ಯಕೀಯ ಶಿಕ್ಷಣ

09:20 PM Feb 10, 2020 | Team Udayavani |

ಚಿಕ್ಕಬಳ್ಳಾಪುರ: ಬದಲಾದ ರಾಜಕೀಯ ಸನ್ನಿವೇಶದಿಂದಾಗಿ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದು ಖಾತೆ ಹಂಚಿಕೆ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಉಸ್ತುವಾರಿ ಸಚಿವರಾಗುವ ಸಾಧ್ಯತೆ ಇರುವ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌ಗೆ ಬಿಎಸ್‌ವೈ ಸಂಪುಟದಲ್ಲಿ ವೈದ್ಯಕೀಯ ಶಿಕ್ಷಣ ಖಾತೆ ಸಿಕ್ಕಿದೆ.

Advertisement

ಸ್ವತಃ ಎಂಬಿಬಿಎಸ್‌ ಶಿಕ್ಷಣ ಪೂರೈಸಿರುವ ಸುಧಾಕರ್‌ಗೆ ವೈದ್ಯಕೀಯ ಶಿಕ್ಷಣ ಖಾತೆ ಸಿಕ್ಕಿರುವ ಕುರಿತು ಜಿಲ್ಲೆಗೆ ಆಗುವ ಲಾಭ ನಷ್ಟದ ಕುರಿತು ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಜಲ ಸಂಪನ್ಮೂಲ ಹಾಗೂ ಇಂಧನ ಖಾತೆ ಸಿಗುವ ನಿರೀಕ್ಷೆಯಲ್ಲಿದ್ದ ಸುಧಾಕರ್‌ಗೆ ವೈದ್ಯಕೀಯ ಖಾತೆ ಸಿಕ್ಕಿದೆ.

ಕಳೆದ ಗುರುವಾರ ರಾಜ್ಯ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸುಧಾಕರ್‌, ಐದು ದಿನಗಳ ಬಳಿಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೋಮವಾರ ಬೆಳಗ್ಗೆ 10 ಮಂದಿ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ಸುಧಾಕರ್‌ಗೆ ಮಹತ್ವದ ವೈದ್ಯಕೀಯ ಶಿಕ್ಷಣ ಖಾತೆ ಲಭಿಸಿದೆ. ಹೀಗಾಗಿ ವೈದ್ಯಕೀಯ ಶಿಕ್ಷಣ ಖಾತೆಯಿಂದ ಜಿಲ್ಲೆಗೆ ವೈಯಕ್ತಿಕವಾಗಿ ಆಗುವ ಲಾಭದ ಬಗ್ಗೆ ಜನರು ಕುತೂಹಲದಿಂದ ಚರ್ಚೆ ಮಾಡುತ್ತಿದ್ದಾರೆ.

ಮೆಡಿಕಲ್‌ ಕಾಲೇಜಿಗೆ ಸಿಗುತ್ತಾ ವೇಗ ಸಿಗುತ್ತಾ?: ಕಳೆದ ಮೈತ್ರಿ ಸರ್ಕಾರದಲ್ಲಿ ಜಿಲ್ಲೆಗೆ ಮಂಜೂರಾಗಿದ್ದ ಮೆಡಿಕಲ್‌ ಕಾಲೇಜನ್ನು ಕನಕಪುರಕ್ಕೆ ವರ್ಗಾಯಿಸಿದ್ದಕ್ಕೆ ಡಿ.ಕೆ.ಶಿವಕುಮಾರ್‌ ವಿರುದ್ಧ ಉಪ ಚುನಾವಣೆಯ ಕದನದಲ್ಲಿ ವಾಗ್ಧಾಳಿ ನಡೆಸಿದ್ದ ಸುಧಾಕರ್‌, ಅದೇ ಕಾರಣಕ್ಕೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟೆ ಎಂದಿದ್ದರು.

ಆದರೆ ಸುಧಾಕರ್‌, ಚುನಾವಣೆ ಎದುರಿಸಲಿಕ್ಕೂ ಮೊದಲು ಜಿಲ್ಲೆಗೆ ಬಿಜೆಪಿ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಕಾಲೇಜನ್ನು ಮಂಜೂರು ಮಾಡಿಸಿ ಮುಖ್ಯಮಂತ್ರಿ ಕೈಯಿಂದಲೇ ಅಡಿಗಲ್ಲು ಹಾಕಿಸಿದ್ದರು. ಈಗ ವೈದ್ಯಕೀಯ ಶಿಕ್ಷಣ ಖಾತೆ ಸುಧಾಕರ್‌ಗೆ ಸಿಕ್ಕಿರುವುದರಿಂದ ಜಿಲ್ಲೆಗೆ ಮಂಜೂರಾಗಿ ರಾಜ್ಯ ಸಚಿವ ಸಂಪುಟ ಇತ್ತೀಚೆಗೆ 525 ಕೋಟಿ ರೂ. ವೆಚ್ಚದ ಕಾಮಗಾರಿಗೆ ಗ್ರೀನ್‌ಸಿಗ್ನಲ್‌ ಸಹ ಕೊಟ್ಟಿದ್ದು,

Advertisement

ಸುಧಾಕರ್‌ ಎರಡನೇ ಬಾರಿಗೆ ಮೆಡಿಕಲ್‌ ಕಾಲೇಜಿಗೆ ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು. ಹೀಗಾಗಿ ಹಠಕ್ಕೆ ಬಿದ್ದು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಸುಧಾಕರ್‌ ಜಿಲ್ಲೆಗೆ ಮಂಜೂರು ಮಾಡಿಸಿರುವ ವೈದ್ಯಕೀಯ ಕಾಲೇಜನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ ಜಿಲ್ಲೆಗೆ ಅರ್ಪಿಸುವ ಹೊಣೆ ನೂತನ ಸಚಿವ ಸುಧಾಕರ್‌ ಮೇಲಿದೆ.

ಈ ಹಿಂದೆ ಸಚಿವರಾಗುವುದಕ್ಕೂ ಮೊದಲು ಉಪ ಚುನಾವಣೆಯಲ್ಲಿ ಗೆದ್ದ ಸಂದರ್ಭದಲ್ಲಿ ಯಾವ ಖಾತೆ ನಿರೀಕ್ಷಿಸಿದ್ದೀರಿ ಎಂಬ ಉದಯವಾಣಿ ಪ್ರಶ್ನೆಗೆ ಸುಧಾಕರ್‌ ಜಿಪಂ ಸಭಾಂಗಣದಲ್ಲಿ ಪ್ರತಿಕ್ರಿಯಿಸಿ, ಜಿಲ್ಲೆಯು ಮಳೆ ಬೆಳೆ ಇಲ್ಲದೇ ಸಾಕಷ್ಟು ಬರಡಾಗಿದೆ. ಈ ಭಾಗದ ಜಿಲ್ಲೆಯ ರೈತಾಪಿ ಜನರಿಗೆ ಅವಶ್ಯಕವಾದ ನೀರಾವರಿ ಯೋಜನೆಗಳ ಅನುಷ್ಠಾನಗೊಳಿಸಬೇಕಿದೆ. ಈ ದಿಸೆಯಲ್ಲಿ ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಪರೋಕ್ಷವಾಗಿ ಜಲ ಸಂಪನ್ಮೂಲ ಖಾತೆ ಬಗ್ಗೆ ಒಲವು ತೋರಿದ್ದರು.

ಈಗ ವೈದ್ಯಕೀಯ ಶಿಕ್ಷಣ ಖಾತೆ ಸಿಕ್ಕಿದೆ. ಅವರ ಆಪ್ತ ವಲಯದ ಪ್ರಕಾರ ಸುಧಾಕರ್‌, ಇಂಧನ ಅಥವಾ ಜಲ ಸಂಪನ್ಮೂ ಖಾತೆ ಬಯಸಿದ್ದರು. ಆದರೆ ಜಲ ಸಂಪನ್ಮೂಲ ಖಾತೆಗೆ ರಮೇಶ್‌ ಜಾರಕಿಹೊಳಿ ಪಟ್ಟು ಹಿಡಿದಿದ್ದರಿಂದ ಸುಧಾಕರ್‌ಗೆ ವೈದ್ಯಕೀಯ ಶಿಕ್ಷಣ ಖಾತೆ ಸಿಕ್ಕಿದ್ದು, ಜಿಲ್ಲೆಯ ಸರ್ಕಾರಿ ವೈದ್ಯಕೀಯ ಶಿಕ್ಷಣ ಕಾಲೇಜು ಕಾಲಮಿತಿಯೊಳಗೆ ಪೂರ್ಣಗೊಳ್ಳುವ ಆಶಾಭಾವನೆ ಜಿಲ್ಲೆಯ ಜನರಲ್ಲಿ ಮೂಡಿಸಿದೆ.

ಕೃಷಿ ಅಥವಾ ಜಲಸಂಪನ್ಮೂಲ ಕೊಡಬೇಕಿತ್ತು: ಯಾವುದೇ ಸರ್ಕಾರ ಬಂದರೂ ಜಲ ಸಂಪನ್ಮೂಲ ಖಾತೆ ಉತ್ತರ ಕರ್ನಾಟದವರಿಗೆ ಸಿಗುತ್ತದೆ. ಬಯಲುಸೀಮೆಯ ಅನೇಕ ಜಿಲ್ಲೆಗಳು ಬರದಿಂದ ತತ್ತರಿಸಿದ್ದು, ಯಾವುದೇ ಶಾಶ್ವತ ನೀರಾವರಿ ಸೌಕರ್ಯ ಇಲ್ಲ. ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಜಿಲ್ಲೆಗೆ ಶಾಶ್ವತ ನೀರಾವರಿ ಕಲ್ಪಿಸುವ ದೃಷ್ಟಿಯಿಂದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ಡಾ.ಕೆ.ಸುಧಾಕರ್‌ಗೆ ಜಲ ಸಂಪನ್ಮೂಲ ಖಾತೆ ಕೊಡಬೇಕಿತ್ತು ಎಂದು ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ಎನ್‌.ಮುನಿಕೃಷ್ಣಪ್ಪ ಅಭಿಪ್ರಾಯಪಟ್ಟಿದ್ದಾರೆ.

ಸುಧಾಕರ್‌ಗೆ ವೈದ್ಯಕೀಯ ಶಿಕ್ಷಣ ಖಾತೆ ಹಂಚಿಕೆ ಸಂಬಂಧ ಪತ್ರಿಕೆಯೊಂದಿಗೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆ ಕೃಷಿ ಪ್ರಧಾನವಾಗಿದ್ದರಿಂದ ಕೃಷಿ ಖಾತೆಯಾದರೂ ಕೊಡಬಹುದಿತ್ತು. ಈ ಭಾಗದ ರೈತರಿಗೆ ಹೆಚ್ಚು ಅನುಕೂಲ ಮಾಡಲು ಅವಕಾಶ ಇರುತ್ತಿತ್ತು ಎಂದು ಅಭಿಪ್ರಾಯಪಟ್ಟರು.

ನಮ್ಮ ಸಾಹೇಬರಿಗೆ (ಡಾ.ಕೆ.ಸುಧಾಕರ್‌) ಇಂಧನ ಖಾತೆ ಸಿಗುತ್ತದೆ ಎಂದು ನಾವೆಲ್ಲಾ ಅಂದುಕೊಂಡಿದ್ವಿ. ಆದರೆ ವೈದ್ಯಕೀಯ ಶಿಕ್ಷಣ ಖಾತೆ ಸಿಕ್ಕಿದೆ. ಏನು ಮಾಡಕ್ಕೂ ಆಗಲ್ಲ. ಆದರೂ ನಮ್ಮ ಸಚಿವರು ಈ ಖಾತೆಯಲ್ಲಿ ಒಳ್ಳೆಯ ಕೆಲಸ ಮಾಡಿ ತೋರಿಸುತ್ತಾರೆ.
-ಮರಳಕುಂಟೆ ಕೃಷ್ಣಮೂರ್ತಿ, ಸಚಿವ ಡಾ.ಕೆ.ಸುಧಾಕರ್‌ ಆಪ್ತ

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next