ಮಹಾನಗರ: ಮಾಧ್ಯಮ ಕ್ಷೇತ್ರವನ್ನು ಆಯ್ದುಕೊಳ್ಳುವ ವಿದ್ಯಾರ್ಥಿಗಳು ಸಮಾಜದ ಬದ್ಧತೆ ಉಳಿಸಿಕೊಳ್ಳಬೇಕು.
ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಯುವಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಹೆಚ್ಚಿನ ಹೊಣೆಗಾರಿಕೆ ಇದೆ ಎಂದು ಮಾಜಿ
ಲೋಕಾಯುಕ್ತ ನ್ಯಾ|ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.
ಸಂತ ಅಲೋಶಿಯಸ್ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ‘ಮಾಧ್ಯಮದಲ್ಲಿ ನವ ಉದಾರವಾದ ಪ್ರಜಾಪ್ರಭುತ್ವ ಹಲವು ಸವಾಲುಗಳು’ ವಿಷಯದ ಕುರಿತು ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಜರಗಿದ ರಾಷ್ಟ್ರೀಯ ಮಟ್ಟದ ವಿಚಾರಸಂಕಿರಣವನ್ನು ಅವರು ಉದ್ಘಾಟಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಗಲ್ಲು ಎಂದು ಪರಿಣಿಸಲ್ಪಟ್ಟಿರುವ ಮಾಧ್ಯಮ ಕ್ಷೇತ್ರವು ಇಂದು ಹಲವು ವಿಷಯಗಳಲ್ಲಿ ಪರಿಶುದ್ಧವಾಗಿ ಉಳಿದಿಲ್ಲ ಎನ್ನುವುದಕ್ಕೆ ಆಗಾಗ ಉದಾಹರಣೆಗಳು ದೊರೆಯುತ್ತವೆ. ಮಾನವೀಯ ನೆಲೆಯಲ್ಲಿ ಸ್ಪಂದಿಸಬೇಕಾಗಿದ್ದ ಮಾಧ್ಯಮ ಅನೇಕ ಸಂದರ್ಭಗಳಲ್ಲಿ ಅಮಾನವೀಯವಾಗಿ ನಡೆದುಕೊಳ್ಳುತ್ತಿದೆ. ಭ್ರಷ್ಟಾಚಾರಕ್ಕೆ ಮಾಧ್ಯಮ ಕ್ಷೇತ್ರವೂ ಹೊರತಾಗಿಲ್ಲ. ಸಮಾಜಮುಖಿ ಮಾಧ್ಯಮ ಸಮಾಜದ ಆವಶ್ಯಕತೆಯಾಗಿದೆ. ದುರಾದೃಷ್ಟವೆಂದರೆ ಇಂದು ಇಂತಹ ಆವಶ್ಯಕತೆಗಳಿಗೆ ವ್ಯತಿರಿಕ್ತವಾದ ಪರಿಸ್ಥಿತಿಯನ್ನು ಅನೇಕ ಕಡೆ ಗಮನಿಸುತ್ತಿದ್ದೇವೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಫಾ| ಡೈನೋಶಿಯಸ್ ವಾಸ್, ಮಾಧ್ಯಮ ಕ್ಷೇತ್ರ ಕೂಡ ವಾಣಿಜ್ಯೀಕರಣಗೊಳ್ಳುತ್ತಿದೆ. ಹಲವರಿಗೆ ಇತರ ಕ್ಷೇತ್ರಗಳಂತೆ ಕೇವಲ ಒಂದು ಉದ್ಯೋಗವಾಗಿದೆ ಎಂದರು. ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ಡಾ| ಪ್ರವೀಣ್ ಮಾರ್ಟಿಸ್, ವಿದ್ಯಾರ್ಥಿ ನಾಯಕಿ ಜೆ. ರೋಡ್ರಿಗಸ್ ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ| ಮೆಲ್ವಿನ್ ಎಸ್. ಪಿಂಟೋ ಸ್ವಾಗತಿಸಿದರು.