ಬೆಂಗಳೂರು: ಕೃಷಿ ಚಟುವಟಿಕೆಗಳಿಗೆ ಮಾನವ ಸಂಪನ್ಮೂಲ ಕೊರತೆ ಹಿನ್ನೆಲೆ ರೈತರಿಗೆ ಯಂತ್ರಗಳ ಸೌಲಭ್ಯ, ಕೌಶಲ ತರಬೇತಿ ನೀಡುವ ಮೂಲಕ ಕೃಷಿಯನ್ನು ಯಾಂತ್ರೀಕರಣಗೊಳಿಸಬೇಕಾದ ಅಗತ್ಯವಿದೆ ಎಂದು ಕೃಷಿ ವಿವಿ ಕುಲಪತಿ ಡಾ. ರಾಜೇಂದ್ರ ಪ್ರಸಾದ್ ಹೇಳಿದರು.
ಬುಧವಾರ ಜಿಕೆವಿಕೆಯಲ್ಲಿ ನೂತನವಾಗಿ ನಿರ್ಮಿಸಿದ ವಿ.ಎಸ್.ಟಿ ಕೃಷಿ ಯಾಂತ್ರೀಕರಣ ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೃಷಿ ಕ್ಷೇತ್ರದಲ್ಲಿ ಕಾರ್ಮಿಕರ ಸಂಖ್ಯೆ ಕುಗ್ಗುತ್ತಿದೆ. ಇದರಿಂದಾಗಿ ರೈತನು ತನ್ನ ಕೃಷಿ ಚಟುವಟಿಕೆಗಳಿಗಾಗಿ ಯಂತ್ರಗಳನ್ನು ಅವಲಂಭಿಸುವ ಅಗತ್ಯ ಸೃಷ್ಟಿಯಾಗಿದೆ. ಅಲ್ಲದೆ ಇಂದಿಗೂ ಭಾರತದ ರೈತರು ಪುರಾತನ ಕಾಲದ ಕೃಷಿ ಸಲಕರಣೆಗಳನ್ನೇ ಅವಲಂಭಿಸಿದ್ದಾರೆ.
ಅವರಿಗೆ ವಿ.ಎಸ್.ಟಿ ಕೃಷಿ ಯಾಂತ್ರೀಕರಣ ಕೌಶಲ್ಯ ಅಭಿವೃದ್ಧಿ ಕೇಂದ್ರವು ಕೃಷಿ ತಾಂತ್ರಿಕ ಶಿಕ್ಷಣ ನೀಡಲು ಸಹಾಯಕವಾಗಲಿದೆ. ಈ ಮೂಲಕ ಕೃಷಿಕರು ತಮ್ಮ ಚಟುವಟಿಕೆಗಳಿಗೆ ಜನರನ್ನು ಅವಲಂಭಿಸದೆ ಸ್ವಾವಲಂಬನೆಯ ಯಾಂತ್ರಿಕರಣ ಕೃಷಿಗೆ ಮುಂದಾಗುವಂತೆ ಉತ್ತೇಜನ ನೀಡಿದಂತಾಗುತ್ತಿದೆ ಎಂದರು.
ಭಾರತದ ಕೃಷಿ ಕ್ಷೇತ್ರವು ಇಸ್ರೇಲ್‌ನಂತೆ ಪ್ರಗತಿ ಸಾಧಿಸಲು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ರೈತರಿಗೆ ಯಾಂತ್ರಿಕ ಶಿಕ್ಷಣ, ಸೌಲಭ್ಯ, ಕೌಶಲ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂತಹ ಸಹಭಾಗಿತ್ವದ ಯೋಜನೆಗಳಿಂದ ದೇಶದಲ್ಲಿ ಆಹಾರೋತ್ಪಾದನೆ ಮತ್ತು ಉದ್ಯೋಗವಕಾಶದಲ್ಲಿ ಅಭಿವೃದ್ಧಿ ಕಾಣಲು ಸಾಧ್ಯ ಎಂದು ತಿಳಿಸಿದರು.
ವಿಎಸ್‌ಟಿ ಟಿಲ್ಲರ್ ಮತ್ತು ಟ್ರ್ಯಾಕ್ಟರ್ ಲಿ. ನ ಉಪಾಧ್ಯಕ್ಷ ವಿ.ಪಿ.ಮಹೇಂದ್ರ ಮಾತನಾಡಿದರು. ಕೃಷಿ ಮಹಾವಿದ್ಯಾಲಯ ಮುಖ್ಯಸ್ಥ ಡಾ. ಜಿ.ಎನ್. ನಾಗರಾಜ ಉಪಸ್ಥಿತರಿದ್ದರು.