Advertisement
ತೋಡಿನ ನೀರು ಮಕ್ಕಳ ನೀರಾಟದ ಒಂದು ಪ್ರದೇಶ. ತೋಟಕ್ಕೆ ನೀರು ಒದಗಿಸಬಲ್ಲ ಕೆರೆ, ಬಾವಿಗಳನ್ನು ಭರ್ತಿ ಮಾಡಬಲ್ಲ ಒಂದು ಆಕರ. ತೋಡಿನಲ್ಲಿ ಹರಿಯುವ ನೀರನ್ನು ನಿಲ್ಲಿಸಿಕೊಂಡರೆ ಫೆಬ್ರವರಿವರೆಗೆ ನೀರಿಗೆ ಕೊರತೆಯಿಲ್ಲ. ಅದು ಸಣ್ಣ ಮೀನುಗಳ ಆಶ್ರಯ ತಾಣವೂ ಹೌದು. ಆದರೆ ಇಂದು ತೋಡು ಎಂದರೆ ಕಸದ ತೊಟ್ಟಿ ಎಂಬಂತಾಗಿದೆ. ಮನೆ, ಫ್ಲ್ಯಾಟ್‌ನ ಕಲುಷಿತ ನೀರು ಬಿಡುವ ಚರಂಡಿಯಾಗಿ ಮಾರ್ಪಟ್ಟಿದೆ. ಮಾಂಸದ ಅಂಗಡಿ, ಮನೆಗಳ ತ್ಯಾಜ್ಯವನ್ನು ಎಸೆದು ಹೋಗುವ ತ್ಯಾಜ್ಯದ ಕೊಂಪೆಯಾಗಿಯೂ ಬಳಕೆಯಾಗುತ್ತಿದೆ. ಇದರಿಂದ ಸಮಸ್ಯೆ ಅನುಭವಿಸುವುದು ಸ್ಥಳೀಯರು.
ಪುತ್ತೂರು- ಕಾಣಿಯೂರು ರಸ್ತೆಯ ಮುಕ್ವೆ ಸಮೀಪದ ಚಂದ್ರಮ್‌ಸಾಂಗ್ ಪ್ರದೇಶದಲ್ಲಿ ತೋಡು ಹರಿದು ಹೋಗುತ್ತಿದೆ. ಈ ತೋಡಿನ ಸ್ವಚ್ಛಂದ ಹರಿವಿಗೆ ಕೆಲವರು ಅಡ್ಡಿ ಮಾಡುತ್ತಿರುವುದರಿಂದ ತೋಡಿನ ಬದಿಯ ಹಾದಿಯಲ್ಲಿ ಸಾಗುವಾಗ ಕೆಟ್ಟ ವಾಸನೆ ಮೂಗಿಗೆ ಬಡಿಯುತ್ತದೆ. ಇದನ್ನು ಸಹಿಸಿಕೊಂಡೇ ಸ್ಥಳೀಯರು ಜೀವನ ನಡೆಸಬೇಕು. ಆಸುಪಾಸಿನ ಬಾವಿ, ಕೆರೆಗಳು ಕಲುಷಿತಗೊಂಡಿವೆ. ಕುಡಿಯಲು ನೀರು ಸಿಗದೆ, ಎಷ್ಟೋ ದೂರದಿಂದ ಹೊತ್ತು ತರಬೇಕಾದ ಸ್ಥಿತಿಯಿದೆ. ಈ ಬಗ್ಗೆ ಸ್ಥಳೀಯ ಪಂಚಾಯತ್ ಹಾಗೂ ತಾಲೂಕು ಆರೋಗ್ಯಾಧಿಕಾರಿಯ ಗಮನ ಸೆಳೆಯಲಾಗಿದೆ. ಸ್ಥಳ ಪರಿಶೀಲನೆ ನಡೆಸಿದ್ದರೂ ಸಮಸ್ಯೆ ಮಾತ್ರ ಹಾಗೆಯೇ ಇದೆ ಎಂದು ಸ್ಥಳೀಯರಾದ ಸುಮಿತ್ರಾ ನಾಯಕ್ ಅಳಲು ತೋಡಿಕೊಂಡಿದ್ದಾರೆ. ಮಾಂಸ ತ್ಯಾಜ್ಯ
ಚಂದ್ರಮ್‌ಸಾಂಗ್ ಬಳಿ ಹರಿಯುವ ತೋಡಿಗೆ ಮಾಂಸ ತುಂಬಿದ ಪ್ಲಾಸ್ಟಿಕ್ ತೊಟ್ಟೆಗಳನ್ನು ಎಸೆಯಲಾಗುತ್ತಿದೆ. ಇದು ಮಾಂಸದ ಅಂಗಡಿ ಗಳವರ ಕೆಲಸ ಎಂದು ಸ್ಥಳೀಯರು ದೂರಿದ್ದಾರೆ. ಈ ಮಾಂಸ ನಾಯಿ- ಕಾಗೆಗಳ ಆಹಾರವಾಗಿದೆ. ಅವು ತ್ಯಾಜ್ಯವನ್ನು ಸ್ಥಳೀಯ ಮನೆಗಳ ಬಾಗಿಲಿಗೆ ಎಳೆದು ತಂದು ಹಾಕುತ್ತಿವೆ. ಹರಿಯುವ ನೀರು ನಿರ್ಮಲ ಎಂಬ ಮಾತೇ ಇದೆ. ಆದರೆ ಇಲ್ಲಿ ಹರಿಯುವ ನೀರನ್ನು ಕಾಲಿನಿಂದ ಮುಟ್ಟುವುದಕ್ಕೂ ಭಯವಾಗುತ್ತಿದೆ. ಕಾರಣ, ಕೊಳಚೆ ನೀರು, ಪ್ಲಾಸ್ಟಿಕ್, ತ್ಯಾಜ್ಯ, ಮಾಂಸ ತ್ಯಾಜ್ಯ ತೋಡಿನ ಒಡಲನ್ನು ತುಂಬುತ್ತಿದೆ. ಇನ್ನೊಂದು ಡಂಪಿಂಗ್ ಯಾರ್ಡ್ ಆಗಿ ಪರಿಣಮಿಸಿದ್ದು, ರೋಗಭೀತಿ ಆವರಿಸಿದೆ.
Related Articles
ಸ್ಥಳೀಯರು ಮನವಿ ನೀಡಿದ ಬಳಿಕ, ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಸಾಂಕ್ರಾಮಿಕ ರೋಗ ಹರಡುವ ಎಚ್ಚರಿಕೆಯನ್ನು ಸ್ಥಳೀಯರಿಗೆ ನೀಡಿದ್ದೇನೆ. ಸ್ಥಳೀಯ ಕೋಳಿ ಫಾರ್ಮ್ ಗೆ ಪರವಾನಿಗೆ ನೀಡದಂತೆ ಸ್ಥಳೀಯಾಡಳಿತಕ್ಕೆ ಸೂಚಿಸಿದ್ದೇನೆ. ಈಗಿನ ಸಮಸ್ಯೆ ಬಗ್ಗೆ ಗಮನಕ್ಕೆ ಬಂದಿಲ್ಲ. ಪರಿಶೀಲನೆ ನಡೆಸಲಾಗುವುದು.
– ಡಾ| ಅಶೋಕ್ ಕುಮಾರ್ ರೈ,
ತಾಲೂಕು ಆರೋಗ್ಯಾಧಿಕಾರಿ
Advertisement
ಉಲ್ಬಣಿಸಿದ ಸಮಸ್ಯೆ: ರೋಗಭೀತಿಚಂದ್ರಮ್ಸಾಂಗ್ ಹಾಗೂ ತೋಡು ಹರಿದು ಹೋಗುವ ಹಾದಿಯಲ್ಲಿ 100ಕ್ಕೂ ಅಧಿಕ ಮನೆಗಳಿವೆ. ಈ ಮನೆಗಳಿಗೆ ಕೆಟ್ಟ ವಾಸನೆ, ರೋಗಭೀತಿ, ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕಳೆದ 2-3 ವರ್ಷಗಳಿಂದ ಸಮಸ್ಯೆ ಉಲ್ಬಣಿಸಿದೆ. ಮೊದಲು ಇದೇ ತೋಡಿನಲ್ಲಿ ಮಕ್ಕಳು ಆಟವಾಡುತ್ತಿದ್ದರು. ಇದೀಗ ನೀರಿಗೆ ಇಳಿಯಲು ಭಯವಾಗುತ್ತಿದೆ.
– ಸಂತೋಷ್ ನಾಯಕ್,
ಚಂದ್ರಮ್‌ಸಾಂಗ್ ಗಣೇಶ್ ಎನ್. ಕಲ್ಲರ್ಪೆ