Advertisement

ಉತ್ಪಾದನಾ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ ಅಗತ್ಯ: ರೇಣುಕಾರ್ಯ

09:10 PM Nov 06, 2019 | Team Udayavani |

ಮೈಸೂರು: ಕೇಂದ್ರ ಸರ್ಕಾರ ಉತ್ಪಾದನಾ ಕ್ಷೇತ್ರದಲ್ಲಿ ಖಾಸಗಿ ವಲಯದ ಸಹಭಾಗಿತ್ವ ಮತ್ತು ಅದಕ್ಕೆ ಪೂರಕ ನೀತಿ ರೂಪಿಸಿ ವಿದೇಶಿ ಬಂಡವಾಳ ಹೂಡಿಕೆಗೆ ಹೆಚ್ಚು ಅವಕಾಶ ಮಾಡಿಕೊಟ್ಟು ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಬೇಕಿದೆ ಎಂದು ಮಹಾಜನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರು ಹಾಗೂ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ಸಿ.ಕೆ.ರೇಣುಕಾರ್ಯ ಹೇಳಿದರು.

Advertisement

ನಗರದ ಮಹಾರಾಣಿ ಕಲಾ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಹಾಗೂ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಐಕ್ಯುಎಸಿ ಮತ್ತು ಇಐಟಿಎ ಸಹಯೋಗದಲ್ಲಿ ಬುಧವಾರ ನಡೆದ “ಭಾರತದ ಪ್ರಸ್ತುತ ಆರ್ಥಿಕ ಬಿಕ್ಕಟ್ಟು: ರಾಜ್ಯ ಸರ್ಕಾರದ ಮಧ್ಯಪ್ರವೇಶದ ಅವಶ್ಯಕತೆ’ ಎಂಬ ವಿಷಯದ ಬಗೆಗಿನ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಉಳಿತಾಯವಿಲ್ಲ: ನಮ್ಮ ರಾಷ್ಟ್ರ ಬಹಳ ವಿಶಾಲವಾಗಿದ್ದು, ಬಡತನ, ಜನಸಂಖ್ಯೆ, ಉದ್ಯೋಗ, ಉತ್ಪಾದನ ದೃಷ್ಟಿಯಿಂದ ಹಲವು ಸಮಸ್ಯೆ ಎದುರಿಸುತ್ತಿದೆ. ಕಳೆದ 4 ವರ್ಷಗಳಿಂದೀಚೆಗೆ ದೇಶದ ಆರ್ಥಿಕ ಬೆಳವಣಿಗೆ ಮಟ್ಟ ಗಣನೀಯವಾಗಿ ಕುಸಿದಿದೆ. ಇದರಿಂದ ಉತ್ಪಾದನಾ ಸಾಮರ್ಥ್ಯ ಕಡಿಮೆಯಾಗಿ, ಜನರಲ್ಲಿ ಆದಾಯ ಹಾಗೂ ಉಳಿತಾಯವೂ ಇಲ್ಲದಂತಾಗಿದೆ ಎಂದು ಹೇಳಿದರು.

ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಖಾಸಗಿ ಸಹಭಾಗಿತ್ವದೊಂದಿಗೆ ಎಲ್ಲಾ ಕ್ಷೇತ್ರಗಳಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ನೀತಿ ರೂಪಿಸಬೇಕು. ಜೊತೆಗೆ ಹೆಚ್ಚು ವಿದೇಶಿ ಬಂಡವಾಳ ಹರಿದು ಬಂದರೆ ಬಂಡವಾಳ ಸಮಸ್ಯೆ, ನಿರುದ್ಯೋಗದಂತಹ ಹಲವು ಸಮಸ್ಯೆ ದೂರವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಉದ್ಯೋಗ ಸೃಷ್ಟಿಸಿ: ಆಟೋ ಮೊಬೈಲ್‌, ಸ್ಟೀಲ್‌, ಗೃಹ ನಿರ್ಮಾಣ ಸೇರಿ ಹಲವು ಕ್ಷೇತ್ರಗಳು ಗಣನೀಯ ಪ್ರಮಾಣದ ಉದ್ಯೋಗ ಸೃಷ್ಟಿಸುವ ತಾಣಗಳಾಗಿವೆ. ಆದರೆ, ಆರ್ಥಿಕ ಕುಸಿತದಿಂದಾಗಿ ಇವು ನಷ್ಟದಲ್ಲಿದ್ದು, ನಿರುದ್ಯೋಗ, ಬಡತನದಂತಹ ಸಮಸ್ಯೆ ಹೆಚ್ಚಳವಾಗಿದೆ. ಈಗಾಗಲೇ ಕಾರ್ಪೊರೇಟ್‌ ವಲಯಗಳಿದ್ದ ಶೇ.34.9 ತೆರಿಗೆಯನ್ನು ಶೇ. 29.1ಕ್ಕೆ ಇಳಿಸಲಾಗಿದೆ ಎಂದರು.

Advertisement

ಆರ್ಥಿಕ ತಜ್ಞ ಹಾಗೂ ರಾಜ್ಯ ಸರ್ಕಾರದ ತೆರಿಗೆ ಸುಧಾರಣೆ ಸಮಿತಿ ಮಾಜಿ ಸದಸ್ಯ ಡಾ.ಶ್ರೀಕಂಠಾರಾಧ್ಯ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಪೊರೆಟ್‌ ವಲಯದ ತೆರಿಗೆಗಳಿಗೆ ವಿನಾಯಿತಿ ನೀಡುವ ಬದಲು ಜನಸಾಮಾನ್ಯರ ಆದಾಯ ತೆರಿಗೆಗೆ ವಿನಾಯಿತಿ ನೀಡಬೇಕಿತ್ತು. ಜನಸಾಮಾನ್ಯರ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡಿದ್ದರೆ ಅವರ ಹೊರೆ ಕಡಿಮೆಯಾಗಿ ಮಾರುಕಟ್ಟೆ ಉತ್ಪನ್ನ ಬೇಡಿಕೆ ಹೆಚ್ಚಾಗುತ್ತಿತ್ತು. ಆಗ ಆರ್ಥಿಕ ಬಿಕ್ಕಟ್ಟು ಕಡಿಮೆಯಾಗುವ ಸಾಧ್ಯತೆಯಿತ್ತು ಎಂದು ತಿಳಿಸಿದರು.

ರಾಜ್ಯ ಸರ್ಕಾರ ಕೈಜೋಡಿಸಲಿ: ಕಳೆದ 3 ವರ್ಷದಿಂದ ಜಿಡಿಪಿ ಕುಸಿಯುತ್ತಲೇ ಇದೆ. 2016-17ರಲ್ಲಿ ಶೇ.8.2ರಷ್ಟಿದ್ದ ಜಿಡಿಪಿ ಈ ಸಾಲು ಮುಗಿಯುವುದರೊಳಗೆ ಶೇ.6ರಷ್ಟಕ್ಕೆ ಬಂದು ನಿಲ್ಲುವ ಸಾಧ್ಯತೆಯಿದೆ. ಚೀನಾ-ಅಮೆರಿಕಾ ಮಧ್ಯೆ ನಡೆಯುತ್ತಿರುವ ಮಾರುಕಟ್ಟೆ ಸಂಘರ್ಷ ಹಾಗೂ ಮತ್ತಿತರ ಕಾರಣಗಳಿಂದ ಎಲ್ಲಾ ದೇಶಗಳೂ ಈ ಸಮಸ್ಯೆ ಎದುರಿಸುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಪ್ರಧಾನಿ ಹೇಳುವಂತೆ 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ಸಾಧಿಸುವುದು ಕಷ್ಟಸಾಧ್ಯ. ಇಂತಹ ಪರಿಸ್ಥಿತಿಯಲ್ಲಿ ಆರ್ಥಿಕತೆ ಸರಿಪಡಿಸಲು ರಾಜ್ಯ ಸರ್ಕಾರವೂ ಕೈಜೋಡಿಸಬೇಕು ಎಂದು ಹೇಳಿದರು. ವಿವಿಧ ಕಾಲೇಜುಗಳ ಅರ್ಥಶಾಸ್ತ್ರ ಉಪನ್ಯಾಸಕರು ವಿಚಾರ ಮಂಡಿಸಿದರು.

ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಟಿ.ವಿಜಯ್‌, ಇಐಟಿಎ ಅಧ್ಯಕ್ಷೆ ಡಾ.ಎನ್‌.ಸಿ.ಸುಮತಿ, ಐಕ್ಯುಎಸಿ ಸಂಯೋಜಕ ಡಾ.ಪುಟ್ಟರಾಜು, ಡಾ.ಎಸ್‌.ಸುನಿಲ್‌ ಕುಮಾರ್‌, ಪ್ರೊ.ಸಿ.ಸುರೇಶ್‌, ಪ್ರೊ.ಎಂ.ಮಹದೇವಯ್ಯ, ಡಾ.ಕೆ.ಎನ್‌.ರೂಪಾ, ಡಾ.ಎಂ.ನೇತ್ರಾವತಿ ಇದ್ದರು.

ಸಹಿ ಹಾಕಿದ್ದರೆ ಚೀನಾಕ್ಕೆ ಅನುಕೂಲವಿತ್ತು: ಕೇಂದ್ರ ಸರ್ಕಾರ ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕಿದ್ದರೆ ನೆರೆಯ ಚೀನಾ ದೇಶಕ್ಕೆ ಹೆಚ್ಚು ಅನುಕೂಲವಾಗುತ್ತಿತ್ತು. ನಮ್ಮ ದೇಶದಲ್ಲಿ ಇಂದಿಗೂ ಉತ್ಪಾದನಾ ಸಾಮರ್ಥ್ಯ ಹೆಚ್ಚಾಗಿಲ್ಲ. ಆದರೆ, ಚೀನಾ ದೇಶದ ಉತ್ಪಾದನಾ ಸಾಮರ್ಥಯ ಗಣನೀಯವಾಗಿ ಹೆಚ್ಚಿದೆ. ಹಾಗಾಗಿ ಚೀನಾದಂತಹ ದೇಶಗಳೊಂದಿಗೆ ಪೈಪೋಟಿ ನಡೆಸುವುದು ಕಷ್ಟದ ಕೆಲಸ ಎಂದು ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ಸಿ.ಕೆ.ರೇಣುಕಾರ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next