Advertisement

ವಸತಿ ರಹಿತರಿಗೆ ಸೌಕರ್ಯ ಕಲ್ಪಿಸಲು ಕ್ರಮ

06:52 PM Feb 25, 2021 | Team Udayavani |

ಯಾದಗಿರಿ: ಜಿಲ್ಲೆಯಲ್ಲಿ 12 ಸಾವಿರ ನಿವೇಶನ ರಹಿತರಿದ್ದು ನಗರದ 5 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಸರ್ಕಾರಿ ಜಮೀನು ಲಭ್ಯವಿಲ್ಲದರಿಂದ 18 ಎಕರೆ ಖಾಸಗಿ ಭೂಮಿ ಖರೀದಿಸಲು ಜಿಲ್ಲಾಡಳಿತ ಪ್ರಕ್ರಿಯೆ ಪ್ರಾರಂಭಿಸಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ ಹೇಳಿದರು.

Advertisement

ನಗರದ ಬಾಬು ಜಗಜೀವನರಾಮ್‌ ಭವನದಲ್ಲಿ ಸ್ಲಂ ಜನಾಂದೋಲನ-ಕರ್ನಾಟಕ ಹಾಗೂ ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ ಜಿಲ್ಲಾ ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ನಿವೇಶನ ರಹಿತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸಾವಿತ್ರಿಬಾಯಿ ಫುಲೆ ಸಂಘಟನೆ ಕಳೆದ ಮೂರು ವರ್ಷಗಳಿಂದ ನಿವೇಶನ ರಹಿತರಿಗೆ ಭೂಮಿಗಾಗಿ ಹೋರಾಟ ನಡೆಸಿದ್ದು, ಸಮಾವೇಶದಲ್ಲಿ ಸಲ್ಲಿಸಿದ 559 ಕುಟುಂಬಗಳ ಅರ್ಹತೆ ಪಟ್ಟಿ ಪರಿಶೀಲಿಸಿ ಆದಷ್ಟು ಬೇಗ ಮಂಜೂರಾತಿ ನೀಡಲಾಗುವುದು. ಹೀಗಾಗಿ ಜಿಲ್ಲಾಡಳಿತ ಸರ್ಕಾರಿ ಇಲ್ಲವೇ ಖಾಸಗಿ ಭೂಮಿ ಖರೀದಿಸಿ ನೀಡಲು ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಶಾಸಕರ ಪರವಾಗಿ ಮನವಿ ಸ್ವೀಕರಿಸಿದ ಮಹೇಶರೆಡ್ಡಿ ಮುದ್ನಾಳ ಮಾತನಾಡಿ, ಈಗಾಗಲೇ ವಾರ್ಡ್‌ವಾರು ಜನರ ಸಮಸ್ಯೆಗಳ ಬಗ್ಗೆ ಜನರ ಜತೆ ಜನ ಸಂಪರ್ಕ ಸಭೆ ನಡೆಸಲಾಗುತ್ತಿದ್ದು, ಈ ವೇಳೆ ನಿವೇಶನ ರಹಿತರ ಮತ್ತು ಬಾಡಿಗೆದಾರರ ಸಮಸ್ಯೆ ಮನವರಿಕೆಯಾಗಿದೆ. ಸರ್ಕಾರ ಮಟ್ಟದಲ್ಲಿ ಸ್ಲಂ ಜನರಿಗೆ ಭೂಮಿ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಕೊಳಚೆ ಪ್ರದೇಶದಲ್ಲಿ ಅಗತ್ಯ ಮೂಲ ಸೌಕರ್ಯ ಒದಗಿಸಲು ನಗರಸಭೆ ಶಾಸಕರ ನಿಧಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಸ್ಲಂನಲ್ಲಿ ನಿವೇಶನ ಇದ್ದವರಿಗೆ ಪ್ರಧಾನಿ ಆವಾಸ್‌ ಯೋಜನೆಯಡಿ ಮನೆ ನಿರ್ಮಿಸಿಕೊಡಲಾಗುವುದು ಎಂದರು. ಸ್ಲಂ ಜನಾಂದೋಲನ ರಾಜ್ಯಾಧ್ಯಕ್ಷ ಎ.ನರಸಿಂಹಮೂರ್ತಿ ಮಾತನಾಡಿ, ನಗರ ಪ್ರದೇಶದಲ್ಲಿ ಶೇ.50 ರಷ್ಟು ಜನರಿಗೆ ಮನೆಗಳಿಲ್ಲದೇ ಬಾಡಿಗೆ ಮನೆಯಲ್ಲಿ ಬದುಕುತ್ತಿರುವುದರಿಂದ ದುಡಿಮೆಯ ಶೇ.30ರಷ್ಟು ಹಣವನ್ನು ಬಾಡಿಗೆಗೆ ಮೀಸಲಿಡಬೇಕಾಗಿದೆ. ಹಾಗಾಗಿ ಜ್ವಲಂತ ಸಮಸ್ಯೆ ಪರಿಗಣಿಸಿ ಜನಸಂಖ್ಯೆಗೆ ಅನುಗುಣವಾಗಿ ನಗರ ಪ್ರದೇಶದಲ್ಲಿ ಭೂಮಿ ನೀಡಬೇಕು. ಕರ್ನಾಟಕ
ಭೂ ಮಂಜೂರಾತಿ ನಿಯಮ 1969 ಕಲಂ 18ಎ ಅನ್ವಯ ಜಿಲ್ಲಾಡಳಿತ ನಿವೇಶನ ರಹಿತರಿಗೆ ಸರ್ಕಾರಿ ಭೂಮಿ ಗುರುತಿಸಿ ನೀಡಲು ಒತ್ತಾಯಿಸಿದರು.

ಪೌರಾಯುಕ್ತ ಬಿ.ಟಿ. ನಾಯಕ, ಕಾರ್ಯಪಾಲಕ ಅಭಿಯಂತರು ಬಕ್ಕಪ್ಪ, ಸ್ಲಂ ವಿಭಾಗೀಯ ಸಂಚಾಲಕ ಜನಾರ್ದನ ಹಳ್ಳಿಬೆಂಚಿ, ಸಂಗೀತಾ ಹಪ್ಪಳ, ಹಣಮಂತ ಶಹಾಪುರಕರ್‌, ರೇಣುಕಾ ಸರಡಗಿ,ಮುನಿಯಪ್ಪ, ಆನಂದ ಚಟ್ಟೆರಕರ್‌ ಇದ್ದರು. ವಿವಿಧ ಕೊಳಚೆ ಪ್ರದೇಶಗಳಿಂದ ನಿವೇಶನ ರಹಿತರ ಪಾಲ್ಗೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next