ಹೊಸದಿಲ್ಲಿ : ಮಧ್ಯ ಪ್ರದೇಶದ ಮತ್ತೋರ್ವ ಬಿಜೆಪಿ ಶಾಸಕಿ “ಮೀ ಟೂ” ಲೈಂಗಿಕ ಹಗರಣ ಆಂದೋಲನದ ವಿಷಯದಲ್ಲಿ ಮಹಿಳೆಯರ ವಿರುದ್ಧವೇ ನೀಡಿರುವ ಹೇಳಿಕೆ ಹೊಸ ವಿವಾದವನ್ನು ಸೃಷ್ಟಿಸಿದೆ.
“ಕೆಲವು ಮಹಿಳೆಯರು ವೈಯಕ್ತಿಕ ಲಾಭ ಮತ್ತು ಉನ್ನತಿಯ ಆಸೆಗಾಗಿ ತಮ್ಮ ಮೌಲ್ಯ ಮತ್ತು ಸಿದ್ಧಾಂತಗಳ ಜತೆಗೆ ರಾಜಿ ಮಾಡಿಕೊಳ್ಳುತ್ತಾರೆ” ಎಂದು ಇಂದೋರ್ ಬಿಜೆಪಿ ಶಾಸಕಿ ಉಷಾ ಠಾಕೂರ್ ಹೇಳಿರುವುದು ಮಹಿಳೆಯರನ್ನು ಕೆರಳಿಸಿದೆ.
“ವೈಯಕ್ತಿಕ ಲಾಭ ಮತ್ತು ಉನ್ನತಿಯ ಆಸೆಗಾಗಿ ಮಹಿಳೆಯರು ತಮ್ಮ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳುವುದರಿಂದಲೇ ಅಂತಿಮವಾಗಿ ಅವರು ತೊಂದರೆಗೆ ಗುರಿಯಾಗುತ್ತಾರೆ. ಮೀ ಟೂ ಆಂದೋಲನವನ್ನು ತಪ್ಪಾಗಿ ಬಳಸಲಾಗುತ್ತಿದೆ’ ಎಂದವರು ಹೇಳಿದ್ದಾರೆ.
ಈ ಹಿಂದೆ ಮುಸ್ಲಿಂ ಪುರುಷರು ನವರಾತ್ರಿ ಸಂದರ್ಭದ ಗಾರ್ಭಾ ನೃತ್ಯ ಕೂಟದಲ್ಲಿ ಭಾಗವಹಿಸಕೂಡದು’ ಎಂದು ಹೇಳುವ ಮೂಲಕ ಉಷಾ ಠಾಕೂರ್ ವಿವಾದ ಸೃಷ್ಟಿಸಿದ್ದಾರೆ. “ಮುಸ್ಲಿಂ ಯುವಕರು ನವರಾತ್ರಿ ಉತ್ಸವದ ಸಂದರ್ಭದಲ್ಲಿ ಗಾರ್ಭಾ ನೃತ್ಯಕೂಟದಲ್ಲಿ ಭಾಗವಹಿಸುವ ಹಿಂದೂ ಮಹಿಳೆಯರಿಗೆ ನಿಕಟರಾಗಿ ಬಳಿಕ ಪ್ರೀತಿ – ಪ್ರೇಮದ ನಾಟಕವಾಡಿ ಅವರನ್ನು ತಮ್ಮ ಧರ್ಮಕ್ಕೆ ಮತಾಂತರಿಸುತ್ತಾರೆ’ ಎಂದು ಉಷಾ ಠಾಕೂರ್ ಹೇಳಿದ್ದರು. ಮಾತ್ರವಲ್ಲದೆ ಗಾರ್ಭಾ ನೃತ್ಯ ಕೂಟದಲ್ಲಿ ಭಾಗವಹಿಸುವ ಮಹಿಳೆಯರು ಸಭ್ಯತೆಯ ಉಡುಗೆ ತೊಡುಗೆ ಧರಿಸುವುದನ್ನು ಕಡ್ಡಾಯ ಮಾಡುವಂತೆಯೂ ಆಕೆ ತಾಕೀತು ಮಾಡಿದ್ದರು.
ಈದ್ ಅಲ್ ಅಧಾ ಸಂದರ್ಭದಲ್ಲಿ ಮುಸ್ಲಿಮರು ಪ್ರಾಣಿ ಬಲಿ ನೀಡುವ ಬದಲು ತಮ್ಮ ಪುತ್ರರನ್ನೇ ಬಲಿ ಕೊಡಲಿ ಎಂಬ ಹೇಳಿಕೆಯನ್ನು ಉಷಾ ಠಾಕೂರ್ ಕಳೆದ ತಿಂಗಳಲ್ಲೇ ನೀಡುವ ಮೂಲಕ ಜೇನುಗೂಡಿಗೆ ಕೈಹಾಕಿದ್ದರು.