Advertisement
ಮೀ ಟೂ ಅಭಿಯಾನ ಲೈಂಗಿಕ ಕಿರುಕುಳಗಳ ಅಥವಾ ಕೆಲಸದ ಸ್ಥಳಗಳಲ್ಲಿ ಹೆಣ್ಣು ಅನುಭವಿಸಿದ/ಅನುಭವಿಸುತ್ತಿರುವ ತೊಂದರೆಗಳನ್ನು ಬಯಲಿಗೆಳೆದು ಜಾಗೃತ ಸಮಾಜವನ್ನು ಸೃಷ್ಟಿಸುವ ಸಂಕಲ್ಪ ಮಾಡಿದೆ. ಅದೇ ರೀತಿ ಭ್ರಷ್ಟರ ವಿರುದ್ಧ ನಾವು ಹೋರಾಡುವ ಸಲುವಾಗಿ ಮೀ ಟೂ ವಿಸ್ತರಿಸಬೇಕಿದೆ. ಒಂದು ವೇಳೆ ಇಂತಹ ಒಂದು ಅಭಿಯಾನ ನಡೆದದ್ದೇ ಆದಲ್ಲಿ ಜಾಗತಿಕ ಮಟ್ಟದಲ್ಲಿ ಭ್ರಷ್ಟಾಚಾರ ಸ್ವಲ್ಪಮಟ್ಟಿನ ಇಳಿಕೆಯನ್ನಾದರೂ ಸಾಧಿಸಬಹುದು. ಭ್ರಷ್ಟಚಾರ ಎಂದರೆ ಕೇವಲ ಕೇವಲ ಹಣ ಪಡೆಯುವುದಲ್ಲ. ಆಮಿಷವೊಡ್ಡುವುದು ಹಾಗೂ ಆಮಿಷ ಪಡೆಯುವುದು ಎರಡೂ ಭ್ರಷ್ಟಾಚಾರವಾಗಿದೆ. ಇದು ಯಾವುದೇ ರೂಪದಲ್ಲಿಯಾದರೂ ಇರಬಹುದು. ಹಣ, ವಸ್ತು, ಚರಾಸ್ತಿ, ಸ್ಥಿರಾಸ್ತಿ ಹೀಗೆ ಈ ರೂಪದಲ್ಲಿ ನಾವು ಮತ್ತೂಬ್ಬರಿಗೆ ಆಮಿಷವೊಡ್ಡುವುದು ಅಥವಾ ಸ್ವೀಕರಿಸುವುದು, ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ತನ್ನವರಿಗೆ ಸುಲಭ ಮಾಡಿಕೊಡುವುದು ಅಥವ ವ್ಯವಸ್ಥೆಯ ದುರ್ಬಳಕೆಯೂ ಭ್ರಷ್ಟಾಚಾರದ ಭಾಗವಾಗಿದೆ. ಮೀ ಟೂ ಅಭಿಯಾನದ ಬಭ್ರಷ್ಟಚಾರದ ವಿರುದ್ದ ಸಾಗಬೇಕಾದ ಅನಿವಾರ್ಯತೆ ಇದೆ.
Related Articles
Advertisement
ರಾಜಕೀಯ ಪಕ್ಷಗಳ ಪಾರ್ಟಿಫಂಡ್, ಡೈರಿ ಡಿಟೇಲ್ಸ್, ಸ್ವಜನ ಪಕ್ಷಪಾತ, ಕಿಕ್‌ಬ್ಯಾಕ್, ಹಾರ್ಸ್ ಟ್ರೇಡಿಂಗ್, ಮಂತ್ರಿಗಿರಿ, ನಿಗಮಮಂಡಳಿಗೆ ಆಮಿಷ ಹೀಗೆ ಹಲವು ಆರೋಪಗಳಿಗೆ ಪದೇ ಪದೇ ತುತ್ತಾಗುತ್ತಿರುವ ರಾಜಕಾರಣಿಗಳು ತಾವು ಅನುಭವಿಸಿದ ಆಮಿಷ ಸ್ವೀಕರಿಸುವ, ಆಮಿಷವೊಡ್ಡುವ ಪ್ರಕರಣಗಳ ಕುರಿತಾಗಿ ಸಾರ್ವಜನಿಕವಾಗಿ ಹೇಳಿಕೊಳ್ಳಬೇಕು. ಅಂದು ವ್ಯವಸ್ಥೆ ಬದಲಾಗುವ ಕಾಲ ಸನ್ನಿಹಿತ ಎಂದು ವಿಶ್ಲೇಷಿಸಬಹುದಾಗಿದೆ. ವೋಟಿಗಾಗಿ ನೋಟು ಚುನಾವಣೆ ಸಂದರ್ಭ ಅತೀ ಹೆಚ್ಚು ಚರ್ಚೆಯಾಗುತ್ತಿರುವ ವಿಷಯ. ಚುನಾವಣೆ ಎಂದರೆ ಪ್ರಜಾಪ್ರಭುತ್ವದ ಹಬ್ಬ. ಆ ಹಬ್ಬಕಾಗಿ ತೆರಳುವವರಿಗೆ ದುಡ್ಡುಕೊಟ್ಟು ಕಳುಹಿಸುವ ಕ್ರಮ ಇನ್ನೂ ಕೆಲವು ಕಡೆ ಇದೆ ಎನ್ನುವ ಆರೋಪ ಇದೆ. ಇದಕ್ಕೆ ಪೂರಕ ಎಂಬಂತೆ ಕೆಲವು ಪ್ರಕರಣದಲ್ಲಿ ಇದು ಸಾಬೀತಾಗಿದ್ದು, ದೃಶ್ಯ ಮಾಧ್ಯಮಗಳಲ್ಲಿ ಸುದ್ದಿಗಳು, ವಿಡಿಯೋ ತುಣುಕಿನ ಸಮೇತ ಬಿತ್ತರಗೊಂಡಿದ್ದವು. ಇದರ ವಿರುದ್ಧ ಜನ ಏಕೆ ಹೋರಾಡಬಾರದು. ಪ್ರಜೆಗಳು ತಾವು ಅನುಭವಿಸಿದ ಸಂದಿಗ್ಧತೆ ಅಥವಾ ಮಾರಿಕೊಂಡ ಮತವನ್ನು ಮೀ ಟೂ ಮಾದರಿಯಲ್ಲಿ ಹೇಳುವಂತಹ ವಾತಾವರಣ ಸೃಷ್ಟಿಯಾಗಬೇಕಿದೆ.
ತೀವ್ರ ಸ್ವರೂಪ ಪಡೆದುಕೊಂಡಿರುವ ಮೀಟೂ ಅಭಿಯಾನ ದುರ್ಬಳಕೆಯಾದರೆ… ಎಂಬ ಭಯ ಆವರಿಸತೊಡಗಿದೆ. ಲೈಂಗಿಕ ಕಿರುಕುಳದಂತಹ ಪ್ರಕರಣಗಳು ನಿಜವಾಗಿಯೂ ನಡೆದಿದ್ದೇ ಆದರೆ ಅದರ ವಿರುದ್ಧ ದ್ವನಿ ಎತ್ತುವುದರಲ್ಲಿ ತಪ್ಪಿಲ್ಲ. ಆದರೆ ಮಾನಹರಾಜು ಹಾಕಲು ಯಾರಾದರೂ ಸರಿ ಇದನ್ನು ಬಳಸಿಕೊಳ್ಳಬಾರದು. ಅದೇ ರೀತಿ ಭ್ರಷ್ಟಾಚಾರ ಪ್ರಕರಣಗಳು ಅಥವಾ ಆ ಸನ್ನಿವೇಶ ನಿರ್ಮಾಣವಾಗಿದ್ದರೆ ಅಂಥವುಗಳನ್ನು ಹೇಳಿಕೊಂಡರೆ ತಪ್ಪಿಲ್ಲ. ಆದರೆ ಸೇಡು ಅಥವ ಇನ್ಯಾವುದೂ ಕಾರಣಕ್ಕೆ ದುರ್ಬಳಕೆಗೊಳ್ಳುವಂತಿರಬಾರದು. ಇಂದು ನಮ್ಮ ಮುಂದೆ ಒಳ್ಳೆಯ ಒಂದು ಆಯ್ಕೆ ಇದೆ. ಅದನ್ನು ಉಳಿಸುವುದು, ಬೆಳೆಸುವುದು ನಮ್ಮ ಕೈಯಲ್ಲಿದೆ. ಈ ಮೀಟೂ ಸೂರಿನಡಿ ನಿರ್ಮಾಣವಾಗಿರುವ ಅಭಿಯಾನವನ್ನು ಬೇರೆ ಬೇರೆ ಆಯಾಮಗಳಿಗೆ ವಿಸ್ತರಿಸುವಂತಹ ವಾತಾವರಣ ನಿರ್ಮಾಣವಾಗಲಿ, ತನ್ಮೂಲಕ ಹುದುಗಿರುವ ಅದೆಷ್ಟೂ ಸಂಕಷ್ಟದ ದಿನಗಳ ಕರಾಳತೆ ಕಣ್ತೆರೆಯಲಿ. ನಾವು, ನೀವು ಅನುಭವಿಸಿದ ಪಿಡುಗು ಮಾದರಿಯ ಸಮಸ್ಯೆ ಮುಂದಿನ ತಲೆಮಾರಿಗೆ ದಾಟದೆ, ಇಲ್ಲೆ ಕೊನೆಗಾಣಿಸುವಂತಾಗಲಿ ಆ ನಿಟ್ಟಿನಲ್ಲಿ ಕೈಜೋಡಿಸುವಂತಾಗಲಿ.
ಕಾರ್ತಿಕ್ ಅಮೈ