ನವದೆಹಲಿ:ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತಗಟ್ಟೆ ಸಮೀಕ್ಷೆ ಪ್ರಕಾರ ಬಿಜೆಪಿ ಪೂರ್ಣ ಬಹುಮತ ಪಡೆದು, ಆಡಳಿತಾರೂಢ ಆಮ್ ಆದ್ಮಿ ಪಕ್ಷ ಪರಾಜಯಗೊಂಡರೆ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅರವಿಂದ್ ಕೇಜ್ರಿವಾಲ್ ಅವರು ರಾಜೀನಾಮೆ ಕೊಡಬೇಕೆಂದು ಆಮ್ ಆದ್ಮಿ ಪಕ್ಷದ 34 ಶಾಸಕರ ಬಯಕೆಯಾಗಿದೆ ಎಂದು ಬಿಜೆಪಿ ವಕ್ತಾರ ತೇಜಿಂದರ್ ಪಾಲ್ ಎಸ್ ಬಗ್ಗಾ ಆರೋಪಿಸಿದ್ದಾರೆ.
ದಿಲ್ಲಿಯ 3 ಮಹಾನಗರಪಾಲಿಕೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಜಯ ಸಾಧಿಸಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ಇಂಡಿಯಾ ಟುಡೇ- ಆಕ್ಸಿಸ್ ಸಮೀಕ್ಷೆ ಪ್ರಕಾರ, ಬಿಜೆಪಿ 202ರಿಂದ 270 ಸೀಟುಗಳನ್ನು ಗೆಲ್ಲಲಿದೆ ಎಂದು ಹೇಳಿದೆ. ಅಭ್ಯರ್ಥಿಗಳು ನಿಧನಗೊಂಡಿದ್ದ ಹಿನ್ನೆಲೆಯಲ್ಲಿ ಎಂಸಿಡಿಯ 2 ವಾರ್ಡ್ ಗಳ ಚುನಾವಣೆಯನ್ನು ಮುಂದೂಡಲಾಗಿದೆ.
ತೀವ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿರುವ ಎಂಸಿಡಿ ಚುನಾವಣೆಯ ಫಲಿತಾಂಶ ಬುಧವಾರ (ಏ.26) ಹೊರಬೀಳಲಿದೆ. ಒಂದು ವೇಳೆ ಎಂಸಿಡಿ ಚುನಾವಣೆಯಲ್ಲಿ ಆಪ್ ಸೋತು ಸುಣ್ಣವಾದರೆ ಸಿಎಂ ಕೇಜ್ರಿವಾಲ್ ರಾಜೀನಾಮೆ ನೀಡಬೇಕೆಂಬುದು 34 ಶಾಸಕರ ಬಯಕೆಯಾಗಿದೆ ಎಂಬುದನ್ನು ಕೇಳಲ್ಪಟ್ಟಿದ್ದೇನೆ ಎಂದು ಬಗ್ಗಾ ಟ್ವೀಟ್ ಮಾಡಿದ್ದಾರೆ.
ಏತನ್ಮಧ್ಯೆ ಮತಗಟ್ಟೆ ಸಮೀಕ್ಷೆ ಪ್ರಕಾರ ಎಂಸಿಡಿ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸುವುದು ನಿಜವಾದರೆ ಮತ್ತೆ ಹೋರಾಟಕ್ಕಿಳಿಯುವುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಎಚ್ಚರಿಕೆ ನೀಡಿದ್ದಾರೆ. ಚಳವಳಿಯಿಂದಾಗಿಯೇ ಆಪ್ ಪಕ್ಷ ಜನ್ಮತಳೆದಿದೆ. ಹಾಗಾಗಿ ಮತ್ತೆ ನಾವು ಚಳವಳಿ ಮಾಡಲು ಯಾವುದೇ ಹಿಂಜರಿಕೆ ಇಲ್ಲ ಎಂದು ಕೇಜ್ರಿವಾಲ್ ಹೇಳಿದ್ದರು.