Advertisement

ಪಾಲಿಕೆ ಅಧಿಕಾರ ಹಿಡಿದ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ

09:44 PM Jan 18, 2020 | Lakshmi GovindaRaj |

ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ನೂತನ ಮೇಯರ್‌ ಆಗಿ ಜೆಡಿಎಸ್‌ನ ತಸ್ಲಿಮಾ, ಉಪ ಮೇಯರ್‌ ಆಗಿ ಕಾಂಗ್ರೆಸ್‌ನ ಶ್ರೀಧರ್‌ ಸಿ. ಆಯ್ಕೆಯಾದರು. ಮೈಸೂರು ಮಹಾ ನಗರಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್‌ ಸಭಾಂಗಣದಲ್ಲಿ ಶನಿವಾರ ನಡೆದ ಚುನಾವಣಾ ವಿಶೇಷ ಸಭೆಯಲ್ಲಿ ನಗರದ 33ನೇ ಮೇಯರ್‌ ಆಗಿ 26ನೇ ವಾರ್ಡ್‌ನ ಜೆಡಿಎಸ್‌ ಸದಸ್ಯೆ ತಸ್ಲಿಮಾ ಆಯ್ಕೆಯಾದರು.

Advertisement

ಬೆಳಗ್ಗೆ 11.30ಕ್ಕೆ ಚುನಾವಣಾಧಿಕಾರಿಯಾದ ಮೈಸೂರು ಪ್ರಾದೇಶಿಕ ಆಯುಕ್ತ ವಿ.ಯಶವಂತ್‌ ಚುನಾವಣಾ ಸಭೆ ಆರಂಭಿಸಿದರು. ಮೊದಲಿಗೆ ಸದನದಲ್ಲಿ ಹಾಜರಿದ್ದ ಸದಸ್ಯರಿಂದ ಹಾಜರಾತಿಗೆ ಸಹಿ ಪಡೆದುಕೊಳ್ಳಲಾಯಿತು. ನಂತರ ಮೇಯರ್‌ ಸ್ಥಾನದ ಚುನಾವಣೆ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲಾಯಿತು. ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಕೂಟದ ಅಭ್ಯರ್ಥಿಯಾಗಿ ತಸ್ಲಿಮಾ ಎರಡು ಸೆಟ್‌ ನಾಮಪತ್ರ ಸಲ್ಲಿಸಿದರು. ಬಿಜೆಪಿ ಅಭ್ಯರ್ಥಿಯಾಗಿ 65ನೇ ವಾರ್ಡ್‌ ಸದಸ್ಯರ ಗೀತಾ ಯೋಗಾನಂದ ನಾಮಪತ್ರ ಸಲ್ಲಿಸಿದರು.

47 ಮತ ಪಡೆದ ತಸ್ಲಿಮಾ ಮೇಯರ್‌: ನಾಮಪತ್ರ ವಾಪಸ್‌ ಪಡೆಯಲು ನಿಗದಿಪಡಿಸಿದ್ದ ಐದು ನಿಮಿಷಗಳ ಗಡುವಿನಲ್ಲಿ ಯಾರೂ ಹಿಂಪಡೆಯದ ಕಾರಣ ಕೈಎತ್ತುವ ಮೂಲಕ ಮತದಾನ ಪ್ರಕ್ರಿಯೆ ಆರಂಭಿಸಲಾಯಿತು. ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಕೂಟದ ಅಭ್ಯರ್ಥಿ ತಸ್ಲಿಮಾ ಪರ 47 ಮತ, ಬಿಜೆಪಿ ಅಭ್ಯರ್ಥಿ ಗೀತಾ ಯೋಗಾನಂದ ಅವರಿಗೆ 23 ಮತ ಲಭಿಸಿತು.

47 ಮತ ಪಡೆದ ತಸ್ಲಿಮಾ ಮೇಯರ್‌ಆಗಿ ಆಯ್ಕೆಯಾಗಿದ್ದಾರೆಂದು ಘೋಷಿಸಲಾಯಿತು. ಬಳಿಕ ಉಪ ಮೇಯರ್‌ ಸ್ಥಾನದ ಚುನಾವಣಾ ಪ್ರಕ್ರಿಯೆ ಆರಂಭಿಸಲಾಯಿತು. ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಕೂಟದ ಅಭ್ಯ ರ್ಥಿಯಾಗಿ ಸಿ.ಶ್ರೀಧರ್‌, ಬಿಜೆಪಿ ಅಭ್ಯರ್ಥಿಯಾಗಿ ಶಾಂತಮ್ಮ ನಾಮಪತ್ರ ಸಲ್ಲಿಸಿದರು.

ಸಿ.ಶ್ರೀಧರ್‌ ಉಪಮೇಯರ್‌ ಆಗಿ ಆಯ್ಕೆ: ನಾಮಪತ್ರ ವಾಪಸ್ಸಿಗೆ ನಿಗದಿಪಡಿಸಿದ್ದ ಐದು ನಿಮಿಷದ ಗಡುವಿನಲ್ಲಿ ಯಾರೂ ಉಮೇದುವಾರಿಕೆ ಹಿಂಪಡೆಯದ ಕಾರಣ ಕೈಎತ್ತುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಮೈತ್ರಿಕೂಟದ ಅಭ್ಯರ್ಥಿ ಕಾಂಗ್ರೆಸ್‌ನ ಸಿ.ಶ್ರೀಧರ್‌ಗೆ 47 ಮತಗಳಿಸಿ ಉಪಮೇಯರ್‌ ಆಗಿ ಆಯ್ಕೆಯಾದರೆ, ಬಿಜೆಪಿಯ ಶಾಂತಮ್ಮ ಅವರಿಗೆ 23 ಸದಸ್ಯರು ಕೈಎತ್ತಿ ಬೆಂಬಲ ಸೂಚಿಸಿದರು.

Advertisement

ಮೇಯರ್‌ ಚುನಾವಣೆಯಲ್ಲಿ ಮತದಾನದ ಹಕ್ಕುಹೊಂದಿದ್ದ ಸಂಸದ ಪ್ರತಾಪ್‌ ಸಿಂಹ, ಶಾಸಕ ಎಸ್‌.ಎ.ರಾಮದಾಸ್‌ ಗೈರು ಹಾಜರಾಗಿದ್ದರೆ, ಪಕ್ಷೇತರವಾಗಿ ಗೆದ್ದಿರುವ ಮಾ.ವಿ.ರಾಮಪ್ರಸಾದ್‌ ಬಿಜೆಪಿ ಅಭ್ಯರ್ಥಿ ಪರ ಕೈಎತ್ತಿ ಮತಚಲಾಯಿಸಿದರು. ಮಾರಣಾಂತಿಕ ಹಲ್ಲೆಗೊಳಗಾಗಿ ಚಿಕಿತ್ಸೆ ನಂತರ ವಿಶ್ರಾಂತಿಯಲ್ಲಿರುವ ಕಾಂಗ್ರೆಸ್‌ ಶಾಸಕ ತನ್ವೀರ್‌ ಸೇಠ್ ಗೈರಾಗಿದ್ದರು.

ಜೆಡಿಎಸ್‌ನ ಶಾಸಕರಾದ ಜಿ.ಟಿ.ದೇವೇಗೌಡ, ಸಂದೇಶ್‌ನಾಗರಾಜ್‌, ಮರಿತಿಬ್ಬೇಗೌಡ,ಕೆ.ಟಿ.ಶ್ರೀಕಂಠೇಗೌಡ ಹಾಜರಾಗಿ ಮತ ಚಲಾಯಿಸಿದರು.‌ ತೆರಿಗೆ ನಿರ್ಧರಣೆ,ಹಣಕಾಸು ಮತ್ತು ಅಫೀಲು ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ,ಪಟ್ಟಣ ಯೋಜನಾ ಮತ್ತು ಸುಧಾರಣಾ ಸ್ಥಾಯಿ ಸಮಿತಿ ಹಾಗೂ ಲೆಕ್ಕಪತ್ರ ಸ್ಥಾಯಿ ಸಮಿತಿಗೆ ತಲಾ ಏಳು ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ತೆರಿಗೆ ನಿರ್ಧರಣೆ,ಹಣಕಾಸು ಮತ್ತು ಅಫೀಲು ಸ್ಥಾಯಿ ಸಮಿತಿ ಸದಸ್ಯರಾಗಿ ನಿರ್ಮಲಾ ಹರೀಶ್‌,ಸವಿತಾ, ಸೌಮ್ಯ, ಎಂ.ಲಕ್ಷ್ಮೀ, ಅಕ್ಮಲ್‌ ಪಾಷ, ಸಮೀಉಲ್ಲಾ, ಜಿ.ಎಸ್‌.ಸತ್ಯರಾಜ್‌. ಸಾರ್ವಜನಿಕ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಸದಸ್ಯರಾಗಿ ಎಂ.ಎಸ್‌. ಶೋಭಾ, ಜೆ.ಗೋಪಿ, ಅಯಾಜ್‌ ಪಾಷ, ಭಾಗ್ಯಮಹದೇಶ್‌, ಉಷಾ, ಶಾರದಮ್ಮ, ಭುವನೇಶ್ವರಿ. ಪಟ್ಟಣ ಯೋಜನಾ ಮತ್ತು ಸುಧಾರಣಾ ಸ್ಥಾಯಿ ಸಮಿತಿ ಸದಸ್ಯರಾಗಿ ಸೈಯದ್‌ ಅಸ್ರತುಲ್ಲಾ, ಶ್ರೀನಿವಾಸ, ರುಕ್ಮಿಣಿ ಮಾದೇಗೌಡ, ರಮೇಶ್‌, ಹಾಜೀರಾ ಸೀಮಾ, ಸುನಂದ ಪಾಲನೇತ್ರ, ಪ್ರಮೀಳಾ ಭರತ್‌.

ಲೆಕ್ಕಪತ್ರ ಸ್ಥಾಯಿ ಸಮಿತಿ ಸದಸ್ಯರಾಗಿ ಅಶ್ವಿ‌ನಿ ಅನಂತು, ಬೇಗಂ ಪಲ್ಲವಿ, ಎಂ.ಛಾಯಾದೇವಿ, ವೇದಾವತಿ, ಅಯೂಬ್‌ಖಾನ್‌, ಆರಿಫ್ ಹುಸೇನ್‌, ಪ್ರದೀಪ್‌ ಚಂದ್ರ ಅವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನಿರ್ಗಮಿತ ಮೇಯರ್‌ ಪುಷ್ಪಲತಾ ಜಗನ್ನಾಥ್‌ ನೂತನ ಮೇಯರ್‌ ತಸ್ಲಿಮಾ ಅವರಿಗೆ ಗೌನು ಹೊದಿಸಿ, ಪುಷ್ಪಗುತ್ಛ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿ ಶುಭಕೋರಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಆಯುಕ್ತೆ ಕೆ.ಎಂ.ಗಾಯತ್ರಿ, ನಗರಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ನಿರ್ಗಮಿತ ಉಪ ಮೇಯರ್‌ ಶಫೀ ಅಹಮದ್‌ ಹಾಜರಿದ್ದರು.

ನಾಲ್ವಡಿ ಕೃಷ್ಣರಾಜ ಒಡೆಯರ್‌ ಸಭಾಂಗಣದಲ್ಲಿ ಚುನಾವಣೆ: ಮೈಸೂರು ಮಹಾ ನಗರಪಾಲಿಕೆಯ ಮೇಯರ್‌ ಸ್ಥಾನದ ಮೊದಲ ಅವಧಿಗೆ ಕಾಂಗ್ರೆಸ್‌ನ ಪುಷ್ಪಲತಾ ಜಗನ್ನಾಥ್‌, ಜೆಡಿಎಸ್‌ನ ಶಫೀ ಅಹಮದ್‌ 2018ರ ನ.17ರಂದು ಮೇಯರ್‌-ಉಪ ಮೇಯರ್‌ ಆಗಿ ಆಯ್ಕೆಯಾಗಿದ್ದರು. ಇವರ ಅವಧಿಯು 2019ರ ನವೆಂಬರ್‌ 17ಕ್ಕೆ ಮುಕ್ತಾಯವಾದರೂ ಸರ್ಕಾರ ಮೇಯರ್‌-ಉಪ ಮೇಯರ್‌ ಸ್ಥಾನದ ಮೀಸಲಾತಿಯನ್ನು ಪ್ರಕಟಿಸದ ಕಾರಣ ಪುಷ್ಪಲತಾ ಜಗನ್ನಾಥ್‌ ಹಾಗೂ ಶಫೀ ಅಹಮದ್‌ ಅವರು ಅಧಿಕಾರದಲ್ಲಿ ಮುಂದುವರಿದಿದ್ದರು.

ರಾಜ್ಯ ಸರ್ಕಾರ ಇತ್ತೀಚೆಗೆ ಮೇಯರ್‌ ಸ್ಥಾನವನ್ನು ಹಿಂದುಳಿದ ವರ್ಗ(ಮಹಿಳೆ), ಉಪ ಮೇಯರ್‌ ಸ್ಥಾನವನ್ನು ಪರಿಶಿಷ್ಟ ಜಾತಿಗೆ ಮೀಸಲಾತಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿತ್ತು. ಹೀಗಾಗಿ ಚುನಾವಣಾಧಿಕಾರಿಗಳು ಜ.18ರಂದು ಚುನಾವಣಾ ದಿನಾಂಕ ಪ್ರಕಟಿಸಿ ಸದಸ್ಯರಿಗೆ ಸಭಾ ಸೂಚನಾ ಪತ್ರವನ್ನು ಕಳುಹಿಸಿದ್ದರು. ಅದರಂತೆ ಶನಿವಾರ ಬೆಳಗ್ಗೆ 7.30ರಿಂದ ಚುನಾವಣಾ ಪ್ರಕ್ರಿಯೆ ಆರಂಭಿಸಿ 9.30ರವರೆಗೆ ಕೌನ್ಸಿಲ್‌ ಕಾರ್ಯದರ್ಶಿಗಳ ಕೊಠಡಿಯಲ್ಲಿ ನಾಮಪತ್ರ ಸ್ವೀಕರಿಸಲಾಯಿತು. ಬೆಳಗ್ಗೆ 11.30ಕ್ಕೆ ನಗರಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್‌ ಸಭಾಂಗಣದಲ್ಲಿ ಮೇಯರ್‌-ಉಪಮೇಯರ್‌ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು.

ಎರಡನೇ ಬಾರಿ ನಗರಪಾಲಿಕೆ ಸದಸ್ಯೆಯಾಗಿರುವ ನನ್ನನ್ನು ಮೇಯರ್‌ ಸ್ಥಾನಕ್ಕೆ ಆಯ್ಕೆ ಮಾಡಿರುವುದು ತುಂಬಾ ಖುಷಿ ನೀಡಿದೆ. ಮೈಸೂರು ನಗರದ ಅಭಿವೃದ್ಧಿಯೇ ನನ್ನ ಮುಖ್ಯ ಗುರಿ. ಸ್ವತ್ಛತೆ, ಒಳಚರಂಡಿ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಅಭಿವೃದ್ಧಿಗೆ ಪೂರಕವಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದು ಅವುಗಳ ಸಾಕಾರಕ್ಕೆ ಪಾಲಿಕೆಯ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಶ್ರಮಿಸುತ್ತೇನೆ.
-ತಸ್ಲಿಮಾ, ಮೇಯರ್‌

ಮೂಲಭೂತ ಸೌಕರ್ಯ ಕಲ್ಪಿಸುವುದು ಸೇರಿದಂತೆ ನಗರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಮೈಸೂರು ನಗರವನ್ನು ಸ್ವತ್ಛ ನಗರವಾಗಿಸಲು ಶ್ರಮಿಸುತ್ತೇನೆ.
-ಶ್ರೀಧರ್‌ ಸಿ., ಉಪ ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next