Advertisement

ಉಕ್ರೇನ್‌ನಲ್ಲಿ ಬೀದರ್ ವೈದ್ಯ ವಿದ್ಯಾರ್ಥಿ ಸಾವು ; ಮಾಹಿತಿ ಸಿಗದೇ ಹೆತ್ತವರು ಕಂಗಾಲು!

09:18 PM Sep 01, 2020 | Hari Prasad |

ಬೀದರ್: ಉಕ್ರೇನ್ ದೇಶದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಓದುತ್ತಿದ್ದ ಬೀದರ್ ನ ವಿದ್ಯಾರ್ಥಿ ಮೃತಪಟ್ಟಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

Advertisement

ಈ ವೈದ್ಯ ವಿದ್ಯಾರ್ಥಿ ಅಲ್ಲಿನ ಬಹುಮಹಡಿ ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆಯಾದರೂ ಈ ಕುರಿತಾಗಿರುವ ಖಚಿತ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಭಾಲ್ಕಿ ತಾಲೂಕಿನ ಕದಲಾಬಾದ್ ಗ್ರಾಮದ ಅಮರ್ ಶಾಲಿವಾನ್ ಬಿರಾದಾರ (20) ಎಂಬಾತನೇ ಮೃತಪಟ್ಟಿರುವ ದುರ್ದೈವಿಯಾಗಿದ್ದಾನೆ.

ಬೀದರ್ ನಲ್ಲಿ ಎಂಬಿಬಿಎಸ್ ಶಿಕ್ಷಣಕ್ಕೆ ಸೀಟು ಸಿಗದ ಹಿನ್ನಲೆಯಲ್ಲಿ ಏಜೆನ್ಸಿಯೊಂದರ ಮೂಲಕ ಉಕ್ರೇನ್‌ನ ಖಾಸಗಿ ವೈದ್ಯ ಕಾಲೇಜಿಗೆ ಕಳೆದ ವರ್ಷವಷ್ಟೇ ಸೇರ್ಪಡೆಗೊಂಡಿದ್ದ. ತಾನು ಓದುತ್ತಿದ್ದ ಕಾಲೇಜು ವಸತಿ ನಿಲಯದಲ್ಲಿ ಉಳಿದುಕೊಂಡಿದ್ದ ಅಮರ್ ಕೋವಿಡ್ 19 ಲಾಕ್‌ಡೌನ್ ಹಿನ್ನಲೆಯಲ್ಲಿ ಫ್ಲ್ಯಾಟ್‌ವೊಂದರಲ್ಲಿ ಬಾಡಿಗೆಗೆ ಉಳಿದಿದ್ದ.

ಹೀಗಿರುವಾಗ ಅಮರ್, ಆ. 28ರಂದು ಕಟ್ಟಡದ ಮೇಲಿಂದ ಬಿದ್ದಿದ್ದು, ತೀವ್ರವಾಗಿ ಗಾಯಗೊಂಡಿದ್ದರಿಂದ ಚಿಕಿತ್ಸೆ ಫಲಿಸದೇ ಆ. 29ರಂದು ಮೃತಪಟ್ಟಿದ್ದಾನೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

Advertisement


ಅಮರ್ ಸಾವಿನ ಕುರಿತು ಕಾಲೇಜಿನ ಮುಖ್ಯಸ್ಥರು ಏಜೆನ್ಸ್‌ಯವರ ಗಮನಕ್ಕೆ ತಂದಿದ್ದು, ಅವರು ವಿದ್ಯಾರ್ಥಿಯ ಕುಟುಂಬದವರಿಗೆ ತಿಳಿಸಿದ್ದಾನೆ. ವಿದ್ಯಾರ್ಥಿ ಸಾವನ್ನಪ್ಪಿ ನಾಲ್ಕು ದಿನಗಳು ಕಳೆದರೂ ಈವರೆಗೆ ಸರಿಯಾದ ಮಾಹಿತಿ ಸಿಗದೇ ಅಮರ್ ಕುಟುಂಬದವರು ಕಣ್ಣೀರು ಹಾಕುತ್ತಿದ್ದಾರೆ.

ತಮ್ಮ ಮಗನ ಸಾವು ಹೇಗಾಯಿತು? ಮೃತದೇಹ ಎಲ್ಲಿದೆ? ಎಂಬಿತ್ಯಾದಿ ಮಾಹಿತಿಗಳನ್ನು ಸಂಗ್ರಹಿಸಲು ಅಮರ್ ಹೆತ್ತವರು ಇದೀಗ ಒದ್ದಾಡುತ್ತಿದ್ದಾರೆ.

ನಮಗೆ ನಮ್ಮ ಪುತ್ರನ ಸಾವಿನ ಬಗ್ಗೆ ತಿಳಿಯಬೇಕು. ಮೃತದೇಹವನ್ನು ಇಲ್ಲಿಗೆ ತರಿಸಿಕೊಡಬೇಕು. ಇದಕ್ಕಾಗಿ ಸರ್ಕಾರ ನೆರವಿಗೆ ಬರಬೇಕು ಎಂದು ಅವರು ಈ ಮೂಲಕ ಮನವಿ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next