ಕಾಗವಾಡ: ಕೋವಿಡ್ ಮಾಹಾಮಾರಿ ಎಲ್ಲ ಕ್ಷೇತ್ರಗಳನ್ನೂ ಸಂಕಷ್ಟಕ್ಕೆ ನೂಕಿದೆ. ಕೃಷಿಯೂ ಅದರಿಂದ ಹೊರತಾಗಿಲ್ಲ. ಎಷ್ಟೋ ರೈತರು ಬೆಳೆ ನಷ್ಟ ಅನುಭವಿಸಿದ್ದರೆ, ಇನ್ನಷ್ಟು ರೈತರು ಬೆಳೆದ ಬೆಳೆಗೆ ಮಾರುಕಟ್ಟೆ ಸಿಗದೆ ಬಸವಳಿದ ಉದಾಹರಣೆಗಳಿವೆ. ಈ ಮಧ್ಯೆ ಇಲ್ಲಿನ ಎಂಬಿಎ ಪದವೀಧರನೊಬ್ಬ ಡ್ರ್ಯಾಗನ್ ಹಣ್ಣು ಬೆಳೆದು ಮಾರುಕಟ್ಟೆ ಕಂಡುಕೊಂಡು ಮಾದರಿಯಾಗಿದ್ದಾರೆ.
ಯಾರು? ಎಲ್ಲಿಯವರು?: ಲಾಭದಾಯಕ ಕೃಷಿಗೆ ಹಲವರು ಸಾಕ್ಷಿಯಾಗಿದ್ದಾರೆ. ಆ ಸಾಲಿನಲ್ಲಿ ಕಾಗವಾಡ ಗ್ರಾಮದ ಯುವ ರೈತ ಮಹಾದೇವ ಕೋಳೆಕರ ನಿಲ್ಲುತ್ತಾರೆ. ಇಂದಿನ ವಿಜ್ಞಾನ ಯುಗದಲ್ಲಿ ಬೇರೆ ಬೇರೆ ಬೆಳೆಗಳನ್ನು ಬೆಳೆದು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಆದಾಯ ಪಡೆದು ಕೃಷಿಯಲ್ಲಿ ಲಾಭ ಮಾಡಿಕೊಳ್ಳಲು ಸಾಧ್ಯವಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಎಂಬಿಎ ಪದವಿ ಪಡೆದು ನೌಕರಿ ಬೆನ್ನಿಗೆ ಬೀಳದೆ ಆಧುನಿಕ ಕೃಷಿಗೆ ಮುಂದಾಗಿದ್ದಾರೆ. ಕಳೆದ 4 ವರ್ಷಗಳಿಂದ ಡ್ರ್ಯಾಗನ್ ಫ್ರುಟ್ ಬೆಳೆಯುತ್ತಿದ್ದಾರೆ. ತಂದೆ ಹೆಸರಿನಲ್ಲಿ 8 ಎಕರೆ ಜಮೀನಿದ್ದು, ಇದರಲ್ಲಿಯ 1 ಎಕರೆ ಕ್ಷೇತ್ರದಲ್ಲಿ ಡ್ರ್ಯಾಗನ್ ಹಣ್ಣಿನ ತೋಟ ನಿರ್ಮಿಸಿದ್ದಾರೆ. ಮಹಾದೇವ ಅವರದು ಸಂಪೂರ್ಣ ಮಡ್ಡಿ ಜಮೀನು. ಒಂದೆಕರೆ ಕ್ಷೇತ್ರದಲ್ಲಿ 500 ಸಿಮೆಂಟ್ ಕಂಬಗಳಿದ್ದು, ಪ್ರತಿ ಕಂಬಕ್ಕೆ ನಾಲ್ಕರಂತೆ 640 ಕೆಂಪು ಹಾಗೂ 1360 ಬಿಳಿ ತಿರುಳಿನ ಒಟ್ಟು 2000 ಸಸಿಗಳನ್ನು ದಕ್ಷಿಣೋತ್ತರ ನಾಟಿ ಮಾಡಿದ್ದಾರೆ. ನಂತರ ಮಣ್ಣೇರಿಸಿ ಹನಿ ನೀರಾವರಿ ಅಳವಡಿಸಿದ್ದಾರೆ. ಇವರಿಗೆ ತಂದೆ ಮಾರುತಿ ಕೋಳೆಕರ, ಬಂಧು ಬಾಳಾಸಾಹೇಬ ಕೋಳೆಕರ ಹಾಗೂ ಕುಟುಂಬಸ್ಥರು ಸಾಥ ನೀಡಿದ್ದು, ಈಗ ಮನೆ ಮನೆಗೆ ಹಣ್ಣು ತಲುಪಿಸಲು ಪ್ರಯತ್ನಿಸುತ್ತಿದ್ದಾರೆ.
ಮಾರುಕಟ್ಟೆ ಎಲ್ಲಿ? : ಹಿಂದಿನ ವರ್ಷ ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರು, ಕೊಲ್ಲಾಪುರ ನಗರದ ಹಣ್ಣಿನ ವ್ಯಾಪಾರಸ್ಥರಿಗೆ ಒಂದೆರಡು ಬಾಕ್ಸ್ ಕೊಟ್ಟು ಗ್ರಾಹಕರ ಒಲವು ತಿಳಿಯಲು ಪ್ರಯತ್ನಿದರು. ಈ ವರ್ಷ ಕೋವಿಡ್ ಮಹಾಮಾರಿಯಿಂದ ಲಾಕ್‌ಡೌನ್‌ದಲ್ಲಿ ಮಾರುಕಟ್ಟೆಗೆ ಹಣ್ಣು ಸಾಗಾಟ ಮಾಡಲು ತೊಂದರೆಯಾಗುತ್ತಿತ್ತು. ಈಗ ಬೆಳಗಾವಿ ಮಾರುಕಟ್ಟೆಯಲ್ಲಿ ಹಣ್ಣು ಮಾರಾಟ ಪ್ರಾರಂಭವಾಗಿದ್ದು, 150ರಿಂದ 200 ರೂ. ವರೆಗೆ ಹಣ್ಣು ಖರೀದಿಸುತ್ತಿದ್ದಾರೆ. ಕೋವಿಡ್ ಸೋಂಕಿತರಿಗೆ ಶಕ್ತಿವರ್ಧಕ ಹಣ್ಣಾಗಿದ್ದರಿಂದ ಪ್ರತಿದಿನ ಅವರ ತೋಟಕ್ಕೆ ಬಂದು ಸುಮಾರು 100 ಕೆಜಿ ವರೆಗೆ ಜನರು ಹಣ್ಣು ಖರೀದಿಸುತ್ತಿದ್ದಾರೆ. ಮಾಹಿತಿಗೆ ಮಹಾದೇವ ಕೋಳೆಕರ ಮೊ: 93438 28061 ಸಂಪರ್ಕಿಸಬಹುದು.
ಡ್ರ್ಯಾಗನ್ ಹಣ್ಣಿನ ಸಸಿಗಳನ್ನು ನಿರ್ಮಿಸಿ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿಯ ರೈತರಿಗೆ ನೀಡಿದ್ದೇನೆ. ಹನಿ ನೀರಾವರಿ ಮುಖಾಂತರ ಅಲ್ಪ ನೀರಿನಲ್ಲಿ ಉತ್ತಮ ಬೆಳೆ ಬೆಳೆಯಲು ಒಳ್ಳೆಯ ಅವಕಾಶವಿದೆ. ಯುವಕರು ಕೃಷಿಗೆ ಮುಂದಾದಲ್ಲಿ ಎಲ್ಲ ರೀತಿಯ ಸಹಕಾರ ನೀಡುತ್ತೇನೆ. –
ಮಹಾದೇವ ಕೋಳೆಕರ, ಪ್ರಗತಿಪರ ರೈತ
-ಸುಕುಮಾರ ಬನ್ನೂರೆ