ವಿಜಯಪುರ: ರಾಜ್ಯದಲ್ಲಿ ಪರಿಶಿಷ್ಟ ಸಮುದಾಯಗಳಿಗೆ ಮೀಸಲಿರುವ ಕ್ಷೇತ್ರಗಳ ಹೊರತಾಗಿ ಯಾವುದೇ ಕ್ಷೇತ್ರದಲ್ಲಿ ಸಿದ್ಧರಾಮಯ್ಯ ಸ್ಪರ್ಧಿಸಲು ಅರ್ಹರಿದ್ದಾರೆ ಎಂದಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವ ಶಕ್ತಿ ಬಂದ ಮೇಲೆ ಮುಖ್ಯಮಂತ್ರಿ ಯಾರಾಗಬೇಕು ಎಂದು ನಿರ್ಧರಿಸುವುದು ಶಾಸಕಾಂಗ ಸಭೆ ಹಾಗೂ ಹೈಕಮಾಂಡ್ ಎಂದು ಸಮಜಾಯಿಶಿ ನೀಡಿದರು.
ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರ ನಡೆಸಲಿ 113 ಶಾಸಕರ ಬಲಬೇಕು, ಕಾಂಗ್ರೆಸ್ ಈ ಬಾರಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಅಧಿಕಾರಕ್ಕೆ ಬರಲಿದೆ. ಬಳಿಕ ಶಾಸಕಾಂಗದ ಸಭೆಯಲ್ಲಿ ಮೂಡುವ ಅಭಿಪ್ರಾಯ ಸಂಗ್ರಹಿಸಿ ಪಕ್ಷದ ವೀಕ್ಷಕರು ನೀಡುವ ವರದಿ ಆಧರಿಸಿ ಹೈಮಾಂಡ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಿದೆ. ಇದು ಕಾಂಗ್ರೆಸ್ ನೀತಿ ಎಂದರು.
ಇದನ್ನೂ ಓದಿ:ಆಘಾತಗೊಂಡಿರುವ ಅಫ್ತಾಬ್ ಪೂನಾವಾಲಾನ ಇನ್ನೊಬ್ಬ ಗೆಳತಿ; ಕೌನ್ಸೆಲಿಂಗ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರಲ್ಲದೇ ಆರ್.ವಿ.ದೇಶಪಾಂಡೆ, ಎಚ್.ಕೆ.ಪಾಟೀಲ, ಕೆ.ಎಚ್.ಮುನಿಯಪ್ಪ, ಪರಮೇಶ್ವರ, ರಾಮಲಿಂಗಾರೆಡ್ಡಿ ಸೇರಿದಂತೆ 25ಕ್ಕೂ ಹೆಚ್ಚು ಹಿರಿಯರು ಸಿ.ಎಂ. ಸ್ಥಾನಕ್ಕೆ ಏರುವ ಅರ್ಹತೆ ಹೊಂದಿದ್ದಾರೆ ಎಂದರು.
ರವಿ ಹೇಳಿಕೆ ಖಂಡನಾರ್ಹ: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಅವರು ಸಿದ್ಧರಾಮಯ್ಯ ಅವರ ಬಗ್ಗೆ ಸಿದ್ರಾಮುಲ್ಲಾ ಖಾನ್ ಎಂದು ಹಗುರವಾಗಿ ಮಾತನಾಡಿರುವ ಕ್ರಮ ಖಂಡನಾರ್ಹ. ಒಂದೊಮ್ಮೆ ಸಿದ್ಧರಾಮಯ್ಯ ಅವರ ನಿಂದನೆ ವಿರುದ್ಧ ಹಾಲುಮತ ಸಮಾಜದವರು, ಅಲ್ಪಸಂಖ್ಯಾತರು ಗಂಭೀರವಾಗಿ ಪರಿಗಣಿಸಿ ಸಿಡಿದೆದ್ದರೆ ಪರಿಸ್ಥಿತಿ ಏನಾದೀತು ಎಂಬ ಎಚ್ಚರಿಕೆ ಇರಬೇಕು. ಸಿ.ಟಿ.ರವಿ ಕೀಳು ರಾಜಕೀಯ ಬಿಡಬೇಕು ಎಂದು ತಿರುಗೇಟು ನೀಡಿದರು.
ಮೋದಿ, ಭಾಗವತ್ ಹೇಳಿದ್ದು ಇದನ್ನೇ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಹಿಂದೂ ಧರ್ಮದ ಕುರಿತು ನೀಡಿದ ಹೇಳಿಕೆಯನ್ನು ಬಿಜೆಪಿ ಅನಗತ್ಯವಾಗಿ ವಿವಾದ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಮ್ಮದೇ ಪಕ್ಷದ ನಾಯಕ, ಪ್ರಧಾನಿ ನರೇಂದ್ರ ಮೋದಿ, ಸಂಘ ಪರಿವಾರದ ನಾಯಕ ಮೋಹನ ಭಾಗವತ್ ಅವರೇ ಹಿಂದು, ಹಿಂದುತ್ವ ಎಂಬುದು ಭಾರತೀಯರ ಜೀವನ ಶೈಲಿ ಎಂದಿದ್ದನ್ನೇ ಸತೀಶ ಜಾರಕಿಹೊಳಿ ಹೇಳಿದ್ದಾರೆ. ವಿವಾದ ಸೃಷ್ಟಿಸಿದ್ದರಿಂದ ಸೌಜನ್ಯಕ್ಕೆ ಜಾರಕಿಹೊಳಿ ಕ್ಷಮೆ ಯಾಚಿಸಿದ್ದರೂ ಚರ್ಚೆಗೆ ಬರಲಿ ಎಂದು ಸವಾಲನ್ನೂ ಹಾಕಿದ್ದಾರೆ ಎಂದು ಸತೀಶ ಜಾರಕಿಹೊಳಿ ಅವರನ್ನು ಸಮರ್ಥಿಸಿಕೊಂಡರು.