ವಿಜಯಪುರ : ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕೂಡಲಸಂಗಮದಿಂದ ಬಳ್ಳಾರಿ ವರೆಗೆ ಪಾದಯಾತ್ರೆ ನಡೆಸುವುದನ್ನು ಸ್ವಾಗತಿಸುತ್ತೇನೆ, ಅವರು ಕೋವಿಡ್ ಹಗರಣ, ಬಳ್ಳಾರಿ ಗಣಿ ಹಗರಣಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಲಿ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಕುಟುಕಿದ್ದಾರೆ.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಕೋವಿಡ್ ಸಂದರ್ಭದಲ್ಲಿ ಯಡಿಯೂರಪ್ಪ, ವಿಜಯೇಂದ್ರ, ಅಂದಿನ ಸಚಿವ ಡಾ.ಸುಧಾಕರ್ ಹಗರಣ ಮಾಡಿದ್ದಾರೆ, ಮಾರಿಷಸ್‍ನಲ್ಲಿ ಹಣ ಹೂಡಿಕೆ ಮಾಡಿದ್ದಾರೆ ಎಂದು ಯತ್ನಾಳ ಅವರೇ ಹೇಳಿರುವುದು ದಾಖಲೆ ಇದೆ. ಹೊಂದಾಣಿಕೆ ಆಗಿರುವ ಜನಾರ್ದನ್ ರೆಡ್ಡಿ ವಿರುದ್ಧ ಬಳ್ಳಾರಿ ಗಣಿ ಹಗರಣ ವಿಷಯಗಳನ್ನು ಇರಿಸಿಕೊಂಡು ಹೋರಾಟ ನಡೆಸಲಿ ಎಂದು ಸವಾಲೆಸೆದರು.
ಕಾವೇರಿ ಹಾಗೂ ಕೃಷ್ಣೆ ರಾಜ್ಯದ ಎರಡು ಕಣ್ಣುಗಳಿದ್ದಂತೆ. ಕೃಷ್ಣಾ ನ್ಯಾಯಾಧೀಕರಣದ ಬಳಿಕ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುವುದು ಬಾಕಿ ಇದೆ. ಇದೀಗ ಕೇಂದ್ರ ಸರ್ಕಾರದೊಂದಿಗೆ ಭಾಗಿಯಾಗಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕೃಷ್ಣಾ ನ್ಯಾಯಾಧಿಕರಣದ ಅಧಿಸೂಚನೆ ಹೊರಡಿಸಲು ಒತ್ತಡ ಹೇರಿ, ಮಾಡಿಸಲಿ ಎಂದರು.
ಆಲಮಟ್ಟಿ ಬಳಿ ಲಾಲ್ ಬಹಾದ್ದೂರ ಶಾಸ್ತ್ರೀ ಸಾಗರ ತುಂಬಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ.21 ರಂದು ಕೃಷ್ಣೆಗೆ ಬಾಗಿನ ಅರ್ಪಿಸುವ ಸಂಭವನೀಯ ದಿನಾಂಕ ನಿಗದಿ ಆಗಿದೆ. ಇದರ ಹೊರತಾಗಿಯೂ ಮತ್ತೊಮ್ಮೆ ದಿನಾಂಕ ಖಚಿತ ಪಡಿಸಿಕೊಂಡು ಮಾಹಿತಿ ನೀಡುವುದಾಗಿ ಹೇಳಿದರು.
ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕುರಿತು ವರದಿಗಳಿಗೆ ಪ್ರತಿಕ್ರಿಯಿಸಿ ‘ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರ’ ಎಂದರು.