Advertisement

karnataka polls 2023: ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ ಎಂ.ಬಿ.ಪಾಟೀಲ್

10:47 AM Apr 29, 2023 | Shreeram Nayak |

ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಳೆದ 5 ವರ್ಷಗಳಿಂದ ಧರ್ಮದ ಬಗ್ಗೆ ವಿಷಕಾರುವ ಕೆಲಸ ಮಾಡುತ್ತಿದ್ದಾರೆ. ದೇಶದ ಹಿರಿಯ ಮಹಿಳೆ ಸೋನಿಯಾ ಗಾಂಧಿ ಅವರನ್ನು ನಿಂದಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವರ್ತನೆ ಖಂಡನಾರ್ಹ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ವಾಗ್ದಾಳಿ ನಡೆಸಿದರು.

Advertisement

ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರನ್ನು ಹುಚ್ಚ ಎಂದು ನಿಂದಿಸಿರುವ ಯತ್ನಾಳ, ರಾಜ್ಯದ ಜನ‌ ಇವರ ನಡವಳಿಕೆಯಿಂದ ಏನು ಎನ್ನುತ್ತಿದ್ದಾರೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಡು ನೀಡಿದ್ದಾರೆ.

ಪ್ರಧಾನಿ ಆಗುವಂಥ ಎರಡು ಬಾರಿ ಅವಕಾಶ ಸಿಕ್ಕರೂ ಅಧಿಕಾರಕ್ಕಾಗಿ ಆಸೆ ಪಡದೇ ಮನಮೋಹನಸಿಂಗ್ ಅವರನ್ನು ಪ್ರಧಾನಿ ಮಾಡಿದ ತ್ಯಾಗಮಯಿ ಸೋನಿಯಾ ಗಾಂಧಿ. ಇಂಥ ನಾಯಕಿಯನ್ನು ಪಾಕಿಸ್ತಾನ ಏಜೆಂಟ್ ಎಂದು ನಿಂದಿಸಿರುವ ಯತ್ನಾಳಗೆ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ರಾಜೀವ್ ಗಾಂಧಿ ಅವರ ಪತ್ನಿಯಾಗಿ ಸೋನಿಯಾ ಅವರು ದೇಶದ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ.
ಯತ್ನಾಳ ಕಾಂಗ್ರೆಸ್ ನಾಯಕರನ್ನು ನಿಂದಿಸಿದ್ದು ಮಾತ್ರವಲ್ಲದೇ, ಈ ಹಿಂದೆ ಸಚುವ ಸೋಮಣ್ಣ ಅವರನ್ನು ನಿಂದಿಸಿದರು, ಯಡಿಯೂರಪ್ಪ, ವಿಜಯೇಂದ್ರ ಅವರನ್ನು ಅತ್ಯಂತ ಕೆಟ್ಟಪದ ಬಳಸಿ ನಿಂದಿಸಿದರು. ಬಳಿಕ ಎಲ್ಲರನ್ನೂ ಹೊಗಳಿದರು. ನಾಯಕನಾದವನು ಇಂಥ ಹೇಳಿಕೆ ನೀಡಲು ಸಾಧ್ಯವೆ ಎಂದು ಪ್ರಶ್ನಿಸಿದರು.

ಮತ್ತೊಂದೆಡೆ ಮುಸ್ಲಿಂ ಬಂಧುಗಳನ್ನು ಟೋಪಿ, ಗಡ್ಡ, ಬುರ್ಕಾ ಹಾಕಿದವರು ನನ್ನ ಕಛೇರಿಗೆ ಬರಬೇಡಿ ಎಂದು ತಾಕೀತು ಮಾಡಿದರು. ಆಗ ನಾನು ವಿಜಯಪುರ ನಗರದ ಮುಸ್ಲಿಂ ಸಮುದಾಯದ ಜನರು ಏನೇ ಕೆಲಸ ಇದ್ದರೂ ನನ್ನ ಕಛೇರಿಗೆ ಬನ್ನಿ ಎಂದು ಹೇಳಿದ್ದೆ ಎಂದು ನೆನಪಿಸಿದರು.

Advertisement

ರಾಜ್ಯದ ನಾಯಕತ್ವ ಮುಗಿದಿರುವ ಕಾರಣದಿಂದಲೇ ಇದೀಗ ಪ್ರಧಾನಿ ಮೋದಿ ಚುನಾವಣೆಯ ಈ ಹಂತದಲ್ಲಿ ರಾಜ್ಯಕ್ಕೆ ಪದೇ ಪದೇ ಬರುತ್ತಿದ್ದಾರೆ. ಡಬಲ್ ಎಂಜಿನ್ ಸರ್ಕಾರದ ಎರಡೂ ಎಂಜಿನ್ ಕೆಟ್ಟಿದ್ದು, ಸ್ಕ್ರ್ಯಾಪ್ ಸ್ಥಿತಿ ತಲುಪಿವೆ ಎಂದು ಕುಟುಕಿದರು.

ಇವನಾರವ, ಇವ ನಮ್ಮವ ಎನ್ನಿ, ಹುಸಿಯ ನುಡಿಯಲುಬೇಡ, ಅನ್ಯರಿಗೆ ಅಸಹ್ಯ ಪಡಬೇಡ ಎಂದ
ಬಸವಣ್ಣ ಅವರ ಹೆಸರು ಇರಿಸಿಕೊಂಡು ಬಸನಗೌಡ ಪಾಟೀಲ ಯತ್ನಾಳ ನಿತ್ಯವೂ ಬೆಳಿಗ್ಗೆಯಿಂದ ಸಂಜೆ ವರೆಗೆ ಬರೀ ಕೆಟ್ಟ ಮಾತುಗಳಿಂದಲೇ ಅನ್ಯರನ್ನು ನಿಂದಿಸುತ್ತಲೇ ಬಂದಿದ್ದಾರೆ. ಐದು ವರ್ಷದಲ್ಲಿ ಇಂಥ ಐದು ಸಾವಿರ ಅಸಭ್ಯ, ಅಶ್ಲೀಲ ಮಾತನಾಡಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.

ಪರಮೇಶ್ವರ ಮೇಲೆ ಕಲ್ಲು ಎಸೆದಿರುವ ಕೃತ್ಯದಿಂದ ಪರಮೇಶ್ವರ ಅವರಿಗೆ ಜೀವಕ್ಕೆ ತೀವ್ರ ಆಘಾತಕಾರಿಯಾಗಿದೆ. ರಾಜ್ಯದಲ್ಲಿ ಬಿಜೆಪಿ ಗೂಂಡಾ ಸಂಸ್ಕೃತಿ ಪ್ರದರ್ಶಿಸುತ್ತಿದೆ. ಬಬಲೇಶ್ವರ ಕ್ಷೇತ್ರದಲ್ಲಿ ನನ್ನ ಪರ ನನ್ನ ಪತ್ನಿ ಆಶಾ ಅವರು ಪ್ರಚಾರಕ್ಕೆ ಹೋದಾಗಲೂ ಹುಬನೂರ ಗ್ರಾಮದಲ್ಲಿ ಪ್ರಚಾರಕ್ಕೆ ಅಡ್ಡಿಪಡಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನಾನು ದೇವಪುರ ಗ್ರಾಮದಲ್ಲಿ ಯುವಕನೊಬ್ಬ ಅಶ್ಲೀಲ ಪದ ಬಳಸಿದಾಗ ನನ್ನ ಮಗನ ವಯಸ್ಸಿನ ಯುವಕನಿಗೆ ಬುದ್ದಿವಾದ ಹೇಳಲು ಕೆನ್ನೆಗೆ ಹೊಡೆದಿದ್ದೇನೆ. ಇದನ್ನೇ ದೌರ್ಜನ್ಯ ಎಂಬಂತೆ ಮಾಧ್ಯಮಗಳಲ್ಲಿ ಬಿಂಬಿಸಲಾಯಿತು ಎಂದು ಸಮಜಾಯಿಷಿ ನೀಡಿದರು.

ಬಿಜೆಪಿ ಪಕ್ಷವನ್ನು ಒಡೆದು, ಕೆಜೆಪಿ ಪಕ್ಷವನ್ನು ಕಡ್ಟಿ, ಬಿಜೆಪಿ ಪಕ್ಷದ ಸೋಲಿಗೆ ಕಾರಣವಾದ ಯಡಿಯೂರಪ್ಪ ಅವರು, ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಜಗದೀಶ ಶಟ್ಟರ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎನಿಸಿದೆ ಎಂದರು.

ದೇವೇಂದ್ರ ಫಡ್ನವಿಸ್ ಅವರಂಥ ನಾಯಕರು ನನ್ನ ವಿರುದ್ಧ ಟೀಕೆಗೆ ನಾನು ಉತ್ತರಿಸಬೇಕಿಲ್ಲ. ತಮ್ಮದೇ ರಾಜ್ಯದ ಜತ್ತ ಭಾಗದಲ್ಲಿ ಹೋಗಿ ಕೇಳಲು ಹೇಳಿ. ಸಿದ್ದೇಶ್ವರ ಶ್ರೀಗಳಂಥ ಮಹಾತ್ಮರು ನನಗೆ ಎಂ.ಬಿ.ಪಾಟೀಲ ಎಂದರೆ ನೀರು ಎಂದಿದ್ದಾರೆ. ಸಿದ್ದೇಶ್ವರ ಶ್ರೀಗಳ ಸರ್ಟಿಫಿಕೇಟ್ ಇರುವಾ ಫಡ್ನವಿಸ್ ಅವರಂಥ ನಾಯಕರ ಸರ್ಟಿಫಿಕೇಟ್ ನನಗೆ ಬೇಕಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.

ಬಬಲೇಶ್ವರ ಕ್ಷೇತ್ರದ ಗೂಂಡಾಗಿರಿ ವರ್ತನೆಯಿಂದಲೇ ಜೀವನ ನಡೆಸಿರುವ ಬಿಜೆಪಿ ಅಭ್ಯರ್ಥಿ ಇದೀಗ ಕಣ್ಣೀರು ಹಾಕುವ ಹೊಸ ನಾಟಕ ಆರಂಭಿಸಿದ್ದಾರೆ ಎಂದು ಕುಟುಕಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ, ಎಐಸಿಸಿ ಚುನಾವಣಾ ಉಸ್ತುವಾರಿ ಪ್ರತಿ ಜೈಸ್ವಾಲ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next